ಭಾನುವಾರ, ಜೂನ್ 13, 2021
21 °C

ಜಾತಕ ಹೊಂದಾಣಿಕೆ ಮತ್ತು ವೈವಾಹಿಕ ಸಂಬಂಧಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಈ ಕಾಲದ ಪಾಲಕರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಆರ್ಥಿಕ ಸ್ವಾವಲಂಬನೆ ನೀಡಬಲ್ಲ ಉದ್ಯೋಗ ದೊರಕಿಸಿಕೊಳ್ಳಲು ಶ್ರಮಪಡುತ್ತಾರೆ.

 

ಹೆಣ್ಣು ಮಕ್ಕಳಲ್ಲೂ ಸ್ವಾಭಿಮಾನ ಬೆಳೆಸಿ, ರಕ್ಷಿಸುವ ಉದ್ದೇಶದಿಂದ ಮತ್ತು ಲಿಂಗ ಸಮಾನತೆಯ ದೃಷ್ಟಿಯಿಂದ ಇದು ಸ್ವಾಗತಾರ್ಹ. ಆದರೆ ಇತ್ತೀಚಿನ ದಿನಗಳಲ್ಲಿ  ವೈವಾಹಿಕ ಸಂಬಂಧ ಬೆಳೆಸುವ ಸಂದರ್ಭದಲ್ಲಿ ಜಾತಕಕ್ಕೆ ಹೆಚ್ಚು ಒತ್ತು ನೀಡುವ ಪರಿಪಾಠ ಬೆಳೆಯುತ್ತಿದೆ.ವಿವಾಹ ಸಂಬಂಧದ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾಗುವ ವೈವಾಹಿಕ ಸಂಬಂಧದ ಜಾಹೀರಾತುಗಳಲ್ಲಿ ಮತ್ತು ವಧೂವರರ ಸಮಾವೇಶಗಳಲ್ಲಿ ಜಾತಕಗಳ ಹೊಂದಾಣಿಕೆಗೆ ಆದ್ಯತೆ ನೀಡುವುದು ಎದ್ದು ಕಾಣುತ್ತದೆ.ಜಾತಕಗಳ ಹೊಂದಾಣಿಕೆಯಲ್ಲಿ ನಂಬಿಕೆ ಇರಿಸಿದವರಲ್ಲಿ ವೃತ್ತಿ, ವಿದ್ಯೆ, ಜಾತಿ ಭೇದಗಳಿಲ್ಲ. ವಿಜ್ಞಾನ ವಿಷಯಗಳಲ್ಲಿ ಉನ್ನತ ಕ್ಷಣ ಪಡೆದವರು, ವೈದ್ಯರು, ಮೇಧಾವಿ ತಂತ್ರಜ್ಞರೂ ಜಾತಕ ನೋಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.ಯುವ ವಿಜ್ಞಾನಿಗಳು, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದವರು, ಪತ್ರಿಕೋದ್ಯಮಿಗಳೂ ಈಗ ಜಾತಕ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣ ನೀಡಿ ವೈವಾಹಿಕ ಸಂಬಂಧದ ಮಾತುಕತೆಗಳನ್ನು ಕೈಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಈ ಪಿಡುಗು ಸಂಪ್ರದಾಯವಾದಿ ಜಾತಿಗಳ ಜನರಲ್ಲಿ ಮಾತ್ರವಲ್ಲ, ಎಲ್ಲ ಜಾತಿಗಳ ಯುವಕರಲ್ಲೂ ಈಗ ಕಂಡು ಬರುತ್ತಿದೆ.ಬ್ರಾಹ್ಮಣರ ಮದುವೆಯ ಸಂದರ್ಭದಲ್ಲಿ ಪುರೋಹಿತರು ಹೇಳುವ ಒಂದು ಮಂತ್ರದ ಪ್ರಕಾರ, ವಿವಾಹ ವಯಸ್ಕ ಕನ್ಯೆ ಹುಡುಗನ ರೂಪವನ್ನು ನೋಡುತ್ತಾಳೆ, ತಾಯಿಯಾದವಳು ಸಂಪತ್ತನ್ನು, ತಂದೆ ವಿದ್ಯೆಯನ್ನು, ಬಂಧುಗಳು ಕುಲವನ್ನು ನೋಡುತ್ತಾರೆ. ಇಲ್ಲಿ ಜಾತಕದ ಪ್ರಸ್ತಾಪವೇ ಇಲ್ಲ! ಹಾಗಿದ್ದರೆ ಜಾತಕದ ಹುಚ್ಚು ಎಲ್ಲಿ, ಯಾವಾಗ ಮತ್ತು ಏಕೆ ಆರಂಭವಾಯಿತು?ಜಾತಕಗಳ ಹೊಂದಾಣಿಕೆ ಅಗತ್ಯ ಎನ್ನುವವರಿಗೆ ಕೆಲವು ಪ್ರಶ್ನೆಗಳು: ಮಗು ಹುಟ್ಟಿದ ಸಮಯದ ಬಗ್ಗೆ ಹೇಳುವುದಾದರೆ  ಹೆರಿಗೆ ಮಾಡಿಸಿದ ನರ್ಸ್ ಹೇಳಿದ ಸಮಯ ಸರಿಯೇ? ಸಿಸೇರಿಯನ್ ಮಾಡಿದ ವೈದ್ಯರು ಹೇಳಿದ ಸಮಯ ಸರಿಯಾದುದೇ?, ಹೆತ್ತ ತಾಯಿ ಮಗುವನ್ನು ನೋಡಿದ ಸಮಯವೇ?

 

ಯಾವುದು ಸರಿ? ಆರಂಭದಲ್ಲಿ ಒಬ್ಬರು ಜೋಯಿಸರು ಮಗುವಿನ ಜಾತಕದಲ್ಲಿ ದೋಷ ಇದೆ ಎಂದರೆ ಹುಟ್ಟಿದ ಗಳಿಗೆಯನ್ನು ಬದಲಾಯಿಸಿ `ಪ್ರಶಸ್ತ~ವಾದ ಹೊಸ ಜಾತಕವನ್ನು ಮಾಡುವವರಿಲ್ಲವೇ? ಈ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳಿವೆಯೇ? ಇಲ್ಲವಾದರೆ ಜಾತಕವನ್ನು ನಂಬಿ ಒಂದು ಹೆಣ್ಣಿನ ಭವಿಷ್ಯವನ್ನು ಬಲಿಕೊಡುವುದು ನ್ಯಾಯವೇ?

ನಾನು ನನ್ನ ಗೆಳೆಯರ, ಸಹೋದ್ಯೋಗಿಗಳ ಮಕ್ಕಳ ಅನೇಕ ಮದುವೆಗಳಿಗೆ ಹೋಗಿ ಮದುಮಕ್ಕಳಿಗೆ ಶುಭಾಶಯ ಕೋರಿದ್ದೇನೆ.

 

ಅದರ ಬೆನ್ನಲ್ಲೇ ಒಂದೇ ವರ್ಷದೊಳಗೆ ಅವರಲ್ಲಿ ಕೆಲವರು ಹೊಂದಾಣಿಕೆಯಾಗದೆ ವಿಚ್ಛೇದನದ ದಾರಿ ಹಿಡಿದ ಸುದ್ದಿಗಳೂ ನನಗೆ ತಿಳಿಯುತ್ತಿದ್ದವು. ಅವೆಲ್ಲ ಜಾತಕ ನೋಡಿಯೇ ನಿರ್ಧರಿಸಿದ  ಸಂಬಂಧಗಳಾಗಿದ್ದವು.

`ಇದು ಪ್ರಶಸ್ತವಾದ ಜಾತಕ ಮತ್ತು ವಿವಾಹ ಸಂಬಂಧ ಬೆಳೆಸಬಹುದು~ ಎಂಬ ಜೋಯಿಸರ ಸಲಹೆ ಮೇಲೆ ನಿರ್ಧರಿಸಿದ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಂಡದ್ದು ಹೇಗೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.

 

ಜೋಯಿಸರು ತಮ್ಮನ್ನು ಸಮರ್ಥಿಸಿಕೊಳ್ಳಲು ಜಾತಕ ಬರೆದ ಸಮಯ ಸರಿಯಾಗಿಲ್ಲ ಎನ್ನಬಹುದು. ವಿವಾಹ ವಿಫಲವಾದರೆ ತಮ್ಮನ್ನೇಕೆ ಹೊಣೆ ಮಾಡುತ್ತೀರಿ ಎಂದೂ ಅವರು ಕೇಳಬಹುದು.ನನ್ನ ಗಮನಕ್ಕೆ ಬಂದ ಇನ್ನೊಂದು ಘಟನೆ:
ಒಬ್ಬ ಯುವಕನ ಮೊದಲ ವಿವಾಹ ಜಾತಕ ನೋಡಿಯೇ ಆಗಿತ್ತು. ಒಂದು ವರ್ಷದೊಳಗೆ ಆ ಸಂಬಂಧ ಮುರಿಯಿತು. ವಿಚ್ಛೇದನ ಪಡೆದ ಯುವಕ ಮರು ಮದುವೆಗೆ ಕನ್ಯಾನ್ವೇಷಣೆಗೆ ಹೋದಾಗ ಅವನು ಹೇಳಿದ್ದು; `ಮೊದಲನೇ ಹೆಂಡತಿಯ ಜಾತಕ ಸರಿ ಇಲ್ಲದೇ ಮದುವೆ ಮುರಿದು ಬಿತ್ತು, ಈ ಬಾರಿಯಾದರೂ ಕನ್ಯೆಯ ಜಾತಕ ಸರಿ ಇರಬೇಕು ಮತ್ತು ಅದು ನನ್ನ ಜಾತಕಕ್ಕೆ ಹೊಂದಬೇಕು~ ಎಂದು.ಅವನ ಧೋರಣೆಯಿಂದ ಮೊದಲ ಮದುವೆ ಮುರಿದು ಬಿತ್ತೇ?, ಮುರಿಯಲು ಯಾರು ಕಾರಣರು, ಅದನ್ನು ಸರಿಪಡಿಸಬಹುದಿತ್ತೇ ಎಂಬ ಪ್ರಶ್ನೆಗಳನ್ನು ಹಾಕಿಕೊಂಡು  ಆತ್ಮಾವಲೋಕನ ಮಾಡಿಕೊಳ್ಳದೆ ಹುಡುಗಿಯ ಜಾತಕ ಸರಿಯಿರಲಿಲ್ಲ ಎಂದಿದ್ದ. ಅವನು ಅಮೆರಿಕದಲ್ಲಿ ಒಳ್ಳೆಯ ಉದ್ಯೋಗದಲ್ಲಿರುವ  ವಿದ್ಯಾವಂತ.ನಮ್ಮ ರೀತಿ ನೀತಿಗಳು ಎಷ್ಟು ಆಭಾಸಕಾರಿಯಾಗಿವೆ ನೋಡಿ? ವಿಚ್ಛೇದಿತ ಗಂಡಿಗೆ ಮರು ಮದುವೆ ಕಷ್ಟವಲ್ಲ. ಅವನದೇ ತಪ್ಪಿದ್ದರೂ ಜಾತಕವನ್ನು ದೂರಿ ಮೊದಲ ಸಂಬಂಧ ಕಡಿದುಕೊಂಡು ಹೊಸ ಸಂಬಂಧ ಹುಡುಕಬಹುದು. ಆ ಸ್ವಾತಂತ್ರ್ಯ  ವಿಚ್ಛೇದಿತ ಯುವತಿಗೆ ಇಲ್ಲ. ಎಲ್ಲರೂ ಅವಳನ್ನೇ ಸಂಶಯಿಸುತ್ತಾರೆ!ನನ್ನ ಮಗಳು ಹುಟ್ಟಿದ ಸಂದರ್ಭದಲ್ಲಿ  ನನ್ನ ತಾಯಿ ಸ್ಥಳೀಯ ಜೋಯಿಸರ ಬಳಿ ಮೊಮ್ಮಗಳ ಭವಿಷ್ಯ ಕೇಳಿದರು. `ಈ ಮಗು ಮುಂದೆ ಬ್ಯಾಂಕಿನಲ್ಲಿ ದೊಡ್ಡ ಕ್ಯಾಶಿಯರ್ ಆಗಲಿದ್ದಾಳೆ~ ಎಂದರು ಜೋಯಿಸರು. ಅವರ ವ್ಯಾವಹಾರಿಕ ದೃಷ್ಟಿಯಲ್ಲಿ ಬ್ಯಾಂಕಿನಲ್ಲಿ ಹಣ ಎಣಿಸುವುದು ದೊಡ್ಡ ಉದ್ಯೋಗವಾಗಿತ್ತು. ಆದರೆ ಅವಳಿಂದು ಪತ್ರಿಕೆಯೊಂದರಲ್ಲಿ ಸಹಾಯಕ ಸಂಪಾದಕಿಯಾಗಿದ್ದಾಳೆ. ಜಾತಕದ ಫಲದಂತೆ ಅವಳೇನಾಗಬೇಕಿತ್ತು?ಈಗ ಏನಾಗಿದ್ದಾಳೆ? ಜಾತಕ ಅವೈಜ್ಞಾನಿಕವೆಂಬುದಕ್ಕೆ ಇದೊಂದು ಉದಾಹರಣೆ.

ಮದುವೆ ಎಂಬುದು ಮಾನವೀಯ ಸಂಬಂಧದ ಒಂದು ಕೊಂಡಿ. ಅದನ್ನು ಬೆಸೆಯಲು ವೈಚಾರಿಕತೆ, ಸ್ವತಂತ್ರ ಬುದ್ಧಿ, ಗಂಡು ಹೆಣ್ಣುಗಳು ಪರಸ್ಪರರನ್ನು ಗೌರವಿಸುವ ಬದ್ಧತೆ ಮತ್ತು ಎರಡು ಕುಟುಂಬಗಳ ಸಾಮರಸ್ಯ ಅಗತ್ಯ.

 

ಜಾತಕದ ಹೊಂದಾಣಿಕೆಯೆಂಬುದು ಬಿಸಿಲುಕುದುರೆ; ಮಾನವೀಯ ಸಂಬಂಧವನ್ನು ಬೆಳೆಸುವಲ್ಲಿ ಅದಕ್ಕೆ ಸ್ಥಾನವಿಲ್ಲ. ಹಾಗಾಗಿ ಮದುವೆಗಳಲ್ಲಿ ಜಾತಕಕ್ಕೆ ಒತ್ತು ನೀಡುವ ಹಿರಿಯರು ಮತ್ತು ಮದುವೆಯಾಗ ಬಯಸುವ ಯುವಕರು ಸಂಬಂಧಗಳನ್ನು ಬೆಳೆಸಲು ವೈಚಾರಿಕವಾದ ದಾರಿ ಹಿಡಿಯುವುದು ಸಮಾಜಕ್ಕೆ ಕ್ಷೇಮಕರ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.