ಜಾಗತೀಕರಣದಿಂದ ಇಂಗ್ಲಿಷ್‌ನತ್ತ ಒಲವು-ಶಿಕ್ಷಣ ತಜ್ಞ ಡಾ.ಅನಿಲ್ ಸದ್ಗೋಪಾಲ್

7

ಜಾಗತೀಕರಣದಿಂದ ಇಂಗ್ಲಿಷ್‌ನತ್ತ ಒಲವು-ಶಿಕ್ಷಣ ತಜ್ಞ ಡಾ.ಅನಿಲ್ ಸದ್ಗೋಪಾಲ್

Published:
Updated:
ಜಾಗತೀಕರಣದಿಂದ ಇಂಗ್ಲಿಷ್‌ನತ್ತ ಒಲವು-ಶಿಕ್ಷಣ ತಜ್ಞ ಡಾ.ಅನಿಲ್ ಸದ್ಗೋಪಾಲ್

ಬೆಂಗಳೂರು: `ಜಾಗತೀಕರಣದ ಪರಿಣಾಮವಾಗಿ ಸರ್ಕಾರ ನೀಡುತ್ತಿರುವ ಮಾತೃ ಭಾಷಾ ಮಾಧ್ಯಮ ಶಿಕ್ಷಣ ತೊರೆದು ಮಧ್ಯಮ ವರ್ಗದ ಜನತೆ ಇಂಗ್ಲಿಷ್ ಮಾಧ್ಯಮದೆಡೆಗೆ ಮಹಾಪಲಾಯನ ಮಾಡುತ್ತಿದ್ದಾರೆ~ ಎಂದು ಶಿಕ್ಷಣ ತಜ್ಞ ಡಾ.ಅನಿಲ್ ಸದ್ಗೋಪಾಲ್ ವಿಷಾದಿಸಿದರು.ಕರ್ನಾಟಕ ಜನಶಕ್ತಿ ಸಂಘಟನೆಯು ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾಷಾ ಮಾಧ್ಯಮ ಮತ್ತು ಅಸಮಾನ ಶಿಕ್ಷಣ ನೀತಿಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಖಾಸಗೀಕರಣದ ನಂತರ ಮಧ್ಯಮ ವರ್ಗದವರಿಂದ ಶಿಕ್ಷಣದಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇಂಗ್ಲಿಷ್ ಭಾಷೆಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಮನೋಭಾವವನ್ನು ಖಾಸಗೀಕರಣ ಸೃಷ್ಟಿಸಿದೆ~ ಎಂದರು.ಮಾತೃ ಭಾಷೆಯ ಮೂಲಕ ಎಲ್ಲಾ ಭಾಷೆಗಳ ಪಾಂಡಿತ್ಯವನ್ನು ಪಡೆಯಲು ಸಾಧ್ಯ ಎಂದು ವಿಶ್ವದೆಲ್ಲೆಡೆ ನಡೆಯುತ್ತಿರುವ ಶೈಕ್ಷಣಿಕ  ಸಂಶೋಧನೆಗಳು ತಿಳಿಸಿವೆ. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಎಲ್ಲಾ ಸಂಪನ್ಮೂಲಗಳು ಸಿಗುವುದು ಮಾತೃ ಭಾಷೆಯಿಂದ ಮಾತ್ರ. ಆದರೆ ಇಂತಹ ವ್ಯವಸ್ಥೆಯಿಂದ ಸರ್ಕಾರ ಹಾಗೂ ಮಧ್ಯಮ ವರ್ಗದ ಜನತೆ ದೂರ ಸರಿಯುತ್ತಿರುವುದು ವಿಷಾದನೀಯ~ ಎಂದರು.

`ಅನ್ಯ ಭಾಷೆ ಕಲಿಯಲು ಮಾತೃ ಭಾಷೆ ಅಗತ್ಯ~
`ಮಕ್ಕಳಲ್ಲಿ ಅತ್ಯುತ್ತಮ ಅರಿವು ಮೂಡಿಸಲು ಮಾತೃ ಭಾಷೆ ಮೂಲಕ ಮಾತ್ರ ಸಾಧ್ಯ. ಜಗತ್ತಿನ ಯಾವುದೇ ಭಾಷೆಯನ್ನು ಕಲಿಯಲು ಮಾತೃ ಭಾಷೆಯ ತಿಳುವಳಿಕೆ ಅಗತ್ಯ~ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ತಿಳಿಸಿದರು.

ಒಂದೆಡೆ, ಶಿಕ್ಷಣ ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗೆ ಕನ್ನಡ ಮಾಧ್ಯಮದಲ್ಲಿ ಇರಬೇಕೆಂಬುದು ಕುವೆಂಪು ಅವರ ಆಶಯವಾಗಿತ್ತು. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಇಂಗ್ಲಿಷ್ ಮಾಧ್ಯಮ ಅವಶ್ಯಕ ಎಂಬುದು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದ ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಆಶಯವಾಗಿದೆ. ಸರ್ಕಾರ ಇಂತಹ ಯೋಜನೆ ಜಾರಿಗೆ ತಂದರೆ ಕುವೆಂಪು ಅವರ ಆಶಯಕ್ಕಿಂತ ನಾರಾಯಣ ಮೂರ್ತಿ ಆಶಯ ಈಡೇರುವುದು ಖಚಿತ ಎಂದರು.

ಪರಿಷತ್ತಿನ ವರ್ತನೆಯಿಂದ ನೋವಾಗಿದೆ: ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಜಾರಿಗೆ ತರಲು ಪ್ರಸ್ತಾಪಿಸಿದ ಬೆನ್ನಲ್ಲೇ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಸರ್ಕಾರದ ಅಂಗ ಸಂಸ್ಥೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಧಾನ ಹೊರಹಾಕಿತ್ತು. ಮಾತೃ ಭಾಷೆಯ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ ಮೌನ ವಹಿಸಿದ ವರ್ತನೆಯಿಂದ ನೋವಾಗಿದೆ ಎಂದರು.

ಹಿರಿಯ ಸಾಹಿತಿಗಳು ಸಭೆ ಸೇರಿ ಇಂಗ್ಲಿಷ್ ಮಾಧ್ಯಮ ಕೈಬಿಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಪರಿಷತ್ತು ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲು ನಿಯೋಗ ತೆರುಳುವಂತೆ ಕೂಡ ನಿರ್ಧರಿಸಲಾಗಿತ್ತು.ಆದರೆ ಅಧ್ಯಕ್ಷರು ಸಭೆ ನಡೆದ ಬಗ್ಗೆ ಯಾವುದೇ ಮಾಧ್ಯಮಗಳಿಗೂ ಮಾಹಿತಿ ನೀಡದೆ, ಸುದ್ದಿ ಪ್ರಕಟವಾಗದಂತೆ ಬಹಳ ಎಚ್ಚರಿಕೆ ವಹಿಸಿದರು. ಈ ರೀತಿಯ ವರ್ತನೆ ಮುಂದುವರಿದರೆ ಇದುವರೆಗೆ ಕನ್ನಡಕ್ಕಾಗಿ ಹೋರಾಟ ಮಾಡಿದ ಪ್ರತಿಫಲವಾದರೂ ಏನು ಎಂದು ವಿಷಾದಿಸಿದರು.

ಇನ್ನೂ ತಲುಪದ ಶಿಕ್ಷಣ: ಸಂವಿಧಾನ ಜಾರಿಗೆ ಬಂದ ದಿನದಿಂದ ಇಲ್ಲಿಯವರೆಗೂ ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯಗಳಿಗೆ ಶಿಕ್ಷಣ ಸಂಪೂರ್ಣವಾಗಿ ತಲುಪಿಲ್ಲ. ಇದರಿಂದ ಶೈಕ್ಷಣಿಕ ಅಸಮಾನತೆ ಉಂಟಾಗಿದೆ. ಶೇ 53 ರಷ್ಟು ಮಂದಿ 8ನೇ ತರಗತಿ ವರೆಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಶೇ 77 ರಷ್ಟು ಎಸ್ಸೆಸ್ಸೆಲ್ಸಿ, ಶೇ 23 ರಷ್ಟು ಪಿಯುಸಿ ಹಂತದವರೆಗೆ ಹಿಂದುಳಿದ ವಗರ್ಗದವರು ಶಿಕ್ಷಣ ಪಡೆಯುವುದು ಈ ವರೆಗೆ ಸಾಧ್ಯವಾಗಿದೆ ಎಂದು ಹೇಳಿದರು.ಯೋಜನೆಗಳು ವಿಫಲ: ದೇಶದ ಎಲ್ಲಾ ವರ್ಗದವರಿಗೆ ಶಿಕ್ಷಣ ತಲುಪಿಸುವ ಸಲುವಾಗಿ  1968 ರ ಶಿಕ್ಷಣ ನೀತಿ, ಜಿಲ್ಲಾ ಪ್ರಾಥಮಿಕ ಶೈಕ್ಷಣಿಕ ಕಾರ್ಯಕ್ರಮ (ಡಿಪಿಇಪಿ) ಸರ್ವ ಶಿಕ್ಷಣ ಅಭಿಯಾನ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿತು. ಈ ಯೋಜನೆಗಳು ಕಾಲ ಮಿತಿಯೊಳಗೆ ಕಡ್ಡಾಯ ಹಾಗೂ ಸಂಪೂರ್ಣ ಶಿಕ್ಷಣ ಸಾಧಿಸಲು ಯಾವುದೇ ಗಡುವು ಪ್ರಸ್ತಾಪ ಮಾಡದಿರುವುದು ದುರಂತದ ಸಂಗತಿ. ಈವರೆಗೂ ಜಾರಿಗೆ ಬಂದ ಯೋಜನೆಗಳೆಲ್ಲಾ ವಿಫಲವಾಗಿವೆ ಎಂದರು.ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಮೂಲಕ 2010 ರವೇಳೆಗೆ ಎಲ್ಲರಿಗೂ ಸಂಪೂರ್ಣ ಶಿಕ್ಷಣ ನೀಡುವುದಾಗಿ ಘೋಷಿಸಿತ್ತು. ಈ ಯೋಜನೆಯಿಂದ ಕೂಡ ಸಾಧ್ಯವಾಗಿಲ್ಲ. ಮಾತೃ ಭಾಷೆಯಲ್ಲಿ ಸಂಪೂರ್ಣ ಹಾಗೂ ಕಡ್ಡಾಯ ಶಿಕ್ಷಣ ನೀಡಲು ಸಾಧ್ಯವಾಗದ ಸರ್ಕಾರ ಆಂಗ್ಲ ಭಾಷೆಯ ಮೂಲಕ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಸಂಪತ್ತಿನ ಲೂಟಿಗೆ ಕಾರಣ: ದೇಶದಲ್ಲಿ ನಡೆಯುತ್ತಿರುವ ಸಂಪತ್ತಿನ ಲೂಟಿಗೆ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದ ಪದವಿಧರರೇ ಕಾರಣ. ತಮ್ಮಲ್ಲಿರುವ ಜ್ಞಾನದ ಸಂಪತ್ತನ್ನು ಬಹುರಾಷ್ಟ್ರೀಯ, ಖಾಸಗಿ ಕಂಪೆನಿಗಳಿಗೆ ಧಾರೆ ಎರೆಯುವ ಮೂಲಕ ದಲಿತರ, ಆದಿವಾಸಿಗಳ ಮೇಲೆ ಶೋಷಣೆ ನಡೆಸಿ ದೇಶದ ಸಂಪತ್ತನ್ನು ದೋಚಲು ಕಂಪೆನಿಗಳಿಗೆ ಗುಲಾಮರಾಗಿ ದುಡಿಯುತ್ತಿದ್ದಾರೆ. ಇಂತಹ ಭಾಷಾ ಶಿಕ್ಷಣ ಜಾರಿಗೆ ಬರಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದರು.ಸರ್ಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತಂದರೆ ಮಾತ್ರ ಎಲ್ಲಾ ವರ್ಗಕ್ಕೂ ಶಿಕ್ಷಣ ತಲುಪಲು ಸಾಧ್ಯ. ಇಂಗ್ಲಿಷ್ ಕಲಿಕೆಗೆ ನನ್ನ ವಿರೋಧವಿಲ್ಲ. ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ನನ್ನ ವಿರೋಧವಿದೆ ಎಂದರು.ಇದೇ ವೇಳೆ ಲೇಖಕ ಡಾ.ರಹಮತ್ ತರೀಕೆರೆ ಕರ್ನಾಟಕ ಜನಶಕ್ತಿ ಹೊರ ತಂದಿರುವ `ಜನದನಿ~ ಅನುಭವ ಮಂಟಪ ಸಂಚಿಕೆ ಬಿಡುಗಡೆ ಮಾಡಿದರು.ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಉಪನ್ಯಾಸಕ ಡಾ.ರಂಗನಾಥ ಕಂಟನಕುಂಟೆ, ಸಂಘಟನೆ ಸದಸ್ಯ ಕುಮಾರ್ ಸಮತಳ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry