ಜಾತಿ ರಾಜಕೀಯ ಬದಿಗೊತ್ತಿ: ಸಚಿವ ಶಿವಣ್ಣ

7

ಜಾತಿ ರಾಜಕೀಯ ಬದಿಗೊತ್ತಿ: ಸಚಿವ ಶಿವಣ್ಣ

Published:
Updated:

ತಿಪಟೂರು: ಜಾತಿ ಬದಿಗೊತ್ತಿ ನೈತಿಕತೆ, ಸಮಾನತೆ ನೆಲೆಯಲ್ಲಿ ರಾಜಕೀಯ ನಿರ್ಧಾರ ಕೈಗೊಂಡರೆ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಅಭಿಪ್ರಾಯಪಟ್ಟರು.ತಾಲ್ಲೂಕಿನ ಸಾರ್ಥವಳ್ಳಿಯಲ್ಲಿ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಮತ್ತು ಜನಪ್ರತಿನಿಧಿಗಳ ಜಾತಿ ರಾಜಕೀಯ ನಿಲುವುಗಳು ಪ್ರಜಾಪ್ರಭುತ್ವದ ಆಶಯಕ್ಕಷ್ಟೇ ಅಲ್ಲದೆ ಶಾಸಕಾಂಗದ ಮೂಲೋದ್ದೇಶಕ್ಕೆ ಚ್ಯುತಿ ತರುತ್ತವೆ. ಜಾತ್ಯತೀತ ಮನಸ್ಥಿತಿಯಿಂದ ಯೋಗ್ಯತೆ ನೆಲೆಯಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ರೋಗಗ್ರಸ್ತ ಮನಸ್ಸನ್ನು ತೊಲಗಿಸಿದಂತೆ. ಆಯ್ಕೆಯಾದವರ ಜವಾಬ್ದಾರಿ ಹೆಚ್ಚಿಸಿದಂತೆ ಎಂದರು.ನಗರಗಳಲ್ಲಿ ಕಾಡುತ್ತಿದ್ದ ಪ್ಲಾಸ್ಟಿಕ್‌ನ ಪರಿಸರ ಮಾಲಿನ್ಯ ಈಗ ಗ್ರಾಮಗಳಿಗೂ ಹಬ್ಬಿ ಸಮಸ್ಯೆ ತಂದೊಡ್ಡಿದೆ. ಗ್ರಾಮಗಳ ನೈರ್ಮಲ್ಯ ಮತ್ತು ಪರಿಸರ ಸ್ವಾಸ್ಥ್ಯಕ್ಕೆ ಒತ್ತು ನೀಡಬೇಕಾದ ತುರ್ತು ಹೆಚ್ಚಿದೆ. ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮೀಣರು ಸಂಕಲ್ಪ ಮಾಡಬೇಕು. ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿಗಳು ಕೇವಲ ಕಚೇರಿ, ಕಟ್ಟಡಗಳಿಗಷ್ಟೇ ಅಲ್ಲದೆ ಗ್ರಾಮಗಳ ಸುಸ್ಥಿತಿಗೆ ಶ್ರಮಿಸಬೇಕು ಎಂದರು.ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಗ್ರಾಮ ಪಂಚಾಯಿತಿಗಳ ಮೂಲ ಆಶಯಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದರೆ ಗ್ರಾಮಗಳ ಎಷ್ಟೋ ಸಮಸ್ಯೆ ಬಗೆಹರಿಯುತ್ತವೆ. ತಾಲ್ಲೂಕಿನ ನಿರ್ಲಕ್ಷಿತ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಿದ್ದರಿಂದ ಪ್ರಗತಿ ಸಾಧ್ಯವಾಗಿದೆ. ಹೊನ್ನವಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಬಾಕಿ ಕೆರೆಗಳಿಗೆ ಒಂದು ತಿಂಗಳ ಒಳಗೆ ನೀರು ಹರಿಸುವುದು ನಿಶ್ಚಿತ. ಈ ಮೂಲಕ ಇಲ್ಲಿನ ದೊಡ್ಡ ಕೊರಗೊಂದು ನೀಗಲಿದೆ. ಜನಪ್ರತಿನಿಧಿಗಳ ಕೆಲಸಗಳಿಗೆ ಜನರ ಪ್ರೇರಣೆಯೇ ಬಹುಮುಖ್ಯ ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಶಿವಗಂಗಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರಯ್ಯ, ಉಪಾಧ್ಯಕ್ಷ ರೇಣುಕಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷೆ ವಸಂತಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಜಯದೇವಪ್ಪ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ         ಎಸ್.ಎಚ್.ರಾಜಶೇಖರಪ್ಪ, ಉಪ ವಿಭಾಗಾಧಿಕಾರಿ ಎಂ.ಶಿಲ್ಪಾ, ಜಿಲ್ಲಾ ಬಿಜೆಪಿಯ ನಂದೀಶ್, ಗ್ರಾ.ಪಂ.ಸದಸ್ಯರು, ವಿವಿಧ ಇಲಾಖೆ ಆಧಿಕಾರಿಗಳು ಇದ್ದರು.ಪಂಚಾಯಿತಿ ಕಟ್ಟಡಕ್ಕೆ ಭೂಮಿ ದಾನ ಮಾಡಿದ ಅನಂತರಾಮಶೆಟ್ಟಿ ಮತ್ತು  ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪಿಡಿಒ ಜಯಶೀಲ ಸ್ವಾಗತಿಸಿದರು. ನಾಗರಾಜು ವಂದಿಸಿದರು.ಅಂಬಾ ಭವಾನಿಗೆ ಶರನ್ನವರಾತ್ರಿ

ಶಿರಾ: ಲಾಡಪುರದ ಅಂಬಾ ಭವಾನಿ,  ಆಂಜನೇಯಸ್ವಾಮಿ ದೇಗುಲದಲ್ಲಿ ಅ. 16ರಿಂದ 24ರವರೆಗೆ ಶರನ್ನವರಾತ್ರಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಖಿಲ ಕರ್ನಾಟಕ ಲಾಡರ ಸಂಘದಿಂದ ಏರ್ಪಡಿಸಿರುವ ಈ ಕಾರ್ಯಕ್ರಮಗಳಲ್ಲಿ ವಿಶೇಷ ಅಭಿಷೇಕ, ಸಹಸ್ರನಾಮ, ಕುಂಕುಮಾರ್ಚನೆ ನಡೆಯಲಿವೆ.ವಿಜಯದಶಮಿಯಂದು (ಅ 24) ಬನ್ನಿಮಂಟಪಕ್ಕೆ ಪಲ್ಲಕ್ಕಿ ಉತ್ಸವ, ಸಾಮೂಹಿಕ ಶಮೀ ಪೂಜೆ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry