ಜಾತಿವಾದಕ್ಕೆ ಹೊರಳಿದ ಬಿಜೆಪಿ

ಭಾನುವಾರ, ಜೂಲೈ 21, 2019
26 °C

ಜಾತಿವಾದಕ್ಕೆ ಹೊರಳಿದ ಬಿಜೆಪಿ

Published:
Updated:

ಹರಪನಹಳ್ಳಿ: ಕೋಮುವಾದಿ ಬಿಜೆಪಿ, ಈಗ ಜಾತಿವಾದದ ರೂಪ ಪಡೆದು ರಾಜ್ಯದಲ್ಲಿ ಜಾತಿ ಸಂಘರ್ಷಕ್ಕೆ ನಾಂದಿ ಹಾಡಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಇಲ್ಲಿ ಆರೋಪಿಸಿದರು.

ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ 72ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಅಧಿಕಾರದ ದುರಾಸೆಗಾಗಿ ಕೆಲ ಮಠ-ಮಾನ್ಯಗಳನ್ನು ಮುಂದಿಟ್ಟುಕೊಂಡ ಬಿಜೆಪಿಯ ಲಜ್ಜೆಗೆಟ್ಟ ನಾಯಕರು ಎರಡು ಪ್ರಬಲ ಕೋಮುಗಳ ನಡುವೆ ಸಂಘರ್ಷದ ಬೀಜ ಬಿತ್ತಿದ್ದಾರೆ. ದುರಂತ ಎಂದರೆ, ಇಂತಹ ಮಾನಗೇಡಿಗಳನ್ನು ಬೆಂಬಲಿಸಿ, ಕೆಲವು ಮಠಾಧೀಶರು, ಧಾರ್ಮಿಕ ಮುಖಂಡರು ಬೀದಿಗೆ ಇಳಿದಿದ್ದಾರೆ.ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಕಂಬಿ ಎಣಿಸಿ ಬಂದ ಮಾಜಿ ಮುಖ್ಯಮಂತ್ರಿ ಕೈಬೆರಳು (ವಿಜಯದ ಸಂಕೇತ) ತೋರಿಸುವ ಮೂಲಕ ಮೆರವಣಿಗೆ ಮಾಡಿಸಿಕೊಂಡರು ಎಂದು ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸದೆ ವ್ಯಂಗ್ಯವಾಡಿದರು.ರಾಜ್ಯದಲ್ಲಿ ಸ್ಥಿರ ಸರ್ಕಾರ ಆಡಳಿತವೇ ಇಲ್ಲದಂತಾಗಿರುವುದು ದುರ್ದೈವ. ಯಾವ ಮಂತ್ರಿಯೂ ಜನರ ದೂರು-ದುಮ್ಮಾನ ಆಲಿಸುತ್ತಿಲ್ಲ. ಕಳೆದ ವರ್ಷವೂ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಈ ವರ್ಷವೂ ಸಕಾಲದಲ್ಲಿ ಮುಂಗಾರು ಮಳೆ ಸುರಿಯದೆ ಶೇ 70ರಷ್ಟು ಮಳೆ ಕುಂಠಿತಗೊಂಡಿದೆ. ಮುಂಗಾರು ಹಂಗಾಮಿನಲ್ಲಿ 74ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆಯಾಗಬೇಕಿದ್ದ ಪ್ರದೇಶದಲ್ಲಿ, ಇದುವರೆಗೂ ಕೇವಲ 15ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಪರಿಸ್ಥಿತಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿಗಳು ಯಾವುದೇ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿಲ್ಲ ಎಂದು ಆಪಾದಿಸಿದರು.ಇಂತಹ ಭೀಕರ ಸನ್ನಿವೇಶದಲ್ಲಿಯೂ ಬಿಜೆಪಿ ನಾಯಕರು, ಅಧಿಕಾರದ ಗದ್ದುಗೆಗಾಗಿ ಹಾದಿ-ಬೀದಿ ರಂಪಾಟದಲ್ಲಿ ಮುಳುಗಿದ್ದಾರೆ. ಮಾಜಿ ಮುಖ್ಯಮಂತ್ರಿ ಒಬ್ಬ ನಾಲ್ಕಾರು ಶಾಸಕರನ್ನು, ಮುಖ್ಯಮಂತ್ರಿ ನಾಲ್ಕಾರು ಶಾಸಕರನ್ನು, ಪಕ್ಷದ ರಾಜ್ಯಾಧ್ಯಕ್ಷ ನಾಲ್ಕಾರು ಜನ ಶಾಸಕರನ್ನು ಕೂಡಿಟ್ಟುಕೊಂಡು `ನನ್ನನ್ನು ಉಪ ಮುಖ್ಯಮಂತ್ರಿ ಮಾಡಿ; ನನ್ನ ಬೆಂಬಲಿಗರಿಗೆ ಮಂತ್ರಿ ಮಾಡಿ...~ ಎಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಪಕ್ಷದ ರಾಜ್ಯಘಟಕದ ಅಧ್ಯಕ್ಷನೇ ಹೀಗೆ ಹಠ ಹಿಡಿದು ಕುಳಿತುಕೊಂಡಿರುವ ಪ್ರಸಂಗ ಯಾವ ಪಕ್ಷದ ಆಡಳಿತದಲ್ಲಿಯೂ ನಡೆದಿರಲಿಲ್ಲ. ಇವೆಲ್ಲಾ ಘಟನೆಗಳನ್ನು ನೋಡುತ್ತಲೇ ಬಿಜೆಪಿ ಹೈಕಮಾಂಡ್ ಪ್ರತಿನಿಧಿಗಳೇ ಮೂಕಪ್ರೇಕ್ಷಕರಾಗಿ ಐದಾರು ಗಂಟೆ ಕಾಯಬೇಕಾಯಿತು. ಇದು ಬಿಜೆಪಿಯ ದೌರ್ಬಲ್ಯ ಹಾಗೂ ಬಲಹೀನತೆಗೆ ಸಾಕ್ಷಿಯಾಗಿದೆ ಎಂದು ಛೇಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry