ಭಾನುವಾರ, ನವೆಂಬರ್ 17, 2019
20 °C

ಜಾಗತಿಕ ಕಾಫಿ ರಫ್ತು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಕಾಫಿ ಮಾರುಕಟ್ಟೆ ವರ್ಷದ ಮೊದಲ ಐದು ತಿಂಗಳಲ್ಲಿ (ಅಕ್ಟೋಬರ್-ಫೆಬ್ರುವರಿ) ಜಾಗತಿಕ ಕಾಫಿ ರಫ್ತು ಶೇ 9.6ರಷ್ಟು ಹೆಚ್ಚಿದ್ದು 465 ಲಕ್ಷ ಚೀಲಗಳಷ್ಟಾಗಿದೆ.ಒಂದು ಚೀಲ ಕಾಫಿ 60 ಕೆ.ಜಿ ತೂಕ ಹೊಂದಿದೆ. ಇಂಡೋನೇಷ್ಯಾ, ವಿಯಟ್ನಾಂನಿಂದ ಗರಿಷ್ಠ ಪ್ರಮಾಣದಲ್ಲಿ ಕಾಫಿ ರಫ್ತಾಗಿದೆ. ಆದರೆ, ಭಾರತದಿಂದ ರಫ್ತು ತುಸು ತಗ್ಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಸಂಘಟನೆ (ಐಸಿಒ) ಹೇಳಿದೆ.2011-12ನೇ ಸಾಲಿನ ಕಾಫಿ ಇಳುವರಿ ವರ್ಷದಲ್ಲಿ (ಅಕ್ಟೋಬರ್-ಸೆಪ್ಟೆಂಬರ್) 424 ಲಕ್ಷ ಚೀಲಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು.

2013ರ ಫೆಬ್ರುವರಿ ಒಂದೇ ತಿಂಗಳಲ್ಲಿ 66 ಲಕ್ಷ ಚೀಲಗಳಷ್ಟು ಕಾಫಿ ರಫ್ತಾಗಿದೆ. `ರೊಬಸ್ಟಾ' `ಕೊಲಂಬಿಯಾ ಮಿಲ್ಡಾಸ್', `ಬ್ರೆಜಿಲ್ ನ್ಯಾಚುರಲ್' ಕಾಫಿ ತಳಿಗೆ ರಫ್ತು ಬೇಡಿಕೆ ಹೆಚ್ಚಿದೆ.ಆದರೆ, ಪ್ರಪಂಚದ ಅತಿ ದೊಡ್ಡ ಕಾಫಿ ರಫ್ತು ದೇಶವಾದ ಬ್ರೆಜಿಲ್ ಪ್ರಸಕ್ತ ಅಕ್ಟೋಬರ್-ಫೆಬ್ರುವರಿ ಅವಧಿಯಲ್ಲಿ 134 ಲಕ್ಷ ಚೀಲಗಳಷ್ಟು ಕಾಫಿ ರಫ್ತು ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಅಲ್ಪ ಮಟ್ಟಿಗಿನ ಇಳಿಕೆ ದಾಖಲಿಸಿದೆ. ವಿಯಟ್ನಾಂ 102 ಲಕ್ಷ ಚೀಲಗಳಷ್ಟು, ಇಂಡೋನೇಷ್ಯಾ 49 ಲಕ್ಷ ಚೀಲಗಳಷ್ಟು ಕಾಫಿ ರಫ್ತು ಮಾಡಿದ್ದು ಗಣನೀಯ ಏರಿಕೆ ದಾಖಲಿಸಿವೆ. ಕೊಲಂಬಿಯಾದ ಕಾಫಿ ರಫ್ತು 35 ಲಕ್ಷ ಚೀಲಗಳಿಗೆ ಏರಿಕೆ ಕಂಡಿದೆ.ಭಾರತದಿಂದ 2012-13ನೇ ಸಾಲಿನ ಮೊದಲ 5 ತಿಂಗಳಲ್ಲಿ 17 ಲಕ್ಷ ಚೀಲಗಳಷ್ಟು ಕಾಫಿ ರಫ್ತಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 19 ಲಕ್ಷ ಚೀಲಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು.2012-13ನೇ ಸಾಲಿನ ಕಾಫಿ ಇಳುವರಿ ವರ್ಷದಲ್ಲಿ ಒಟ್ಟಾರೆ ಜಾಗತಿಕ ಕಾಫಿ ಉತ್ಪಾದನೆ ಶೇ 6.4ರಷ್ಟು ಹೆಚ್ಚಲಿದ್ದು, 1446 ಲಕ್ಷ ಚೀಲಗಳಷ್ಟಾಗಬಹುದು ಎಂದು `ಐಸಿಒ' ಅಂದಾಜು ಮಾಡಿದೆ.

ಪ್ರತಿಕ್ರಿಯಿಸಿ (+)