ಮಂಗಳವಾರ, ಅಕ್ಟೋಬರ್ 22, 2019
22 °C

ಜಹೀರ್ ಹೇಳಿಕೆಗೆ ರಿಕಿ ಪಾಂಟಿಂಗ್ ತಿರುಗೇಟು

Published:
Updated:

ಪರ್ತ್ (ಪಿಟಿಐ): ಮೂರನೇ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿರುವ ಆಸ್ಟ್ರೇಲಿಯಾ ಮತ್ತು ಭಾರತ ತಂಡದ ಆಟಗಾರರ `ಮಾತಿನ ಸಮರ~ ಕೂಡಾ ಮುಂದುವರಿದಿದೆ. ಜಹೀರ್ ಖಾನ್ ನೀಡಿರುವ ಹೇಳಿಕೆಗೆ ರಿಕಿ ಪಾಂಟಿಂಗ್ ತಕ್ಕ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

`ಜಹೀರ್ ನನ್ನ ಬಗ್ಗೆ ನೀಡಿರುವ ಹೇಳಿಕೆಯನ್ನು ಸಚಿನ್ ತೆಂಡೂಲ್ಕರ್, ಜಾಕ್ ಕಾಲಿಸ್ ಮತ್ತು ರಾಹುಲ್ ದ್ರಾವಿಡ್ ಮುಂತಾದ ಬ್ಯಾಟ್ಸ್‌ಮನ್‌ಗಳ ಬಗ್ಗೆಯೂ ಹೇಳಬಹುದಿತ್ತು. ಕಳೆದ ಕೆಲ ತಿಂಗಳುಗಳಲ್ಲಿ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಈ ಕಾರಣ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿದೆ~ ಎಂದು ಬುಧವಾರ ನುಡಿದರು.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಪಾಂಟಿಂಗ್ ಶತಕ ಗಳಿಸಿದ್ದರಲ್ಲದೆ, ಹಲವು ದಿನಗಳ ಬಳಿಕ ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದರು. ಆದರೆ ಪಾಂಟಿಂಗ್ ಎಂದಿನ ಲಯದಲ್ಲಿ ಬ್ಯಾಟಿಂಗ್ ಮಾಡಿಲ್ಲ ಎಂದು ಜಹೀರ್ ಕಳೆದ ದಿನ ನುಡಿದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ನಾಯಕ, `ಜಹೀರ್ ಅಥವಾ ಇತರ ಯಾರ ಬಗ್ಗೆಯೂ ನನಗೆ ಭಯವಿಲ್ಲ. ನಾನು ಏನು ಮಾಡಬೇಕೆಂಬುದು ನನಗೆ ತಿಳಿದಿದೆ. ಆಸೀಸ್ ತಂಡದ ನೆರವಿಗೆ ನಿಲ್ಲುವುದಷ್ಟೆ ನನ್ನ ಗುರಿ~ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತ ತಂಡ `ದುರ್ಬಲ~ ಎನ್ನುವ ಮೂಲಕ ಬ್ರಾಡ್ ಹಡಿನ್ ಮಾತಿನ ಯುದ್ಧಕ್ಕೆ ಚಾಲನೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡುವ ಸಂದರ್ಭ ಜಹೀರ್ ಅವರು ಪಾಂಟಿಂಗ್ ಕುರಿತೂ ಹೇಳಿಕೆ ನೀಡಿದ್ದರು.

ಹಡಿನ್ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪಾಂಟಿಂಗ್, `ನಾವು ಪ್ರಭಾವಿ ಬೌಲಿಂಗ್ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರುತ್ತೇವೆ ಎಂಬುದು ಅವರ ಹೇಳಿಕೆಯ ಅರ್ಥ~ ಎಂದಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)