`ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ'

7

`ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ'

Published:
Updated:

ಬೆಳಗಾವಿ: `ವಿಶ್ವದ ಇತರ ದೇಶಗಳೊಂದಿಗೆ ಭಾರತವು ಸಮರ್ಥವಾಗಿ ಸ್ಪರ್ಧೆ ಒಡ್ಡಬೇಕಾ ಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿ ಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಜಾಗತಿಕ ಮಟ್ಟದ ಸ್ಪರ್ಧೆಗೆ ಅವರನ್ನು ಸಜ್ಜುಗೊಳಿಸಬೇಕು' ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ವಿದ್ಯಾರ್ಥಿಗಳಿಗೆ ಬರಿ ಅಂಕ ನೀಡಿ ಉತ್ತೀರ್ಣ ಮಾಡಿದರೆ ಸಾಲದು. ದೇಶದ ಇತಿಹಾಸ, ಕ್ರೀಡೆ, ಸಂಸ್ಕೃತಿ ಕುರಿತು ಅರಿವು ಮೂಡಿಸಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಅಗತ್ಯ ಜ್ಞಾನ ನೀಡುವ ಮೂಲಕ ಸಮರ್ಪಕವಾಗಿ ಜೀವನ ನಡೆಸಲು ಸಹಕಾರಿಯಾಗುವಂತೆ ಮಾಡಬೇಕು. ವಿದ್ಯಾರ್ಥಿಗಳನ್ನು ದೇಶದ ಉತ್ತಮ ನಾಗರಿಕರ ನ್ನಾಗಿ ರೂಪಿಸಬೇಕು' ಎಂದು ಸಚಿವರು ಹೇಳಿದರು.`ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆ ಯನ್ನು ಅಲಂಕರಿಸಿದ್ದರು. ರಾಧಾಕೃಷ್ಣನ್ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ ಇಲಾಖೆ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು' ಎಂದು ಜಾರಕಿಹೊಳಿ ತಿಳಿಸಿದರು.`ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸತ್ಕರಿಸುತ್ತಿರುವುದು ಸಂತಸದ ಸಂಗತಿ. ಮುಂಬರುವ ದಿನಗಳಲ್ಲಿ ನೀವೂ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರಾಧಾಕೃಷ್ಣನ್ ಅವರು ಕಂಡ ಕನಸನ್ನು ನನಸುಗೊಳಿಸಲು ಶ್ರಮಿಸಬೇಕು' ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, `ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಭಾರತದತ್ತ ವಿಶ್ವವೇ ತಿರುಗಿ ನೋಡುತ್ತಿದೆ. ಹೀಗಾಗಿ ಯುವ ಕರನ್ನು ಮುಖ್ಯ ವಾಹಿನಿಗೆ ತರಬೇಕು. ಯುವಕ ರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿ ದೇಶದ ಶಕ್ತಿಯನ್ನಾಗಿ ಹೊರಹೊಮ್ಮಿಸಬೇಕು' ಎಂದು ಸಲಹೆ ನೀಡಿದರು.ಶಾಸಕ ಸಂಜಯ ಪಾಟೀಲ, `ಇಂದು ಶಾಸಕ, ಸಚಿವ ಯಾರು ಬೇಕಾದರೂ ಆಗಬಹುದಾಗಿದೆ. ಆದರೆ, ಒಬ್ಬ ಅತ್ಯುತ್ತಮ `ಗುರು' ಆಗುವುದು ಸುಲಭವಾಗಿಲ್ಲ. ದೇಶದ ಭವಿಷ್ಯ ನಿರ್ಮಾಣ ಗುರುವಿನ ಕೈಯಲ್ಲಿದೆ' ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಫಿರೋಜ್ ಸೇಠ್, `ನಮ್ಮ ಜೀವನವನ್ನು ಗುರುವಿನಿಂದ ಹೊರತಾಗಿ ಇರುವು ದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಕೈಜೋಡಿಸಬೇಕು. ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಲಭ್ಯ ಕೊರತೆ ಯನ್ನು ನಿವಾರಿಸಲು ನಾವು ಯತ್ನಿಸುತ್ತೇವೆ' ಎಂದು ತಿಳಿಸಿದರು.ಶಾಸಕ ಸಂಭಾಜಿ ಪಾಟೀಲ, ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷೆ ಉಷಾ ಶಿಂತ್ರಿ ಮಾತನಾಡಿ ದರು. ಜಿ.ಪಂ. ಸದಸ್ಯರಾದ ಶಂಕರಗೌಡ ಪಾಟೀಲ, ಜಿಲ್ಲಾಧಿಕಾರಿ ಎನ್. ಜಯರಾಮ್, ಜಿ.ಪಂ. ಸಿಇಒ ದೀಪಾ ಚೋಳನ್ ಹಾಜರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ಸ್ವಾಗತಿಸಿದರು.ಬಳಿಕ ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ  ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರನ್ನು ಸಚಿವರು ಸತ್ಕರಿಸಿದರು.`ಶಿಕ್ಷಣದ ಹಿತಕ್ಕೆ ಶ್ರಮಿಸಿ'

ಚಿಕ್ಕೋಡಿ:
`ಸಮಾಜದಲ್ಲಿ ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಭಾವನೆ ಬೆಳೆದು ಬಿಟ್ಟಿದೆ. ಆದರೆ, ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ ರೂಪುಗೊಳ್ಳ ಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣದ ಹಿತಕ್ಕಾಗಿ ಶಿಕ್ಷಕರು ದುಡಿಯಬೇಕು. ಶಿಕ್ಷಕರ ಹಿತಕ್ಕಾಗಿ ಸಮಾಜ ಮತ್ತು ಸರ್ಕಾರ ಚಿಂತನೆ ನಡೆಸಬೇಕಿದೆ ` ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಗುರುವಾರ  ಆಯೋಜಿಸಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಮತ್ತು ಆಯ್ದ ಶಿಕ್ಷಕರಿಗೆ 2013ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ವ್ಯಕ್ತಿಗಳ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಮೂಲ ಉದ್ದೇಶ. ಅಕ್ಷರಸ್ಥರನ್ನು ನಿರ್ಮಿಸಿದರೆ ಸಾಲದು. ರಾಷ್ಟ್ರದ ಹಿತದ ದೃಷ್ಟಿಯಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳಿಸುತ್ತಿದ್ದೇವೆಯೇ? ಎಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.ಸರ್ಕಾರ ಮತ್ತು ಸಮಾಜವೂ ಶಿಕ್ಷಕರ ಹಿತ ಕಾಪಾಡಬೇಕು. ಗುಣಾತ್ಮಕ ಶಿಕ್ಷಣಕ್ಕಾಗಿ ಆಡಳಿತ ಕ್ರಿಯಾಶೀಲವಾಗಬೇಕು. ಆದರೆ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬಗೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. 1995ರ ಮುಂಚೆ ಸ್ಥಾಪನೆಗೊಂಡ ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರು ಅನುದಾನಕ್ಕೆ ಹೋರಾಟ ನಡೆಸುತ್ತಿರುವುದು ವಿಪರ್ಯಾಸ'  ಎಂದರು.`ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಆದರೆ, ಇಲ್ಲಿನ ಉಪನಿರ್ದೇಶಕರ ಕಚೇರಿಗೆ ಸ್ವಂತ ಕಟ್ಟಡ ಇಲ್ಲ. ಗುರುಭವನ ನಿರ್ಮಾಣದಂತಹ ಮೂಲ ಸೌಕರ್ಯವನ್ನೂ ಒದಗಿಸಿಲ್ಲ'  ಎಂದು ಅರುಣ ಶಹಾಪುರ ವಿಷಾದಿಸಿದರು.ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು,   ಶಿಕ್ಷಕರು ಕೇವಲ ಪಠ್ಯಕ್ರಮವನ್ನು ಬೋಧನೆ ಮಾಡುವ ಗುರುಗಳಾಗದೇ ಮಕ್ಕಳಿಗೆ ಬದುಕುವ ಕಲೆಯನ್ನು ಕಲಿಸಬೇಕು. ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು  ಎಂದು ಆಶಿಸಿದರು. ಚಿಕ್ಕೋಡಿಯಲ್ಲಿ ಗುರುಭವನ ನಿರ್ಮಾಣಕ್ಕೆ ಪ್ರಯತ್ನಿಸುವದಾಗಿ ಅವರು ಭರವಸೆ ನೀಡಿದರು.ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಡಾ.ರುದ್ರೇಶ ಘಾಳಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಮಹೇಶ ಭಾತೆ, ಗಣೇಶ ಹುಕ್ಕೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಜಿ.ಚೊಳ್ಳಿ, ಮಹಾದೇವ ಬರಗಾಲೆ, ಎನ್.ಜಿ.ಪಾಟೀಲ, ಎಸ್.ಎಸ್.ಕರಿಗಾರ, ರವಿ ಹಂಪಣ್ಣವರ ಮುಂತಾದವರು ಉಪಸ್ಥಿತರಿದ್ದರು. ಡಿಡಿಪಿಐ ಡಿ.ಎಂ.ದಾನೋಜಿ ಸ್ವಾಗತಿಸಿದರು. ಸಿ.ಬಿ.ಅರಭಾವಿ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry