ಮಂಗಳವಾರ, ನವೆಂಬರ್ 12, 2019
28 °C

ಜಾತಿ ಎಂಬುದು ಜ್ಯೋತಿರ್ಲಿಂಗ!

Published:
Updated:
ಜಾತಿ ಎಂಬುದು ಜ್ಯೋತಿರ್ಲಿಂಗ!

>ವಿಜಾಪುರ: `ಇಲ್ಲಿ ಮೊದಲು ಜಾತಿ. ಅದರಲ್ಲೂ ಉಪಜಾತಿ. ಆ ಮೇಲೆ ವ್ಯಕ್ತಿ. ಆ ನಂತರ ಪಕ್ಷ, ಅಭಿವೃದ್ಧಿ ಮುಂತಾದವುಗಳು' ಹೀಗೆಂದವರು ಹಿರಿಯರಾದ ಶ್ರೀರಾಮ ಪಿಂಗಳೆ. `ವಿಜಾಪುರ ಜಿಲ್ಲೆಯಲ್ಲಿ ಚುನಾವಣೆ ನಡೆಯುವುದು ಜಾತಿ ಆಧಾರದಲ್ಲಿ. ಆ ಬಗ್ಗೆ ನಿಮಗೆ ಅನುಮಾನವೇ ಬೇಡ. ಮೊದಲೆಲ್ಲಾ ಹೀಗೆ ಇರಲಿಲ್ಲ. ಜವಾಹರ ಲಾಲ್ ನೆಹರೂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ರಾಜಾರಾಂ ದುಬೆ ಅವರನ್ನು ಗೆಲ್ಲಿಸಿದ ಕ್ಷೇತ್ರ ಇದು.

ಅವರಿಗೆ ಜಾತಿ ಬೇಕಾಗಿರಲಿಲ್ಲ. ಆದರೆ ಈಗ ಜಾತಿ ಉಪ ಜಾತಿಯ ಹೆಸರು ಇಲ್ಲದೆ ಚುನಾವಣೆ ನಡೆಯುವುದೇ ಇಲ್ಲ. ಬಿ.ಎಂ.ಪಾಟೀಲ್, ಬಿ.ಕೆ.ಗುಡದಿನ್ನಿ, ಜಗದೇವರಾವ ದೇಶಮುಖ್, ಮುರುಗಪ್ಪ ಸುಗಂಧಿ ಅವರಂತಹ ಮುಖಂಡರು ಒಂದು ಕಾಲದಲ್ಲಿ ಇದ್ದರು. ಆದರೆ ಈಗ ಅಂತಹ ನಾಯಕರೇ ಇಲ್ಲ' ಎಂಬ ಕೊರಗು ಅವರಿಗೆ.ಜಿಲ್ಲೆಯ ಬಹುತೇಕ ಕಡೆ ಇಂತಹ ವಾತಾವರಣ ಇರುವುದು ಕಂಡು ಬರುತ್ತದೆ. ವಿಜಾಪುರ ನಗರ ಮತ್ತು ದೇವರಹಿಪ್ಪರಗಿಯಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿ ಇದೆ. ನಗರದಲ್ಲಿ ಬಹಳ ಕಾಲದಿಂದಲೂ ಮುಸ್ಲಿಂ ಮತ್ತು ಹಿಂದೂ ಜನಾಂಗದವರು ಸೌಹಾರ್ದದಿಂದ ಇದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಇಲ್ಲಿ ಹಿಂದೂ-ಮುಸ್ಲಿಂ ಹೋರಾಟ ನಡೆಯುತ್ತದೆ. ಎಂ.ಎಲ್.ಉಸ್ತಾದ್ ಅವರು ವಿಜಾಪುರ ನಗರದಿಂದ ಎರಡು ಬಾರಿ ಆಯ್ಕೆಯಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಗೆಲುವು ಸಿಕ್ಕಿಲ್ಲ. ಮುಸ್ಲಿಮರಲ್ಲಿಯೂ ಒಡಕು ಉಂಟಾಗಿದ್ದು ಇದಕ್ಕೆ ಕಾರಣ. ಈ ಬಾರಿ ಮುಸ್ಲಿಮರು ಒಂದಾಗಿ ಮತ ಚಲಾಯಿಸುವ ಲಕ್ಷಣಗಳು ಕಾಣುತ್ತಿವೆ.ಜಿಲ್ಲೆಯಲ್ಲಿ ಪಂಚಮಸಾಲಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹಳ ಹಿಂದಿನಿಂದಲೂ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದಾರು ಶಾಸಕರು ಈ ಜನಾಂಗದವರೇ ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಕಳೆದ ಬಾರಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಒಬ್ಬರೇ ಒಬ್ಬರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಪಂಚಮಸಾಲಿಗಳೂ ಒಂದಾಗಿ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದ ಹಾಗಿದೆ.ಇಲ್ಲಿ ಲಿಂಗಾಯತರು ಎಂದರೆ ಎಲ್ಲರೂ ಒಟ್ಟಲ್ಲ. ಪಂಚಮಸಾಲಿ, ಬಣಜಿಗ, ಗಾಣಿಗ, ರೆಡ್ಡಿ, ಕುಡುಒಕ್ಕಲಿಗ ಮುಂತಾದ ಉಪ ಜಾತಿಗಳಲ್ಲಿ  ವಿಂಗಡಣೆಗೊಂಡಿದೆ. ಬಸವ ಹುಟ್ಟಿದ ನಾಡಿನಲ್ಲಿ, ಸೂಫಿ ಸಂತರ ಬೀಡಿನಲ್ಲಿ ಈಗಿನ ಪರಿಸ್ಥಿತಿ ಇದು ಎಂದು ವ್ಯಥೆ ಪಡುತ್ತಾರೆ ರಫೀಕ್ ಭಂಡಾರಿ.

ಶಾಸಕರು, ಅಧಿಕಾರಿಗಳು, ನೌಕರರು ಎಲ್ಲರೂ ಇಲ್ಲಿ ಜಾತಿ ಮಾಡುತ್ತಾರೆ. ಮಹಿಳೆಯರು ಅರಿಸಿನ ಕುಂಕುಮಕ್ಕೆ ಕರೆಯುವಾಗಲೂ ತಮ್ಮ ಉಪ ಜಾತಿಗೆ ಸೇರಿದ ಮುತ್ತೈದೆಯರನ್ನೇ ಕರೆಯುತ್ತಾರೆ. ಅಕ್ಕಪಕ್ಕದಲ್ಲಿ ಆ ಉಪ ಜಾತಿಯ ಜನರು ಇಲ್ಲದೇ ಇದ್ದರೆ ದೂರದಿಂದ ಜೀಪ್ ಮಾಡಿಸಿಕೊಂಡು ಕರೆದುಕೊಂಡು ಬರುತ್ತಾರೆಯೇ ವಿನಾ ಬೇರೆಯವರನ್ನು ಕರೆಯುವುದಿಲ್ಲ ಎಂದು ಮಲ್ಲಮ್ಮ ಯಾರವಾಳ ಹೇಳುತ್ತಾರೆ.`ದಯಮಾಡಿ ನನ್ನ ಹೆಸರು ಬರೆಯಬೇಡಿ. ನಾವೂ ಕೂಡ ಲಿಂಗಾಯತ ಉಪ ಜಾತಿಗೇ ಸೇರಿದವರು. ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಇರುವವರು. ನಮ್ಮ ಸಮುದಾಯದ ಕೆಲವು ಶಾಸಕರೂ ಇದ್ದಾರೆ. ಆದರೂ ಬೆಳಿಗ್ಗೆ ಎದ್ದು ನಮ್ಮ ಮುಖವನ್ನು ನೋಡಿದರೆ ಒಳ್ಳೆಯದಾಗುವುದಿಲ್ಲ ಎಂಬ ಭಾವನೆ ಇನ್ನೂ ಲಿಂಗಾಯತ ಇತರೇ ಉಪ ಜಾತಿಯಲ್ಲಿದೆ' ಎಂದು ಒಬ್ಬರು ದಾರುಣ ಸ್ಥಿತಿಯನ್ನು ಬಿಚ್ಚಿಟ್ಟರು.ವಿಜಾಪುರ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲ ಕ್ಷೇತ್ರಗಳ ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ಇನ್ನೊಂದು ಕ್ಷೇತ್ರದಲ್ಲಿ ಯಾವ ಉಪ ಜಾತಿಯನ್ನು ಬೆಂಬಲಿಸಿದರೆ ತಮಗೆ ಇಲ್ಲಿ ಗೆಲುವಾಗುತ್ತದೆ ಎಂದೇ ಆಲೋಚಿಸುತ್ತಾರೆ. ಸಾಮಾನ್ಯವಾಗಿ ಇಲ್ಲಿ ವ್ಯಕ್ತಿ ಕೇಂದ್ರಿತ ಚುನಾವಣೆ ನಡೆಯುತ್ತದೆ. 2008ರ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಜಾತಿಗೊಬ್ಬ ಅಭ್ಯರ್ಥಿ ಇದ್ದರು. ಗಾಣಿಗ, ಮುಸ್ಲಿಂ, ಜಂಗಮ, ಕುರುಬ, ಪಂಚಮಸಾಲಿ, ಪರಿಶಿಷ್ಟ ಹೀಗೆ ಅವರವರ ಜಾತಿಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಶಾಸಕರಾಗಿ ಆಯ್ಕೆಯಾದ ಮೇಲೂ ಶಾಸಕರು ಉಪಜಾತಿಯ ಮೋಹವನ್ನು ಬಿಡುವುದಿಲ್ಲ ಎಂದು ಆಲಮೇಲದ ರಮೇಶ್ ಹೇಳುತ್ತಾರೆ.ನಾಗಠಾಣ ವಿಧಾನಸಭಾ ಕ್ಷೇತ್ರದ ಅರಕೆರೆ ತಾಂಡ-1ರಲ್ಲಿ ಬೇವಿನಮರದ ಕೆಳಗೆ ತಣ್ಣಗೆ ಕುಳಿತಿದ್ದ ಹೊನ್ನು ರಾಥೋಡ ಅವರನ್ನು ಮಾತಿಗೆ ಎಳೆದರೆ `ಯಾರಿಗೆ ಓಟು ಹಾಕಬೇಕು ಎನ್ನುವುದನ್ನು ತಾಂಡಾದ ಯಜಮಾನರು ನಿರ್ಧರಿಸುವ ಪದ್ಧತಿ ಇನ್ನೂ ಇದೆ. ಬಹುತೇಕ ಬಾರಿ ಅವರು ಹೇಳಿದ ಮಂದಿಗೇ ಎಲ್ಲರೂ ಓಟ್ ಹಾಕುತ್ತಾರೆ. ಈಗೀಗ ವಿದ್ಯೆ ಕಲಿತ ಮಕ್ಕಳು ಸ್ವಲ್ಪ ಬದಲಾಗುತ್ತಿದ್ದಾರೆ' ಎಂದರು.`ಜಿಲ್ಲೆಯಲ್ಲಿ ಜಾತಿ ರಾಜಕೀಯ ಇರುವುದು ನಿಜ. ರಾಜಕೀಯ ಅಸೂಯೆ ಕೂಡ ಇದೆ. ತನ್ನನ್ನು ಬಿಟ್ಟು ತನ್ನ ಜಾತಿಯ ಇನ್ನೊಬ್ಬ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಆಯ್ಕೆಯಾಗಬಾರದು ಎನ್ನುವ ಭಾವನೆಯೂ ಹಲವಾರು ರಾಜಕೀಯ ಧುರೀಣರಲ್ಲಿದೆ. ಅವರವರ ಕಾಲುಗಳನ್ನು ಅವರೇ ಎಳೆದುಕೊಂಡು ಇಡೀ ಜಿಲ್ಲೆ ಅಭಿವೃದ್ಧಿಯಲ್ಲಿ ತುಂಬಾ ಹಿಂದೆ ಬಿದ್ದಿದೆ' ಎಂಬ ಸಿಟ್ಟು ಚಡಚಣದ ಬಸವರಾಜ ಹಿಪ್ಪರಗಿ ಅವರದ್ದು.`ಮತದಾರರ ತಲೆಯಲ್ಲಿ ಜಾತಿಗೀತಿ ಏನೂ ಇಲ್ಲ. ಅದೆಲ್ಲಾ ಇರೋದು ರಾಜಕಾರಣಿಗಳಲ್ಲಿ ಮಾತ್ರ. ಯಾರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ, ಯಾರಿಗೆ ಬಿಸಿ ತಟ್ಟಿದೆ ಅಂತಹ ಮತದಾರರು ಜಾತಿಯ ಮುಖ ನೋಡೋದಿಲ್ಲ. ನಿಜವಾಗಿ ಹೇಳುತ್ತೇನೆ. ಮತದಾರರು ಈಗ ಒಳ್ಳೆಯ ರಾಜಕಾರಣಿಯ ಹುಡುಕಾಟದಲ್ಲಿದ್ದಾರೆ' ಎನ್ನುವುದು ಪಂಚಪ್ಪ ಕಲಬುರ್ಗಿ ಅವರ ನಂಬಿಕೆ.ಮತದಾರರಿಗೆ ಈ ಬಾರಿಯಾದರೂ ಅಂತಹ ಒಳ್ಳೆಯ ರಾಜಕಾರಣಿ ಸಿಗ್ತಾನೋ ಇಲ್ಲವೋ ನೋಡಬೇಕು.

ಬೇವಿನ ತಪ್ಪಲದ ಆಣೆ!

>ನಾನೂ ಒಮ್ಮೆ ಚುನಾವಣೆಗೆ ನಿಂತಿದ್ದೆ. ನನಗೆ ಓಟ್ ಕೊಡಿ ಎಂದು ಒಂದು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದಾಗ `ನಾವೆಲ್ಲಾ ಭಂಡಾರ ಹಾಕಿ ಆಗಿದೆ. ಅದಕ್ಕೇ ನಿಮಗೆ ಓಟ್ ಕೊಡಲು ಆಗುವುದಿಲ್ಲ' ಎಂದು ಒಬ್ಬ ಮಹಿಳೆ ಹೇಳಿದಳು. ಏನಿದು ಭಂಡಾರ ಹಾಕುವುದು ಎಂದು ಕೇಳಿದ್ದಕ್ಕೆ ಅವಳು `ನಮ್ಮ ಗ್ರಾಮಕ್ಕೆ ಆ ಪಕ್ಷದ ಅಭ್ಯರ್ಥಿ ಬಂದಿದ್ದರು. ನಮ್ಮ ಮುಖಂಡರ ಹೇಳಿಕೆಯಂತೆ ನಾವು ದೇವರ ಮುಂದೆ ನಿಂತು ದೇವರಿಗೆ ಭಂಡಾರ ಹಾಕಿ ಅವರಿಗೇ ಮತ ಚಲಾಯಿಸುತ್ತೇವೆ ಎಂದು ಆಣೆ ಮಾಡಿದ್ದೇವೆ. ದೇವರಿಗೆ ಆಣೆ ಮಾಡಿದ ಮೇಲೆ ಮುಗಿಯಿತಲ್ಲ. ನಿಮಗೆ ವೋಟ್ ಮಾಡುವುದು ಹೇಗೆ?' ಎಂದು ಆಕೆ ಪ್ರಶ್ನಿಸಿದಳು ಎನ್ನುತ್ತಾರೆ ಮಲ್ಲಮ್ಮ ಯಾರವಾಳ.

`ಆಣೆ ಹಾಕುವ ಪದ್ಧತಿ ಕೂಡ ಜಾತಿ ಜಾತಿಗೆ ಬೇರೆ ಬೇರೆ ರೀತಿ ಇದೆ. ಒಂದು ಜಾತಿಯವರು ಭಂಡಾರ ಹಾಕಿದರೆ ಇನ್ನೊಂದು ಜಾತಿಯವರು ಬೇವಿನ ಸೊಪ್ಪು ಹಿಡಿದು ಪ್ರಮಾಣ ಮಾಡುತ್ತಾರೆ. ಅದಕ್ಕೆ ಬೇವಿನ ತಪ್ಪಲದ ಆಣೆ ಎನ್ನುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದವರು ಯಲ್ಲಮ್ಮನ ಆಣೆ ಮಾಡುತ್ತಾರೆ. ಕುರಾನ್, ಭಗವದ್ಗೀತೆ ಮೇಲಿನ ಆಣೆ ಕೂಡ ನಡೆಯುತ್ತದೆ. ಈ ಶತಮಾನದಲ್ಲಿಯೂ ಹೀಗೆಯೇ ನಡೆಯುತ್ತದಾ ಎಂದು ನೀವು ಅಚ್ಚರಿ ಪಡುವುದು ಬೇಡ. ಯಾಕೆಂದರೆ ನಾನು ಚುನಾವಣೆಗೆ ನಿಂತು ಪ್ರತ್ಯಕ್ಷವಾಗಿ ಇದನ್ನೆಲ್ಲಾ ನೋಡಿದ್ದೇನೆ' ಎನ್ನುತ್ತಾರೆ ಅವರು.ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಕೂಡ ಅವರಲ್ಲಿ ಸಾಕಷ್ಟು ಮಾಹಿತಿ ಇದೆ. ಗ್ರಾಮದ ಎಲ್ಲ ಮತದಾರರ ಗುರುತಿನ ಚೀಟಿಯನ್ನು ಮೊದಲೇ ಒಬ್ಬ ರಾಜಕೀಯ ಮುಖಂಡ ಪಡೆದುಕೊಂಡಿರುತ್ತಾನೆ. ಮತದಾನದ ದಿನ ಆತ ಗುರುತಿನ ಚೀಟಿಯೊಂದಿಗೆ ಸಾವಿರ ರೂಪಾಯಿ ನೋಟು ಕೊಟ್ಟು ಓಟು ಹಾಕಲು ಹೇಳುತ್ತಾನೆ.ಮದ್ಯ ಸಾಗಣೆಯನ್ನು ತಡೆಯಲು ಚುನಾವಣಾ ಆಯೋಗ ಸಾಕಷ್ಟು ಕಠಿಣ ಕ್ರಮ ಕೈಗೊಂಡಿದೆ. ಆದರೂ ಮದ್ಯ ಸಾಗಣೆ ನಡೆಯುತ್ತದೆ. ಇದು ಹೇಗೆ ಎಂದರೆ ಮದ್ಯ ಸಾಗಿಸದಂತೆ ತಡೆಯೊಡ್ಡುವವರಿಗಿಂತ ಸಾಗಿಸುವವರು ಬುದ್ಧಿವಂತರು. ಗೋವಾದಿಂದ ಬಿಳಿ ವೈನನ್ನು ಬಿಸಲೇರಿ ಬಾಟಲಿಗಳಲ್ಲಿ ತರಿಸುವುದನ್ನು ಕಂಡಿದ್ದೇನೆ ಎಂದು ಹೇಳಿದರು.ವೋಟ್ ಕೊಟ್ಟರಷ್ಟೇ ಸಾಲದು, ರೊಟ್ಟೀನೂ ಕೊಡಬೇಕು!

ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿದ್ದರಾಮಪ್ಪ ರಂಜಣಗಿ ಅವರದ್ದು ವಿಶಿಷ್ಟ ಬೇಡಿಕೆ. `ಜನರು ನನಗೆ ವೋಟ್ ಕೊಟ್ಟರಷ್ಟೇ ಸಾಲದು. ಜೊತೆಗೆ ರೊಟ್ಟಿ ಮತ್ತು ಹಣಾನೂ ಕೊಡಬೇಕು' ಎಂಬ ಕರಾರು ಅವರದ್ದು. ಅದಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಕೂಡ ದೊರಕಿದೆಯಂತೆ. ರೈತ ಮಹಿಳೆಯರು ಪ್ರತಿ ಮನೆಗೆ 5 ರೊಟ್ಟಿ ಮತ್ತು 10 ರೂಪಾಯಿ ಕೊಡುತ್ತಿದ್ದಾರಂತೆ.`ನನಗೆ 12 ಲಕ್ಷ ರೂಪಾಯಿ ಸಾಲ ಇದೆ. ಈಗ ಚುನಾವಣೆಗೆ ನಿಂತು ಇನ್ನಷ್ಟು ಸಾಲ ಮಾಡಿಕೊಳ್ಳಲು ನಾನು ಸಿದ್ಧನಿಲ್ಲ. ಅದಕ್ಕೇ ರೈತರೇ ಈಗಾಗಲೇ 87 ಸಾವಿರ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾರೆ. ನಾನು ಕೇವಲ ರೈತರಲ್ಲಿ ಮಾತ್ರ ಹಣ ಕೇಳುತ್ತೇನೆ. ಅದರಲ್ಲಿಯೇ ಚುನಾವಣೆ ಖರ್ಚು ಮಾಡುತ್ತೇನೆ. ಈಗ ಮತದಾರರಲ್ಲಿಯೂ ಬದಲಾವಣೆಯಾಗಿದೆ. ಜಾತಿ, ಹಣಕ್ಕೆ ಕಟ್ಟುಬಿದ್ದು ಮತ ಚಲಾಯಿಸುವುದನ್ನು ಬಿಟ್ಟು ಒಳ್ಳೆಯ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ' ಎನ್ನುತ್ತಾರೆ ಅವರು.ವಿಧಾನಸಭೆಯಲ್ಲಿಯೇ ನಿಂತು ರೈತರ ಸಮಸ್ಯೆ ಹೇಳಿಕೊಳ್ಳುವುದಕ್ಕಾಗಿ ತಾವು ಸ್ಪರ್ಧಿಸಿರುವುದಾಗಿ ಅವರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)