ಜಾತಿ ಮತ ಪಕ್ಷದ ಭೇದ ಯಕ್ಷಗಾನಕ್ಕೆ ಇಲ್ಲ: ಶಾಸಕ

7

ಜಾತಿ ಮತ ಪಕ್ಷದ ಭೇದ ಯಕ್ಷಗಾನಕ್ಕೆ ಇಲ್ಲ: ಶಾಸಕ

Published:
Updated:

ಬ್ರಹ್ಮಾವರ: ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಯಕ್ಷಗಾನಕ್ಕೆ ಜಾತಿ ಮತ ಪಕ್ಷದ ಭೇದವಿಲ್ಲ. ಎಲ್ಲರೂ ಒಟ್ಟಾಗಿ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವಾಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.ಬ್ರಹ್ಮಾವರ ರಿಕ್ಷಾ ನಿಲ್ದಾಣದ ಬಳಿ ಯಕ್ಷ ಶಿಕ್ಷಣ ಟ್ರಸ್ಟ್‌ ಮತ್ತು ಬ್ರಹ್ಮಾ­ವರದ ಪ್ರದರ್ಶನಾ ಸಮಿತಿಯ ವತಿಯಿಂದ 7ದಿನಗಳ ಕಾಲ ನಡೆದ ಕಿಶೋರ ಯಕ್ಷ ಸಂಭ್ರಮದ ಸಮಾರೋ­ಪದಲ್ಲಿ ಅವರು ಮಾತನಾಡಿದರು.ಯಕ್ಷ ಶಿಕ್ಷಣ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್‌ ಮಾತನಾಡಿ ಮುಂದಿನ ವರ್ಷಗಳಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್‌ನ್ನು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸುವ ಕೆಲಸವಾಗಬೇಕು. ಯಕ್ಷ ಶಿಕ್ಷಣದಿಂದ ಪ್ರೇಕ್ಷಕರ ವರ್ಗ ಹೆಚ್ಚಾಗುತ್ತಿದೆ. ಶಾಲೆಗಳಲ್ಲಿಯೂ ಇಂತಹ ಪ್ರದರ್ಶನ­ಗಳನ್ನು ಏರ್ಪಡಿಸುತ್ತಿರುವುದರಿಂದ ಯಕ್ಷಗಾನದೊಂದಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ಯಕ್ಷಗಾನದ ಬಗ್ಗೆ ಅನುಭವ ಹಂಚಿಕೊಂಡ ಚೇರ್ಕಾಡಿ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಾ ಯಕ್ಷಗಾನ ಸೇರಿದ ಕ್ಷಣದಿಂದ ನನಗೆ ಸಭಾಕಂಪನ ದೂರವಾಗಿ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದರು. ಸಮಾರಂಭದಲ್ಲಿ ಪ್ರದರ್ಶನಾ ಸಮಿತಿಯ ಸದಸ್ಯರನ್ನು ಗೌರವಿಸಲಾ­ಯಿತು.

ಭಾಗವಹಿಸಿದ 14 ಶಾಲೆಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್‌ ಶ್ಯಾನುಭಾಗ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಪ್ರದರ್ಶನಾ ಸಂಘಟನಾ ಸಮಿತಿಯ ಅಧ್ಯಕ್ಷ ರಾಜೇಶ್‌ ಶೆಟ್ಟಿ ಬಿರ್ತಿ, ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಕಡೆಕಾರ್‌, ಪ್ರದರ್ಶನಾ ಸಂಘಟನಾ ಸಮಿತಿಯ ಕಾರ್ಯದರ್ಶಿ ದಿನಕರ ಹೇರೂರು, ಕೋಶಾಧಿಕಾರಿ ಚಿತ್ತ­ರಂಜನ್‌ ಹೆಗ್ಡೆ, ಟ್ರಸ್ಟ್‌ನ ಕೋಶಾಧಿಕಾರಿ ಸುಬ್ರಹ್ಮಣ್ಯ ಬಾಸ್ರಿ, ನಾರಾಯಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಬ್ರಹ್ಮಾವರದಲ್ಲಿ ಒಂದು ವಾರಗಳ ಕಾಲ ನಡೆದ ಯಕ್ಷಗಾನದಲ್ಲಿ 28ಗುರುಗಳು, 330 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 151 ಹುಡುಗರು ಮತ್ತು 179ಮಂದಿ ಹುಡುಗಿಯರು ಭಾಗವಹಿಸಿದ್ದರು. ಓರ್ವ ಮುಸ್ಲೀಂ ಹುಡುಗ ಸೇರಿದಂತೆ ಹೊರಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry