ಭಾನುವಾರ, ನವೆಂಬರ್ 17, 2019
29 °C

ಜಾತಿ ಆಧಾರಿತ ರ‌್ಯಾಲಿಗೆ ಕೋರ್ಟ್ ತಡೆ

Published:
Updated:

ಲಖನೌ (ಪಿಟಿಐ): ಉತ್ತರಪ್ರದೇಶದಲ್ಲಿ ಜಾತಿ ಆಧಾರಿತ ರ‌್ಯಾಲಿ ನಡೆಸುವುದಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದಲ್ಲದೆ ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳು, ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.ನ್ಯಾಯಮೂರ್ತಿ ಉಮಾನಾಥ್ ಸಿಂಗ್ ಮತ್ತು ಮಹೇಂದ್ರ ದಯಾಳ್ ಅವರನ್ನು ಒಳಗೊಂಡ ಹೈಕೋರ್ಟ್‌ನ ಲಖನೌ ಪೀಠವು ಉತ್ತರ ಪ್ರದೇಶದಾದ್ಯಂತ ಜಾತಿ ಆಧಾರಿತ ರ‌್ಯಾಲಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.ಸ್ಥಳೀಯ ವಕೀಲ ಮೋತಿಲಾಲ್ ಯಾದವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ, ಬಿಜೆಪಿಗೆ ನೋಟಿಸ್ ನೀಡಿದೆ.40 ಜಿಲ್ಲೆಗಳಲ್ಲಿ ಬಿಎಸ್‌ಪಿ  ಬ್ರಾಹ್ಮಣ ಭೈಚಾರಾ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದು, ಇತ್ತೀಚೆಗೆ ಲಖನೌದಲ್ಲಿ ನಡೆದ ಒಂದು ಸಮ್ಮೇಳನವನ್ನು ಉದ್ದೇಶಿಸಿ ಮಾಯಾವತಿ ಭಾಷಣ ಮಾಡಿದ್ದರು.ಸಮಾಜವಾದಿ ಪಕ್ಷ ಸಹ ಇಂತಹ ರ‌್ಯಾಲಿಯನ್ನು ನಡೆಸುತ್ತಿದೆ. ಈಗಾಗಲೇ ಈ ಪಕ್ಷವು ಮುಸ್ಲಿಂ ರ‌್ಯಾಲಿಯನ್ನು ನಡೆಸಿದೆ.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಮುಸ್ಲಿಂ ಜಾತಿಯ ರ‌್ಯಾಲಿಗಳನ್ನು ನಡೆಸುತ್ತ ಸಾಮಾಜಿಕ ಏಕತೆ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ.ರಾಜ್ಯ ಮತ್ತು ಕೇಂದ್ರ ಸರ್ಕಾರ, ನಾಲ್ಕು ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗವನ್ನು ಅರ್ಜಿದಾರರು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)