ಭಾನುವಾರ, ಮೇ 16, 2021
23 °C
ಬ್ಯಾಂಕ್‌ಗಳ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯ- ಉದ್ಯಮಿಗಳ ದೂರು

`ಜವಳಿ ಉದ್ಯಾನ' ಸಮಸ್ಯೆಗಳ ತಾಣ

ಪ್ರಜಾವಾಣಿ ವಾರ್ತೆ / ಎಸ್.ಶರತ್ ಕುಮಾರ್ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜವಳಿ ಉದ್ಯಮದಿಂದಾಗಿ ಒಂದು ಕಾಲದಲ್ಲಿ `ಮ್ಯಾಂಚೆಸ್ಟರ್ ಆಫ್ ಕರ್ನಾಟಕ' ಎನಿಸಿಕೊಂಡಿದ್ದ ದಾವಣಗೆರೆಯಲ್ಲಿ ಜವಳಿ ಪಾರ್ಕ್ ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ.ಪಾರ್ಕ್‌ನಲ್ಲಿ ಪ್ರಸ್ತುತ 16 ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿದೆ. ಆದರೆ ಈಗಿರುವ ಘಟಕಗಳಿಗೆ ವಿದ್ಯುತ್ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಘಟಕಗಳು ಕಾರ್ಯಾರಂಭಕ್ಕೆ ಸಿದ್ಧವಾಗಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ದೊರೆಯುತ್ತಿಲ್ಲ.ಓವರ್‌ಲೋಡ್‌ನಿಂದ ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂಬುದು ಇಲ್ಲಿನ ಉದ್ಯಮಿಗಳ ಒತ್ತಾಯವಾಗಿದೆ.ವಿದ್ಯುತ್ ಕಂಬಗಳಿದ್ದರೂ ದೀಪಗಳಿಲ್ಲ. ಸಂಜೆ, ರಾತ್ರಿ ಇಲ್ಲಿ ನಡೆದಾಡುವುದು ಕಷ್ಟ. ಭಯದ ವಾತಾವರಣವಿದೆ ಎನ್ನುತ್ತಾರೆ ಇಲ್ಲಿನ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು.ಬಿಜೆಪಿ ಸರ್ಕಾರದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಹಸಿರು ನಿಶಾನೆ ದೊರೆಯಿತು. ನಂತರ ಕೆಐಎಡಿಬಿ ಭೂಮಿ ಮಂಜೂರು ಮಾಡಿ ಒಟ್ಟು 76 ನಿವೇಶನಗಳನ್ನು ಹಂಚಿತು. ಆದರೆ, ಮೂಲ ಸೌಕರ್ಯ ಅಭಿವೃದ್ಧಿಪಡಿಸಿಲ್ಲ. ಪ್ರಸ್ತುತ 12 ಜವಳಿ ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಶೀಘ್ರವೇ ಇನ್ನೂ 7ರಿಂದ 10 ಘಟಕಗಳು ಆರಂಭವಾಗುವ ಸಾಧ್ಯತೆ ಇದೆ. ಅವುಗಳಿಗೂ ಮೂಲಸೌಕರ್ಯ ಹಾಗೂ ಹಣಕಾಸಿನ ಕೊರತೆ ಕಾಡುತ್ತಿದೆ ಎಂದು ಸಿದ್ಧ ಉಡುಪು ತಯಾರಕರ ಸಂಘದ ಉಪಾಧ್ಯಕ್ಷ ಮಂಜುನಾಥ್ ನಾಯ್ಕ ತಿಳಿಸಿದರು.ಒಳಚರಂಡಿ ಸಮಸ್ಯೆ: ಘಟಕಗಳ ಹಾಗೂ ಶೌಚಾಲಯಗಳ ತ್ಯಾಜ್ಯ ನಿರ್ವಹಣೆಗೆ ಒಳಚರಂಡಿ ವ್ಯವಸ್ಥೆ ಇಲ್ಲ. 3 ಗಾರ್ಮೆಂಟ್ಸ್ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಮಹಿಳಾ ಉದ್ಯೋಗಿಗಳಿದ್ದಾರೆ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಅವರಿಗೆ ತೊಂದರೆಯಾಗಿ ಪರಿಣಮಿಸಿದೆ. ಈ ಬಗ್ಗೆ ಹಲವು ಬಾರಿ ಕೆಐಎಡಿಬಿ ಗಮನಕ್ಕೆ ತಂದಿದ್ದರೂ, ಪ್ರಯೋಜನವಾಗಿಲ್ಲ. ತಾತ್ಕಾಲಿಕ ಶೌಚಾಲಯ ನಿರ್ಮಿಸಿ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಶಾಶ್ವತ ಸಮಸ್ಯೆ ಪರಿಹಾರ ಬೇಕಾದರೆ ಯುಜಿಡಿ ನಿರ್ಮಾಣವಾಗಬೇಕು ಎನ್ನುತ್ತಾರೆ ಉದ್ಯಮಿ ಗುರುಸಿದ್ದಪ್ಪ.ಕುಡಿಯುವ ನೀರಿನ ಸಮಸ್ಯೆ : ಇಲ್ಲಿನ ಬೋರ್‌ವೆಲ್ ನೀರು ಫ್ಲೋರೈಡ್‌ಯುಕ್ತವಾಗಿದೆ. ಇದರಿಂದ, ಇಲ್ಲಿನ ಕಾರ್ಮಿಕರು ನೀರು ಕುಡಿಯಲು ಹಿಂಜರಿಯುತ್ತಾರೆ. ಕುಡಿಯುವ ನೀರಿಗಾಗಿ ನಿತ್ಯ ಮುಖ್ಯ ರಸ್ತೆಯಲ್ಲಿರುವ ಹೋಟೆಲ್‌ಗಳಿಗೆ ಹೋಗಬೇಕು. ತಕ್ಷಣ ಕುಂದುವಾಡ ಕೆರೆಯಿಂದ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಸಿದ್ಧ ಉಡುಪು ತಯಾರಕರ ಸಂಘದ ಅಧ್ಯಕ್ಷ ಜ್ಯೋತಿಪ್ರಕಾಶ್ ಒತ್ತಾಯಿಸುತ್ತಾರೆ.ಹಣಕಾಸಿನ ಕೊರತೆ : ಬಹುತೇಕ ಉದ್ಯಮಗಳಿಗೆ ಹಣಕಾಸಿನ ನೆರವು ದೊರೆಯದೇ ಕಾರ್ಯಾರಂಭ ಸಾಧ್ಯವಾಗಿಲ್ಲ. ಅನೇಕರು ಸ್ವಂತ ಹಣದಲ್ಲಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಅವರಿಗೆ ಯಂತ್ರೋಪಕರಣ ಖರೀದಿಗೆ ಹಣಕಾಸಿನ ಅಗತ್ಯವಿದೆ. ಕೆಲವೆಡೆ ಕಾರ್ಮಿಕರ ಕೊರತೆಯಿಂದ ಉದ್ಯಮ ನೆಲಕಚ್ಚಿವೆ. ಅದನ್ನು ಪರಿಗಣಿಸಿ ಇಲ್ಲಿನ ಬ್ಯಾಂಕ್‌ಗಳು ಹಣಕಾಸಿನ ನೆರವು ನೀಡುತ್ತಿಲ್ಲ. ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು ಹಣ ನೀಡಬೇಕು ಎಂದು ಕೇಂದ್ರ ಸರ್ಕಾರದ ಆದೇಶವಿದೆ. ಆದರೂ ದೊರೆತಿಲ್ಲ. ಕೆಲ ಬ್ಯಾಂಕ್‌ಗಳು ಅಗತ್ಯವಿರುವಷ್ಟು ಹಣ ನೀಡುತ್ತಿಲ್ಲ. ಕಡಿಮೆ ಹಣದಿಂದ ನಿಶ್ಚಿತ ಗುರಿ ತಲುಪಲು ಸಾಧ್ಯವಿಲ್ಲ; ಮತ್ತೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ದೂರು ಉದ್ಯಮಿಗಳದ್ದಾಗಿದೆ.`ದೇಶದಲ್ಲಿ ಜವಳಿ ಉದ್ಯಮಕ್ಕೆ ಉತ್ತಮ ವಾತಾವರಣವಿದೆ. ನಾವು ಒಳಉಡುಪುಗಳ ಉತ್ಪಾದನೆಯಲ್ಲಿ ಶೇ 8ರಷ್ಟು ಮತ್ತು ಇತರ ಉಡುಪುಗಳ ಉತ್ಪಾದನೆಯಲ್ಲಿ ಶೇ 38ರಷ್ಟು ಪ್ರಗತಿ ಸಾಧಿಸಿದ್ದೇವೆ. ಬಾಕಿ ಉಡುಪುಗಳಿಗೆ ಹೊರದೇಶಗಳನ್ನು ಅವಲಂಬಿಸಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯ, ಬ್ಯಾಂಕ್‌ಗಳ ನಿರಾಸಕ್ತಿಯಿಂದ ಜವಳಿ ಉದ್ಯಮ ಹಿಂದುಳಿದಿದೆ' ಎನ್ನುತ್ತಾರೆ ಉದ್ಯಮಿ ಕರಿಬಸಪ್ಪ.ಶೀಘ್ರ ಕ್ರಮ

ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಮೇಲಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಹೆಚ್ಚಿನ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಕೋರಲಾಗಿದೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದು.

- ಪ್ರಕಾಶ್, ಕೆಎಐಡಿಬಿ ಅಭಿವೃದ್ಧಿ ಅಧಿಕಾರಿತಾಂತ್ರಿಕ ಕಾರಣ...

ಈಗಾಗಲೇ ಕೆಲ ಉದ್ಯಮಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಇನ್ನೂ ಹಲವು ಉದ್ಯಮಿಗಳು ಪ್ರಸ್ತಾವ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಅವರಿಗೆ ಹಣ ನೀಡಲು ವಿಳಂಬವಾಗುತ್ತಿದೆ. ಶೀಘ್ರ ಮೇಲಧಿಕಾರಿ ಜತೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು.

- ಉಲ್ಲಾಸ್ ಕಿಣಿ, ಎಸ್‌ಬಿಎಂ ಶಾಖೆ ವ್ಯವಸ್ಥಾಪಕಪರಿಶೀಲಿಸುವೆ...

ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ಕಡತಗಳ ಪರಿಶೀಲನೆಗೆ ಸಮಯ ಬೇಕು. ಜವಳಿ ಪಾರ್ಕ್ ಉದ್ಯಮಿಗಳಿಗೆ ಹಣಕಾಸಿನ ನೆರವಿನ ಬಗ್ಗೆ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುವೆ.

- ವಿಜಯ್‌ಕುಮಾರ್, ಕೆಎಸ್‌ಎಫ್‌ಸಿ ಶಾಖಾ ವ್ಯವಸ್ಥಾಪಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.