ಸೋಮವಾರ, ಜನವರಿ 20, 2020
19 °C

ಜಾತಿ ಗಣತಿ ಸಮರ್ಪಕವಾಗಿ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2014ರ ಏಪ್ರಿಲ್‌– ಮೇ ಅವಧಿಯಲ್ಲಿ ರಾಜ್ಯದಲ್ಲಿ ಜಾತಿ ಗಣತಿಯನ್ನು ಕೈಗೆತ್ತಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ. ಇದು ಸರ್ಕಾರದ ಮಹತ್ವದ ತೀರ್ಮಾನ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಆಧಾರಿತ ಆರ್ಥಿಕ ಸಮೀಕ್ಷೆ ನಡೆಸುವುದಾಗಿ ಪ್ರಕಟಿಸಿದ್ದರು. ಕಳೆದ ಆರು ತಿಂಗಳ ಅವಧಿಯಲ್ಲಿ ಹಲವು ಸಲ ಅದನ್ನು ಅವರು ಪುನರುಚ್ಚರಿಸಿದ್ದಾರೆ.1931ರ ನಂತರ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಅದಕ್ಕೆ ಕೆಲ ರಾಜಕೀಯ ಪಕ್ಷಗಳು ಮತ್ತು ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದವು. ಜಾತಿ ವ್ಯವಸ್ಥೆ ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಹಾಳುಗೆಡವಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದಾಗಿ ನೂರಾರು ಜಾತಿಗಳ ಜನರು ಸಮಾಜದ ಉಪೇಕ್ಷೆಗೆ ತುತ್ತಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅನೇಕ ಜಾತಿಗಳಿಗೆ ಕನಿಷ್ಠ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ ಎಂಬುದು ವಾಸ್ತವ.ಅವಕಾಶವಂಚಿತ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಿದೆ. ಹಿಂದುಳಿದ ಜಾತಿಗಳ ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ವಿಶೇಷ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿವೆ. ಆದರೂ ಹಿಂದುಳಿದ ಜಾತಿಗಳ ಬಹುತೇಕ ಜನರ ಸ್ಥಿತಿಗತಿಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.ವಿಶೇಷ ಯೋಜನೆಗಳಿಂದ ಯಾರಿಗೆ ಪ್ರಯೋಜನ ವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಜಾತಿ ಗಣತಿ ಆಧಾರಿತ ಆರ್ಥಿಕ ಸಮೀಕ್ಷೆಯ ಅಗತ್ಯವಿದೆ. ಪ್ರಸ್ತುತ ಸಂದರ್ಭದಲ್ಲಿ ಇದು ತುರ್ತಾಗಿ ಆಗಬೇಕಾದ ಕೆಲಸ. ಅದನ್ನು ಮನಗಂಡು ಕೇಂದ್ರ ಸರ್ಕಾರ 2005ರಲ್ಲಿ ಜಾತಿ ಗಣತಿಗೆ ಮೊದಲ ಹಂತದಲ್ಲಿ ಕರ್ನಾಟಕವನ್ನು ಆಯ್ಕೆ ಮಾಡಿ₨ 21.5 ಕೋಟಿ  ಬಿಡುಗಡೆ ಮಾಡಿತ್ತು. ಹಿಂದಿನ ಸರ್ಕಾರಗಳು ಜಾತಿಗಣತಿಗೆ ಆಸಕ್ತಿಯನ್ನೇ ತೋರಲಿಲ್ಲ.ಕಾಂಗ್ರೆಸ್‌ ಸರ್ಕಾರ ಕೈಗೆತ್ತಿಕೊಳ್ಳಲಿರುವ ಜಾತಿ ಗಣತಿ ಮತ್ತು ಸಮೀಕ್ಷೆ ಇಡೀ ದೇಶಕ್ಕೆ ಮಾದರಿ ಆಗಲಿದೆ. ಅಷ್ಟೇ ಅಲ್ಲ, ಅನೇಕ ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಅದರಿಂದ ಸಹಾಯವಾಗಬಹುದು ಎಂಬ ನಿರೀಕ್ಷೆ ಇದೆ.ರಾಜ್ಯದಲ್ಲಿ ಹಿಂದುಳಿದ ಜಾತಿಗಳನ್ನು ಗುರುತಿಸುವ ಕೆಲಸ ಮುಂದುವರಿ ಯಬೇಕು. ಅನೇಕ ಹಿಂದುಳಿದ ಜಾತಿ, ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯಗಳ ಜನರಿಗೆ ಸರ್ಕಾರಿ ಸೌಲಭ್ಯಗಳು ಇನ್ನೂ ಸಿಕ್ಕಿಲ್ಲ. ಕೆಲ ಮುಂದುವರಿದ ಜಾತಿಗಳನ್ನು ಹಿಂದುಳಿದವರ ಪಟ್ಟಿಗೆ ಸೇರಿಸಲಾಗಿದೆ. ಈ ಜಾತಿಗಳು ರಾಜಕೀಯವಾಗಿ ಬಲಿಷ್ಠವಾಗಿವೆ. ಹಿಂದುಳಿದವರ ಹೆಸರಿನಲ್ಲಿ ಸರ್ಕಾರಿ ಉದ್ಯೋಗ, ಬಡ್ತಿ ಮತ್ತಿತರ ಸವಲತ್ತುಗಳ ಸಿಂಹಪಾಲನ್ನು ಈ ಜಾತಿಗಳೇ ಕಬಳಿಸುತ್ತಿವೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು.  ಮುಂದೆ  ನಡೆಯುವ ಜಾತಿ ಗಣತಿ ರಾಜಕೀಯ ಹಸ್ತಕ್ಷೇಪಗಳಿಂದ ಮುಕ್ತವಾಗಿರ ಬೇಕು.ಯಾವುದೇ ಗಣತಿಯ ಯಶಸ್ಸು ಆ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಯ ದಕ್ಷತೆಯನ್ನು ಅವಲಂಬಿಸಿರುತ್ತದೆ. ಸರ್ಕಾರ ಅರ್ಹರನ್ನು ನೇಮಕ ಮಾಡಿಕೊಂಡು ಗಣತಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಈ ಗಣತಿ ನಡೆಯಬೇಕಾಗಿದೆ. ದುರದೃಷ್ಟದ ಸಂಗತಿ, ಆಯೋಗಕ್ಕೆ ಪದಾಧಿಕಾರಿಗಳಿಲ್ಲ. ತಕ್ಷಣವೇ ಸರ್ಕಾರ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಬೇಕು. ಈ ವಿಷಯದಲ್ಲಿ ವಿಳಂಬವಾದರೆ ಜಾತಿ ಗಣತಿ ಹಳಿ ತಪ್ಪುತ್ತದೆ.

ಪ್ರತಿಕ್ರಿಯಿಸಿ (+)