ಗುರುವಾರ , ಮೇ 13, 2021
22 °C

ಜಾತಿ, ಆದಾಯ ಪತ್ರ ಪಡೆಯಲು `ಸಕಾಲ'ವೇ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶೈಕ್ಷಣಿಕ ಸಾಲಿನಲ್ಲಿ ಶಾಲಾ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಕಾಲ ಯೋಜನೆ ಹಿನ್ನಡೆ ಉಂಟು ಮಾಡಿದೆ.ಸಕಾಲದಡಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು 21 ದಿನಗಳ ಕಾಲಾವಕಾಶ ನಿಗದಿ ಮಾಡಿದ್ದು, ವಿದ್ಯಾರ್ಥಿಗಳ ಪೋಷಕರಿಗೆ ತಲೆ ನೋವಾಗಿದೆ.ಸರಿಯಾದ ಸಮಯಕ್ಕೆ ಮಕ್ಕಳನ್ನು ಶಾಲೆ ಕಾಲೇಜಿಗೆ ಸೇರಿಸಬೇಕು. ಹೇಗಾದರೂ ಮಾಡಿ ಜಾತಿ, ಆದಾಯ ಪ್ರಮಾಣ ಪತ್ರ ಹೊಂದಿಸಬೇಕೆಂದು ತಾಲ್ಲೂಕು ಕಚೇರಿಯತ್ತ ಬರುವ ಪೋಷಕರಿಗೆ ಮಧ್ಯವರ್ತಿಗಳ ಕಾಟವೇ ಹೆಚ್ಚಾಗಿದೆ. ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿ, ದಾಖಲೆ ಪಡೆಯುವುದು ಸಾರ್ವಜನಿಕರಿಗೆ ಕಷ್ಟಕರವಾಗಿದೆ.ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳ ಪೋಷಕರು ಸಕಾಲ ಕೇಂದ್ರದ ಮುಂದೆ ಸರದಿಯಲ್ಲಿ ನಿಂತಿದ್ದಾರೆ. ಮತ್ತೆ ಕೆಲವರು ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿ, ದಾಖಲೆ ಪಡೆಯಲು ದುಂಬಾಲು ಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಕಾಲೇಜಿಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಸಕಾಲ ಸೇವೆಯನ್ನು ನಂಬಿ ಕುಳಿತರೆ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ ಪೋಷಕರು.ಸಕಾಲ ಯೋಜನೆಯಡಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡಲು ನಿಗದಿ ಮಾಡಿರುವ ಕಾಲಮಿತಿಯನ್ನು ತಗ್ಗಿಸಬೇಕು. ಶಾಲಾ-ಕಾಲೇಜು ಪ್ರವೇಶದ ಸಂದರ್ಭದಲ್ಲಿ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ದಾಖಲೆ ಪಡೆಯಲು ಕಾದು ಕುಳಿತಿದ್ದ ಪೋಷಕರು ಒತ್ತಾಯಿಸಿದರು.

ಸ್ವಚ್ಛತೆ ಕಾಪಾಡಿ: ಡೆಂಗೆ ನಿಯಂತ್ರಿಸಿ

ಪಾವಗಡ: ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಪಟ್ಟಣ, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ತಿಮ್ಮರಾಯಪ್ಪ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಡೆಂಗೆ, ಚಿಕುನ್‌ಗುನ್ಯಾ ರೋಗ ತಡೆ ಮುಂಜಾಗ್ರತಾ ಕ್ರಮ ಜರುಗಿಸುವ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಹುತೇಕ ಕೊಳಚೆ ಪ್ರದೇಶದಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ. ಇವನ್ನು ನಿಯಂತ್ರಿಸಿ ಎಂದು ಸೂಚಿಸಿದರು.ಚರಂಡಿ ಹಾಗೂ ಕುಡಿಯುವ ನೀರನ್ನು ಪೂರೈಸುವ ಕೊಳವೆಗಳನ್ನು ಸ್ವಚ್ಛವಾಗಿರಿಸಬೇಕು. ಹಗಲು ವೇಳೆ ಕಡಿಯುವ ಸೊಳ್ಳೆಯಿಂದಲೇ ಡೆಂಗೆ ಹರಡುವುದರಿಂದ ಶಾಲೆ, ಅಂಗನವಾಡಿ ಕೇಂದ್ರದ ಆವರಣವನ್ನು ಸ್ವಚ್ಛವಾಗಿರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಚನ್ನಕೇಶವ, ಗ್ರೇಡ್ 2 ತಹಶೀಲ್ದಾರ್ ವಾಸುದೇವರಾವ್, ಆರೋಗ್ಯ ನಿರೀಕ್ಷಕ ಶಂಶುದ್ದೀನ್ ಪರಿಸರ ಎಂಜಿನಿಯರ್ ಜ್ಯೋತೀಶ್ವರಿ, ಸಿಡಿಪಿಒ ಉಷಾ, ಮೇಲ್ವಿಚಾರಕಿ ವಿಜಯಲಕ್ಷ್ಮಿ, ಪುರಸಭೆ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.