ಬುಧವಾರ, ಮೇ 25, 2022
31 °C
ಯಾದಗಿರಿ: ಕೆರೆ ತುಂಬುವ ಯೋಜನೆಗಿಲ್ಲ ಚಾಲನೆ

ಜವಳಿ ಪಾರ್ಕ್‌ಗೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹಿಂದಿನ ಬಿಜೆಪಿ ಸರ್ಕಾರ ರಚನೆ ಮಾಡಿದ ರಾಜ್ಯದ 30 ನೇ ಜಿಲ್ಲೆ ಯಾದಗಿರಿಗೆ ಈ ಬಾರಿಯ ಬಜೆಟ್‌ನಲ್ಲಿ ಜವಳಿ ಪಾರ್ಕ್‌ಗೆ ಮಂಜೂರಾತಿ ದೊರೆತಿದೆ. ಹೊಸ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಜವಳಿ ಪಾರ್ಕ್ ಸ್ಥಾಪನೆಯ ಪ್ರಸ್ತಾವನೆ ಹೊರತು ಪಡಿಸಿದರೆ ಬೇರಾವುದೇ ಹೊಸ ಸೌಲಭ್ಯಗಳ ಲಾಭ ದೊರೆತಿಲ್ಲ.ಜಿಲ್ಲೆಯ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಅವರ ಸ್ವಕ್ಷೇತ್ರ ಗುರುಮಠಕಲ್ ವ್ಯಾಪ್ತಿಯಲ್ಲಿ ಸಾವಿರ ಎಕರೆ ಜಮೀನಿನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಹಸಿರು ನಿಶಾನೆ ತೋರಲಾಗಿದೆ.ಆದರೆ ಜಿಲ್ಲಾ ಉಸ್ತುವಾರಿ ಸಚಿವರು ರೂ.10 ಸಾವಿರ ಕೋಟಿ ವೆಚ್ಚದಲ್ಲಿ ಪಾರ್ಕ್ ಸ್ಥಾಪಿಸುವುದಾಗಿ ಹೇಳಿದ್ದರೂ, ಬಜೆಟ್‌ನಲ್ಲಿ ಮಾತ್ರ ಅನುದಾನದ ಬಗ್ಗೆ ಪ್ರಸ್ತಾಪ ಇಲ್ಲದಿರುವುದು ಬೇಸರ ಮೂಡಿಸಿದೆ.ಯಾದಗಿರಿ ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 3,300 ಎಕರೆ ಭೂಮಿಯನ್ನು ಈಗಾಗಲೇ ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಇದೇ ಜಮೀನಿನಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ನಿರ್ದಿಷ್ಟ ಅನುದಾನ ಘೋಷಿಸಿಲ್ಲ. ಬರುವ ದಿನಗಳಲ್ಲಿ ಈ ಯೋಜನೆ ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದು ಜಿಲ್ಲೆಯ ಜನರ ಕಾತುರ.ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕು ಕೇಂದ್ರಗಳ ರಚನೆ ಮಾಡಿ, ತಲಾ ರೂ. 2 ಕೋಟಿ ಅನುದಾನ ಒದಗಿಸಿತ್ತು. ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಹೊಸ ತಾಲ್ಲೂಕುಗಳ ಪ್ರಸ್ತಾವನೆ ಕೈಬಿಟ್ಟಿರುವುದು ಜಿಲ್ಲೆಯ ಜನರಿಗೆ ಅಸಮಾಧಾನ ತಂದಿದೆ. ಹೊಸ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನದ ನಿರೀಕ್ಷೆಯೂ ಹುಸಿಯಾಗಿದೆ.ಸಂವಿಧಾನದ      371 (ಜೆ) ಕಲಂ ತಿದ್ದುಪಡಿ ಮಸೂದೆಯ ಜಾರಿಯ ಕುರಿತು ಯಾವುದೇ ಪ್ರಸ್ತಾಪ ಅಥವಾ ಅನುದಾನ ನಿಗದಿ ಮಾಡದೇ ಇರುವುದರಿಂದ, ಮಸೂದೆ ಅನುಷ್ಠಾನ ವಿಳಂಬವಾಗುವ ಆತಂಕವನ್ನು ಜಿಲ್ಲೆಯ ಜನರು ವ್ಯಕ್ತಪಡಿಸುತ್ತಿದ್ದಾರೆ.ಕೆರೆಗಳಿಗೆ ಕಾಯಕಲ್ಪವಿಲ್ಲ: ಜಿಲ್ಲೆಯ ಶಹಾಪುರ ಹಾಗೂ ಸುರಪುರ ತಾಲ್ಲೂಕುಗಳಲ್ಲಿ ಬಸವಸಾಗರ ಜಲಾಶಯದ ನೀರಾವರಿ ಸೌಲಭ್ಯವಿದ್ದು, ಯಾದಗಿರಿ ತಾಲ್ಲೂಕಿನ ರೈತರು ಕೆರೆಗಳನ್ನೆ ನಂಬಿ, ಕೃಷಿ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿರುವ ಕೆರೆಗಳಿಗೆ ನದಿಯಿಂದ ನೀರು ಹರಿಸುವ ಯೋಜನೆಯ ಬಗ್ಗೆಯೂ ಬಜೆಟ್‌ನಲ್ಲಿ ಆಸಕ್ತಿ ತೋರಿಲ್ಲ ಎಂದು ಕೆಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ನಾಗರತ್ನಾ ಕುಪ್ಪಿ ಬೇಸರ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸಮೀಕ್ಷೆ ಮಾಡಿಸಿದ್ದು, ಇದಕ್ಕೆ ಬೇಕಾಗುವ ಅಂದಾಜು ವೆಚ್ಚವನ್ನೂ ತಯಾರಿಸಲಾಗಿದೆ.

ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಕ್ಷೇತ್ರದ ರೈತರಲ್ಲಿ ನಿರಾಸೆ ಮೂಡಿಸಿದೆ.ರಾಜ್ಯ ಮಟ್ಟದಲ್ಲಿ ಕೆರೆ ತುಂಬುವ ಯೋಜನೆಗೆ ಅನುದಾನ ಒದಗಿಸಿದ್ದು, ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಅದು ಅನ್ವಯವಾಗಲಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ ಎಂದಿದ್ದಾರೆ.ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಯಾದಗಿರಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಯಾವುದೇ ಹೊಸ ಯೋಜನೆಗಳಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯ ಅನುದಾನ ಒದಗಿಸಲು ಕಾಂಗ್ರೆಸ್ ಸರ್ಕಾರ ಗಮನ ನೀಡಬೇಕು.ಅದರಲ್ಲೂ ಹಿಂದುಳಿದ ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.