`ಜಾತಿ-ವ್ಯಕ್ತಿ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಡ'

7

`ಜಾತಿ-ವ್ಯಕ್ತಿ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಡ'

Published:
Updated:

ಬೆಂಗಳೂರು: `ಜಾತಿ ಕೇಂದ್ರಿತ ಹಾಗೂ ವ್ಯಕ್ತಿ ಪ್ರಧಾನವಾದ ಪಕ್ಷಕ್ಕಿಂತ ಜನ ಕಲ್ಯಾಣದ ಜವಾಬ್ದಾರಿ ಹೊರುವಂತಹ ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಅಗತ್ಯವಾಗಿದೆ' ಎಂಬ ಆಶಯ ಶುಕ್ರವಾರ ನಗರದಲ್ಲಿ ನಡೆದ `ಪ್ರಾದೇಶಿಕ ಪಕ್ಷ-ನಮ್ಮ ಪರಿಕಲ್ಪನೆ' ಸಂವಾದದಲ್ಲಿ ವ್ಯಕ್ತವಾಯಿತು.ಕರ್ನಾಟಕ ಸ್ವಾಭಿಮಾನಿ ವೇದಿಕೆ ಸಂವಾದವನ್ನು ಆಯೋಜಿಸಿತ್ತು. ಚರ್ಚೆಗೆ ನಾಂದಿ ಹಾಡಿದ ವೇದಿಕೆ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, `ದೇಶದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ರಾಜ್ಯದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಕೇಂದ್ರದಲ್ಲಿ ಇನ್ನುಮುಂದೆ ಏಕಪಕ್ಷದ ಸರ್ಕಾರ ಅಸಾಧ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತರಕ್ಷಣೆ ಆಗಬೇಕಾದರೆ ಕೇಂದ್ರ ಸರ್ಕಾರದ ಜುಟ್ಟು ಹಿಡಿದು ಅಲುಗಾಡಿಸುವಂತಹ ಪ್ರಾದೇಶಿಕ ಪಕ್ಷ ಅಗತ್ಯವಾಗಿದೆ' ಎಂದರು.`ರಾಜ್ಯದ ಚಾರಿತ್ರಿಕ ಹಾಗೂ ಭೌಗೋಳಿಕ ಹಿನ್ನೆಲೆ ಗೊತ್ತಿರದ ರಾಷ್ಟ್ರೀಯ ಪಕ್ಷದ ಮುಖಂಡರಿಂದ ಈ ನೆಲದ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಿಲ್ಲ. ಅಕ್ಕ-ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ವಿ ಆಗಿರುವಾಗ ನಮ್ಮಿಂದ ಏಕೆ ಸಾಧ್ಯವಿಲ್ಲ' ಎನ್ನುವ ಪ್ರಶ್ನೆ ಎತ್ತಿದರು.ಚರ್ಚೆಯಲ್ಲಿ ಪಾಲ್ಗೊಂಡ ಕೆಜೆಪಿ ಉಪಾಧ್ಯಕ್ಷ ಕೆ.ಎಚ್. ಶ್ರೀನಿವಾಸ್, `ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಹಲವು ದೋಷಗಳಿವೆ. `ಪ್ರಬಲ ಕೇಂದ್ರ, ದುರ್ಬಲ ರಾಜ್ಯ' ಎನ್ನುವುದು ಅದರ ಆಶಯವಾಗಿದೆ. ರಾಜ್ಯಕ್ಕೆ ಸ್ವಾಯತ್ತ ಸ್ವರೂಪ ನೀಡಲಾಗಿಲ್ಲ. ಹೀಗಾಗಿ ನಮ್ಮ ಹಿತರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಿದ್ದು, ಅದಕ್ಕೆ ಪ್ರಾದೇಶಿಕ ಪಕ್ಷ ದಾರಿಯಾಗಿದೆ' ಎಂದು ವಿಶ್ಲೇಷಿಸಿದರು.

`ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಎಂಬುದು ಅನಿಷ್ಟ ಪದ್ಧತಿಯಾಗಿದ್ದು, ರಾಜ್ಯದ ಮುಖಂಡರಿಗೆ ಸ್ವಂತಿಕೆ ಇಲ್ಲ. ಸ್ವಂತಿಕೆ ಇಲ್ಲದವರಿಂದ ಏನೂ ಸಾಧಿಸಲು ಸಾಧ್ಯವಿಲ್ಲ' ಎಂದು ತಿಳಿಸಿದರು.ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಸಿ.ಎಸ್. ದ್ವಾರಕಾನಾಥ್, `ರಾಜ್ಯದ ಯಾವುದೇ ಪ್ರಮುಖ ಸಮಸ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಕ್ಷಗಳಲ್ಲಿ ನಿಖರವಾದ ನಿಲುವೇ ಇರುವುದಿಲ್ಲ. ಕಾವೇರಿ ವಿಷಯವಾಗಿ ರಾಜ್ಯದಲ್ಲಿ ಕನ್ನಡಿಗರ ಪರ ಧ್ವನಿ ಎತ್ತುವ ಈ ಪಕ್ಷಗಳು, ತಮಿಳುನಾಡಿನಲ್ಲಿ ಅವರ ಪರ ವಕಾಲತ್ತು ವಹಿಸುತ್ತವೆ' ಎಂದು ಛೇಡಿಸಿದರು.ಜಾತಿಯನ್ನು ಪೋಷಿಸುವಲ್ಲಿ ಬಿಜೆಪಿ ಹೆಡೆ ಎತ್ತಿದ ಹಾವಾದರೆ, ಕಾಂಗ್ರೆಸ್ ಹುಲ್ಲಿನಲ್ಲಿ ಅಡಗಿಕೊಂಡ ಹಾವು. ಇವುಗಳನ್ನು ಓಡಿಸಲು ಯಾವ ದೊಣ್ಣೆ ತೆಗೆದುಕೊಂಡರೂ ತಪ್ಪಿಲ್ಲ. ಸಾಮಾಜಿಕ ನ್ಯಾಯ ಪ್ರಾದೇಶಿಕ ಪಕ್ಷ ನಮಗೆ ಬೇಕು. ಅಂತಹ ಪಕ್ಷವು ಕೆಳಜಾತಿಗಳ ಕೈಗೆ ಅಧಿಕಾರ ಕೊಡಬೇಕು' ಎಂದರು.`ಮಾಧ್ಯಮಗಳು ಸಹ ಮೇಲ್ಜಾತಿ ಪರವೇ ಕೆಲಸ ಮಾಡುತ್ತವೆ' ಎಂದರು. `ಪ್ರಾದೇಶಿಕ ಪಕ್ಷಗಳು ಬಲಾಢ್ಯವಾಗಿ ಇರುವೆಡೆಗಳಲ್ಲಿ ಭ್ರಷ್ಟಾಚಾರವೂ ಮಿತಿಮೀರಿದೆ. ಇಂತಹ ರಾಜಕೀಯ ವ್ಯವಸ್ಥೆಯಿಂದ ಏನು ಪ್ರಯೋಜನ' ಎಂಬ ಪ್ರಶ್ನೆ ಸಭಿಕರಿಂದ ಕೇಳಿಬಂತು. `ಎಲ್ಲ ಭ್ರಷ್ಟರನ್ನು ಹೊರಗೆ ಇಡುವುದಾದರೆ ದೇಶದಲ್ಲಿ ರಾಜಕೀಯ ವ್ಯವಸ್ಥೆಯೇ ಇರುವುದಿಲ್ಲ' ಎಂದು ಶ್ರೀನಿವಾಸ್ ಅವರು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry