ಮಂಗಳವಾರ, ನವೆಂಬರ್ 19, 2019
23 °C
ನಿರಂತರ ಟ್ರಸ್ಟ್‌ನ ಐದನೇ ವರ್ಷದ ಕಾರ್ಯಕ್ರಮ

ಜಾಗತೀಕರಣದ ಅಪಾಯ ನೆನಪಿಸಿದ `ಭೂಮಿಹಬ್ಬ'

Published:
Updated:

ಯಲಹಂಕ: ರಾಜಾನುಕುಂಟೆ ಸಮೀಪದ ಅದ್ದೆ- ಸುದೇನುಪುರದ ಮದ್ಯದಲ್ಲಿರುವ ಅಂದಾನಪ್ಪನವರ ಹೊಲದಲ್ಲಿ `ನಿರಂತರ ಟ್ರಸ್ಟ್' ಈಚೆಗೆ ಏರ್ಪಡಿಸಿದ್ದ `ಭೂಮಿಹಬ್ಬ' ಆಚರಣೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಅಕ್ಷರಶಃ ಗತವೈಭವದ ಹಳ್ಳಿಯ ಚಿತ್ರಣವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಒದಗಿ ಬಂದಿತ್ತು.ಹಳ್ಳಿ ಆಟಗಳು, ಗ್ರಾಮ ದೇವರುಗಳ ಮೆರವಣಿಗೆ, ಹಳ್ಳಿ ಊಟದ ಸಹಭೋಜನ, ಗಣ್ಯರಿಂದ ನೆಲ-ಜಲ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕುರಿತು ಅರಿವು ಮೂಡಿಸುವ ಮಾತುಗಳು, ಜನಪದ ಕಲಾತಂಡಗಳಿಂದ ಹಾಡು, ಕುಣಿತದ ಸಂಭ್ರಮ- ಇವೆಲ್ಲವೂ `ಭೂಮಿಹಬ್ಬ'ದ ಸೊಬಗು, ಸಂಭ್ರಮವನ್ನು ಹೆಚ್ಚಿಸಿದವು.ಬೆಳಿಗ್ಗೆ ಗ್ರಾಮೀಣ ಕ್ರೀಡಾಕೂಟದೊಂದಿಗೆ ಭೂಮಿಹಬ್ಬಕ್ಕೆ ಚಾಲನೆ ನೀಡಲಾಯಿತು. ಸಂಜೆ ಗ್ರಾಮ ದೇವರುಗಳನ್ನು ವಿವಿಧ ಜಾನಪದ ಕಲಾತಂಡಗಳ ಜೊತೆಯಲ್ಲಿ ಸುರಧೇನುಪುರದಿಂದ ಅಂದಾನಪ್ಪನವರ ಹೊಲದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಸುಮಾರು ನಾಲ್ಕು ಸಾವಿರ ಜನರು ಹಳ್ಳಿ ಊಟದ ರುಚಿಯನ್ನು ಸವಿದರು.ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಲಕ್ಷ್ಮಿ , `ಜಾಗತೀಕರಣದ ಪ್ರಭಾವದಿಂದ ತಳಸಮುದಾಯದ ಕುಬುಗಳಿಗೆ ಹೊಡೆತ ಬಿದ್ದಿದೆ. ಇದರಿಂದ ರೈತರು, ಕೂಲಿಕಾರರು ಮತ್ತು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು ತಡೆಯದ ಹೊರತು ಯಾವ ದುಡಿಯುವ ಸಮುದಾಯದ ಜನರಿಗೂ ಉಳಿಗಾಲವಿಲ್ಲ' ಎಂದು ಎಚ್ಚರಿಸಿದರು.`ತಳಸ್ತರದ ಸಮುದಾಯಗಳು ತಮ್ಮ ಹಳೆಯ ಕಸುಬು ಮತ್ತು ಕೃಷಿ ಪದ್ಧತಿಯಿಂದ ಉಳಿಯಲು ಆಗದೆ ಜಾಗತೀಕರಣದ ಬೆಲೆಯನ್ನು ತೆತ್ತು, ಬೀಜ ಗೊಬ್ಬರಗಳನ್ನು ಕೊಂಡು ವ್ಯವಸಾಯವನ್ನು ಮಾಡಲೂ ಆಗದೆ ಸಂಕಷ್ಟ  ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಈ ದಿಸೆಯಲ್ಲಿ ನಾವೆಲ್ಲರೂ ಒಗ್ಗೂಡುವ ಮೂಲಕ ನಮ್ಮ ವಿರುದ್ಧವಿರುವ ವಿದೇಶಿ ಅರ್ಥಿಕ ಶಕ್ತಿಗಳ ಹಾಗೂ ಸ್ವದೇಶಿ ದಲ್ಲಾಳಿಗಳ ವಿರುದ್ಧ ಹೋರಾಟ ರೂಪಿಸಿ, ನಮ್ಮ ಬದುಕನ್ನು ನಾವೇ ನಿರ್ಧರಿಸುವ ರಾಜಕೀಯ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಾಗಿದೆ' ಎಂದು ಸಲಹೆ ನೀಡಿದರು.ಕವಿ ಸುಬ್ಬು ಹೊಲೆಯರ್ ಮಾತನಾಡಿ, `ಭೂಮಿ ಮತ್ತು ಹೆಣ್ಣು ಎರಡೂ ಸೃಷ್ಟಿಯ ಮೂಲಗಳಾಗಿದ್ದು, ಹೆಣ್ಣಿಲ್ಲದೆ ಯಾವ ಜೀವಿಯ ಸೃಷ್ಟಿಯೂ ಸಾಧ್ಯವಿಲ್ಲ. ಹಾಗೆಯೇ  ಭೂಮಿಯಿಲ್ಲದೆ ಅನ್ನ, ನೀರು ಸಿಗುವುದಿಲ್ಲ. ಆದರೆ ಇಂದು ಇವೆರಡರ ಮೇಲೆ ಮಾರಕವಾದ ಹಲ್ಲೆ ನಡೆಯುತ್ತಿದ್ದು, ತನ್ನ ಮೂಲನೆಲೆ ನಂಬದ ಮನುಷ್ಯನಿಗೆ ಉಳಿಗಾಲವಿಲ್ಲ' ಎಂದು ಎಚ್ಚರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಅದ್ದೆ ಮಂಜುನಾಥ್, `ಭೂಮಿಹಬ್ಬ ಎಂದರೆ ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಎಂಬುದು ನಮ್ಮ ನಂಬಿಕೆಯಾಗಿದೆ.ಇದೇ ಕಾರಣಕ್ಕಾಗಿ ನಮ್ಮ ಸುತ್ತಮುತ್ತಲ ಗ್ರಾಮಗಳ ಪ್ರಜ್ಞಾವಂತ ಯುವಕರು ಸೇರಿಕೊಂಡು ಇಂತದೊಂದು ಪ್ರಯತ್ನಕ್ಕೆ ಕೈಹಾಕಿ, ಕಳೆದ ಐದು ವರ್ಷಗಳಿಂದ ನಿರಂತರವಾಗಿ ಭೂಮಿಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ' ಎಂದು ತಿಳಿಸಿದರು. `ಜಾತಿ-ಮತ, ಲಿಂಗ- ಭೇದಗಳನ್ನು ಮೀರಿ  ಜೀವಿಸಬೇಕೆಂಬ ಸಾಂಕೇತಿಕ ಕ್ರಿಯೆ ಈ ಭೂಮಿಹಬ್ಬ. ಇದೊಂದು ಸುತ್ತಮುತ್ತಲ ಹೊಸತಲೆಮಾರಿನ ಜನರು ಆಲೋಚಿಸಲು ಪ್ರೇರೇಪಿಸುವ ಕಾರ್ಯಕ್ರಮವಾಗಿದೆ' ಎಂದು ಹೇಳಿದರು.ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಲನಚಿತ್ರ ನಟ ದುನಿಯಾ ವಿಜಯ್, ಬೆಂಗಳೂರು ಉತ್ತರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ವಿ.ಆರ್.ನಾರಾಯಣರೆಡ್ಡಿ, ಕಾರ್ಯದರ್ಶಿ ಕಡತನಮಲೆ ಸತೀಶ್, ಅದ್ದೆ ಹರೀಶ್, ಕಾಕೋಳು ಲಕ್ಕಪ್ಪ ಮೊದಲಾದವರು ಉಪಸ್ಥಿತರಿದ್ದರು

ಪ್ರತಿಕ್ರಿಯಿಸಿ (+)