ಸೋಮವಾರ, ಜನವರಿ 27, 2020
22 °C
ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ: ಪ್ರಬಂಧ ಸ್ಪರ್ಧೆ, ರಕ್ತದಾನ, ವಿಚಾರಗೋಷ್ಠಿ

ಜಾತಿ ಬಲ, ಮೂಡದ ಸಮಾನತೆ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ಬಲ, ಮೂಡದ ಸಮಾನತೆ: ವಿಷಾದ

ಕೋಲಾರ: ನಗರದಲ್ಲಿ ಶುಕ್ರವಾರ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯ ಶ್ರದ್ಧೆ, ಸಂಭ್ರಮ ಮನೆ ಮಾಡಿತ್ತು. ಜಿಲ್ಲಾಡಳಿತದ ಜತೆಗೆ ವಿವಿಧ ಪಕ್ಷ, ಸಂಘಟನೆಗಳ ಪ್ರಮುಖರು ದಿನಾಚರಣೆಯಲ್ಲಿ ಪಾಲ್ಗೊಂಡು ಅಂಬೇಡ್ಕರರ ಕೊಡುಗೆಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ರಕ್ತದಾನ, ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿಗಳೂ ನಡೆದವು.ಸಂವಿಧಾನ ರಚನೆಯಾಗಿ ಹಲ ದಶಕಗಳು ಕಳೆದರೂ ಮೂಡದ ಸಮಾನತೆ, ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಹೆಚ್ಚುತ್ತಿರುವ ನಕಲಿ ಅಂಬೇಡ್ಕರ್ ವಾದಿಗಳು, ಇದೇ ವೇಳೆ ಜಾತಿ ಸಂಘಟನೆಗಳು ಬಲಗೊಳ್ಳುತ್ತಿರುವ ಕುರಿತು ವಿಷಾದ ಮತ್ತು ಆತಂಕವನ್ನು ಗಣ್ಯರು ವ್ಯಕ್ತಪಡಿಸಿದರು.ಸ್ವಯಂಪ್ರೇರಿತ ರಕ್ತದಾನ: ಪ್ರತಿ ವರ್ಷವೂ ಜಿಲ್ಲಾಡಳಿತದ ವತಿಯಿಂದ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸ್ವಯಂಪ್ರೇರಿತ ರಕ್ತದಾನ ಏರ್ಪಡಿಸಿದ್ದು ವಿಶೇಷ. ಜಿಲ್ಲಾಧಿಕಾರಿ ಡಿ.ಕೆ.ರವಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸೆಪಟ್‌ ರಕ್ತದಾನ ಮಾಡಿ ಗಮನ ಸೆಳೆದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಜುಲ್ಫಿಕಾರ್ ಉಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಜಿಲ್ಲಾ ವಾರ್ತಾಧಿಕಾರಿ ರಂಗಾರೆಡ್ಡಿ, ದಲಿತ ಸಂಘಟನೆಗಳ ಮುಖಂಡರಾದ ಡಾ.ಎಂ.ಚಂದ್ರಶೇಖರ್, ನಾಗನಾಳ ಮುನಿಯಪ್ಪ, ಸೂಲಿಕುಂಟೆ ರಮೇಶ್, ಮಂಜುನಾಥ, ಶ್ರೀರಾಂ ಪಾಲ್ಗೊಂಡಿದ್ದರು.ನಕಲಿ ಅಂಬೇಡ್ಕರ್ ವಾದಿಗಳು..

ನಗರದಲ್ಲಿ ಕರ್ನಾಟಕ ದಲಿತ ಸಿಂಹಸೇನೆಯು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಮೈಸೂರಿನ ಉರಿಲಿಂಗ ಪೆದ್ದಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಅಂಬೇಡ್ಕರ್ ವಾದಿಗಳಲ್ಲಿ ನಕಲಿ, ಅಸಲಿ, ಸೀಜನಲ್ ಎಂಬ ಮೂರು ವಿಧವಿದ್ದು ನಕಲಿ ಮತ್ತು ಸೀಜನಲ್ ಮಂದಿ ದಲಿತ ಸಂಘಟನೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಸಲಿ ಅಂಬೇಡ್ಕರ್ ವಾದಿಗಳಾಗುತ್ತೇವೆ ಎಂದು ದಲಿತರು ಪ್ರತಿಜ್ಞೆ ಮಾಡಬೇಕು ಎಂದರು.ವಿಶ್ವದ 10 ಮಹಾನ್ ನಾಯಕರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಅಂಬೇಡ್ಕರ್ ಅವರಿಗೆ ವಿಶ್ವ ಸಂಸ್ಥೆ ಘೋಷಿಸಿರುವುದು ಶ್ಲಾಘನೀಯ. ಜನರ ಅಭಿಮತವೇ ಅದಕ್ಕೆ ಕಾರಣ ಎಂದರು.ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ. ಕಬ್ಬಿಣದ ಮುಳ್ಳಿನ ಮೇಲೆ ನಡೆದಂಥಹವರು ಅಂಬೇಡ್ಕರ್.  ಅವರು ಒಂದು ವೇಳೆ ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೆ ಕೋಟ್ಯಂತರ ಜನರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.ಚಿತ್ರದುರ್ಗದ ಛಲವಾದಿ ಮಠದ ಬಸವನಾಗೆ ದೇವಶರಣರು ಮಾತನಾಡಿದರು. ಮುಖಂಡರಾದ ವಿ.ನಾರಾಯಣಸ್ವಾಮಿ, ಹೂಹಳ್ಳಿ ಪ್ರಕಾಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸೆಪಟ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್, ದಲಿತ ಸಂಘರ್ಷ ಸಮಿತಿಯ ಟಿ.ವಿಜಯಕುಮಾರ್, ಶಿಕ್ಷಕರಾದ ರಾಮಾಂಜನಪ್ಪ, ಬಾಲಗೋವಿಂದ ಸಿ.ನಾಗೇಶ್, ಗೋಪಿ, ಆನಂದ್, ವೆಂಕಟೇಶ್ ಉಪಸ್ಥಿತರಿದ್ದರು.ಜಾತಿ ಸಂಘಟನೆಯ ಬಲ

ಜಾತಿ ಸಂಘಟನೆಗಳು ಬಲಗೊಳ್ಳುತ್ತಿರುವುದು ಜಾತಿ ವಿನಾಶದ ಆಶಯವನ್ನೇ ಬುಡಮೇಲು ಮಾಡಿವೆ. ಈ ಬೆಳವಣಿಗೆಯಿಂದ ದಲಿತ ಸಮುದಾಯ ನಿರಂತರ ಶೋಷಣೆಗೊಳಗಾಗುತ್ತಲೇ ಇರುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಡಾ.ಜಿ.ಶಿವಪ್ಪ ಆತಂಕ ವ್ಯಕ್ತಪಡಿಸಿದರು.ಪಾರಮಿತ ಅಧ್ಯಯನ ಕೇಂದ್ರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಅಂಬೇಡ್ಕರ್ ಮತ್ತು ಜಾತಿ ನಿರ್ಮೂಲನೆ’ ಕುರಿತ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಅನಿಕೇತನರಾದ ನಾಯಕರನ್ನು ಜಾತಿವಾರು ವಿಂಗಡಿಸುವುದು, ತಮ್ಮ ಜಾತಿಯವರು ಎಂದು ಪ್ರತಿಪಾದಿಸುವುದು ಸರಿಯಲ್ಲ.  ಅದರಿಂದ ಯುವ ಪೀಳಿಗೆಯಲ್ಲೂ ಸಂಕುಚಿತ ಮನೋಭಾವ ಮೂಡುತ್ತದೆ ಎಂದರು.ಪ್ರಾಂಶುಪಾಲ ಎಸ್.ವೆಂಕಟಸ್ವಾಮಿ,  ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಮಾತನಾಡಿದರು. ಸ್ಪರ್ಧೆಯಲ್ಲಿ ವಿಜೇತರಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಹರೀಶ ಕುಮಾರ್, ಬಾಲಕಿಯರ ಕಾಲೇಜಿನ ರಾಜೇಶ್ವರಿ, ಸುರೇಶ ಕುಮಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಬಹುಮಾನ ವಿತರಿಸಿದರು. ದಮ್ಮಮಿತ್ರ ವಿಜಯಕುಮಾರ್, ಖಾದಿ ಗ್ರಾಮೀಣಾಭಿವೃದ್ಧಿ ಆಯೋಗದ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕೇಂದ್ರದ ನಿರ್ದೇಶಕ ಹೂಹಳ್ಳಿ ನಾಗರಾಜ್, ಸಿ.ವಿ.ನಾಗರಾಜ್, ಡಿ.ಎಂ.ನರಸಿಂಹಮೂರ್ತಿ, ಕೆ.ಎಸ್.ಗಣೇಶ ಉಪಸ್ಥಿತರಿದ್ದರು.ಬಿಜೆಪಿ ಕಚೇರಿಯಲ್ಲಿ: ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿದರು. ಕೆಜಿಎಫ್ ಶಾಸಕಿ ವೈ.ರಾಮಕ್ಕ, ಬಂಗಾರಪೇಟೆಯ ಮಾಜಿ ಶಾಸಕ ಎಂನಾರಾಯಣಸ್ವಾಮಿ, ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ, ವೆಂಕಟೇಶ ಮೌರ್ಯ, ಜಯಪ್ರಕಾಶ್, ನಾಗರಾಜ್, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.ಅಂಬೇಡ್ಕರ್‌ಗೆ ನಮನ

ಮಾಲೂರು:
ಡಾ.ಬಿ.ಆರ್.ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದ ಬಳಿಯ ಉದ್ಯಾನದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳು ಪುಷ್ಪ ಮಾಲೆ ಹಾಕಿ ನಮನ ಸಲ್ಲಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ಹೂ ಮಾಲೆ ಹಾಕಿ ಸ್ಮರಿಸಿದರು. ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ಅಶ್ವಥಪ್ಪ ಭಾಗವಹಿಸಿದ್ದರು.ದಲಿತ ಸಂಘರ್ಷ ಸಮಿತಿ, ದಲಿತ ಒಕ್ಕೂಟ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಹಾಕಿ ನಮನ ಸಲ್ಲಿಸಿದರು.ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ ಪ್ರತಿಯೊಬ್ಬ ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.ಪುರಸಭೆ ಸದಸ್ಯರಾದ ಎಂ.ವಿ.ವೇಮನ, ಎನ್.ವಿ.ಮುರಳೀಧರ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಚಿಕ್ಕಾಪುರ ಶ್ರೀನಿವಾಸ್, ಮುಖಂಡರಾದ ಪಾಪಣ್ಣ, ಭುವನಹಳ್ಳಿ ಚನ್ನಪ್ಪ, ವಕೀಲ ಮುನಿಕೃಷ್ಣಪ್ಪ, ವಿ.ಬಾಲಕೃಷ್ಣ, ದಲಿತ ಸಿಂಹ ಸೇನೆ ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್, ಅರಳೇರಿ ನಾರಾಯಣಸ್ವಾಮಿ, ವೆಂಕಟೇಶ್, ಗುರು, ವೆಂಕಟರಮಣಪ್ಪ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ದಲಿತ ಐಕ್ಯತಾ ವೇದಿಕೆ ಪದಾಧಿಕಾರಿಗಳು ಅಂಬೇಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಹಾಕಿ ಸ್ಮರಿಸಿದರು.  ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಜಿ.ಹನುಮಪ್ಪ ಅಂಬೇಡ್ಕರ್‌ ಹಾಗೂ ನೆಲ್ಸನ್‌ ಮಂಡೇಲಾ ಕುರಿತು ಉಪನ್ಯಾಸ ನೀಡಿದರು.ದಲಿತ ನಾಗರಕ ಸಮಿತಿಯ ಜಿಲ್ಲಾ ಸಂಚಾಲಕ ಕೋಡೂರು ಗೋಪಾಲ್, ಜಿಲ್ಲಾಧ್ಯಕ್ಷ ಪುರಸನಹಳ್ಳಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಪಿ.ವೆಂಕಟೇಶ್, ಮುಖಂಡರಾದ ರವಿಕುಮಾರ್, ಚಂದ್ರು, ವೆಂಕಟೇಶ್, ಕೋಟಪ್ಪ, ದೊಡ್ಡಿ ಮುನಿರಾಜು ಭಾಗವಹಿಸಿದ್ದರು.‘ಶ್ರದ್ಧೆಯಿಂದ ಉಜ್ವಲ ಭವಿಷ್ಯ’

ಬಂಗಾರಪೇಟೆ: ವಿ
ದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸೇವಾ ಸಮಿತಿ ಅಧ್ಯಕ್ಷ ಎ.ಮಂಜುನಾಥ್ ಸಲಹೆ ನೀಡಿದರು. ಅಂಬೇಡ್ಕರ್‌ ಪುಣ್ಯತಿಥಿ ಪ್ರಯುಕ್ತ ತಾಲ್ಲೂಕಿನ ಪಾಕರಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಸಮಿತಿ ಶ್ರಮಿಸುವುದಾಗಿ ತಿಳಿಸಿದರು.ವಕೀಲ ಸುರೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಇಂಥ ಸಾಮಾಜಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿದೆ ಎಂದರು.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪಿ.ಸಿ.ಮಂಜುನಾಥ್, ಹೂಹಳ್ಳಿ ಲೋಕೇಶ್, ಅಜೀಜ್‌ಬೇಗ್, ಎಸ್.ಮಂಜುನಾಥ್, ಚಿನ್ನಾಪುರ ಅಶೋಕ್, ತೊಟ್ಲಿ ಹರೀಶ್, ಮುಂತಾದವರು ಇದ್ದರು. ಸಹ ಶಿಕ್ಷಕಿ ಕೆ.ಸಿ.ಸುನೀತಾ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಜಿ.ಎಸ್.ಸ್ಯಾಮುಯಲ್ ವಂದಿಸಿದರು.

ಪ್ರತಿಕ್ರಿಯಿಸಿ (+)