ಶನಿವಾರ, ಮೇ 15, 2021
24 °C

ಜವಾಬ್ದಾರಿ ನಿರ್ವಹಣೆಯಲ್ಲಿ ಲೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಒಂದು ಸೂರು ಕಟ್ಟಿಕೊಳ್ಳಬೇಕು ಎಂಬುದು ಲಕ್ಷಾಂತರ ಜನರ ಕನಸು. ಭೂಮಿಗೆ ಚಿನ್ನದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ತೀವ್ರವಾಗಿದೆ. ಪರಿಣಾಮವಾಗಿ ನಗರದಲ್ಲಿ ಕಟ್ಟಡಗಳು ದೊಡ್ಡ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿವೆ. ಆದರೆ ಈ ಇವು ನಿಯಮ ಬದ್ಧವಾಗಿವೆಯೇ ಎಂಬುದೇ ಪ್ರಮುಖ ಪ್ರಶ್ನೆ?ಬಹುಪಾಲು ಕಟ್ಟಡಗಳು ನಿಯಮಬದ್ಧವಾಗಿಲ್ಲ ಎಂಬುದನ್ನು ಯಾರಾದರೂ ಸುಲಭವಾಗಿ ಹೇಳಬಹುದು! ಏಕೆಂದರೆ ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡ ಲಕ್ಷಾಂತರ ಕಟ್ಟಡಗಳನ್ನು ಎಲ್ಲೆಡೆ ಕಾಣಬಹುದು. ಅಲ್ಲದೇ ನಗರದಲ್ಲಿ ಶೇ 98ರಷ್ಟು ಕಟ್ಟಡಗಳು ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿವೆ ಎಂಬುದನ್ನು ಪಾಲಿಕೆ ಜನಪ್ರತಿನಿಧಿಗಳೇ ಒಪ್ಪುತ್ತಾರೆ.ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಉಪವಿಧಿಗಳನ್ನು ಪಾಲಿಸುವವರೇ ಇಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಉಪವಿಧಿಗಳ ಬಗ್ಗೆ ಅಧಿಕಾರಿಗಳಿಗೇ ಸರಿಯಾದ ಮಾಹಿತಿಯಿಲ್ಲ. ಹಾಗಾಗಿ ಆಸ್ತಿದಾರರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸುತ್ತಿದ್ದಾರೆ.ನಿರ್ಮಾಣ ಕಾರ್ಯದಲ್ಲಿ ನಿಯಮಗಳ ಪಾಲನೆಯ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು `ಬಂದದ್ದನ್ನು~ ಪಡೆದು ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಮಹಾನಗರ ಪಾಲಿಕೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ರೂಪುಗೊಂಡ ಬಳಿಕ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನಕ್ಷೆ ಮಂಜೂರಾತಿ, ಇತರೆ ಪ್ರಮಾಣ ಪತ್ರ ವಿತರಿಸುವ ಬಗ್ಗೆ ಸ್ಪಷ್ಟ ಆದೇಶವಿದೆ.ತಳ ಅಂತಸ್ತು, ನೆಲ ಅಂತಸ್ತು ಹಾಗೂ ಒಂದು ಮಹಡಿ ಮೀರಿದ ಅಂದರೆ ಮೂರು ಮಹಡಿವರೆಗಿನ ಎಲ್ಲ ವಸತಿ ಹಾಗೂ ವಸತಿಯೇತರ ಕಟ್ಟಡಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಪರವಾನಗಿ ನೀಡಿಕೆ ಮತ್ತು ಪ್ರಾರಂಭಿಕ ಪ್ರಮಾಣ ಪತ್ರ ಪರಿಶೀಲನೆಯ ಅಧಿಕಾರವನ್ನು ಜಂಟಿ/ ಉಪ ಆಯುಕ್ತರ ಅಧ್ಯಕ್ಷತೆಯ ಸಮಿತಿಗೆ ವಹಿಸಲಾಗಿತ್ತು.ಈ ಸಮಿತಿಗೆ ವಲಯ ಮುಖ್ಯ ಎಂಜಿನಿಯರ್ ಹಾಗೂ ವಲಯ ಆರೋಗ್ಯಾಧಿಕಾರಿ ಸದಸ್ಯರಾಗಿದ್ದರೆ, ಸಹಾಯಕ ನಿರ್ದೇಶಕರು (ನಗರ ಯೋಜನೆ) ಸಂಚಾಲಕರಾಗಿರುತ್ತಾರೆ. ಆದರೆ ಈ ಸಮಿತಿಗೆ ಸ್ವಾಧೀನ ಪ್ರಮಾಣ ಪತ್ರ (ಒ.ಸಿ) ನೀಡುವ ಅಧಿಕಾರವಿರುವುದಿಲ್ಲ.ನಾಲ್ಕು ಮಹಡಿ ಮತ್ತು ಅದಕ್ಕಿಂತ ಹೆಚ್ಚು ಮಹಡಿಗಳ ಎಲ್ಲ ವಸತಿ ಮತ್ತು ವಸತಿಯೇತರ ಕಟ್ಟಡಗಳಿಗೆ ಸಂಬಂಧಪಟ್ಟಂತೆ ಪರವಾನಗಿ ಪ್ರಕರಣಗಳನ್ನು ಪರಿಶೀಲಿಸಿ ಆಯುಕ್ತರಿಗೆ ಶಿಫಾರಸು ಮಾಡಲು ಸಹ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.ಆರೋಗ್ಯ ಮತ್ತು ಕಂದಾಯ ವಿಭಾಗದ ಉಪ ಆಯುಕ್ತರು, ಕಾನೂನು ಕೋಶದ ಮುಖ್ಯಸ್ಥರು, ಮುಖ್ಯ ಎಂಜಿನಿಯರ್ (ಯೋಜನೆ) ಸದಸ್ಯರಾಗಿರುವ ಸಮಿತಿಯಲ್ಲಿ ಜಂಟಿ ನಿರ್ದೇಶಕರು (ನಗರ ಯೋಜನೆ) ಸಂಚಾಲಕ ಸದಸ್ಯರಾಗಿರುತ್ತಾರೆ. ಈ ಸಮಿತಿಯು ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಸ್ವಾಧೀನ ಪತ್ರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಆಯುಕ್ತರಿಗೆ ಶಿಫಾರಸು ಮಾಡುತ್ತದೆ. ಕಟ್ಟಡ ನಕ್ಷೆ ಉಲ್ಲಂಘನೆಯಾದರೆ ಕೆಎಂಸಿ ಕಾಯ್ದೆಯ 462ರ ಕಲಂನ ಅಡಿ ಆಡಳಿತಾತ್ಮಕ ಆದೇಶ ನೀಡುವ ಅಧಿಕಾರವನ್ನು ಕಾರ್ಯಪಾಲಕ ಎಂಜಿನಿಯರ್‌ಗೆ ನೀಡಲಾಗಿದೆ.ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡುವ ಹಾಗೂ ನಿಯಮ ಪಾಲನೆ ಕುರಿತು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಇಷ್ಟೆಲ್ಲಾ ಸಮಿತಿ ರಚಿಸಿ, ಅಧಿಕಾರ ನೀಡಿದ್ದರೂ ನಿಯಮ ಉಲ್ಲಂಘಿಸಿ ನಿರ್ಮಾಣಗೊಳ್ಳುವ ಕಟ್ಟಡಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.`ನಿಯಮ ಶ್ರೇಷ್ಠ; ಪಾಲನೆ ಕನಿಷ್ಠ~:

ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುವ ಕಟ್ಟಡಗಳಿಗೆ ಕಡಿವಾಣ ಹಾಕಲು ಬಿಬಿಎಂಪಿಯಲ್ಲಿ ಉತ್ತಮವಾದ ವ್ಯವಸ್ಥೆಯೇನೋ ಇದೆ. ಆದರೆ ಈ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗದ ಕಾರಣ ನಿಯಂತ್ರಣ ಅಸಾಧ್ಯವೆನಿಸಿದೆ.ನಿಯಮ ಉಲ್ಲಂಘನೆ ಮಾಡಿ ನಿರ್ಮಾಣವಾಗುವ ಕಟ್ಟಡಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಸಿದ್ದಯ್ಯ ಅವರು ಕೇಂದ್ರ ಕಚೇರಿಯಲ್ಲಿನ ಅಧಿಕಾರಿಗಳಿಗೆ ನೀಡಲಾಗಿದ್ದ ಅಧಿಕಾರವನ್ನು ವಾರ್ಡ್ ಮಟ್ಟದ ಅಧಿಕಾರಿಗಳಿಗೆ ವಹಿಸಿ 2010ರ ಅಕ್ಟೋಬರ್ 28ರಂದು ಆದೇಶ ಹೊರಡಿಸಿದ್ದರು.ಅದರಂತೆ ಮಂಜೂರಾದ ನಕ್ಷೆಗೆ ವಿರುದ್ಧವಾಗಿ ನಿರ್ಮಾಣವಾಗುವ ಕಟ್ಟಡಗಳ ತಪಾಸಣೆಗೆ ಸಂಬಂಧಪಟ್ಟಂತೆ ನಗರ ಯೋಜನೆ ಕಚೇರಿ/ ವಲಯ ಕಚೇರಿಗಳಿಂದ ನಿರ್ಮಾಣ ಸ್ಥಳಕ್ಕೆ ಸಾಕಷ್ಟು ಅಂತರವಿದೆ. ಸಿಬ್ಬಂದಿ ಕೊರತೆ ಕೂಡ ಇರುವುದರಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಧೀನದಲ್ಲಿರುವ ಸಹಾಯಕ/ ಕಿರಿಯ ಎಂಜಿನಿಯರ್‌ಗಳಿಗೆ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಜತೆಗೆ ಕಟ್ಟಡ ಪರಿಶೀಲನೆ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿತ್ತು.ವಿವಿಧ ಶ್ರೇಣಿಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಹೊರಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆಯೂ ಕಟ್ಟಪ್ಪಣೆ ಮಾಡಲಾಗಿತ್ತು.ಸಹಾಯಕ/ ಕಿರಿಯ ಎಂಜಿನಿಯರ್: ಕಟ್ಟಡದ ತಳಪಾಯವನ್ನು (ಪ್ಲಿಂತ್ ಲೆವೆಲ್) ಮಂಜೂರಾದ ನಕ್ಷೆಯೊಂದಿಗೆ ಪರಿಶೀಲಿಸಿ ದೃಢೀಕರಣ ನೀಡುವುದು.ಸಹಾಯಕ ಕಾರ್ಯಪಾಲಕ ಎಂಜಿನಿಯರ್: ಕಟ್ಟಡದ ಸಜ್ಜಾ ಹಂತದವರೆಗಿನ (ಲಿಂಟೆಲ್) ಕಾಮಗಾರಿಯನ್ನು ಮಂಜೂರಾದ ನಕ್ಷೆಯೊಂದಿಗೆ ಪರಿಶೀಲಿಸಿ ದೃಢೀಕರಣ ನೀಡುವುದು.ಕಾರ್ಯಪಾಲಕ ಎಂಜಿನಿಯರ್: ಕಟ್ಟಡದ ಮೇಲ್ಛಾವಣಿ ಕಾಮಗಾರಿಯನ್ನು ಪರಿಶೀಲಿಸಿ ದೃಢೀಕರಿಸುವುದು.

ವಲಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರು ಹಾಗೂ ಕೇಂದ್ರ ಕಚೇರಿಯ ನಿರ್ದೇಶಕರು/ ಉಪ ನಿರ್ದೇಶಕರು/ ಜಂಟಿ ನಿರ್ದೇಶಕರು ತಮ್ಮ ಹಂತದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣವಾಗುತ್ತಿರುವ ನೂತನ ಕಟ್ಟಡಗಳನ್ನು ಉಪವಿಧಿಗಳಿಗೆ ಅನುಗುಣವಾಗಿ ಪರಿಶೀಲಿಸಿ ಪ್ರತಿ 15 ದಿನಗಳಿಗೆ ಒಮ್ಮೆ ದೃಢಪಡಿಸಿಕೊಳ್ಳಬೇಕು. ವ್ಯತಿರಿಕ್ತವಾಗಿ ನಿರ್ಮಾಣ ಮಾಡುತ್ತಿದ್ದರೆ ಅಗತ್ಯ ಕ್ರಮ ಜರುಗಿಸುವಂತೆಯೂ ಸೂಚನೆ ನೀಡಲಾಗಿತ್ತು.

 

ಅಕ್ರಮ ಕಟ್ಟಡ ಕುರಿತ ಲೇಖನ ಮಾಲೆ

ಉದ್ಯಾನನಗರಿ ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿ ಲಕ್ಷಾಂತರ ಕಟ್ಟಡಗಳು ನಿರ್ಮಾಣವಾಗಿವೆ. ಈಗಲೂ ನಿರ್ಮಾಣವಾಗುತ್ತಿವೆ. ಇದರಿಂದ ಸಾಕಷ್ಟು ಸಮಸ್ಯೆಗಳು ತಲೆದೋರಿವೆ. ನಿಯಮಗಳ ಪಾಲನೆ ಇಲ್ಲದ ಕಾರಣ ನಗರದ ಸೌಂದರ್ಯಕ್ಕೆ ಚ್ಯುತಿ ಉಂಟಾಗಿದೆ.ಆ ಹಿನ್ನೆಲೆಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಡೆಯುವ ಅಕ್ರಮಗಳ ಕುರಿತು `ಪ್ರಜಾವಾಣಿ~ ಸರಣಿ ಲೇಖನಗಳನ್ನು ಪ್ರಕಟಿಸಲಿದೆ. ಓದುಗರು ಸಹ ಈ ಅಭಿಯಾನದಲ್ಲಿ ಕೈಜೋಡಿಸಬಹುದು. ತಾವು ನೆಲೆಸಿರುವ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡ ಹಾಗೂ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ದಾಖಲೆ ಸಹಿತ ಮಾಹಿತಿಯನ್ನು ಕೆಳಕಂಡ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್ ವಿಳಾಸ: civicpv@gmail.comಈ ನಿಯಮಗಳನ್ನು ಪಾಲಿಸಿದ್ದೇ ಆದರೆ ಈ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡಗಳು ನಿರ್ಮಾಣವಾಗುತ್ತಿರಲಿಲ್ಲ. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದರಿಂದ ಅಕ್ರಮಕ್ಕೆ ಕಡಿವಾಣ ಇಲ್ಲದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.