ಜಾಣೆಯಾದ ಹರ್ಷಿಕಾ

7

ಜಾಣೆಯಾದ ಹರ್ಷಿಕಾ

Published:
Updated:
ಜಾಣೆಯಾದ ಹರ್ಷಿಕಾ

`ಚಿತ್ರರಂಗಕ್ಕೆ ಬಂದು ಐದು ವರ್ಷಗಳಾದವು. ಚಿತ್ರರಂಗ ಒಳ್ಳೆಯದು ಮತ್ತು ಕೆಟ್ಟದ್ದು ಎರಡರ ದರ್ಶನ ಮಾಡಿಸಿದೆ. ಕೆಲವು ಚಿತ್ರಗಳನ್ನು ಒಪ್ಪಿಕೊಂಡು ಮಾಡಿದ ತಪ್ಪುಗಳು ಕಾಡುತ್ತಿವೆ. ಮುಂದೆ ಇಂತಹ ತಪ್ಪುಗಳಿಗೆ ಅವಕಾಶ ನೀಡುವುದಿಲ್ಲ~.`ಸಿನಿಮಾ ರಂಜನೆ~ಯೊಂದಿಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ ಅವರ ಮಾತುಗಳಲ್ಲಿ ಕಳೆದ ದಿನಗಳ ಕುರಿತ ವಿಮರ್ಶೆಯಿತ್ತು. ಇಂದಿನ ಕುರಿತ ವಿವೇಕ ಹಾಗೂ ನಾಳೆಗಳ ಕುರಿತಂತೆ ಭರವಸೆಯಿತ್ತು.`ಚಿತ್ರರಂಗಕ್ಕೆ ಬಂದಾಗ ಹುಡುಗಿ ತುಂಬಾ ಮುದ್ದಾಗಿದ್ದಾಳೆ ಎಂದರು, ಚೆನ್ನಾಗಿ ನಟಿಸುತ್ತಾಳೆ ಎಂದು ಬೆನ್ನುತಟ್ಟಿದರು, ಕೆಲವು ಚಿತ್ರಗಳಲ್ಲಿ ನೋಡಿದಾಗ ಇಂತಹ ಚಿತ್ರಗಳಲ್ಲಿ ಏಕೆ ಮಾಡಿದೆ ಎಂದೂ ಕೇಳಿದರು. ನಿಜ, ಕೆಲವು ಚಿತ್ರಗಳನ್ನು ಒಪ್ಪಿಕೊಂಡದ್ದು ನನ್ನ ತಪ್ಪು. `ನಾರಿಯ ಸೀರೆ ಕದ್ದ~ ಚಿತ್ರದಲ್ಲಿ ರವಿಚಂದ್ರನ್ ಸರ್ ನಟಿಸುತ್ತ್ದ್ದಿದಾರೆಂದು ಒಪ್ಪಿಕೊಂಡೆ. ಕಾಮಿಡಿ ಚಿತ್ರದಲ್ಲಿ ನಟಿಸುವ ಆಸೆಯಿಂದ `5 ಈಡಿಯಟ್ಸ್~ ಒಪ್ಪಿಕೊಂಡೆ.ಈಗ ಆ ಪಾತ್ರಗಳ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಆದರೆ ಯಾವ ಚಿತ್ರ ವಿಮರ್ಶೆಯಲ್ಲೂ ನನ್ನ ನಟನೆ ಬಗ್ಗೆ ನೆಗೆಟಿವ್ ಅಭಿಪ್ರಾಯ ವ್ಯಕ್ತವಾಗಿಲ್ಲ. ಆ ಸಮಾಧಾನವಿದ್ದರೂ ಮುಂದೆ ಇಂತಹ ಪ್ರಮಾದಗಳು ಸಂಭವಿಸಲು ಬಿಡುವುದಿಲ್ಲ. ಅಷ್ಟರಮಟ್ಟಿಗೆ ಪಾತ್ರಗಳನ್ನು ಅಳೆದು ತೂಗುತ್ತೇನೆ~ ಎಂದು ಖಚಿತ ಸ್ವರದಲ್ಲಿ ನುಡಿದರು.`ಕ್ರೇಜಿ ಲೋಕ~, `ಅದ್ವೈತ~, `ಬೀಟ್~ ಹರ್ಷಿಕಾ ನಟಿಸಿರುವ ಬಿಡುಗಡೆಗೆ ಕಾದಿರುವ ಚಿತ್ರಗಳು. ಜೊತೆಯಲ್ಲಿ `ಬಿ 3~ ಎಂಬ ಚಿತ್ರಕ್ಕೂ ಹರ್ಷಿಕಾ ಬಣ್ಣ ಹಚ್ಚಿದ್ದಾರೆ. `ಬೀಟ್~ ಚಿತ್ರದ ನಿರ್ದೇಶಕ ಶ್ಯಾಂ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರಿಗೆ `ಒಲವೇ ಮಂದಾರ~ದ ಶ್ರೀಕಾಂತ್ ಜೊತೆಗಾರ. ಈ ಜೋಡಿಗೆ ಇದು ಎರಡನೇ ಚಿತ್ರ.ಇದೇ ಜೋಡಿಗೆ ಒಂಬತ್ತು ಚಿತ್ರಗಳ ಆಫರ್ ಬಂದಿದೆಯಂತೆ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ಚಿತ್ರಕಥೆ ಮೇಲೆ ನನ್ನ ನಿರ್ಧಾರ ಅವಲಂಬಿಸಿದೆ ಎನ್ನುತ್ತಾರೆ ಹರ್ಷಿಕಾ. `ಬಿ 3~ ನಟನಾ ಕೌಶಲ್ಯವನ್ನು ಅನಾವರಣಗೊಳಿಸಲು ಸಿಕ್ಕಿರುವ ಮತ್ತೊಂದು ವೇದಿಕೆ ಎಂದು ಅವರು ಪರಿಗಣಿಸಿದ್ದಾರೆ.ಮೊದಲ ಚಿತ್ರ `ಪಿಯುಸಿ~ಯಲ್ಲಿ ನಟಿಸುವಾಗ ಎಲ್ಲರೂ ಅವರ ಓದಿನ ಬಗ್ಗೆ ಆತಂಕಗೊಂಡಿದ್ದರು. ಸಿನಿಮಾ ಸೇರಿದ ಬಳಿಕ ಓದಿಗೆ ತಿಲಾಂಜಲಿ ಬಿತ್ತು ಎಂದೇ ಹೇಳುತ್ತಿದ್ದರಂತೆ. ಆದರೀಗ ಹರ್ಷಿಕಾ ಸಾಫ್ಟ್‌ವೇರ್ ಎಂಜಿನಿಯರ್. ನಟನೆ ಮಧ್ಯೆ ಬಿಡುವು ಮಾಡಿಕೊಂಡು ತಿಂಗಳಿಗೆ ಕನಿಷ್ಠ ಐದು ದಿನವಾದರೂ ಕೆಲಸಕ್ಕೆ ಹೋಗುತ್ತಾರೆ. ಒತ್ತಡದ ಮಧ್ಯೆ ಈ ಕೆಲಸ ಖುಷಿ-ನೆಮ್ಮದಿ ನೀಡುತ್ತದೆ ಎನ್ನುತ್ತಾರೆ. ಅಂದಹಾಗೆ, ಅಭಿನಯಿಸುತ್ತಲೇ ಓದು ಪೂರ್ಣಗೊಳಿಸಿದ ಹರ್ಷಿಕಾ ಅನೇಕರಿಗೆ ರೋಲ್ ಮಾಡೆಲ್ ಸಹ ಆಗಿದ್ದಾರಂತೆ.`ತಮಸ್ಸು~, `ಜಾಕಿ~ ಮತ್ತು `ಮುರುಳಿ ಮೀಟ್ಸ್ ಮೀರಾ~ ಚಿತ್ರಗಳಿಂದ ತಾನೊಬ್ಬ ಪರಿಪೂರ್ಣ ಕಲಾವಿದೆಯಾಗಿ ಹೊರಹೊಮ್ಮಿದ್ದೇನೆ ಎಂಬ ಹರ್ಷ ಹರ್ಷಿಕಾರದು.

`ಚಿತ್ರರಂಗ ನನ್ನನ್ನು ಸ್ವೀಕರಿಸಿದೆ. ಇಲ್ಲಿನ ಜನ ನನ್ನನ್ನು ಪ್ರೀತಿಸುತ್ತಾರೆ. ನಾನು ಚಿತ್ರರಂಗವನ್ನು ಪ್ರೀತಿಸುತ್ತೇನೆ. ಇನ್ನು ಪರಭಾಷೆಗೆ ಹೊರಳುವ ಪ್ರಶ್ನೆಯೇ ಹುಟ್ಟುವುದಿಲ್ಲ~- ಇದು ಅನ್ಯಭಾಷೆಯ ಚಿತ್ರರಂಗಕ್ಕೆ ಕಾಲಿಡುತ್ತೀರಾ ಎಂದು ಕೇಳಿದರೆ ನೀಡುವ ಪ್ರತಿಕ್ರಿಯೆ.ಒಪ್ಪಿಕೊಂಡರೆ ವಾರದಲ್ಲಿ 15 ಸಿನಿಮಾಗಳು ನನಗೆ ಸಿಗುತ್ತವೆ. ಐದು ವರ್ಷದಲ್ಲಿ ಚಿತ್ರರಂಗದಲ್ಲಿ ನನ್ನ ಬಗ್ಗೆ ಯಾರೂ ಯಾವ ಆರೋಪವನ್ನೂ ಮಾಡಿಲ್ಲ. ಕೆಲವು ನಟಿಯರಂತೆ ಅದು ಬೇಕು, ಇದು ಬೇಕು ಎಂದು ಕೇಳುವ ಜಾಯಮಾನ ನನ್ನದಲ್ಲ.

 

ಇಲ್ಲಿನ ನಿರ್ಮಾಪಕ, ನಿರ್ದೇಶಕರಿಗೆ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಅಲ್ಲದೆ ತಮಿಳು, ತೆಲುಗು ಚಿತ್ರರಂಗಕ್ಕೆ ನನ್ನ ಬಗ್ಗೆ ಗೊತ್ತಿಲ್ಲ. ನನಗೂ ಅವುಗಳ ಬಗ್ಗೆ ತಿಳಿದಿಲ್ಲ. ಸಾಕಷ್ಟು ಅವಕಾಶಗಳು ಆ ಭಾಷೆಗಳಿಂದ ಬಂದಿದೆ. ಅಲ್ಲಿ ಹೋಗಿ ಸಮಸ್ಯೆಗಳನ್ನು ಎದುರಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎನ್ನುವ ಅವರು, ಉತ್ತರ ಭಾರತೀಯ ನಟಿಯರಿಗಿಂತ ದಕ್ಷಿಣದವರೇ ಒಂದು ಕೈ ಮೇಲೆ ಎನ್ನುತ್ತಾರೆ.ನಾವು ಎಲ್ಲಾ ವಾತಾವರಣಕ್ಕೆ ಹೊಂದಿಕೊಳ್ಳುವ ಛಾತಿಯುಳ್ಳವರು. ನಾವೂ ಸೂಕ್ಷ್ಮ ನಿಜ. ಆದರೆ ಉತ್ತರದ ನಟಿಯರಂತಲ್ಲ. ಮರಳುಭೂಮಿ, ದಟ್ಟಕಾಡು ಹೀಗೆ ಎಲ್ಲಿ ಹೋದರೂ ಅವುಗಳಿಗೆ ಹೊಂದಿಕೊಳ್ಳುತ್ತೇವೆ. ಹೀಗಾಗಿ ಇಲ್ಲಿನ ನಟಿಯರಿಗೆ ಬಾಲಿವುಡ್ ಮಣೆ ಹಾಕುತ್ತಿದೆ ಎನ್ನುವುದು ಅವರ ಅಭಿಪ್ರಾಯ.`ಬಿ 3~ ಚಿತ್ರಕ್ಕಾಗಿ ದೂಳು ತುಂಬಿದ ಕಟ್ಟಡದಲ್ಲಿ ಐದು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದನ್ನು ಅವರು ಉದಾಹರಣೆಯಾಗಿ ಕೊಟ್ಟರು. ಕೈಕಾಲು ಕಟ್ಟಿ ಹಾಕುವ ದೃಶ್ಯದಿಂದ ರಕ್ತ ಹರಿವಿಕೆಯೇ ನಿಂತದ್ದು, ಬರಿಗಾಲಲ್ಲಿ ಓಡುವಾಗ ಗಾಯವಾದದ್ದು, ಹೀಗೆ ಚಿತ್ರೀಕರಣದಲ್ಲಿ ಉಂಟಾಗುವ ಕಷ್ಟಗಳು ತೆರೆಯ ಮೇಲೆ ಕಾಣುವುದಿಲ್ಲ ಎನ್ನುತ್ತಾರೆ.ಕನ್ನಡದ ನಟಿಯರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವುದು ಒಂದು ರೀತಿ ನಿಜವೇ. ಅದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಕೆಲವು ಚಿತ್ರಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ.ಹೀಗಾಗಿ ಪರಭಾಷೆಯಿಂದ ನಟಿಯರನ್ನು ಕರೆತರುತ್ತಾರೆ. ಆದರೆ ಅದರ ಬಂಡವಾಳ ಗೊತ್ತಾಗುವುದು ಧ್ವನಿ ಡಬ್ಬಿಂಗ್ ಮಾಡುವಾಗ. ಅವರ ತುಟಿ ಚಲನೆಗೆ ಕನ್ನಡದ ಸಂಭಾಷಣೆ ಹರಸಾಹಸ ಪಟ್ಟರೂ ಒಗ್ಗುವುದಿಲ್ಲ. ಬೇರೆ ಭಾಷೆಗಳಷ್ಟು ಸುಲಭವಲ್ಲ ಕನ್ನಡ. ನಮ್ಮ ಕನ್ನಡವನ್ನು ಸುಲಭವಾಗಿ `ಟಚ್~ ಮಾಡಲು ಆಗುವುದಿಲ್ಲ ಎಂದು ನಗೆ ಬೀರಿದರು.ಒಳ್ಳೆಯ ಚಿತ್ರಗಳು ಕೈಯಲ್ಲಿವೆ. ಮುಖ್ಯವಾಗಿ ಅವುಗಳಲ್ಲಿ ನನ್ನ ನಟನಾ ಸಾಮರ್ಥ್ಯ ಹೊರಹಾಕಲು ಅವಕಾಶವಿದೆ. ಒಬ್ಬ ನಟಿಯಾಗಿ ಇಷ್ಟು ಸಾಕು. ಏನೇ ಆಗಲಿ, ಕನ್ನಡ ಚಿತ್ರರಂಗದ ನಾಯಕಿಯರ ಮಟ್ಟಿಗೆ ಇದು ನನ್ನದೇ ಸಂವತ್ಸರ ಎಂದು ಅವರು ಭವಿಷ್ಯದ ಬಗ್ಗೆ ಕನಸುಗಳ ರಾಶಿ ಹರಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry