ಜಾತಿ ಬೇರೆಯಾದರಷ್ಟೇ ಅಂತರ್ಜಾತಿ ವಿವಾಹವಲ್ಲ

7

ಜಾತಿ ಬೇರೆಯಾದರಷ್ಟೇ ಅಂತರ್ಜಾತಿ ವಿವಾಹವಲ್ಲ

Published:
Updated:
ಜಾತಿ ಬೇರೆಯಾದರಷ್ಟೇ ಅಂತರ್ಜಾತಿ ವಿವಾಹವಲ್ಲ

ನಾನು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಭಾಗವಾದ ತೀರ್ಥಹಳ್ಳಿ ತಾಲ್ಲೂಕಿನ ಹರಳಿಮಠ ಎಂಬ ಹಳ್ಳಿಯವನು. ಹತ್ತು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿ  ಜಾತಿ ವಿಚಾರದಲ್ಲಿ ಜನ ಹೇಗೆ ವರ್ತಿಸುತ್ತಾರೆ ಎಂಬುದನ್ನು ಹತ್ತಿರದಿಂದ ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ಹೋಲಿಸಿದರೆ ನಗರಗಳಲ್ಲಿಯೇ ಜಾತಿಪ್ರಜ್ಞೆಯ ರೋಗ ಹೆಚ್ಚು ಎಂದು ಈ ಮಾಲಿಕೆಯಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ.ನಮ್ಮ ಊರಿನಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮೀಯರಿದ್ದಾರೆ. ಎರಡೂ ಧರ್ಮಗಳಲ್ಲಿ ಅನೇಕ ಜಾತಿ ಪಂಗಡಗಳಿವೆ. ಹಿಂದೂ ಧರ್ಮೀಯರು ಶೇಕಡ 90 ಭಾಗವಿದ್ದರೆ ಮುಸಲ್ಮಾನರ ಜನಸಂಖ್ಯೆ ಶೇಕಡ 10ರಷ್ಟಿದೆ. ನಮ್ಮ ಊರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಗ್ರಾಮ ಪಂಚಾಯತಿ ಸದಸ್ಯರಾಗಿರುವವರು ಮುಸಲ್ಮಾನ ಅಭ್ಯರ್ಥಿ.ನಮ್ಮ ತಾಲ್ಲೂಕಿನ ಜನಸಂಖ್ಯೆಯಲ್ಲಿ ಒಕ್ಕಲಿಗರು ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ದೀವರು ಹಾಗು ಬ್ರಾಹ್ಮಣರಿದ್ದಾರೆ. ಮುಸಲ್ಮಾನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ತಾಲ್ಲೂಕಿನ ಮತದಾರರಲ್ಲಿ ತಮ್ಮ ಜಾತಿಯ ಶೇಕಡ ಒಂದರಷ್ಟು ಮತದಾರರು ಇರದಿದ್ದರೂ ಕೋಣಂದೂರು ಲಿಂಗಪ್ಪ ಇಲ್ಲಿಂದ ಶಾಸನಸಭೆಗೆ ಆಯ್ಕೆಯಾಗಿದ್ದರು. ಈ ಉದಾಹರಣೆ ಹೊರತುಪಡಿಸಿದರೆ ಉಳಿದಂತೆ  ಇಲ್ಲಿ ಎಲ್ಲ ಪಕ್ಷದವರೂ ಬಹುಸಂಖ್ಯಾತ ಒಕ್ಕಲಿಗರನ್ನೇ ತಮ್ಮ ಹುರಿಯಾಳಾಗಿ ಚುನಾವಣೆಗೆ  ನಿಲ್ಲಿಸುತ್ತಿದ್ದಾರೆ. ಆದರೆ ಯಾವುದೇ ಜಾತಿಯ ಪ್ರಾಮಾಣಿಕ ಹೋರಾಟಗಾರನೊಬ್ಬನನ್ನು  ಗೆಲ್ಲಿಸುವಷ್ಟು ಜಾತ್ಯಾತೀತ ಮನೋಭಾವ ಇಲ್ಲಿನ ಜನರಲ್ಲಿದೆ ಎಂದು ನಾನು ಗ್ರಹಿಸಿದ್ದೇನೆ.ನಮ್ಮ ತಾಲ್ಲೂಕಿನಲ್ಲಿ ನಿರಂತರವಾಗಿ ಅಂತರ್ಜಾತಿಯ, ಅಂತರ್ ಧರ್ಮೀಯ ಹಾಗೂ ಸರಳ ವಿವಾಹಗಳಾಗುತ್ತವೆ. ಹತ್ತು ವರ್ಷಗಳ ಹಿಂದೆ ನಾನು ನನ್ನ ಜಿಲ್ಲೆಗೆ ಮರಳಿದ್ದು ಆನಂತರ ಸ್ವತಃ ಅಂತರ್ಜಾತಿ ವಿವಾಹವಾಗಿರುವುದಲ್ಲದೆ ಕಾನೂನುಬದ್ಧವಾಗಿ ಕೆಲವು ಅಂತರ್ಜಾತಿ ವಿವಾಹಗಳನ್ನು ಗೆಳೆಯರ ಜೊತೆ ನೆರವೇರಿಸಿದ್ದೇನೆ.ನಾವು ಮದುವೆಯಾಗುವ ವಿಚಾರ ಕೇಳಿ ನಮ್ಮ ಮನೆಯವರು ಹೇಗೆ ಪ್ರತಿಕ್ರಿಯಿಸಬಹುದೆಂಬ ಆತಂಕದಲ್ಲಿದ್ದ ನಮಗೆ  ಅವರು ಒಪ್ಪಿ ಸ್ವತಃ ಎರಡೂ ಕುಟುಂಬದವರೂ ಕೂಡಿ ಮದುವೆ ಮಾಡಿಕೊಟ್ಟಿದ್ದು ನಮ್ಮಿಬ್ಬರ ಜೀವನದ ಪವಾಡವೆನಿಸಿತ್ತು. ಆದರೆ ಯುವಕರಾಗಿರುವ ನಾವಷ್ಟೆ ಆದರ್ಶವಾದಿಗಳು ಎಂಬ ನಂಬಿಕೆ ಸುಳ್ಳೆಂದೂ ಬದಲಾದ ಕಾಲದಲ್ಲಿ ನಮ್ಮಂತೆ ನಮ್ಮ ಕುಟುಂಬದ ಸದಸ್ಯರೂ ಬದಲಾಗುತ್ತಿರುತ್ತಾರೆ ಎಂಬ ಸತ್ಯ ನಮಗೆ ತಡವಾಗಿ ಅರ್ಥವಾಯಿತು. ಮದುವೆಯಾದ ಈ ಹತ್ತು ವರ್ಷಗಳಲ್ಲಿ ನಾವು ಹುಟ್ಟಿದ ಜಾತಿಗಳನ್ನು ನೆನಪು ಮಾಡಿಕೊಳ್ಳಬೇಕಾದ ಒಂದು ಸಂದರ್ಭವೂ ನಿರ್ಮಾಣವಾಗಿಲ್ಲ. ನಮ್ಮಿಬ್ಬರ ಕುಟುಂಬಗಳ ಆಹಾರ ಪದ್ದತಿ ಬೇರೆಯಾಗಿದ್ದರೂ ಅದು ಎಂದೂ ಸಮಸ್ಯೆಯಾಗಿಲ್ಲ. ನಮ್ಮ ಮಗನ ಜನನ ಪ್ರಮಾಣ ಪತ್ರದಲ್ಲಿ ಹಾಗೂ ಆತನನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಅಲ್ಲಿನ ರಿಜಿಸ್ಟರಿನ ಜಾತಿ ಕಾಲಮ್ಮಿನಲ್ಲಿ  ಭಾರತೀಯ  ಎಂದು ಬರೆಸಲು ಸಾಧ್ಯವಿಲ್ಲವೆಂದು ಆಸ್ಪತ್ರೆ ಮತ್ತು ಶಾಲೆಯ ಸಿಬ್ಬಂದಿ ವಾದಿಸಿದರೂ ಕಾನೂನಿನಲ್ಲಿಯೇ ಅದಕ್ಕೆ ಅವಕಾಶವಿದೆಯೆಂದು ಅವರಿಗೆ ಮನವರಿಕೆ ಮಾಡಿಕೊಟ್ಟು ಹಾಗೆಯೇ ಬರೆಸಿದ್ದೇವೆ.ನನಗೆ ಅಂತರ್ಜಾತಿಯ ವಿವಾಹವಾಗಲು ಇಷ್ಟ, ಆದರೆ ಇದನ್ನು ವಿರೋಧಿಸುವ ನನ್ನ ಸಂಪ್ರದಾಯಸ್ಥ ತಂದೆ ತಾಯಿಗಳು ಏನು ಅನಾಹುತ ಮಾಡಿಕೊಳ್ಳುತ್ತಾರೆಯೊ ಎಂಬ ಭಯ  ಎಂದು ಪ್ರಗತಿಪರರೆಂದು ಹೇಳಿಕೊಳ್ಳುವ ಅನೇಕರು ಸ್ವಜಾತಿಯಲ್ಲಿಯೇ ಮದುವೆಯಾಗುತ್ತಾರೆ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಬಹುತೇಕರ ವಿಚಾರದಲ್ಲಿ ಇದೊಂದು ಜಾತಿ ನಿರ್ಮೂಲನೆಯ ಬಗ್ಗೆ ಕಾಳಜಿಯಿಲ್ಲದ ಕಾರಣದಿಂದ ಅಥವಾ ಬದ್ಧತೆಯ ಕೊರತೆಯಿಂದ ಹುಟ್ಟುವ ಕುಂಟುನೆಪವಾಗಿರುತ್ತದೆ.ನಾವು ನಡೆಸಿದ ಅಂತರ್ಜಾತಿಯ ಮದುವೆಗಳಲ್ಲಿ ಕೆಲವು ಪ್ರಕರಣಗಳಲ್ಲಿ ಮದುವೆಯಾಗಲಿಚ್ಚಿಸಿದ ಗೆಳೆಯ,ಗೆಳತಿಯರ ಮನೆಗೆ ಹೋಗಿ ಅವರ ಪೋಷಕರನ್ನು ಒಪ್ಪಿಸುವ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಯಾರೂ ಆ ಹಂತದಲ್ಲಿ ಒಪ್ಪಿಲ್ಲ. ಬಹುತೇಕ ಪೋಷಕರು ತಮ್ಮ ಮಗ/ಮಗಳು ಬೇರೆ ಜಾತಿಯವರನ್ನು ಮದುವೆಯಾದರೆ ಅವರನ್ನು ಕೊಲ್ಲುವ ಅಥವಾ ತಾವು ವಿಷ ಕುಡಿದು ಸಾಯುವ ಬೆದರಿಕೆ ಹಾಕಿದವರೇ.  ಆದರೆ ತಮ್ಮನ್ನು ಮೀರಿ ತಮ್ಮ ಮಕ್ಕಳು ಮದುವೆಯಾದ ನಂತರ ಈವರೆಗೆ ಯಾರೊಬ್ಬರೂ ತಮ್ಮ ಮಕ್ಕಳನ್ನು ಸಾಯಿಸಿಲ್ಲ ಮತ್ತು ತಾವು ವಿಷ ಕುಡಿದು  ಸತ್ತಿಲ್ಲ. ಮದುವೆಯಾದ ನಂತರವೂ ಒಂದಷ್ಟು ಕಾಲ ಅಂತರ ಕಾಯ್ದುಕೊಂಡವರೂ  ಮೊಮ್ಮಕ್ಕಳು ಜನಿಸಿದ ನಂತರ ಮಾತ್ರ ಎಲ್ಲ ಬಿಗುಮಾನಗಳಿಂದಲೂ ಕಳಚಿಕೊಂಡು ಮಕ್ಕಳೊಂದಿಗೆ ಒಂದಾಗಿದ್ದಾರೆ.ತಾವು  ಹುಟ್ಟಿದ ಜಾತಿಯ ಸಂಗಾತಿಯನ್ನೇ ಆಯ್ಕೆ ಮಾಡಿಕೊಂಡು ಜಾತ್ಯತೀತರಾಗಿರಲು ಸಾಧ್ಯವಿಲ್ಲವೇ ಎಂದು ಅನೇಕರು ಪ್ರಶ್ನಿಸುತ್ತಾರೆ.  ಸಾಧ್ಯವಿಲ್ಲ  ಎನ್ನುವುದೇ ನನ್ನ ನಂಬಿಕೆ. ಪ್ರಾಥಮಿಕವಾಗಿ ಇದು ನಮ್ಮ ಜಾತ್ಯತೀತ ನಿಲುವಿನ ಕುರಿತ ಬದ್ಧತೆಯ ಪ್ರಶ್ನೆ. ಎರಡನೆಯದಾಗಿ ನಮಗೆ ಗೊತ್ತಿಲ್ಲದೆ ಒಂದೇ ಜಾತಿಯ ಎರಡು ಕುಟುಂಬಗಳು ತಮ್ಮ ಮಗ-ಮಗಳ ಅನುಮತಿಗೆ ಕಾಯದೇ ತಮ್ಮ ಜಾತಿ ಮುಂದುವರಿಕೆಯ ಸಂಪ್ರದಾಯ ಆಚರಣೆಗಳನ್ನು ಸಲೀಸಾಗಿ ಮುಂದುವರಿಸಿಕೊಂಡು ಹೋಗುತ್ತವೆ. ಅಂತರ್ಜಾತಿ ಮದುವೆಯಾಗುವುದೊಂದೆ ಜಾತಿಯನ್ನು ಮೀರಲು ಸದ್ಯ ನಮಗಿರುವ ಏಕೈಕ  ದಾರಿ .ಆದರೆ ವಧೂವರರ ಜಾತಿಗಳು ಬೇರೆಯಾದ  ತಕ್ಷಣ ಅದನ್ನು ಅಂತರ್ಜಾತಿ ವಿವಾಹವೆನ್ನಲು ಸಾಧ್ಯವಿಲ್ಲ. ಹದಿವಯಸ್ಸಿನಲ್ಲಿ ಮೂಡುವ ಪ್ರೇಮ ಜಾತಿಯನ್ನು  ಮೀರಿ ಪ್ರೇಮಿಗಳನ್ನು ಒಂದಾಗಿಸುತ್ತದೆ. ಆದರೆ ಪ್ರೇಮದ ಕಾವು ಇಳಿದ ನಂತರ ಜಾತಿಯ ವಾಸ್ತವ ಎದುರಾಗುತ್ತದೆ. ಗಂಡ ಹೆಂಡತಿಯರಲ್ಲಿ ಯಾರು ಪ್ರಬಲರೋ ಅಥವಾ ಯಾರ ಕುಟುಂಬ ಪ್ರಬಲವೋ ಅಥವಾ ಇಬ್ಬರಲ್ಲಿ ಯಾವ ಜಾತಿಯಲ್ಲಿ ಗುರುತಿಸಿಕೊಂಡರೆ ಹೆಚ್ಚು ಲಾಭವೋ ಅವರು ಅಂತಹ ಜಾತಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಇದರಲ್ಲಿ ಸಾಮಾಜಿಕ ಸ್ಥಾನಮಾನದ ಕಾರಣಕ್ಕಾಗಿ ಮೇಲ್ಜಾತೀಕರಣಕ್ಕೆ ಒಲಿಯುವವರು ಕೆಲವರಾದರೆ ಗುಪ್ತವಾಗಿ ತಮ್ಮ ಮಕ್ಕಳನ್ನು ದಲಿತ/ಹಿಂದುಳಿದ ವರ್ಗಗಳೆಂದು ಅವರ ಶಾಲಾ ದಾಖಲಾತಿಗಳಲ್ಲಿ ನಮೂದಿಸುವ ಮೂಲಕ ಮುಂದಿನ ಜನಾಂಗವನ್ನೂ ನಿರ್ದಿಷ್ಟ ಜಾತಿಯಲ್ಲಿ ಮುಂದುವರೆಸುವವರದು ಇನ್ನೊಂದು ವರ್ಗ. ಇವೆರಡನ್ನೂ ಒಟ್ಟಿಗೆ ಸಾಧಿಸುವವರು ಇನ್ನೊಂದಿಷ್ಟು ಹುಸಿ ಜಾತ್ಯಾತೀತವಾದಿಗಳು. ಇಂತಹ ಮುಖವಾಡದ ಮದುವೆಗಳಿಗಿಂತ ಪ್ರಾಮಾಣಿಕ ಸ್ವಜಾತಿಯ ಮದುವೆಗಳೇ ಮೇಲು. ಪ್ರಜ್ಞಾಪೂರ್ವಕವಾಗಿ ಆಗದಿದ್ದರೆ ಹೊರನೋಟಕ್ಕೆ ಕ್ರಾಂತಿಕಾರಕವೆನಿಸುವ ಅಂತರ್ಜಾತಿ ವಿವಾಹಗಳು ನಿಜದಲ್ಲಿ ಜಾತಿ ನಿರ್ಮೂಲನೆ ಮಾಡಲಾರವು. ಪರಿಣಾಮದ ದೃಷ್ಟಿಯಿಂದ  ಸ್ವಜಾತಿಯ ಮದುವೆಗಳಿಗೂ ಇಂತಹ ಅಂತರ್ಜಾತಿ ವಿವಾಹಗಳಿಗೂ ಅಂತಹ ವ್ಯತ್ಯಾಸಗಳೇನಿಲ್ಲ.ನಮ್ಮಲ್ಲಿ ಜಾತಿಪ್ರಜ್ಞೆಯನ್ನು ಬಲವಾಗಿ ಮೂಡಿಸುತ್ತಿರುವ ಸಂಸ್ಥೆಗಳೆಂದರೆ ಮಂದಿರ ಮಸೀದಿ ಚರ್ಚುಗಳಂತಹ ಧಾರ್ಮಿಕ ಕೇಂದ್ರಗಳು ಮತ್ತು ಜಾತಿ ಸಂಘಟನೆಗಳು ಎಂಬ ನಂಬಿಕೆಯಿದೆ. ಇದರಲ್ಲಿ ಒಂದಷ್ಟು ಸತ್ಯವಿದೆ. ಆದರೆ ಮೂಲಭೂತವಾಗಿ ಬಾಲ್ಯದಿಂದಲೇ ನಮ್ಮಲ್ಲಿ ಜಾತ್ಯತೀತ ಅಥವಾ ಜಾತಿಪ್ರಜ್ಞೆ ಮೂಡಿಸುತ್ತಿರುವುದು ನಾವು ಕಲಿತ ಶಾಲೆಗಳೇ. ನಗರಗಳಲ್ಲಿ ಜಾತಿಪ್ರಜ್ಞೆ ಹೆಚ್ಚಾಗುತ್ತಿರುವುದಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ ಅದು ಆಳವಾಗಿ ಇನ್ನೂ ಬೇರೂರದೆ ಆಚಾರಗಳಲ್ಲಿ ಮಾತ್ರ ಅದು ಕಂಡುಬರುತ್ತಿರುವುದಕ್ಕೂ ಈ ಎರಡೂ ಪ್ರದೇಶಗಳ ಜನ ಕಲಿತ ಶಾಲೆಗಳ ಸ್ವರೂಪವೂ ಕಾರಣವಾಗಿದೆ.ಕಳೆದ ಎರಡು ದಶಕಗಳ ಹಿಂದಿನವರೆಗೂ  ಹಳ್ಳಿಗಳಲ್ಲಿ ಬೆರಳೆಣಿಕೆಯ ಜನರನ್ನು ಹೊರತುಪಡಿಸಿದರೆ ಎಲ್ಲರೂ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರು. ಬಡವ ಶ್ರೀಮಂತರೆನ್ನದೆ ಎಲ್ಲ ಜಾತಿಯ ಜನರೂ ಸೇರುವ ಸ್ಥಳ ಈ ಶಾಲೆಗಳಾಗಿತ್ತು. ಪರಸ್ಪರರನ್ನು ಅರ್ಥಮಾಡಿಕೊಳ್ಳುವ, ಗೆಳೆತನ ಬೆಳೆಸುವ ದೊಡ್ಡ ಅವಕಾಶವನ್ನು ಈ ಶಾಲೆಗಳು ನಿರ್ಮಿಸುತ್ತಿದ್ದವು. ಸಂವಿಧಾನಾನುಸಾರ ಸರ್ಕಾರ ರೂಪಿಸಿದ ನಿಯಮಗಳಿಗೆ ಅನುಗುಣವಾಗಿ ಶಿಕ್ಷಕರು ಇಲ್ಲಿ ಜಾತ್ಯತೀತ ತಳಹದಿಯ ಪಾಠ ಮಾಡುತ್ತಿದ್ದರು. ಜಾತಿವಾದಿ ಶಿಕ್ಷಕನೂ ಜಾತ್ಯತೀತತೆಯ ಪಾಠ ಮಾಡುವ ಒತ್ತಡವನ್ನು ಅಲ್ಲಿನ ಪರಿಸರವೇ ನಿರ್ಮಿಸುತ್ತಿತ್ತು. ಇಲ್ಲಿ ಕಲಿತು ಬರುವ ಮಕ್ಕಳು ಮುಂದೆ ತಮ್ಮ ಜಾತಿಯವರನ್ನೇ ಮದುವೆಯಾದರೂ ಇನ್ನೊಂದು ಜಾತಿಯವರನ್ನು ದ್ವೇಷಿಸುವ ಜಾತಿವಾದಿಗಳಾಗುತ್ತಿರಲಿಲ್ಲ. ಈವರೆಗೂ ಹಳ್ಳಿಗಳಲ್ಲಿರುವುದು ಇಂತಹ ಜನಾಂಗವೇ, ಇನ್ನು ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ಇಂತಹ ವಾತಾವರಣವನ್ನು ನಿರೀಕ್ಷಿಸಲಾಗದು.ನಗರಗಳಲ್ಲಿ ಸರ್ಕಾರಿ ಶಾಲೆಗಳು ಕೇವಲ ಕಡುಬಡವರ ಅನಿವಾರ್ಯ ವಿದ್ಯಾಕೇಂದ್ರಗಳಾಗಿ ಅನೇಕ ದಶಕಗಳೇ ಕಳೆದಿವೆ. ನಮ್ಮ ರಾಜ್ಯದಲ್ಲಿ  ಗಾಂಧಿಯಿಂದ ಪ್ರಭಾವಿತರಾದ ಎಚ್ ನರಸಿಂಹಯ್ಯ, ಬೆಳೆಗೆರೆ ಕಷ್ಣಶಾಸ್ತ್ರಿ, ನಾಗಪ್ಪ ಶೆಟ್ಟಿ, ಎನ್.ರಂಗರಾಜುರಂತಹ ಕೆಲವು ಆದರ್ಶವಾದಿಗಳು ಆರಂಭಿಸಿದ ಬೆರಳೆಣಿಕೆಯ ವಿದ್ಯಾಸಂಸ್ಥೆಗಳು ಮತ್ತು ಕೆಲವು ಕ್ರೈಸ್ತ ವಿದ್ಯಾಸಂಸ್ಥೆಗಳ ಅಪವಾದಗಳನ್ನು ಹೊರತುಪಡಿಸಿದರೆ ಖಾಸಗಿ ಶಾಲೆಗಳು ನಿರ್ದಿಷ್ಟ ಜಾತಿಯ ಮಠಗಳ, ನಿರ್ದಿಷ್ಟ ಧರ್ಮದ, ಜಾತಿಗಳ ಬಂಡವಾಳಶಾಹಿಗಳಿಂದ ಆರಂಭವಾಗಿದ್ದು ಅಲ್ಲಿ ಸೇರುವ ವಿದ್ಯಾರ್ಥಿಗಳೂ ಕೂಡ ಬಹುಪಾಲು ಪ್ರತಿಷ್ಠಿತವೆನಿಸುವ  ಜಾತಿಗಳವರೇ ಅಥವಾ ನಿರ್ದಿಷ್ಟ ಧರ್ಮದವರೇ ಆಗಿರುತ್ತಾರೆ. ತಮ್ಮ ತಮ್ಮ ಜಾತಿ ಧರ್ಮದ ಹಿರಿಮೆಯನ್ನು ಪ್ರತ್ಯಕ್ಷವಾಗಿ,ಪರೋಕ್ಷವಾಗಿ ಸಾಧಿಸುತ್ತ ಇತರ ಜಾತಿ ಧರ್ಮಗಳ ಬಗ್ಗೆ ಅಸಹನೆಯನ್ನು ಮೂಡಿಸುವಲ್ಲಿ ಇವು ಕ್ರಿಯಾಶೀಲವಾಗಿರುವುದು ಸರ್ವೆಸಾಮಾನ್ಯವಾಗಿದೆ. ಈ ಶಾಲೆಗಳು ರೂಪಿಸುವ ಜನಾಂಗ ಕೂಡ ಜಾತಿಗ್ರಸ್ತವಾಗುವುದು ಸಹಜವೇ ಆಗಿದೆ. ಯಾರ ವಿರುದ್ಧ ಈ ಶಾಲೆಗಳು ಅಸಹನೆ ಮೂಡಿಸುತ್ತವೆಯೋ ಅಂತಹ ದಲಿತ ಹಾಗೂ ಅಲ್ಪಸಂಖ್ಯಾತ ವರ್ಗದ ಮಧ್ಯಮವರ್ಗಕ್ಕೂ ಮತ್ತು ಆ ವರ್ಗದ ಬುದ್ಧಿಜೀವಿಗಳಿಗೂ ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸುವುದು ಪ್ರತಿಷ್ಠೆಯ ವಿಷಯವಾಗಿರುವುದು ದುರಂತದ ಸಂಗತಿ.ಸಾಹಿತಿಗಳೊಬ್ಬರು ತಮ್ಮ ಮಗ  ಮುಸಲ್ಮಾನರೆಲ್ಲ ಉಗ್ರಗಾಮಿಗಳು, ಅವರನ್ನು ಗುಂಡಿಟ್ಟು ಸಾಯಿಸಬೇಕು  ಎಂದು ದ್ವೇಷ ಕಾರುತ್ತಾನೆ ಎಂದು ತಮ್ಮ ಗೆಳೆಯರ ಬಳಿ ದುಃಖ ತೋಡಿಕೊಳ್ಳುತ್ತಿದ್ದರು. ಇದು ಮೇಲಿನದರ ಫಲಶ್ರುತಿ.ಜಾಗತೀಕರಣಕ್ಕೆ ನಮ್ಮ ನಾಡು ರತ್ನಗಂಬಳಿ ಹಾಸಿದ ನಂತರ ಇಂಗ್ಲಿಷ್ ಭಾಷೆ ಕಲಿಯುವುದೇ ಕಾರಣವಾಗಿ ಪ್ರವಾಹೋಪಾದಿಯಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಆರಂಭವಾದವು. ಇವು ಕಳೆದ ಎರಡು ದಶಕಗಳಿಂದ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈವರೆಗೂ ಜಾತ್ಯತೀತ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದ ಹಳ್ಳಿಗಳು ಖಾಸಗಿ ಶಾಲೆಗಳಲ್ಲಿ ಕಲಿತು ಬಂದ ಹೊಸ ಜನಾಂಗದಿಂದ ತನ್ನ ಈ ಲಕ್ಷಣಗಳನ್ನು ಕಳೆದುಕೊಂಡು ಮುಂದಿನ ದಿನಗಳಲ್ಲಿ ಈಗಿನ ಜಾತಿಗ್ರಸ್ತ ನಗರಗಳಂತಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಎಲ್ಲ ಜಾತಿ ಜನಾಂಗದವರೂ ಬಡವ-ಶ್ರೀಮಂತರೂ  ಒಟ್ಟಿಗೆ ಓದುವ ಅವಕಾಶ ಕಲ್ಪಿಸುವ ಕಾಮನ್ ಸ್ಕೂಲ್‌ಗಳು ಮಾತ್ರ ಇಂತಹ ಅಪಾಯವನ್ನು ತಡೆಯಬಹುದು ಎನಿಸುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry