ಜಾತಿ ಅಸಮಾನತೆಗಳು ಕುಗ್ಗಲಿ

7

ಜಾತಿ ಅಸಮಾನತೆಗಳು ಕುಗ್ಗಲಿ

Published:
Updated:

ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ತಾತ್ಕಾಲಿಕ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಪ್ರಕಾರ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಪ್ರಮಾಣ 2009ರಲ್ಲಿ ಶೇ 9 ಇತ್ತು. ಈಗ ಈ ಪ್ರಮಾಣ ಶೇ 19.5ಕ್ಕೆ ಏರಿಕೆ ಆಗಿದೆ. ಇದು ಸಂತಸ ಪಡುವ ಸಂಗತಿ ಸರಿ. ಆದರೆ ಇದೇ ವರದಿ ಮತ್ತೊಂದು ಆತಂಕಕಾರಿ ಸಂಗತಿಯನ್ನೂ ಬಯಲು ಮಾಡಿದೆ. ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಲಾಭಗಳನ್ನು ಪಡೆದುಕೊಂಡಿಲ್ಲ ಎಂಬಂತಹ ಮಾಹಿತಿ ಅದು. ಈ ಸಮೀಕ್ಷೆಯ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪ್ರಮಾಣ ಕೇವಲ ಶೇ10.2ರಷ್ಟಿದೆ. ಅದರಲ್ಲೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣ ಕೇವಲ ಶೇ 4.4ರಷ್ಟು ಮಾತ್ರ ಇದೆ. ಎಂದರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಪ್ರತಿ 100 ವಿದ್ಯಾರ್ಥಿಗಳಲ್ಲಿ 11ಕ್ಕೂ ಕಡಿಮೆ ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿರುತ್ತಾರೆ. ಐದಕ್ಕೂ ಕಡಿಮೆ ಮಂದಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರುತ್ತಾರೆ.ಪ್ರವೇಶಾತಿಯಲ್ಲಿ ಮೀಸಲು ಅವಕಾಶ ಇದ್ದೂ ಪರಿಶಿಷ್ಟರ ದಾಖಲಾತಿ ಪ್ರಮಾಣದಲ್ಲಿ ಏರಿಕೆ ಇಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅಷ್ಟೇ ಅಲ್ಲ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈ ಸಮುದಾಯಗಳಿಗೆ ಸೇರಿದ ಅಧ್ಯಾಪಕರ ಸಂಖ್ಯೆಯೂ ಕಡಿಮೆಯೇ ಇದೆ. ಈ ವರದಿಯ ಪ್ರಕಾರ, ಕೇವಲ ಶೇ 7.4ರಷ್ಟು ಅಧ್ಯಾಪಕರು ಮಾತ್ರ ಪರಿಶಿಷ್ಟ ಜಾತಿಗೆ ಸೇರ್ದ್ದಿದರೆ, ಶೇ 2.9 ಮಂದಿ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ.ಸ್ವಾತಂತ್ರ್ಯ ಬಂದ 65 ವರ್ಷಗಳ ನಂತರವೂ ಜಾತಿವ್ಯವಸ್ಥೆಯ ಈ ಅಸಮಾನತೆಗಳು ತೊಲಗದಿರುವುದು ದುರದೃಷ್ಟ. ದಲಿತರ ಅಭಿವೃದ್ಧಿಗಾಗಿ ಮೀಸಲು ನೀತಿ ಜಾರಿಯಲ್ಲಿದೆ. ಆದರೆ  ಜಾತಿ ಪೂರ್ವಗ್ರಹಗಳಿಂದ ನಮ್ಮ ಸಮಾಜವಿನ್ನೂ ಮುಕ್ತವಾಗಿಲ್ಲ ಎಂಬ ಅಂಶವನ್ನು ಮರೆಮಾಚಲಾಗದು. ಹೀಗಾಗಿಯೇ, ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲಾ ಮಟ್ಟಗಳಲ್ಲಿ ದಲಿತ ಸಮುದಾಯಕ್ಕೆ ಸಮಾನ ಅವಕಾಶಗಳನ್ನು ನೀಡುವಲ್ಲಿ ಎಡವಲಾಗಿದೆಯೇ ಎಂಬುದರ ಆತ್ಮಾವಲೋಕನ ಅಗತ್ಯ. ಈಗಲೂ ಅಲ್ಲಲ್ಲಿ ಅಸ್ಪೃಶ್ಯತೆ ಆಚರಣೆ ಕುರಿತಾದ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಇಂತಹ ಸನ್ನಿವೇಶದಲ್ಲಿ, ಮೀಸಲು ನೀತಿಯ ಪ್ರಯೋಜನ ಸರಿಯಾಗಿ ತಲುಪುತ್ತಿದೆಯೇ ಇಲ್ಲವೇ ಅಥವಾ ಅದನ್ನು ಪಡೆದುಕೊಳ್ಳಲು ಇರುವ ಅಡೆತಡೆಗಳೇನು ಎಂಬ ಬಗ್ಗೆ ಅಧ್ಯಯನಗಳಾಗುವುದು ಅವಶ್ಯಕ. ಈ ನಿಟ್ಟಿನಲ್ಲಿ ದಲಿತ ಸಮುದಾಯದ ಕೆನೆ ಪದರದ ಜನರ ಹೊಣೆಗಾರಿಕೆಯೂ ಇದೆ. ತಮ್ಮ ಸಮುದಾಯದ ಜನ ನಿರ್ಲಕ್ಷ್ಯಕ್ಕೆ ಈಡಾಗದಂತೆ ಅವರು ಎಚ್ಚರ ವಹಿಸಬೇಕು. ಜನರಲ್ಲಿ `ಹೃದಯ ಪರಿವರ್ತನೆ~ ಆಗದಿದ್ದಲ್ಲಿ ಮೀಸಲು ನೀತಿಯ ಪ್ರಯತ್ನಗಳೇ ಅರ್ಥಹೀನವಾಗಿಬಿಡುತ್ತವೆ. ಘನತೆಯ ಬದುಕು ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ನೆರವಾಗುವುದಕ್ಕಾಗಿ ನೀತಿ ನಿರೂಪಕರು ಹಾಗೂ ಆಡಳಿತಗಾರರು ಪ್ರಜ್ಞಾಪೂರ್ವಕವಾಗಿ ಯೋಜನೆಗಳನ್ನು ರೂಪಿಸಬೇಕು. ಏಕೆಂದರೆ ಸರ್ವಾಂಗೀಣ ಅಭಿವೃದ್ಧಿಗೆ ಜಾತಿತಾರತಮ್ಯಗಳಿಲ್ಲದ ಸಾಮಾಜಿಕ ಅಭಿವೃದ್ಧಿಯೂ ಮುಖ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry