ಜವಳಿ ಕ್ಷೇತ್ರಕ್ಕೆ ರಿಯಾಯಿತಿ ಅನಿವಾರ್ಯ

7

ಜವಳಿ ಕ್ಷೇತ್ರಕ್ಕೆ ರಿಯಾಯಿತಿ ಅನಿವಾರ್ಯ

Published:
Updated:

ದೊಡ್ಡಬಳ್ಳಾಪುರ: `ಮಹಾರಾಷ್ಟ್ರ ಮಾದರಿಯಲ್ಲಿ 20 ಎಚ್‌ಪಿಗೂ ಹೆಚ್ಚು ಅಶ್ವಶಕ್ತಿ ಹೊಂದಿರುವ ನೇಕಾರರಿಗೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ನೀಡಲು ಚಿಂತನೆ ನಡೆಸಲಾಗುತ್ತಿದೆ~ ಎಂದು ಜವಳಿ ಸಚಿವ ಆರ್.ವರ್ತೂರು ಪ್ರಕಾಶ್ ತಿಳಿಸಿದರು. ನಗರದ ಜವಳಿ ಪಾರ್ಕ್‌ನ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್ ಪಾರ್ಕ್ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ರಾಜ್ಯದಲ್ಲಿ 20 ಅಶ್ವಶಕ್ತಿ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರಿಗೆ ಯೂನಿಟ್‌ಗೆ ಒಂದು ರೂ. ಶುಲ್ಕ ನಿಗದಿಗೊಳಿಸಲಾಗಿದೆ. ಹೆಚ್ಚು ಉದ್ಯೋಗ ಕಲ್ಪಿಸುತ್ತಿರುವ ಜವಳಿ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿದ್ಯುತ್ ರಿಯಾಯಿತಿ ಅನಿವಾರ್ಯವಾಗಿದೆ ಎಂದರು.ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ವಸ್ತ್ರ ನೀತಿಯಲ್ಲಿ ಕೌಶಲ್ಯ ತರಬೇತಿಗಾಗಿ ರಾಜ್ಯದಲ್ಲಿ 94 ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಇದಕ್ಕಾಗಿ 30 ಕೋಟಿ ರೂ.ಗಳನ್ನು ವೆಚ್ಚಮಾಡಲಾಗುತ್ತಿದೆ. ರಾಜ್ಯದಲ್ಲಿ ಮುಚ್ಚಲಾಗಿರುವ ನೂಲಿನ ಗಿರಣಿಗಳ  ಪುನರಾರಂಭಕ್ಕೆ ರಾಜ್ಯ ಸರ್ಕಾರ 12 ಕೋಟಿ ರೂಪಾಯಿಗಳನ್ನು ಈ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟಿದೆ ಎಂದು ತಿಳಿಸಿದರು.ಸಭೆಯಲ್ಲಿ ರಾಜ್ಯ ಜವಳಿ ಇಲಾಖೆ ಆಯುಕ್ತ ವೆಂಕಟೇಶ್, ಜವಳಿ ಇಲಾಖೆ ಯೋಜನಾ ನಿರ್ದೇಶಕ ವಿಜಯಕುಮಾರ್, ದೊಡ್ಡಬಳ್ಳಾಪುರ ವಿಭಾಗ ಅಧಿಕಾರಿ ಡಾ.ಎಚ್.ಮಹೇಶ್ ಮುಂತಾದವರು ಹಾಜರಿದ್ದರು.ಸಚಿವರೊಂದಿಗೆ ಸಂವಾದ : `ನಾವು ಹಣ ನೀಡಿ ಐದು ವರ್ಷಗಳಾಗಿವೆ. ಕೆಐಡಿಬಿ ಅಧಿಕಾರಿಗಳು ಶೆಡ್‌ಗಳ ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ. ಆದರೆ ಈ ವರೆಗೂ ನಾವು ಆ ಸ್ಥಳದಲ್ಲಿ ಕೆಲಸ ಮಾಡಲು ರೈತರು ಬಿಡುತ್ತಿಲ್ಲ. ಹೀಗಾಗಿ ಬಂಡವಾಳ ಹೂಡಿರುವ ನೇಕಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಇಂಟಿಗ್ರೆಟೆಡ್ ಟೆಕ್ಸ್‌ಟೈಲ್ಸ್ ಪಾರ್ಕ್‌ನ ಅಧ್ಯಕ್ಷ ಎಚ್.ಜಿ.ಜಗನಾಥ್ ಮನವಿ ಮಾಡಿದರು.ಬುಧವಾರ ಜವಳಿ ಪಾರ್ಕ್‌ಗೆ ಭೇಟಿ ನೀಡಿದ್ದ ಜವಳಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಇಂಟಿಗ್ರೆಟೆಡ್ ಟೆಕ್ಸ್‌ಟೈಲ್ಸ್ ಪಾರ್ಕ್‌ಗೆ ನೀಡಿರುವ ಭೂಮಿಯಲ್ಲಿ 7 ಎಕರೆ ಪ್ರದೇಶದ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್‌ಗೆ ಕೆಐಡಿಬಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ ಪ್ರಕರಣವನ್ನು ತುರ್ತಾಗಿ ಇತ್ಯಾರ್ಥ ಮಾಡಿಸಿಕೊಡಬೇಕು ಎಂದರು.ಇದರಿಂದ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದ ಸಚಿವ ಆರ್.ವರ್ತೂರು ಪ್ರಕಾಶ್, ಇವತ್ತು ಭೂಮಿ ಕಬಳಿಕೆಯಿಂದ ಎಲ್ಲರೂ  ಜೈಲು ಸೇರುವಂತಾಗಿದೆ. ಇಂಥ ಸಮಯದಲ್ಲಿ ಎಲ್ಲಾ ಸರಿ ಇದ್ದರೂ ಭೂ ವಿವಾದವನ್ನು ಬಗೆಹರಿಸಿ ಹಣ ನೀಡಿರುವ ಕೈಗಾರಿಕೆಗಳಿಗೆ ಭೂಮಿ ಕೊಡಿಸದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದೀರಿ. ನಿಮ್ಮ ಈ ನಡತೆಯಿಂದಲೇ ವಿವಾದ ಸೃಷ್ಟಿಯಾಗಿದೆ. ಈಗ ವಿವಾದವನ್ನು ನೀವೇ ಬಗೆಹರಿಸಿಕೊಡಿ ಎಂದು ಸಭೆಯಲ್ಲಿ ಹಾಜರಿದ್ದ ಕೆಐಡಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry