ಜಾತಿ ನೀತಿಗೆ ಸೋಲು; ಯಾದವ್ ಕಳವಳ

ಬುಧವಾರ, ಜೂಲೈ 24, 2019
27 °C

ಜಾತಿ ನೀತಿಗೆ ಸೋಲು; ಯಾದವ್ ಕಳವಳ

Published:
Updated:

ಶಿವಮೊಗ್ಗ: ದೇಶದ ಬಹುಕಡೆಗಳಲ್ಲಿ ಜಾತಿ ವಿರೋಧಿ ಪಕ್ಷಗಳು ಅಧಿಕಾರಕ್ಕೆ ಬಂದರೂ ಜಾತಿ ನೀತಿ ಹಾಗೂ ಧೋರಣೆಗಳು ಪರಾಜಿತಗೊಂಡಿವೆ ಎಂದು ಸಮಾಜವಾದಿ ಚಿಂತಕ ಯೋಗೇಂದ್ರ ಯಾದವ್ ಆತಂಕ ವ್ಯಕ್ತಪಡಿಸಿದರು.ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕರ್ನಾಟಕ ಸಂಘದದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾತಿ ವಿರೋಧಿ ಸಮ್ಮೇಳನ ಹಾಗೂ ಅಂತರ್ಜಾತಿ ವಿವಾಹಿತರ ಸಮಾವೇಶದಲ್ಲಿ ಅವರು  ಮಾತನಾಡಿದರು.ಮಾಯಾವತಿ, ಪಾಸ್ವಾನ್ ಮತ್ತಿತರರು ಕೇವಲ ಮುಖವಾಡಗಳಾಗಿ ಕಾಣುತ್ತಿದ್ದಾರೆ. ಆದರೆ, ಅವರ ಗೆಲುವು ಅಸಲಿ ಅಲ್ಲ ಎಂದು ಪ್ರತಿಪಾದಿಸಿದರು.ಭಾರತದಲ್ಲಿ ಇಂದು ಸಾಮಾಜಿಕ ನ್ಯಾಯ ಹೋರಾಟದ ಧ್ವನಿಗಳು ಛಿದ್ರವಾಗಿವೆ.  ಈ ಧ್ವನಿಗಳು ಕೇವಲ ರಾಜಕೀಯ ಅಧಿಕಾರ, ಜಾತಿ ಹಾಗೂ ಮೀಸಲಾತಿಯನ್ನು ಕೇಂದ್ರೀಕರಿಸಿದ್ದರಿಂದ ಹಾಗೂ ಸಂಪತ್ತಿನ ಅಸಮರ್ಪಕ ಹಂಚಿಕೆಯಿಂದಾಗಿ ಅವುಗಳ ಧ್ವನಿ ಒಡಕಾಗಿದೆ ಎಂದು ವಿಶ್ಲೇಷಿಸಿದರು.ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ಪ್ರತಿಪಾದಿಸಿದ ಅವರು, ಸರ್ಕಾರದ ಸಬ್ಸಿಡಿ ಸೇರಿದಂತೆ ಮತ್ತಿತರ ಅನುಕೂಲಗಳನ್ನು ಪಡೆದುಕೊಳ್ಳುವ ಖಾಸಗಿ ವಲಯಗಳು ಸಾಮಾಜಿಕ ನ್ಯಾಯ ಅನುಸರಿಸಬೇಕು. ಹಾಗೆಯೇ, ದೇಶದ ನ್ಯಾಯಾಂಗ ಮತ್ತು ಸೇನಾ ವ್ಯವಸ್ಥೆಯಲ್ಲಿರುವ ಸಾಮಾಜಿಕ ನ್ಯಾಯ ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳಾಗಬೇಕು ಎಂದು ಆಗ್ರಹಿಸಿದರು.ಸಾಮಾಜಿಕ ನ್ಯಾಯವನ್ನು ವೈಜ್ಞಾನಿಕವಾಗಿ ಅಳೆಯುವ ಹೊಸ ವ್ಯವಸ್ಥೆ ಕಂಡುಕೊಳ್ಳಬೇಕು. ಮೀಸಲಾತಿ ಲಾಭ ಪಡೆದವರು ಮತ್ತೆ ಮೀಸಲಾತಿ ಪಡೆಯುವಲ್ಲಿ ಆದ್ಯತೆ ಅನುಸರಿಸುವಂತಾಗಬೇಕು ಎಂದು ಸಲಹೆ ನೀಡಿದರು.ಜಾತಿವಿನಾಶಕ್ಕೆ ಮೀಸಲಾತಿಗೂ ಮಿಗಿಲಾದ ಹೊಸ ವಿಧಾನ ಕಂಡುಕೊಳ್ಳಬೇಕಾಗಿದೆ. ಸಮಾನ ಅವಕಾಶಗಳ ಕಲ್ಪನೆ ಸದ್ಯಕ್ಕೆ ಹೊಸ ಆಸ್ತ್ರವಾಗಿ ಮೂಡಿದೆ ಎಂದ ಅವರು, ಅಂತರ್ಜಾತಿ ವಿವಾಹ, ಜಾತಿ ಒಡೆದು ಹಾಕುವ ಸಂಕಲ್ಪವಾಗಿ ರೂಪುಗೊಳ್ಳಬೇಕು ಎಂದರು.ಸಮ್ಮೇಳನ ಉದ್ಘಾಟಿಸಿದ ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಜಾತಿ ನಾಶಕ್ಕೆ ಕಾರಣವಾಗುವ ಸರಳ,ಸುಲಭ ಅಂತರ್ಜಾತಿ ವಿವಾಹಕ್ಕೆ ಯುವಕರು ಮನಸ್ಸು ಮಾಡಬೇಕು ಎಂದರು.ಹಿಂದೆ ಕುವೆಂಪು ಅವರ ನೇತೃತ್ವದಲ್ಲಿ ಇಂತಹದೊಂದು ಆಂದೋಲನವನ್ನು ಪೂರ್ಣಚಂದ್ರತೇಜಸ್ವಿ ಸೇರಿದಂತೆ ಅಂದಿನ ಹಲವು ಯುವ ಮನಸ್ಸುಗಳು ಯಶಸ್ವಿಯಾಗಿ ನಡೆಸಿದರು. ಈಗ ಅಂತಹದೊಂದು ಆಂದೋಲನ ಆಗಬೇಕು ಎಂದರು.ಮಾಜಿ ಸಚಿವ ಎಸ್.ಕೆ. ಕಾಂತ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ, ಬಲವಾಗುತ್ತಿರುವ ಜಾತಿ ಸಂಘಟನೆ ಸಾರ್ವಜನಿಕ ಬಲಪ್ರದರ್ಶನವಾಗುತ್ತಿದ್ದು, ಅದನ್ನು ಪ್ರಶ್ನಿಸಲು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry