ಮಂಗಳವಾರ, ಮೇ 11, 2021
20 °C

`ಜಾಗತೀಕರಣ ಮಾನವನ ಸ್ವಂತಿಕೆ ಮರೆಸುತ್ತಿದೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳವಳಿಗಳ ಕಾಲ ಮುಗಿದು ಪ್ರಗತಿಯತ್ತ ದಾಪುಗಾಲಿಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಮಾನವನ ಸ್ವಂತಿಕೆಯನ್ನು ಜಾಗತೀಕರಣ ಹಾಗೂ ಅಂತರ್ಜಾಲ ತಾಣಗಳು ಮರೆಸುತ್ತಿವೆ ಎಂದು ವಿಮರ್ಶಕಿ ತಾರಿಣಿ ಶುಭಾದಾಯಿನಿ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ಘಟಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೊಳಕಾಲ್ಮೂರಿನ ಒಡಲಾಳ ಸಾಂಸ್ಕೃತಿಕ ಸಂಘ, ಬೆಂಗಳೂರಿನ ಸಿರಿವರ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಡಿ.ಎಸ್. ಚೌಗಲೆ ಅವರ `ಏಳು ನಾಟಕಗಳು' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಚೌಗಲೆ ಅವರು ಸಾಮಾಜಿಕ ಬದ್ಧತೆ ತೋರಿಸುವಂತ ನಾಟಕಗಳನ್ನು ಆಯ್ಕೆ ಮಾಡಿಕೊಂಡು ಜೀವ ತುಂಬಿದ್ದಾರೆ. ಒಂದೊಂದು ಭಾಗದಲ್ಲಿ ನಾನಾ ರೀತಿಯ ಸಮಸ್ಯೆಗಳಿರುವುದನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.ತಂಬಾಕು ಬೆಳೆಗಾರರ ನಾಟಕದ ಕೃತಿಯಲ್ಲಿ ಬೆಳೆಗಾರರು ನಷ್ಟ ಅನುಭವಿಸುತ್ತಿರುವ ವಿಷಯ ಉತ್ತಮವಾಗಿ ಮೂಡಿಬಂದಿದೆ. ಸಿಗರೇಟು ಉತ್ಪಾದಕರು ಹಾಗೂ ಮಾರಾಟಗಾರರು ಶ್ರಿಮಂತ ರಾಗುತ್ತಿದ್ದು, ಅದನ್ನು ಬೆಳೆದ ರೈತ ಇಂದಿಗೂ ಬಡತನದಲ್ಲಿ ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿರುವುದು ಸೋಜಿಗದ ಸಂಗತಿ ಎನ್ನುವುದನ್ನು ಚಿತ್ರಿಸಿರುವುದು ಅವರಲ್ಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು.ರಾಷ್ಟ್ರೀಯ ಭಾವೈಕ್ಯದ ವಿಚಾರದಲ್ಲಿ ಇಂದಿಗೂ ಕೂಡ ಅನೇಕರಲ್ಲಿ ಅಸಮಾಧಾನವಿದೆ. `ಬಹುತ್ವ' ಹಾಗೂ `ಅಲ್ಪತ್ವ' ಎನ್ನುವ ಭೇದ-ಭಾವ ಸ್ವಾತಂತ್ರ್ಯ ಬಂದು 65 ವರ್ಷವಾದರೂ ಕೂಡ ದೂರವಾಗಿಲ್ಲ. ಗಾಂಧಿ ಹಾಗೂ ಅಂಬೇಡ್ಕರ್ ಬಗ್ಗೆ ಬರೆದಿರುವ ನಾಟಕದಲ್ಲಿ ರಾಷ್ಟ್ರೀಯತೆ ಹಾಗೂ ಉಪರಾಷ್ಟ್ರೀಯತೆ ವಿಚಾರದಲ್ಲಿ ನಡೆದಂತ ಘಟನೆ ಓದುಗರಲ್ಲಿ ಆಸಕ್ತಿ ಹೆಚ್ಚಿಸಿ ಸತ್ಯಾಂಶ ಹೊರಹಾಕುತ್ತಾ ಹೋಗುತ್ತದೆ ಎಂದು ಹೇಳಿದರು.     ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಸೃಜನಶೀಲ ವ್ಯಕ್ತಿತ್ವ ಹಾಗೂ ಉತ್ತಮ ಸಂಸ್ಕೃತಿ ಬೆಳೆಸಿಕೊಳ್ಳಲು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಬಹುಮುಖ್ಯ ಎಂದು ಹೇಳಿದರು.ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎನ್ನುವ ದೂರು ಎಲ್ಲೆಡೆ ಕಂಡು ಬರುತ್ತಿದೆ. ಆದರೆ, ಸಾಹಿತ್ಯ ಸಮ್ಮೇಳನ ನಡೆದರೆ ಲಕ್ಷಾಂತರ ಪುಸ್ತಕ ಖರ್ಚಾಗುತ್ತಿದ್ದು, ಮೌಲ್ಯಯುತ ಪುಸ್ತಕಗಳಿಗೆ ಎಲ್ಲ ಕಾಲಕ್ಕೂ ಬೇಡಿಕೆಯಿದೆ ಎನ್ನುವುದು ಸಮ್ಮೇಳನದಿಂದ ಸಾಬೀತಾಗುತ್ತಿದೆ ಎಂದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಡಾ.ಡಿ.ಎಸ್.ಚೌಗಲೆ, ರವೀಂದ್ರನಾಥ್ ಸಿರಿವರ, ಡಾ.ವಿ.ಬಸವರಾಜು, ರವೀಂದ್ರನಾಥ್ ಸಿರಿವರ ಹಾಜರಿದ್ದರು. ಕುಮಾರ್ ಪ್ರಾರ್ಥಿಸಿದರು. ಗಣೇಶಯ್ಯ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.