ಗುರುವಾರ , ಮೇ 19, 2022
23 °C

ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಬೆಳಗಾವಿಯಲ್ಲಿ ಮಾರ್ಚ್ 11ರಿಂದ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೊಡಗು ಜಿಲ್ಲೆಯಲ್ಲಿ ಪೂರಕ ಸಾಂಸ್ಕೃತಿಕ ವಾತಾವರಣ ನಿರ್ಮಿಸುವುದಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉಪ ಸಮಿತಿ ಸಭೆಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಮಾರ್ಚ್ 6ರಿಂದ 8ರವರೆಗೆ ಕನ್ನಡದ ತೇರನ್ನು ಜಿಲ್ಲೆಯಾದ್ಯಂತ ಸಂಚಾರ ಮಾಡಿಸಿ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ಇದೇ ಸಂದರ್ಭದಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ, ಇದೊಂದು ಜನಪರ ಕಾರ್ಯಕ್ರಮವಾಗಿದ್ದು, ನಾಡಿನ ಭವ್ಯ ಪರಂಪರೆ ಕುರಿತ ನಾಡಹಬ್ಬವನ್ನಾಗಿ ಆಚರಿಸಲು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಒಂದು ಸಮಿತಿ ರಚಿಸಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾ.ಪಂ. ಇಒ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ಈ ಸಂಬಂಧ ತಾಲ್ಲೂಕು ಮಟ್ಟದಲ್ಲಿ ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆಗಳನ್ನು ನಿರ್ಧರಿಸಬೇಕು. ಜಿಲ್ಲೆಯ ಜನತೆಗೆ ವಿಶ್ವ ಕನ್ನಡ ಸಮ್ಮೇಳನದ ಮಹತ್ವ ಸಾರುವ ಪೋಸ್ಟರ್‌ಗಳನ್ನು ಜಿಲ್ಲೆಯ ಎಲ್ಲಾ ಹಳ್ಳಿಗಳು, ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕಬೇಕು ಎಂದು ಸಲಹೆ ಮಾಡಿದರು.ಈ ಸಂಬಂಧ ತಹಶೀಲ್ದಾರರು ಹಾಗೂ ತಾ.ಪಂ. ಇಒಗಳನ್ನು ಮಾ. 1ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಆಹ್ವಾನಿಸಿ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡದ ತೇರು ಭಾಗಮಂಡಲದಲ್ಲಿ ಉದ್ಘಾಟನೆಗೊಂಡು ಮೂರು ತಾಲ್ಲೂಕುಗಳಲ್ಲಿ ಸಂಚರಿಸುವುದು ಸೂಕ್ತ. ಈ ಸಂದರ್ಭದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಏರ್ಪಡಿಸಿದರೆ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ಬರುತ್ತದೆ ಎಂದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ರಾಣಿ ಮಾಚಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್‌ಚಂದ್ರ ಮಾತನಾಡಿದರು.ಕಾವೇರಿ ತೇರು ಸಂಚರಿಸುವ ಮಾರ್ಗ: ಮಾರ್ಚ್ 6ರಂದು ಭಾಗಮಂಡಲದಲ್ಲಿ ಉದ್ಘಾಟನೆಯಾದ ಬಳಿಕ ಕಾವೇರಿ ತೇರು ಚೇರಂಬಾಣೆ, ನಾಪೋಕ್ಲು, ಪಾರಾಣೆ, ಮೂರ್ನಾಡು, ಬೇತ್ರಿ, ಕದನೂರು, ಕಾಕೋಟುಪರಂಬು ಮಾರ್ಗವಾಗಿ ವಿರಾಜಪೇಟೆ ತಲುಪಲಿದೆ. 7ರಂದು ವಿರಾಜಪೇಟೆಯಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ಕಿರಗಂದೂರು ಮಾರ್ಗವಾಗಿ ಪಾಲಿಬೆಟ್ಟ, ಸಿದ್ದಾಪುರ, ನೆಲ್ಯಹುದಿಕೇರಿ, ಒಂಟಿಯಂಗಡಿ, ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ ತಲುಪಲಿದೆ. 8ರಂದು ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಕೂಡುಮಂಗಳೂರು ಮಾರ್ಗವಾಗಿ ಸೋಮವಾರಪೇಟೆ, ಗೌಡಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ಮಾರ್ಗವಾಗಿ ತೆರಳಲಿದೆ. ಸೋಮವಾರಪೇಟೆಯಲ್ಲಿ ಮಧ್ಯಾಹ್ನದ ಕಾರ್ಯಕ್ರಮ ಹಾಗೂ ಕೊಡ್ಲಿಪೇಟೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.