ಗುರುವಾರ , ಮೇ 26, 2022
31 °C

ಜವರಾಯ ಗೆಲ್ಲದ ಬಾಲಕಿ ಮಾಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜವರಾಯ ಗೆಲ್ಲದ ಬಾಲಕಿ ಮಾಹಿ

ನವದೆಹಲಿ: ಕೊಳವೆ ಬಾವಿಗೆ ಬಿದ್ದ ಐದು ವರ್ಷದ ಕಂದಮ್ಮ ಕೊನೆಗೂ ಬದುಕುಳಿಯಲಿಲ್ಲ. ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲು ನಾಲ್ಕು ದಿನಗಳಿಂದ ರಕ್ಷಣಾ ತಂಡ ಮಾಡಿದ ಹರಸಾಹಸ ಫಲಿಸಲಿಲ್ಲ.ಮಾಣೆಸರ್‌ದ ಖಾವ್ ಗ್ರಾಮದಲ್ಲಿ 70 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕಿ ಮಹಿಯನ್ನು ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಪ್ರಕಟಿಸಿದರು. ಇದರೊಂದಿಗೆ ಬಾಲಕಿ ಬದುಕಿ ಬರಬಹುದೆಂಬ ನಿರೀಕ್ಷೆಗಳು ಹುಸಿಯಾದವು.ಐದು ದಿನಗಳ ಹಿಂದೆಯಷ್ಟೇ (ಜೂನ್ 19ರಂದು) ನಾಲ್ಕನೆ ಹುಟ್ಟುಹಬ್ಬ ಆಚರಿಸಿಕೊಂಡ ಮಹಿಯನ್ನು ಸಾವು ಹಿಂಬಾಲಿಸಿತ್ತು. ಮಾರನೆ ದಿನ ಒಡನಾಡಿಗಳ ಜತೆಗೂಡಿ ಆಡುವಾಗ ಆಕೆ ಕೊಳವೆ ಬಾವಿಯೊಳಗೆ ಬಿದ್ದಳು. ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಗುರಗಾಂವ್ ಜಿಲ್ಲಾಧಿಕಾರಿ ಪಿ. ಸಿ ಮೀನಾ ಬಾಲಕಿ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ.ಬಾಲಕಿ ರಕ್ಷಣೆಗೆ ಕೊಳವೆ ಬಾವಿ ಪಕ್ಕದಲ್ಲಿ ಪರ್ಯಾಯವಾಗಿ ಕೊರೆಯಲಾದ ಮತ್ತೊಂದು ಸುರಂಗಕ್ಕೆ ಬಂಡೆ ಅಡ್ಡ ಬಂದಿದ್ದರಿಂದ ರಕ್ಷಣಾ ಕಾರ್ಯ ವಿಳಂಬವಾಯಿತು. ಈ ಬಂಡೆ  ಕೊರೆಯುವಲ್ಲಿ ರಕ್ಷಣಾ ಪಡೆ ಕೊನೆಗೂ ಯಶಸ್ವಿಯಾಯಿತು.

 

ಭಾನುವಾರ ಬೆಳಿಗ್ಗೆ ಸೇನಾ ಸಿಬ್ಬಂದಿ ಬಾಲಕಿಯನ್ನು ತಲುಪಿದರೂ ಆಕೆಯನ್ನು ಹೊರತರಲು ಕೆಲವು ಗಂಟೆಗಳೇ ಬೇಕಾಯಿತು. ಆ ವೇಳೆಗೆ ಮಹಿ ಕಾಲಗರ್ಭದಲ್ಲಿ ಲೀನವಾಗಿದ್ದಳು. ದುರಂತ ಸ್ಥಳದಲ್ಲಿದ್ದ ವೈದ್ಯರು ನಾಲ್ಕು ವರ್ಷದ ಬಾಲಕಿ ಅನ್ನ- ನೀರು ಬಿಟ್ಟು ಇಷ್ಟು ದಿನ ಬದುಕುಳಿಯಲು ಸಾಧ್ಯವಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು.ಅತ್ಯಂತ ಕಿರಿದಾದ ಕೊಳವೆ ಬಾವಿಯೊಳಗೆ ಬಾಲಕಿ ಉಸಿರಾಟಕ್ಕೆ ಅನುಕೂಲವಾಗಲೆಂದು ಆಮ್ಲಜನಕದ ಪೈಪ್‌ಗಳನ್ನು ಇಳಿಬಿಡಲಾಗಿತ್ತಾದರೂ ಅನ್ನ ಮತ್ತು ನೀರು ಪೂರೈಸಲು ಸಾಧ್ಯ ಆಗಲಿಲ್ಲ. ನಾಲ್ಕು ದಿನಗಳಿಂದ ಸೇನೆ, ಪೊಲೀಸ್, ರಾಷ್ಟ್ರೀಯ ಭದ್ರತಾ ಪಡೆ, ರಿಲಯನ್ಸ್, ಗುರಗಾಂವ್ ಮೆಟ್ರೊ ಸಿಬ್ಬಂದಿ ಸೇರಿದಂತೆ ಕೆಲ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರೂ ಪ್ರತಿಕೂಲ ಪರಿಸ್ಥಿತಿಯಿಂದ ಬಾಲಕಿಯನ್ನು ಸುರಕ್ಷಿತವಾಗಿ ಹೊರತರಲು ಸಾಧ್ಯವಾಗಲಿಲ್ಲ.ಬಾಲಕಿ ರಕ್ಷಣೆಗೆ ಪರ್ಯಾಯವಾಗಿ ಕೊರೆಯಲಾದ ಸುರಂಗಕ್ಕೆ ಬಂಡೆ ಅಡ್ಡ ಬಂತು.  ಅದನ್ನು ಸಿಡಿಸಲು ಯಂತ್ರ ಬಳಸಿದರೆ ಬಾಲಕಿ ಜೀವಕ್ಕೆ ಅಪಾಯವಾಗಬಹುದು ಎಂಬ ಕಾರಣಕ್ಕೆ ಆ ಆಲೋಚನೆ ಕೈಬಿಡಲಾಯಿತು. ಮೆಟ್ರೊ ರೈಲು ನಿಗಮ ಹಾಗೂ ರಿಲಯನ್ಸ್ ಕೂಡಾ ಭೂಮಿ ಕೊರೆಯುವ ಅತ್ಯಾಧುನಿಕ ಉಪಕರಣಗಳನ್ನು ಕಳುಹಿಸಿದ್ದವು. ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಮಹಿ ಇರುವಿಕೆ ಗುರುತಿಸಲಾಯಿತು. ಆದರೆ, ಚಲನವಲನ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಬಾಲಕಿ ಪ್ರಜ್ಞೆ ತಪ್ಪಿರಬಹುದು ಎಂದು ಮೊದಲಿಗೆ ವೈದ್ಯರು ಊಹಿಸಿದ್ದರು. ಈ ಊಹೆ ಹುಸಿಯಾಯಿತು. ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆದ ಗುತ್ತಿಗೆದಾರ ಪರಾರಿಯಾಗಿದ್ದಾನೆ. ಇದನ್ನು ಮುಚ್ಚದೆ ಬಿಟ್ಟಿದ್ದು ಬಾಲಕಿ ಪ್ರಾಣಕ್ಕೆ ಕುತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೊಳವೆ ಬಾವಿಗಳಲ್ಲಿ ಹಸುಳೆಗಳು ಬೀಳುತ್ತಿರುವ ಘಟನೆ ಅಪರೂಪವೇನಲ್ಲ.2006ರಲ್ಲಿ ಹರಿಯಾಣದ ಕುರುಕ್ಷೇತ್ರದಲ್ಲಿ ಐದು ವರ್ಷದ ಬಾಲಕ `ಪ್ರಿನ್ಸ್~ ಕೊಳವೆ ಬಾವಿಗೆ ಬ್ದ್ದಿದಿದ್ದ.  ಅದೃಷ್ಟವಂತ ಬಾಲಕ 48 ಗಂಟೆಗಳ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಹೊರಬಂದ. ಆಗಲೂ ಸೇನಾ ಸಿಬ್ಬಂದಿಯೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಬಳಸದೇ ಬಿಟ್ಟ ಬೋರ್‌ವೆಲ್‌ಗೆ ಬಿದ್ದು ಮಕ್ಕಳು ಸಾವನ್ನಪ್ಪುವ ಹಲವಾರು ಘಟನೆಗಳು ದೇಶದ ಅಲ್ಲಲ್ಲಿ ನಡೆಯುತ್ತಲೇ ಇವೆ.1 ಕೊಳವೆಬಾವಿ (8 ಇಂಚು ವ್ಯಾಸ)2 ಕೆಳಗೆ ಬೀಳುವ ಮೊದಲು ಮಾಹಿ ಇಲ್ಲಿ ಒಂದೂವರೆ ಗಂಟೆ ಸಿಕ್ಕಿಹಾಕಿ ಕೊಂಡಿದ್ದಳು.3 ಮಾಹಿ ಉಸಿರಾಟಕ್ಕೆ ಅನುವಾಗುವಂತೆ ಅಮ್ಲಜನಕದ ಕೊಳವೆ ಬಿಡಲಾಗಿತ್ತು.4 ಮತ್ತೊಂದು ಸಮಾನಂತರ ಬಾವಿ ತೆಗೆದು ಕಾರ್ಯಾಚರಣೆ.5 ಮಾಹಿ ಇರುವ ಕೊಳವೆಬಾವಿಯ ಜಾಗ ಸಂಪರ್ಕಿಸಲು ಸುರಂಗ ತೋಡಲಾಗಿತ್ತು.6 ರಕ್ಷಣಾ ಸಿಬ್ಬಂದಿ ತಲೆ ಕವಚ ಮತ್ತು ಆಮ್ಲಜನಕದ ಮುಖವಾಡ ಧರಿಸಿ ಕಾರ್ಯಾಚರಣೆ ನಡೆಸಿದರು.7 ಬಾಲಕಿ ಸಿಲುಕಿರುವ ಬಾವಿ ಮತ್ತು ಸಿಬ್ಬಂದಿಯಿರುವ ಬಾವಿ ನಡುವೆ ದೊರೆತ ಸವಕಲು ಮಣ್ಣು ಹಾಗೂ ಗಟ್ಟಿ ಬಂಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.