ಜಾತಿಯ ಭೂತ ಕುಣಿತ

7

ಜಾತಿಯ ಭೂತ ಕುಣಿತ

Published:
Updated:
ಜಾತಿಯ ಭೂತ ಕುಣಿತ

ಪ್ರಚಾರದ ಅಬ್ಬರ ಇಲ್ಲ. ಆದರೆ, ಜನಸಾಮಾನ್ಯರ ನಾಲಗೆಯೇ `ರಿಂಗ್ ಟೋನ್' ಆಗಿದೆ. ಜಾತಿ ಗಣತಿ ಅಧಿಕೃತವಾಗಿ ಆಗದೇ ಇರಬಹುದು. ಕಾರ್ಯಕರ್ತರ ನೆನಪಿನಕೋಶದಲ್ಲಿ ಕೂದಲು ಸೀಳಿದಷ್ಟು ನಿಖರವಾಗಿ ಎಲ್ಲ ಜಾತಿ, ಉಪಜಾತಿಗಳ ಅಂಕಿ-ಸಂಖ್ಯೆಗಳಿವೆ.ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಮತದಾರರು, ಹುರಿಯಾಳುಗಳನ್ನು ತಕ್ಕಡಿಗೆ ಹಾಕಿ ತೂಗತೊಡಗಿದ್ದಾರೆ. ಸಾಧ್ಯಾಸಾಧ್ಯತೆಗಳ ಗುಣಾಕಾರ, ಭಾಗಾಕಾರಗಳು ಸಂಶೋಧನಾ ವಿದ್ಯಾರ್ಥಿಗಳನ್ನೇ ಬೆರಗಾಗಿಸಬಹುದು. ಆದರೆ, ಎಲ್ಲವೂ ಕುಲ ಕೇಂದ್ರಿತ!ಜಿದ್ದಾಜಿದ್ದಿ ಸೆಣಸಿದ್ದರೂ ಕೆರಳಿಸುವ ಮಾತು, ವ್ಯಕ್ತಿ ನಿಂದನೆಗಳು ಕಡಿಮೆ. ತುಮಕೂರು ನಗರ ಕ್ಷೇತ್ರದಲ್ಲಿ ಮಾತ್ರ ಸಚಿವ ಎಸ್.ಶಿವಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹ್ಮದ್ ನಡುವೆ ಸಣ್ಣ ಕಿಡಿ ಹಾರಿದೆ. ನಾಟಕ, ವಿವಿಧ ಸ್ಪರ್ಧೆ, ಊರುಹಬ್ಬ ಹಾಗೂ ಸಂಘ-ಸಂಸ್ಥೆಗಳಿಗೆ ಕೊಡುಗೆಗಳ ಸುರಿಮಳೆ ಆಗುತ್ತಿದೆ. ದೇಣಿಗೆ ಪಡೆಯಲೆಂದೇ ದಿಢೀರನೆ ಸಂಘಗಳು ತಲೆಎತ್ತಿವೆ. ಹೇಮಾವತಿ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣದ ಹೊಳೆ ಹರಿಯಲಿದೆ ಎಂಬ ಮಾತನ್ನು ಮುಖಂಡರೇ ಒಪ್ಪುತ್ತಾರೆ.ವಿಧಾನಸಭೆ ಚುನಾವಣೆ ಅಂಗವಾಗಿ  `ಪ್ರಜಾವಾಣಿ' ಪ್ರತಿನಿಧಿ, ತುಮಕೂರು ಜಿಲ್ಲೆಯಲ್ಲಿ ಸುತ್ತಾಡಿದಾಗ ಜನರ ನೆಮ್ಮದಿ ಕದಡಿದ ಹತ್ತಾರು ಸಮಸ್ಯೆಗಳು ಕಣ್ಣು ಮುಂದೆ ಹಾದುಹೋದವು. ಆದರೆ ಕುಲ, ಕಾಂಚಾಣ ಕುಣಿತದ ಎದುರು ಸಮಸ್ಯೆಗಳು ಮರೆಗೆ ಸರಿದಂತೆ ಅನ್ನಿಸಿತು. ರಸ್ತೆ ಇಲ್ಲ. ನೀರು ಇಲ್ಲ, ಕರೆಂಟ್ ಇಲ್ಲ ಎಂಬುದು `ಒಂಟಿ ಧ್ವನಿ'. ಕೊರಗುವ ಮಂದಿ, ಒತ್ತಡದ ಗುಂಪಾಗಿ ರೂಪುಗೊಂಡ ನಿದರ್ಶನ ಕಾಣಿಸುವುದಿಲ್ಲ.ಮಾರ್ಗದರ್ಶನ ಪಡೆಯಲು ಎಂಬಂತೆ ಇಲ್ಲಿನ ಮಠಕ್ಕೆ ಪದೇ ಪದೇ ಎಡತಾಕುವ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ, ಜಿಲ್ಲೆಯ ರಾಜಕಾರಣದಲ್ಲಿ ಸುಂಟರಗಾಳಿ ಎಬ್ಬಿಸಿದೆ. ಸ್ಪರ್ಧೆಯನ್ನು ನಾಲ್ಕು ಮುಖ ಆಗಿಸಿದೆ. ಜಿಲ್ಲೆಯ ಒಟ್ಟು 11 ಕ್ಷೇತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಕಡೆ ಸೋಲು-ಗೆಲುವಿನ ತಕ್ಕಡಿಯನ್ನು ಏರುಪೇರು ಮಾಡಬಲ್ಲುದೇನೊ ಎನ್ನುವ ಮಟ್ಟಿಗೆ ಹವಾ ಎಬ್ಬಿಸಿದೆ.ಬಾಡಿದ ಸುಳಿ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಸ್ಪರ್ಧೆಯಿಂದ ಕೊರಟಗೆರೆ ಪ್ರಾಮುಖ್ಯ ಪಡೆದಿದೆ. ತೋವಿನಕೆರೆ ರಸ್ತೆಯಲ್ಲಿ ಕೊರಟಗೆರೆ ಕಡೆ ಹೋಗುವಾಗ ಕಾಣಸಿಗುವ ಅಡಿಕೆ, ತೆಂಗಿನ ಸಸಿಗಳ ಸುಳಿ ಬಾಡತೊಡಗಿವೆ. `ರೈತ್ರ ಬದುಕೂ ಇದ್ಕಿಂತ ಭಿನ್ನವಲ್ಲ' ಎಂದರು ಹಿರೇತೊಟ್ಲುಕೆರೆಯ ವೆಂಕಟಪ್ಪ.

 

`ಬಿಜೆಪಿ ಮೂರು ಅಂಕ (ಭಾಗ) ಆಗಿದೆ. ನಾಯಕರೆಲ್ಲ ಚದುರೋಗವರೆ. ಊರುಗಳೂ ಇಂಗಡವಾಗಿವೆ. ಹುಡುಗ್ರು ಮಾತು ಕೇಳೋದಿಲ್ಲ' ಎಂದು ರಾಜಕೀಯದ ಜತೆ ಬದುಕನ್ನು ಸಮೀಕರಿಸಿದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಚಂದ್ರಯ್ಯ ಈಗ ಕೆಜೆಪಿ ಉಮೇದುವಾರ. ಜಿಲ್ಲಾ ಪಂಚಾಯ್ತಿ ಸದಸ್ಯ ಸುಧಾಕರ ಲಾಲ್ ಜೆಡಿಎಸ್ ಅಭ್ಯರ್ಥಿ. ನಿವೃತ್ತ ಐಎಎಸ್ ಅಧಿಕಾರಿ ಬುಳ್ಳಾ ಸುಬ್ಬರಾವ್ ಅವರನ್ನು ಬಿಎಸ್‌ಪಿ ಕಣಕ್ಕೆ ಇಳಿಸಿದೆ.`ಕಳೆದ ಸಲ ಕೋರಾ ಹೋಬಳಿಯಲ್ಲಿ ಪರಮೇಶ್ವರ್ ಹೆಚ್ಚಿನ ಲೀಡ್ ಪಡೆದಿದ್ದರು. ಈ ಸಲ ಅಷ್ಟು ಮತ ಪಡೆಯುವುದು ಸಲೀಸಲ್ಲ' ಎಂದರು ಕಾಲೇಜ್ ವಿದ್ಯಾರ್ಥಿ ಬಸವರಾಜು. ಯಾಕೆ ಎನ್ನುವ ಮೊದಲೇ `ಈ ಹೋಬಳಿಯಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚು...' ಎಂದರು.`ಜಾತಿ ಲೆಕ್ಕಾಚಾರ ಹಿಂದೆಲ್ಲ ಗುಟ್ಟಾಗಿ ನಡೆಯುತ್ತಿತ್ತು. ಈಗ ಬೀದಿಗೆ ಬಿದ್ದಿದೆ. ಅದೇನು ಮಾಯೆಯೋ ಏನೋ ಎಲ್ಲರ ನಾಲಗೆ ಮೇಲೂ ಜಾತಿಯ ಭೂತ ಕುಣಿಯುತ್ತಿದೆ' ಎಂದು ಬೇಸರಪಟ್ಟರು ಕುರಂಕೋಟೆಯ ದೊಡ್ಡೇಗೌಡ.ಮೂರನೇ ಬಾರಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವ (ಮೂರೂ ಸಲ ಬೇರೆ ಬೇರೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ) ಸುಧಾಕರ ಲಾಲ್ ಕ್ಷೇತ್ರದಲ್ಲಿ ಚಿರಪರಿಚಿತ.ಜನರೊಂದಿಗೆ ನಿಕಟ ಒಡನಾಟ ಇದೆ. `ಮಗು ಫೋನ್ ಮಾಡಿದರೂ ಮಾತನಾಡಿಸುತ್ತಾರೆ' ಎನ್ನುತ್ತಾರೆ ಜನರು. `ಕೈಗೆ ಸಿಗುವುದಿಲ್ಲ' ಎಂಬುದು ಪರಮೇಶ್ವರ್ ಕುರಿತು ಆಕ್ಷೇಪ. ಕೆಲಸ-ಕಾರ್ಯಗಳ ವಿಚಾರದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಅಭಿಪ್ರಾಯ ಇದೆ.ಭರವಸೆಯ `ವಾಣಿ':

`ಅಯಪ್ಪನಿಗೆ ಏನೇನೋ ಹೆಚ್ಚಿನ ಭಾರ ಹೊರ‌್ಸವರೆ. ಇಲ್ಲಿನ ಕೆಲಸಗಳನ್ನು ಪಕ್ಷದ ಕಾರ್ಯಕರ್ತರು ನೋಡಿಕೊಬೇಕಿತ್ತು. ಕಾಂಗ್ರೆಸ್ಸಿನೋರ್ ಅಧಿಕಾರಕ್ಕೆ ಬಂದು, ಇವರಿಗೆ ಸ್ಥಾನಮಾನ ದೊರೆತರೆ ಊರಿಗೆ ಒಳ್ಳೇದಾಗಬಹುದೇನೊ...?' ಎಂದರು ತೋವಿನಕರೆಯ ಮಂಜಮ್ಮ. ಮಂಜಮ್ಮ ಆಡಿದ ಈ ಮಾತೇ ಪರಮೇಶ್ವರ್ ಅವರಿಗೆ ಭರವಸೆಯ ಕಿರಣ.ಶಾಸಕರು ಸುಲಭವಾಗಿ ಸಿಗುವುದಿಲ್ಲ ಎಂಬ ದೂರು ಮಧುಗಿರಿ, ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೂ ವಿಸ್ತರಿಸಿದೆ. ಮಧುಗಿರಿ, ಮೀಸಲು ಪರಿಧಿಯಿಂದ ಹೊರಬಂದ ಬಳಿಕ ಕ್ಷೇತ್ರದ ಚುನಾವಣಾ ವೆಚ್ಚ `ಗೌರಿಶಂಕರ'ದ ಎತ್ತರಕ್ಕೆ ಏರಿತು ಎನ್ನುತ್ತಾರೆ ಅಲ್ಲಿನ ಜನರು.ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಡಿ.ಸಿ.ಗೌರಿಶಂಕರ್, `ಆಪರೇಷನ್ ಕಮಲ'ದ ಸುಳಿಗೆ ಸಿಲುಕಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಳಿಕ ಕ್ಷೇತ್ರವನ್ನು ಪ್ರತಿನಿಧಿಸಿದ ಅನಿತಾ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರನ್ನೇ ನಿರಾಶೆಗೊಳಿಸಿದ್ದಾರೆ. ಹೊರಗಿನವರನ್ನು ಇಲ್ಲಿಂದ ಕಣಕ್ಕೆ ಇಳಿಸುವ ಪಕ್ಷಗಳ ಪ್ರವೃತ್ತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಶಾಸಕರಾದವರು ಜನರ ದೈನಂದಿನ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೆಂಬಲಿಗರಿಗೆ ಬೆಂಬಲವಾಗಿ ನಿಲ್ಲಬೇಕು. ಫೋನ್ ಮಾಡಿದರೆ ಕರೆ ಸ್ವೀಕರಿಸಿ ಕಷ್ಟ-ಸುಖ ವಿಚಾರಿಸಬೇಕು. ಅಗತ್ಯಬಿದ್ದಾಗ ಪೊಲೀಸರಿಗೆ ಹೇಳಿ ಬಿಡಿಸಬೇಕು. ಕರೆದಾಗ ಊರಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ಜನರ ನಿರೀಕ್ಷೆ.    ಹೇಮಾವತಿ ನೀರನ್ನು ಈ ಭಾಗಕ್ಕೆ ಹರಿಸುವ ವಿಷಯ ಹಿಂದಿನ ಚುನಾವಣೆಗಳ ಸಂದರ್ಭಗಳಲ್ಲಿ ಚರ್ಚಾ ವಿಷಯ ಆಗಿತ್ತು. ಏತನೀರಾವರಿ ಯೋಜನೆಗಳು ಅನುಷ್ಠಾನ ಆಗಿರುವುದರಿಂದ ಅದು ತಣ್ಣಗಾಗಿದೆ. ಎತ್ತಿನಹೊಳೆ ಯೋಜನೆ ಬಗ್ಗೆ ಹೆಚ್ಚು ಪ್ರಸ್ತಾಪ ಆಗುತ್ತಿಲ್ಲ.

ಕೊಬ್ಬರಿ ಕಷ್ಟ:

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿ ಬೆಲೆ ಕುಸಿದಿದೆ. ಕಪ್ಪುತಲೆ ಹುಳ ಬಾಧೆ ತೆಂಗು ಬೆಳೆಗಾರರನ್ನು  ಕಂಗೆಡಿಸಿದೆ. ಮರದ ಸುಳಿ ಒಣಗುತ್ತಿದೆ. ಕಟ್ಟಿದ ಕಾಯಿ ಉದುರುತ್ತಿವೆ. ತೆಂಗಿನ ಮೌಲ್ಯವರ್ಧನೆಯ ಸಾಧ್ಯತೆಗಳನ್ನು ಬಳಸಿಕೊಳ್ಳುವ ಪ್ರಯತ್ನಗಳೇ ಆಗುತ್ತಿಲ್ಲ ಎಂಬ ಅಳಲು ಅಲ್ಲಿ-ಇಲ್ಲಿ ಕೇಳಿಸುತ್ತದೆ.ಅಭಿವೃದ್ಧಿಯಲ್ಲಿ ಅಸಮಾನತೆಯನ್ನು ಪ್ರದೇಶ ಮಟ್ಟದಲ್ಲಿ ಗುರುತಿಸುತ್ತೇವೆ. ಇದನ್ನು ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಕಾಣಬಹುದು. ಗುಬ್ಬಿ ತಾಲ್ಲೂಕಿನ ಕೆಲವು ಹೋಬಳಿಗಳಲ್ಲಿ ನೀರಿನ ಪಸೆ ಕಾಣಬಹುದು.ಇನ್ನು ಕೆಲವು ಹೋಬಳಿ ಬರಡು. ಯಲ್ಲಾಪುರದ ರೈತರು, ತೋಟ ಒಣಗುವುದನ್ನು ನೋಡಲಾರದೆ, ನಾಲ್ಕು ಕಿ.ಮೀ ದೂರದ ಅದಲಿಗೆರೆಯಲ್ಲಿ ಕೊಳವೆಬಾವಿ ಕೊರೆಸಿ ಅಲ್ಲಿಂದ ಪೈಪ್‌ನಲ್ಲಿ ನೀರು ತಂದಿದ್ದಾರೆ. ಕೊಳವೆಬಾವಿ ಕೊರೆಸುವುದಕ್ಕಾಗಿಯೇ ಅಲ್ಲಿ ಐದು ಗುಂಟೆ ಜಮೀನು ಖರೀದಿಸಿದ್ದಾಗಿ ಶಿವಣ್ಣ ಹೇಳುತ್ತಾರೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ತೀವ್ರ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಪಾವಗಡ ತಾಲ್ಲೂಕು ಕೂಡ ಸ್ಥಾನ ಪಡೆದಿದೆ.ಬಂಡಾಯದ ಬಿಸಿ:

ಜನತಾ ಪರಿವಾರ ಪ್ರಾಬಲ್ಯದ ಈ ಜಿಲ್ಲೆಯಲ್ಲಿ ಜೆಡಿಎಸ್ ಒಳಗೊಂಡಂತೆ ಎಲ್ಲ ಪ್ರಮುಖ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ. ಕುಣಿಗಲ್‌ನಲ್ಲಿ ಜೆಡಿಎಸ್ ಟಿಕೆಟ್‌ಗಾಗಿ ಡಿ.ನಾಗರಾಜಯ್ಯ, ಎಸ್.ಪಿ.ಮುದ್ದಹನುಮೇಗೌಡ ನಡುವೆ ಪೈಪೋಟಿ ಉಂಟಾಗಿದೆ. ತುರುವೇಕೆರೆಯಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಪಾವಗಡದಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಮಾಜಿ ಶಾಸಕ ಸೋಮ್ಲಾ ನಾಯ್ಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವೆಲ್ಲ ಫಲಿತಾಂಶದ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಪರಿಣಾಮ ಬೀರಲಿವೆ.

`ವೋಟ್ ಕೊಡಿ ನೋಟ್ ಕೊಡಿ'

ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ಕಾರ್ಯಕರ್ತರನ್ನು ಸಭೆಗಳಿಗೆ ಸೇರಿಸಿದರೆ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ರೈತ ಸಂಘದ ಸದಸ್ಯರು ಈ ಸಲ ಕೂಡ `ವೋಟ್ ಕೊಡಿ, ನೋಟ್ ಕೊಡಿ' ಎಂದು ಭಿನ್ನವಾಗಿ ಪ್ರಚಾರ ನಡೆಸಿದ್ದಾರೆ.ರೈತ ಸಂಘದ ಕೆಂಕೆರೆ ಸತೀಶ್ ಇಲ್ಲಿಂದ ಪುನಃ ಸ್ಪರ್ಧಿಸಿದ್ದಾರೆ. `ಕೊಳೆ ತೊಳೆಯುವುದು ನಮ್ಮ ಉದ್ದೇಶ. ಬದಲಾವಣೆ ನಮ್ಮ ಗುರಿ. ಜೊಳ್ಳಿನ ಬಗ್ಗೆ ಚಿಂತೆ ಇಲ್ಲ. ಗಟ್ಟಿ ವೋಟು ಬರಲಿ, ಅಷ್ಟೇ ಸಾಕು' ಎಂದು `ಪ್ರಜಾವಾಣಿ' ಜತೆ ಅನಿಸಿಕೆ ಹಂಚಿಕೊಂಡರು. ಸಂಘದ 60 ಶಾಖೆಗಳಿವೆ. ಸದಸ್ಯರೆಲ್ಲ ಜತೆ ನಿಂತು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಕಳೆದ ಸಲ 85 ಸಾವಿರ ರೂಪಾಯಿ ಸಂಗ್ರಹ ಆಗಿತ್ತು. 3,700 ಮತ ದಕ್ಕಿತ್ತು. ಚುನಾವಣೆ ಬಳಿಕ ಲೆಕ್ಕ ನೀಡಿದೆವು. 12 ಸಾವಿರ ರೂಪಾಯಿ ಉಳಿದಿತ್ತು. ಈ ಸಲ ಹೆಚ್ಚು ಮತ ಪಡೆಯುವ ನಂಬಿಕೆ ಇದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry