ಜಾತಿ ಲೆಕ್ಕಾಚಾರದ ಜಿದ್ದಾಜಿದ್ದಿಯ ಹರಿಹರ

7

ಜಾತಿ ಲೆಕ್ಕಾಚಾರದ ಜಿದ್ದಾಜಿದ್ದಿಯ ಹರಿಹರ

Published:
Updated:

ದಾವಣಗೆರೆ: ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಹರಿಹರವೂ ಪ್ರಮುಖವಾದ ಕ್ಷೇತ್ರ. ಈ ಕ್ಷೇತ್ರ ಹರಿಹರೇಶ್ವರನ ನೆಲೆಯಿಂದಾಗಿ ಐತಿಹಾಸಿಕವಾಗಿ ಖ್ಯಾತಿ ಪಡೆದರೆ, ರಾಜಕೀಯವಾಗಿ ಜಿದ್ದಾಜಿದ್ದಿ ಚುನಾವಣೆಗೆ ಪ್ರಸಿದ್ಧಿಯಾಗಿದೆ.ಜಾತಿ ಲೆಕ್ಕಾಚಾರವೇ ಪ್ರಧಾನಪಾತ್ರ ವಹಿಸುವ ಈ ಕ್ಷೇತ್ರದಲ್ಲಿ ಪಕ್ಷಗಳ ಪ್ರಾಬಲ್ಯಕ್ಕೆ ಮೊದಲಿನಿಂದಲೂ ಎರಡನೇ ಸ್ಥಾನ. ಕೇವಲ ಎರಡು ಹೋಬಳಿಯ ವ್ಯಾಪ್ತಿ ಹೊಂದಿರುವ (ಮಲೇಬೆನ್ನೂರು ಹಾಗೂ ಕಸಬ) ಚಿಕ್ಕ ವಿಧಾನಸಭಾ ಕ್ಷೇತ್ರವಾದರೂ, ಇಲ್ಲಿನ ಜಾತಿ, ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಉನ್ನತಮಟ್ಟದಲ್ಲಿದೆ. ಆ ಕಾರಣಕ್ಕಾಗಿಯೇ ಇಲ್ಲಿನ ಮತದಾರ ಪಕ್ಷಕ್ಕಿಂತ ಜಾತಿಯ ಅಭ್ಯರ್ಥಿಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಬಂದಿರುವುದು ಇತಿಹಾಸದಿಂದ ತಿಳಿದುಬರುತ್ತದೆ.ಕ್ಷೇತ್ರದಲ್ಲಿ 1,87,016 ಮತದಾರರು ಇದ್ದಾರೆ. ಅವರಲ್ಲಿ 94,924 ಪುರುಷ ಹಾಗೂ 92,92 ಮಹಿಳಾ ಮತದಾರರು. ಹೆಚ್ಚಿನ ಭಾಗ ನೀರಾವರಿ ಕೃಷಿ ಪ್ರದೇಶವನ್ನೇ ಹೊಂದಿರುವ ಇಲ್ಲಿನ ಬಹುತೇಕ ಮತದಾರರು ಪ್ರಬುದ್ಧರು. ಲಿಂಗಾಯತರು, ಕುರುಬರು ಹಾಗೂ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಸ್ಪರ್ಧಿಗಳು ಬಹುತೇಕವಾಗಿ ಲಿಂಗಾಯತ, ಇಲ್ಲವೇ, ಕುರುಬ ಸಮುದಾಯಕ್ಕೆ ಸೇರಿದವೇ ಇರುತ್ತಾರೆ. ಈ ಬಾರಿಯೂ ಬಹುತೇಕ ಪಕ್ಷಗಳು ಲಿಂಗಾಯತ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿವೆ. ಇಟ್ಟಿಗೆ ಭಟ್ಟಿ, ಮರಳು ಗಣಿಗಾರಿಕೆಗೆ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದ ಪ್ರತಿ ಚುನಾವಣೆಯಲ್ಲೂ ಜಾತಿವಾರು ಆಧಾರದಲ್ಲಿ ಜಿದ್ದಾಜಿದ್ದಿ ಕಣವಾಗುತ್ತದೆ. ಕೆಲ ವರ್ಷಗಳಿಂದ ಈಚೆಗೆ ಲಿಂಗಾಯತ ಒಳಪಂಗಡಗಳ ನಡುವೆಯೂ ಸ್ಪರ್ಧೆ ಹುಟ್ಟಿಕೊಂಡಿದೆ.1952ರಲ್ಲಿ ಮೊದಲಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್. ಸಿದ್ದವೀರಪ್ಪ 12,760 ಮತಗಳನ್ನು ಪಡೆದು ಎಂ. ರಾಮಪ್ಪ ಅವರನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದ್ದರು. 1957ರಲ್ಲಿ ಅದೇ ರಾಮಪ್ಪ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ 22,212 ಮತ ಪಡೆದು ಸಿದ್ದವೀರಪ್ಪ ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು.1962ರಲ್ಲಿ ಗಾಂಜಿ ವೀರಪ್ಪ, 67 ಹಾಗೂ 72ರಲ್ಲಿ ಮತ್ತೆ ಎರಡು ಬಾರಿ ಸಿದ್ದವೀರಪ್ಪ, 78ರಲ್ಲಿ ಕಾಂಗ್ರೆಸ್‌ನ ಎಚ್.ಪಿ. ಬಸವಣ್ಣಗೌಡ, 1980ರಲ್ಲಿ ಕಾಂಗ್ರೆಸ್‌ನಿಂದ ಶಿವಪ್ಪ, 83ರಲ್ಲಿ ಜನತಾ ಪಕ್ಷದಿಂದ ಕೆ. ಮಲ್ಲಪ್ಪ, 85ರಲ್ಲಿ ಜನತಾ ಪಕ್ಷದವರೇ ಆದ ಕೊಟ್ರಪ್ಪ, 89ರಲ್ಲಿ ಕಾಂಗ್ರೆಸ್‌ನ ಡಾ.ವೈ. ನಾಗಪ್ಪ, 94ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್. ಶಿವಪ್ಪ ಗೆಲುವು ಸಾಧಿಸಿದ್ದರು. 99ರಲ್ಲಿ ನಡೆದ ಚುನಾವಣೆಯಲಿ ಕಾಂಗ್ರೆಸ್‌ನ ಡಾ.ವೈ.ನಾಗಪ್ಪ ಪುನರಾಯ್ಕೆಯಾಗಿದ್ದರು.2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟಿತ್ತು. ಈ ಚುನಾವಣೆ ಎಷ್ಟು ಪೈಪೋಟಿ ಇತ್ತು ಎಂದರೆ, ಅಂದು ಗೆಲುವು ಸಾಧಿಸಿದ ಕಾಂಗ್ರೆಸ್‌ನ ಡಾ.ವೈ. ನಾಗಪ್ಪ 40,366 ಮತ ಪಡೆದರೆ, ಜೆಡಿಎಸ್‌ನ ಎಚ್. ಶಿವಪ್ಪ 39,797 ಹಾಗೂ ಬಿಜೆಪಿಯ 37,424 ಮತ ಪಡೆದಿದ್ದರು. ಕಣದಲ್ಲಿದ್ದ ಇತರ ಐವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.2008ರಲ್ಲಿ ನಡೆದ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳನ್ನು ಮಣಿಸಿದ ಬಿಜೆಪಿಯ ಬಿ.ಪಿ. ಹರೀಶ್ 47,123 ಮತ ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ಎಚ್. ಶಿವಪ್ಪ 35,143 ಹಾಗೂ ಕಾಂಗ್ರೆಸ್‌ನ ಡಾ.ವೈ. ನಾಗಪ್ಪ 35,596 ಮತ ಪಡೆದಿದ್ದರು.

ಇಲ್ಲಿಯವರೆಗೆ 14 ವಿಧಾನಸಭಾ ಚುನಾವಣೆ ಕಂಡಿರುವ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಲ್ಲಿ ಎಚ್. ಸಿದ್ದವೀರಪ್ಪ, ಎಚ್. ಶಿವಪ್ಪ, ಡಾ.ವೈ. ನಾಗಪ್ಪ ಸಚಿವ ಪದವಿ ಅಲಂಕರಿಸಿದ್ದಾರೆ. ಮೇ 5ರಂದು ಚುನಾವಣೆಗೆ ಮತ್ತೆ ಕಣ ರಂಗೇರುತ್ತಿದ್ದು, ಈ ಬಾರಿ ಜೆಡಿಎಸ್‌ನಿಂದ ಮಾಜಿ ಸಚಿವ ಎಚ್. ಶಿವಪ್ಪ ಅವರ ಪುತ್ರ ಎಚ್.ಎಸ್. ಶಿವಶಂಕರ್, ಈ ಹಿಂದೆ ಬಿಜೆಪಿಯಿಂದ ಗೆಲುವು  ಸಾಧಿಸಿದ್ದ ಬಿ.ಪಿ. ಹರೀಶ್ ಕೆಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದರೆ, ಕಾಂಗ್ರೆಸ್ ಡಾ.ನಾಗಪ್ಪ ಅವರಿಗೆ `ಕೈ' ಕೊಟ್ಟು ಹೊಸಮುಖ ರಾಮಪ್ಪ ಅವರಿಗೆ ಮಣೆ ಹಾಕಿದೆ. ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry