ಜಾತಿಯಿಂದ ನಮ್ಮತನ

6

ಜಾತಿಯಿಂದ ನಮ್ಮತನ

Published:
Updated:

ಭಾರತೀಯ ಸಮಾಜದಲ್ಲಿ ಜಾತಿ ಎಂಬುದು ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಮ್ಮ ಸಂಪರ್ಕಕ್ಕೆ ನಿಲುಕುವ ಯಾವುದೇ ಪುರುಷ/ಮಹಿಳೆ ಯಾವ ಜಾತಿಗೆ ಸೇರಿದವರು ಎಂಬುದು ತಿಳಿದಿರದಿದ್ದರೆ ಅಷ್ಟರಮಟ್ಟಿಗೆ ಅವರು ನಮಗೆ ಅಪರಿಚಿತರು. ಅಂದರೆ ಎಲ್ಲೋ ಒಂದು ಕಡೆ ನಮಗೆ ಗೊತ್ತಾಗದಂತೆ ಜಾತಿ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಇಂದಿನ ಸಂಕೀರ್ಣ ವ್ಯವಸ್ಥೆಯಲ್ಲಿ `ನಾವು-ನಮ್ಮವರು' ಎಂಬುದು ಇಲ್ಲದಿದ್ದರೆ ನಮ್ಮತನವನ್ನು ಗುರುತಿಸಿಕೊಳ್ಳಲು ಆಗದಷ್ಟು ಪರಿಸರವೂ ಕಲುಷಿತಗೊಂಡಿದೆ.ಜಾತಿ ಜನಗಣನೆ, ಓಟು ಬ್ಯಾಂಕುಗಳ ಜಾತಿ ರಾಜಕೀಯ ಹೀಗೆ ಪ್ರಸ್ತುತ ಜಾತಿ ಎಲ್ಲಿಲ್ಲ? ಸರ್ಕಾರಿ ನಿಯಮಗಳಂತೂ ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು, ಪದವಿ ಪಡೆದು ಹೊರಬರುವ ತನಕ ಜಾತಿ, ವ್ಯವಸ್ಥೆಯಲ್ಲೇ ಮುಳುಗೇಳಿಸುತ್ತವೆ. ಮೀಸಲಾತಿ ವ್ಯವಸ್ಥೆ ಕೂಡಾ ಒಂದು  ಬಗೆಯಲ್ಲಿ ಕಾನೂನುಬದ್ಧ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದೆಯಲ್ಲವೇ?  ಹೀಗೆ ಬಗೆ ಬಗೆಯಲ್ಲಿ ಜಾತಿ ಎಂಬುದು  ಹೊಸ ತಲೆಮಾರಿನ ಯುವಕರಿಗೆ  ಒಂದು ಅನಿವಾರ್ಯ ಸಂಕಟವಾಗಿ ತಗುಲಿಕೊಂಡೇ ಇರುತ್ತದೆ.ಸಂಘರ್ಷಕ್ಕೆ ಎಡೆಕೊಡುವ ಬದಲಾವಣೆಗೆ ಒಪ್ಪಿಕೊಂಡರೆ, ಅಂದರೆ ಬೇರೆ ಜಾತಿ ಧರ್ಮಗಳಿಗೆ ವಲಸೆ ಹೋದಲ್ಲಿ ಅಲ್ಲೂ ದೇವರು, ನಂಬಿಕೆ ಮತ್ತು ಸಮಾಜ ಬಿಟ್ಟಿರಲು ಸಾಧ್ಯವಿಲ್ಲ. ಹಾಗೊಮ್ಮೆ ವ್ಯವಸ್ಥೆಯ ವಿರುದ್ಧ ಹೋದರೆ ನಮ್ಮ ಸಮಾಜವೇ ನಮ್ಮನ್ನು ಧಿಕ್ಕರಿಸುತ್ತದೆ. ಎಷ್ಟೆಂದರೂ ಮನುಷ್ಯ ಸಮಾಜಪ್ರಿಯ! ಹಾಗಾಗಿ ಸೌಮ್ಯವಾದಿಗಳಿಗೆ ಇರುವ ಸ್ವಜಾತಿಯಲ್ಲಿನ ನಿಷ್ಠೆ ಒಂದುಬಗೆಯಲ್ಲಿ ಒಳಿತು ಮತ್ತು ಸಹನೀಯ. ಆದರೆ ಅದು ಎಂದೂ ಪರಪೀಡನೆ ಆಗಬಾರದು. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಆಸ್ಪದವಿದ್ದರೆ ಮಾತ್ರ ಆ ಸಮಾಜದ ಎಲ್ಲರೂ ಸುಖವಾಗಿರಲು ಸಾಧ್ಯ. “ಸ್ವಧರ್ಮೇ ನಿಧನಂ ಶ್ರೇಯಂ” ಎಂಬ ಮಾತಿಗೆ ಗಾಂಧೀಜಿಯ ಸಹಮತವಿತ್ತು. ಇದರಲ್ಲಿ ಹುದುಗಿದ ಸುಖ, ಅದರ ಒಡಲಲ್ಲಿ ಬದುಕು ಸವೆಸಿದವರಿಗಷ್ಟೇ ಗೊತ್ತು.ಹಿಂದೆ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿಯವರು ಹಣೆಯಲ್ಲಿ ಢಾಳಾಗಿ ವಿಭೂತಿ ಧರಿಸಿ ರಾಜ್ಯಸಭೆಗೆ ಬಂದಾಗ ಅದನ್ನೂ ಕೆಲವು ಸದಸ್ಯರು ಪ್ರಶ್ನಿಸಿದ್ದರು. ಜತ್ತಿಯವರು “ಬಿ.ಡಿ. ಜತ್ತಿಯಾಗಿ ನಾನು ವಿಭೂತಿ ಧರಿಸಿ ಬಂದಿದ್ದೇನೆಯೇ ಹೊರತು ಉಪರಾಷ್ಟ್ರಪತಿಯಾಗಿ ಧರಿಸಿ ಬಂದಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದರು. (ಜಾತಿ ಚಿಹ್ನೆ ಧರಿಸಿ ಬಂದದ್ದು ಅವರ ವೈಯಕ್ತಿಕ ಬದುಕಾದರೆ ಉಪರಾಷ್ಟ್ರಪತಿಯಾಗಿ ಅವರದ್ದು ಸಾರ್ವಜನಿಕ ಬದುಕು.) ಅಂದರೆ ಪ್ರತಿಯೊಬ್ಬರಲ್ಲೂ ವೈಯಕ್ತಿಕ ಮತ್ತು ಸಾರ್ವಜನಿಕ ಎಂಬ ಎರಡೆರಡು ಮುಖಗಳು ಒಂದೇ ವೇಳೆಗೆ ಅಸ್ತಿತ್ವದಲ್ಲಿರುವುದನ್ನು ಇವತ್ತಿಗೂ ಅಲ್ಲಗೆಳೆಯಲಾಗದು.ನಮ್ಮ ಜಾತಿ ಮೇಲು, ಉಳಿದವರದ್ದು, ಕೀಳು ಎಂಬುದೇ ತಪ್ಪು. ಎಲ್ಲರ ಬದುಕು ಮುಖ್ಯ. ಸಾಮಾಜಿಕ ಅರಿವು ಹೆಚ್ಚಿದಂತೆಲ್ಲ ಜಾತಿ ಆಚರಣೆಯು ಖಾಸಗಿ ಆಚರಣೆಯಾಗಿ ಪಲ್ಲಟಗೊಂಡಿದೆ. ಇಂದಿನ ಈ ಸಂದರ್ಭದಲ್ಲಿ ಜಾತಿ ಒಂದು ಅನಿವಾರ್ಯ ಹೊಂದಾಣಿಕೆಯಾಗಿದೆ. ಅದರ ಆಚರಣೆಯು ಹೊಸ್ತಿಲ ಒಳಬದಿಗೆ ಸೀಮಿತವಾಗಿದ್ದಷ್ಟೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವುದಿಲ್ಲ. ನಾವು ಏನನ್ನೇ ಬಡಬಡಿಸಿದರೂ ಖಾಸಗಿಯಾದ ಈ ಜಾತಿಪ್ರಜ್ಞೆಯ ಒಳಿತು-ಕೆಡುಕುಗಳ ನಡುವೆಯೇ ಅದನ್ನು ಸದ್ದಿಲ್ಲದೆ ಪೋಷಿಸಿಕೊಂಡು ಬರುತ್ತಿರುವ ಇಡೀ ಸಮಾಜಕ್ಕೆ ಅದೊಂದು ಬಿಸಿತುಪ್ಪ, ಜಾತಿ ಸಂಕರದ ಮೂಲಕ ಜಾತಿ ಎಂಬ ಅನಿಷ್ಠವು ಸಂಪೂರ್ಣವಾಗಿ ನಿರ್ಮೂಲನೆಯಾಗುವ ಸಾಧ್ಯತೆಯೂ ಮುಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry