ಜಾತಿ ಸಂವಾದ : ಜಾತಿ ಏಕೆ? ಜಾತಿ ಬೇಕೆ?

7

ಜಾತಿ ಸಂವಾದ : ಜಾತಿ ಏಕೆ? ಜಾತಿ ಬೇಕೆ?

Published:
Updated:

ಜಾತಿ ಸಂವಾದ

ಕನ್ನಡಕ್ಕೆ: ಮಾಧವ ಚಿಪ್ಪಳಿನಮ್ಮ ಸಮಾಜದಲ್ಲಿ ಜಾತಿ ನಿರ್ಮೂಲನದ ಪ್ರಯತ್ನವು ಹಲವು ರೀತಿಗಳಲ್ಲಿ ನಡೆಯುತ್ತಿದ್ದರೂ ಜಾತಿಯು ಹೆಚ್ಚು ಹೆಚ್ಚು ಅಸಹ್ಯಕರ ರೀತಿಯಲ್ಲಿ ತಲೆಯೆತ್ತುತ್ತಿದೆ, ಸಂಘಟಿತಗೊಳ್ಳುತ್ತಿದೆ ಮತ್ತು ಬೇರೂರುತ್ತಿದೆ. ನಮ್ಮಲ್ಲಿ ಸದಾ ಜಾಗೃತವಾಗಿರುವ ಮತ್ತು ತಿಳಿದೂ ತಿಳಿಯದಂತೆ ಬಲಗೊಂಡಿರುವ ಜಾತಿ ಪ್ರಜ್ಞೆಯು ಕೌಟುಂಬಿಕ ನೆಲೆಗಳಿಗೆ ಸೀಮಿತಗೊಳ್ಳದೆ ರಾಜಕೀಯ ರಂಗವನ್ನೂ ವ್ಯಾಪಿಸಿದೆ; ಖಾಸಗಿಯಾಗಿರುವಂಥದ್ದು ಸಾರ್ವಜನಿಕವಾಗಿದೆ.

ಪ್ರಸ್ತುತ ಭಾರತದಲ್ಲಿ ಜಾತಿ ಅಂಟಿಕೊಂಡಿರುವುದು ಕೇವಲ ವ್ಯಕ್ತಿಗಳಿಗಲ್ಲ. ವಿದ್ಯಾಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ವ್ಯಾಪಾರ ವ್ಯವಹಾರದ ಜಗತ್ತುಗಳೂ ಜಾತಿಯ ಹಣೆಪಟ್ಟಿ ಕಟ್ಟಿಕೊಂಡಿವೆ. ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳನ್ನು ಜಾತಿಯ ಮೂಲಕ ಗುರುತಿಸುತ್ತಾರೆ ಎಂಬುದು ಕುತೂಹಲದ ವಿಚಾರ. ಮೈಸೂರು ವಿಶ್ವವಿದ್ಯಾಲಯ `ಒಕ್ಕಲಿಗರ ಯೂನಿವರ್ಸಿಟಿ', ಧಾರವಾಡ ವಿಶ್ವವಿದ್ಯಾಲಯ ಲಿಂಗಾಯಿತರದ್ದು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ ದಲಿತರದ್ದು ಎಂದು ಜನರು ಯಾಕೆ ಕರೆಯುತ್ತಾರೆ? ಇವತ್ತಿನ ದಿನಗಳಲ್ಲಿ ನಮ್ಮನ್ನು ನಾವು ವ್ಯಕ್ತಿಯಾಗಿ, ಗುಂಪಾಗಿ ಅಥವ ಸಂಸ್ಥೆ, ಸಂಘಟನೆಗಳಾಗಿ ಗುರುತಿಸಿಕೊಳ್ಳಲಿಕ್ಕೆ ಜಾತಿಯು ಅನಿವಾರ್ಯವಾಗಿದೆಯೇ? ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಇತ್ತೀಚೆಗೆ ನಡೆದ ದೊಡ್ಡಚರ್ಚೆಯು ಮೂಲತಃ ಜಾತಿಯ ಬಗೆಗಿನ ಚರ್ಚೆಯೇ. ಈ ರೀತಿಯ ವಿದ್ಯಮಾನಗಳು ಭಾರತದೆಲ್ಲೆಡೆ ಪದೇ ಪದೇ ಕಂಡುಬರುತ್ತಿವೆ.ನಮ್ಮ ಸಮಾಜದಲ್ಲಿ ಜಾತಿಯು ಹಲವು ಕಾರಣಗಳಿಗಾಗಿ ಸಂಘಟಿತಗೊಳ್ಳುತ್ತದೆ, ಬಲಗೊಳ್ಳುತ್ತದೆ. ಈ ಸಂಘಟನೆಯ ಫಲವಾಗಿ ಜಾತಿಯ ಅಸಹ್ಯಕರ ವಾಡಿಕೆಗಳು ಪುನಃ ರೂಢಿಗೆ ಬರುತ್ತಿವೆ. ಹಾಗೆಂದು ಜಾತಿ ಸಂಘಟನೆಯನ್ನು ಸಾರಾಸಗಟು ಕಡೆಗಣಿಸಿ ತಳ್ಳಿಹಾಕುವಂತೆಯೂ ಇಲ್ಲ. ಈ ಸಂಘಟನೆಗಳಿಂದಲೇ ಶೋಷಿತ ಸಮುದಾಯಗಳು ಬಲಗೊಂಡು ಹಲವು ರೀತಿಯ ಅನ್ಯಾಯಗಳ ವಿರುದ್ಧ ತಮ್ಮ ಕೆಚ್ಚಿನ ದನಿಯೆತ್ತಲು ಸಾಧ್ಯವಾಗಿದ್ದು. ಜಾತಿ ಸಮಸ್ಯೆಯು ಹೀಗೆ ಸಂಕೀರ್ಣವಾಗಿರುವಾಗ ಇದೇ ಸಮಾಜದ ಭಾಗವಾಗಿರುವ ನಾವು ಜಾತಿಯ ವಿಚಾರವಾಗಿ ಏನು ಮಾಡಬೇಕು?

ಎಂದೋ ಮರೆತ ಜಾತಿ ಸಂಬಂಧಿ ವಾಡಿಕೆಗಳನ್ನು ಮತ್ತು ಪೂರ್ವಗ್ರಹಗಳನ್ನು ಮತ್ತೆ ಜಾರಿಗೆ ತರಬೇಕೇ? ಅಥವ ಹೊಸ ವಾಡಿಕೆಗಳನ್ನು ಸೃಷ್ಟಿಸಬೇಕೇ? ಅಥವಾ ನಮ್ಮ ಸಂವಿಧಾನವು ಯಾವುದನ್ನು ಆದರ್ಶವೆಂದು ಪರಿಗಣಿಸುತ್ತದೋ ಆ ರೀತಿಯ ಜಾತಿರಹಿತ ಸಮಾಜಕ್ಕಾಗಿ ಒತ್ತಾಯವನ್ನು ಮಂಡಿಸಬೇಕೇ? ಕೆಲವು ಜಾತಿಗಳು ಅನುಭವಿಸುತ್ತಿರುವ ವಿಶೇಷ ಸವಲತ್ತು,ವಿನಾಯಿತಿಗಳನ್ನು ಇಲ್ಲವಾಗಿಸದೆ ಜಾತಿರಹಿತ ಸಮಾಜವು ಸಾಧ್ಯವಾಗುವುದೇ ? ಸಾಧ್ಯವಾದರೆ ಅದು ಅಪೇಕ್ಷಣೀಯವೇ?

ಜಾತಿಪ್ರಜ್ಞೆಯನ್ನೂ ಜಾತಿಯೊಂದಿಗೆ ನಮ್ಮ ಸಮಾಜವು ಹಾಕಿಕೊಂಡಿರುವ ತಳಕುಗಳನ್ನೂ ಕಿತ್ತೆಸೆದರೆ ನಮ್ಮ ಸಮಾಜ ಹೇಗಿರಬಹುದು?ಜಾತಿಯ ಪ್ರಶ್ನೆಯು ಮೂಲಭೂತವಾಗಿ ಹಿಂದೂ ಸಮುದಾಯಕ್ಕೆ ಸೀಮಿತವೆಂದು ಕಂಡುಬಂದರೂ ಇತರ ಧರ್ಮಗಳಲ್ಲಿಯೂ ಜಾತಿ ಪ್ರಜ್ಞೆ ಜಾಗೃತವಾಗಿರುವುದನ್ನು ಹಲವು ಅಧ್ಯಯನಗಳು ತೋರಿಸುತ್ತವೆ.

ಜಾತಿ ಪ್ರಜ್ಞೆ ಮತ್ತು ಜಾತಿಯ ಆಚರಣೆಗಳು ಭಾರತದೆಲ್ಲೆಡೆಯೂ ಇರುವಂತಹದ್ದು. ಈ ಆಚರಣೆಗಳು ಎಲ್ಲೆಡೆಯೂ ಒಂದೇ ರೀತಿ ಇಲ್ಲದಿರಬಹುದು. ಜಾತಿಗಳೊಳಗೆ ನೂರಾರು ಉಪಜಾತಿಗಳು ಅವುಗಳ ವರ್ಗೀಕರಣ, ಅವುಗಳ ಗುಣಗಳು ಪರಸ್ಪರ ಭಿನ್ನವಾಗಿದ್ದರೂ ದಲಿತ, ಬ್ರಾಹ್ಮಣ, ಇವುಗಳ ನಡುವೆ ಬರುವ ಹಲವು ನಡುಜಾತಿಗಳು ಎಲ್ಲೆಡೆಯೂ ಕಂಡುಬರುತ್ತವೆ. ದಲಿತ, ಬ್ರಾಹ್ಮಣ, ನಡುಜಾತಿ ಎಂಬ ವರ್ಗೀಕರಣದ ಒಳಗೇ ದೊಡ್ಡ ಸಂಖ್ಯೆಯ ಉಪಜಾತಿಗಳು ಇವೆ.

ಕೆಲವು ಜಾತಿಗಳು ಈ ವರ್ಗೀಕರಣಕ್ಕೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ. ಉದಾಹರಣೆಗೆ, ವಿಶ್ವಕರ್ಮರನ್ನು ಕೆಲವು ಪ್ರದೇಶಗಳಲ್ಲಿ ಬ್ರಾಹ್ಮಣರೆಂದೂ, ಕೆಲವು ಕಡೆ ನಡುಜಾತಿಗೆ ಸೇರಿದವರೆಂದೂ, ಉಳಿದೆಡೆ ದಲಿತರೆಂದೂ ಪರಿಗಣಿಸಲಾಗುತ್ತದೆ. ಜಾತಿಯ ಅಸ್ತಿತ್ವ ಇಷ್ಟು ಸಂಕೀರ್ಣವಾಗಿರುವಾಗ ತಾನು ಇಂಥಾ ನಿರ್ದಿಷ್ಟ ಜಾತಿಗೆ ಸೇರಿದ್ದೇನೆ ಎಂದು ಹೇಳಿಕೊಳ್ಳುವುದರ ಅರ್ಥವೇನು?

ಇಡೀ ದೇಶದುದ್ದಕ್ಕೂ ಜಾತಿಯನ್ನು ಕಾಪಾಡಿಕೊಂಡು ಬಂದಿರುವ ಅದೃಶ್ಯ ಶಕ್ತಿ ಯಾವುದು? ಕುಟುಂಬ ಎಂಬ ಪರಿಕಲ್ಪನೆಯೇ ಜಾತಿಯ ಆಚರಣೆಗಳನ್ನು ಉಳಿಸಿಕೊಂಡು ಬರುತ್ತಿದೆಯೇ? ನಮ್ಮಲ್ಲಿ ಹಲವರು ಜಾತಿಯನ್ನು ನಂಬದವರು, ಅದನ್ನು ಅನುಸರಿಸದವರು ಎಂದು ಹೇಳಿಕೊಂಡರೂ ಜಾತಿಯ ಆಚರಣೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ವಾಡಿಕೆಗಳಾಗಿ ಸೇರಿಕೊಂಡಿವೆ. ಅವುಗಳನ್ನು ಹೆಚ್ಚಿನ ಸಾರಿ ಗುರುತಿಸುವುದೂ ಕಷ್ಟ. ನಮಗೆ ಗೊತ್ತಾಗದೆ ಹಾಗೆ ನಾವು ಜಾತಿಯನ್ನು ಆಚರಿಸುವ ಸಾಧ್ಯತೆಯೂ ಇಲ್ಲದಿಲ್ಲ.

ಜಾತಿಯೊಳಗೆ ನಾವು ಸೇರಿಕೊಂಡಿರುವುದು ಮತ್ತು ಜಾತಿ ನಮ್ಮಳಗೆ ಸೇರಿಕೊಂಡಿರುವುದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಓದುಗರು ಕೆಳಕಂಡ ಪ್ರಶ್ನೆಗಳ ಬಗ್ಗೆ ಯೋಚಿಸಬಹುದು: ನೀವು ಯಾವ ಜಾತಿಗೆ ಸೇರಿದ್ದೀರಿ ಎಂಬುದು ನಿಮಗೆ ಗೊತ್ತಿದೆಯೇ? ನಿಮ್ಮ ಜಾತಿ ಯಾವುದು ಎಂಬುದು ನಿಮಗೆ ಮೊದಲ ಬಾರಿ ತಿಳಿದಾಗ ನಿಮ್ಮ ವಯಸ್ಸೆಷ್ಟಾಗಿತ್ತು? ಅದು ತಿಳಿದದ್ದು ಹೇಗೆ? ಜಾತಿ ಎಂಬುದು ನಮ್ಮ ಖಾಸಗಿ ಆಚರಣೆಗೆ, ಕುಟುಂಬದ ಒಳಗಿನ ವ್ಯವಹಾರಗಳಿಗೆ ಸಂಬಂಧಿಸಿದ್ದು, ಅದಕ್ಕೂ ನಮ್ಮ ಸಾರ್ವಜನಿಕ ಬದುಕಿಗೂ ಯಾವ ಸಂಬಂಧವೂ ಇಲ್ಲ ಎಂದು ಹಲವರು ಯೋಚಿಸಬಹುದು. ಆದರೆ ಅದು ಹಾಗಿಲ್ಲದಿರಬಹುದಲ್ಲವೇ?ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಿಮ್ಮ ಜಾತಿ ಯಾವುದು ಎಂದು ತಿಳಿದಿದೆಯೇ? ನಿಮ್ಮ ಪಕ್ಕದ ಮನೆಯವರ ಜಾತಿ ನಿಮಗೆ ಮತ್ತು ನಿಮ್ಮ ಜಾತಿ ಅವರಿಗೆ ತಿಳಿದಿದೆಯೇ? ನಿಮ್ಮ ನೆರೆಹೊರೆಯವರಲ್ಲಿ ಹೆಚ್ಚಿನವರು ನಿಮ್ಮ ಜಾತಿಗೇ ಸೇರಿದ್ದಾರೆಯೇ? ನಿಮ್ಮ ಆತ್ಮೀಯ ಗೆಳೆಯರ ಪೈಕಿ ಎಷ್ಟು ಜನರು ಬೇರೆ ಜಾತಿಗಳಿಗೆ ಸೇರಿದವರು?

ನಾವು ಕೇಳುವ ಪ್ರಮುಖ ಪ್ರಶ್ನೆಯೆಂದರೆ ಜಾತಿ ರಹಿತ ಸಮಾಜವನ್ನು ಕಲ್ಪಿಸಿಕೊಳ್ಳಲು ನಮಗೆ ಸಾಧ್ಯವೇ ಎಂಬುದು. ಈ ಪ್ರಶ್ನೆಯನ್ನು ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸಲು `ಪ್ರಜಾವಾಣಿ' ಮುಂದಾಗಿದೆ. ಸಾರ್ವಜನಿಕರು ಜಾತಿಯ ಬಗ್ಗೆ ಹೇಗೆ ಯೋಚಿಸುತ್ತಾರೆ ಎಂಬುದನ್ನು ಹಲವರು ಹಲವು ರೀತಿಗಳಲ್ಲಿ ವ್ಯಕ್ತಪಡಿಸುವುದನ್ನು ನಾವು ಕಾಣಬಹುದು. ಜನರು ತಮ್ಮ ಜಾತಿಯ ವ್ಯಕ್ತಿಗೆ ಮಾತ್ರ ಮತವನ್ನು ನೀಡುತ್ತಾರೆ ಎಂಬುದು ರಾಜಕಾರಣಿಗಳ ಅಂಬೋಣ. ಕೆಲವು ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ಳುವಾಗ ನಿರ್ದಿಷ್ಟ ಜಾತಿಯವರನ್ನು ಆರಿಸುತ್ತಾರೆ ಎಂಬ ಮಾತೂ ಕೇಳಿಬರುತ್ತದೆ. ಈ ವಿಚಾರದ ಬಗ್ಗೆ ಜನ ಸಾಮಾನ್ಯರು ಏನುಹೇಳುತ್ತಾರೆ? ಅವರು ತಮ್ಮ ಜಾತಿಯವರಿಗೆ ಮಾತ್ರವೇ ಮತವನ್ನು ನೀಡುತ್ತಾರೆಯೇ? ಅವರು ಜಾತಿಯ ರೂಢಿಯನ್ನುಮುಂದುವರೆಸುತ್ತಾರೆಯೇ?

ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜಾತಿ ಪರಿಕಲ್ಪನೆಯ ವಾಸ್ತವ ಯಾವ ರೀತಿ ಇದೆ ಎಂಬುದು ಈ ಸಾರ್ವಜನಿಕ ಚರ್ಚೆಯ ಮೂಲಕ ತಿಳಿಯಬೇಕೆಂಬುದು ನಮ್ಮ ಅಪೇಕ್ಷೆ. ಇವತ್ತಿಗೂ ನಡೆದುಕೊಂಡು ಬರುತ್ತಿರುವ ಜಾತಿ ಸಂಬಂಧಿತ ಆಚರಣೆಗಳ ಎಲ್ಲಾ ಮುಖಗಳನ್ನು ಅರ್ಥ ಮಾಡಿಕೊಳ್ಳುವುದು ಈ ಮಾಲಿಕೆಯ ಉದ್ದೆೀಶ. ತಮ್ಮ ಸಾರ್ವಜನಿಕ ಬದುಕಿನಲ್ಲಿ ಜಾತಿಯು ಯಾವ ರೀತಿಯ ಪರಿಣಾಮವನ್ನು ಬೀರಿದೆ ಎಂಬುದರ ಅನುಭವವನ್ನು ನಮ್ಮ ಓದುಗರು ನಮ್ಮಡನೆ ಹಂಚಿಕೊಳ್ಳಬೇಕೆಂದು ಕೇಳುತ್ತೇವೆ. ನಗರಗಳಲ್ಲಿ ಜಾತಿಯ ಸಮಸ್ಯೆಯೇ ಇಲ್ಲ. 

ಜಾತಿವ್ಯಾಧಿಗೆ ನಗರೀಕರಣವೇ ಮದ್ದು ಎಂದು ಹಲವು ಜನರು ನಂಬಿರುವಂತೆ ಕಾಣುತ್ತದೆ. ಇದು ಸತ್ಯವೇ? ನಗರಗಳಲ್ಲಿ ನಮ್ಮ ಓದುಗರು ಜಾತಿಯ ಸಮಸ್ಯೆಗಳನ್ನು ಎದುರಿಸಿದ ಉದಾಹರಣೆಗಳಿವೆಯೇ?

ತಾವು ಇಂತಹಾ ಜಾತಿಗೆ ಸೇರಿದ್ದೇವೆ ಎಂಬುದೇ ಹಲವರಿಗೆ ಹೆಮ್ಮೆಯ ವಿಚಾರವಾಗುತ್ತದೆ. ಜಾತಿ ಪ್ರಜ್ಞೆಯು ಬಲಗೊಳ್ಳುವಲ್ಲಿ ಇದೂ ಮಹತ್ವದ ಪಾತ್ರ ವಹಿಸುತ್ತದೆ. ಈ ದಿಶೆಯಲ್ಲಿ ನಾವು ಯೋಚಿಸಬೇಕಾದ ಪ್ರಶ್ನೆಗಳು ಇವು: ನೀವು ಯಾವ ಜಾತಿಯವರೋ ಆ ಜಾತಿಯಲ್ಲಿಯೇ ಇರಲು ನೀವು ಬಯಸುತ್ತೀರೇ?

ನಿಮ್ಮ ಜಾತಿಯನ್ನು ಒಂದರಿಂದ ಮತ್ತೊಂದಕ್ಕೆ ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಲ್ಪಿಸಿಕೊಂಡರೆ, ನೀವು ನಿಮ್ಮ ಜಾತಿಯನ್ನು ಬಿಟ್ಟು ಬೇರೆ ಯಾವುದಾದರೂ ಜಾತಿಗೆ ಸೇರಿಕೊಳ್ಳುತ್ತೀರಾ? ಸೋಪಾನ ವ್ಯವಸ್ಥೆ ಅಂದರೆ ಮೇಲು ಕೀಳೆಂಬ ಪ್ರಜ್ಞೆಯೇ ಜಾತಿ ಆಚರಣೆಯ ಮೂಲವೆಂದು ನೀವು ಅಂದುಕೊಳ್ಳುತ್ತೀರೇ? ನೀವು ನಿಮ್ಮ ಜಾತಿಯು ಮತ್ಯಾವುದೋ ಜಾತಿಗಿಂತ ಮೇಲು ಅಥವ ಕೀಳು ಎಂದು ತಿಳಿದಿದ್ದೀರಾ? ಹೌದಾದರೆ, ಯಾವ ರೀತಿಯಲ್ಲಿ ನೀವು ಅವರಿಗಿಂತ ಮೇಲು ಅಥವಾ ಕೀಳು?

ಮಹಿಳೆಯರು ಎಲ್ಲ ಜಾತಿಗಳಲ್ಲೂ ಪುರುಷರಿಂದ ತುಳಿತಕ್ಕೊಳಗಾದವರೆಂಬ ಭಾವನೆಯಿಂದ ಕೆಲವು ಚಿಂತಕರು ಮಹಿಳೆಯರನ್ನು ಬೇರೆಯದೇ ಜಾತಿಯೆಂದು ಕರೆದಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಲ್ಲ ಜಾತಿಗಳಲಿಯ್ಲೂ ಮಹಿಳೆಯರು ಪುರುಷರ ದಬ್ಬಾಳಿಕೆಗೆ ಒಳಗಾಗುತ್ತಾರೆಯೇ? ಇತರ ಜಾತಿಗಳಿಗೆ ಹೋಲಿಸಿದಲ್ಲಿ ಕೆಲವು ಜಾತಿಗಳಲ್ಲಿ ಸ್ತ್ರೀ ಪುರುಷರ ನಡುವಿನ ತಾರತಮ್ಯ ಕಡಿಮೆಯಿದೆಯೇ? ಹಲವು ಜಾತಿಗಳಿಗೆ ಸೇರಿದ ಮಹಿಳೆಯರು ತಮ್ಮ ಸ್ತ್ರೀ ಪ್ರಜ್ಞೆಯ ಮುಖಾಂತರ ಒಟ್ಟಾಗಿ ಜಾತಿಯನ್ನು ಮೀರುತ್ತಾರೆಯೇ?

ತಾವು ಇಂತಹಾ ನಿರ್ದಿಷ್ಟ ಜಾತಿಗೆ ಸೇರಿದವರೆಂಬ ಒಂದೇ ಕಾರಣಕ್ಕೆ ತಾರತಮ್ಯಕ್ಕೆ ಒಳಗಾಗಿದ್ದೆೀವೆ ಎಂದು ಹಲವರು ಹೇಳಿಕೊಳ್ಳುತ್ತಾರೆ. ನಿಮ್ಮ ಜಾತಿಯನ್ನೇ ಮುಂದು ಮಾಡಿಕೊಂಡು ನಿಮ್ಮನ್ನು ಕಡೆಗಣಿಸಿದ್ದೋ, ಅವಮಾನ ಮಾಡಿದ್ದೋ ಅಥವ ತುಳಿತಕ್ಕೊಳಪಡಿಸಿದ್ದೋ ನಿಮ್ಮ ಅನುಭವದಲ್ಲಿ ಇದೆಯೇ? ಹಾಗಾಗಿದ್ದೆೀ ಆದರೆ ಆಗ ನೀವು ಏನು ಮಾಡಿದಿರಿ? ಈ ಎಲ್ಲ ವಿಚಾರಗಳನ್ನೂ ನಮ್ಮ ಓದುಗರು ಹಂಚಿಕೊಂಡರೆ ನಮ್ಮ ಚರ್ಚೆಯು ಹೆಚ್ಚು ಅರ್ಥಪೂರ್ಣವಾಗುತ್ತದೆ.

ಜಾತಿಯ ಬಗ್ಗೆ ಸಕ್ರಿಯವಾಗಿ ಯೋಚಿಸುತ್ತಿರುವ, ಕೆಲಸ ಮಾಡುತ್ತಿರುವ ಹಲವರು ಈ ಮಾಲಿಕೆಯಲ್ಲಿ ಮುಂದಿನ ಕೆಲವು ತಿಂಗಳುಗಳ ಕಾಲ ಬರೆಯುತ್ತಾರೆ. ಈ ಲೇಖನಗಳು ನಮ್ಮ ಸಮಾಜದಲ್ಲಿ ಇರುವ ಜಾತಿಯ ಹಲವು ಮುಖಗಳನ್ನು ಚರ್ಚೆಗೆ ಒಡ್ಡುತ್ತವೆ. ಇದರ ಜೊತೆಗೆ ನಮ್ಮ ಓದುಗರ ಪಾಲ್ಗೊಳ್ಳುವಿಕೆಯೂ ಬಹಳ ಮುಖ್ಯ.

ಓದುಗರ ಪ್ರತಿಕ್ರಿಯೆಗಳು ನಿರ್ದಿಷ್ಟ ವ್ಯಕ್ತಿ ಅಥವ ಜಾತಿಯ ಬಗ್ಗೆ ನೀಡುವ ತೀರ್ಪಿನ ಧಾಟಿಯಲ್ಲಿ ಇರದೇ ಇವತ್ತು ನಡೆಯುತ್ತಿರುವ ಜಾತಿಯ ಆಚರಣೆಗಳನ್ನು ಮಾತ್ರ ನಿರೂಪಿಸಬೇಕು. ನಮ್ಮ ಸಮಾಜದಿಂದ ಜಾತಿಯ ನಿರ್ಮೂಲನ ಮಾಡಲು ಅಥವ ಜಾತಿ ಪ್ರಜ್ಞೆಯ ಬಗ್ಗೆ ಒಂದು ಸ್ಪಷ್ಟ ನಿಲುವನ್ನು ತಾಳಲು ನಮಗೆ ಇಂದಿಗೂ ಯಾಕೆ ಸಾಧ್ಯವಾಗಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ಈ ಮಾಲಿಕೆ.

ಜಾತಿಯು ಅನಿವಾರ್ಯವೇ? ನಾವು ಯಾವ ಜಾತಿಗೂ ಒಳಪಡುವುದಿಲ್ಲ ಎಂದಾದರೆ ಅದು ನಮ್ಮ ಬದುಕಿನ ಮೇಲೆ ಪರಿಣಾಮ ಮಾಡಬಹುದೇ? ಜನರು ತಮ್ಮ ಜಾತಿಯವರಿಗೆ ಮಾತ್ರ ಮತಗಳನ್ನು ನೀಡುತ್ತಾರೆ ಎಂದು ರಾಜಕಾರಣಿಗಳು ನಂಬುತ್ತಾರೆ ಎಂದು ನಾವು ಹೇಳಿದೆವು, ಪ್ರಾಜ್ಞ ಪ್ರಜೆಗಳಾಗಿ ನೀವು ಹೀಗೆ ಮಾಡುತ್ತೀರೇ?.ಈ ಪ್ರಶ್ನೆಗಳಿಗೂ ನಮ್ಮ ಓದುಗರು ಪ್ರತಿಕ್ರಿಯಿಸಬಹುದು.

ತಮ್ಮ ಖಾಸಗಿ ಆಚರಣೆಗಳು ಜಾತಿ ರೂಢಿಗಳನ್ನು ಎತ್ತಿ ಹಿಡಿಯುತ್ತವೆಯೋ ಎಂಬುದರ ಬಗ್ಗೆಯೂ ಓದುಗರು ಚಿಂತನೆ ನಡೆಸಬೇಕು. ಉದಾಹರಣೆಗೆ ಜಾತಿ ವಿನಾಶದ ಪರವಾಗಿ ನೀವು ಸಾರ್ವಜನಿಕವಾಗಿ ದನಿಯೆತ್ತುವವರಾದರೂ ನಿಮ್ಮ ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗುತ್ತಾರೆ ಎಂದರೆ ಅದಕ್ಕೆ ನೀವು ಸಮ್ಮತಿಸುತ್ತೀರಾ? ಎಲ್ಲಾ ದೇವಸ್ಥಾನಗಳಲ್ಲಿಯೂ  ಎಲ್ಲ ಜಾತಿಯವರಿಗೂ ಪ್ರವೇಶ ನೀಡಬೇಕು ಎಂಬುದನ್ನು ನೀವು ಒಪ್ಪುತ್ತೀರಾ?

ಜಾತಿಯನ್ನು ಅರ್ಥ ಮಾಡಿಕೊಳ್ಳಲು ಭಾರತದಲ್ಲಿ ಇಂದು ನಡೆಯುತ್ತಿರುವ ಪ್ರಕ್ರಿಯೆಗಳಲ್ಲಿ ಈ ಮಾಲಿಕೆಯು ಅನನ್ಯವಾದುದು. ಇದೊಂದು ಸಮಾಜ ಶಾಸ್ತ್ರೀಯ ಅಧ್ಯಯನ ಯೋಜನೆ. ಈ ಮಾಲಿಕೆಯಲ್ಲಿ ನಡೆಯುವ ಚರ್ಚೆಯನ್ನು, ಪ್ರಕಟಿಸಲಾಗುವ ಬರಹಗಳನ್ನು ಮುಂದಿನ ಅಧ್ಯಯನಗಳಿಗೆ ಸಹಾಯಕವಾಗುವಂತೆ ಸಾರ್ವಜನಿಕ ಸಂಚಯವಾಗಿ ಇಡುತ್ತೇವೆ. ಈ ಮಾಲಿಕೆಯ ಮೂಲಕ ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಜನರು ತಮ್ಮ ಬದುಕಿನ ವಿಚಾರಗಳನ್ನು ಪರಸ್ಪರ ಹೇಳಿಕೊಳ್ಳಬಹುದು, ಇತರರು ಹೇಳಿದ್ದನ್ನು ಕೇಳಿಸಿಕೊಳ್ಳುವ ಅವಕಾಶವೂ ದೊರೆಯಬಹುದು. ಆ ಮೂಲಕ ನಾವು ಯಾವುದನ್ನು ಇಷ್ಟು ಕಾಲ ನಂಬಿಕೊಂಡು ಬಂದಿದ್ದೆೀವೋ ಅದು ಹೊಸ ಬೆಳಕಿನಲ್ಲಿ ಕಾಣಬಹುದು. ತನ್ಮೂಲಕ ನಮ್ಮ ಸುತ್ತಲೂ ಇರುವ ಜನರ ಬದುಕಿನ ಹಲವು ಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಸಹಾನುಭೂತಿ ಸಾಧ್ಯವಾಗಬಹುದು.

 ಸಂವಾದಕ್ಕೆ ಆಹ್ವಾನ

ಜಾತಿ ಸಂವಾದದ ಮಾಲಿಕೆಯಲ್ಲಿ ಓದುಗರು ಮುಕ್ತವಾಗಿ ಭಾಗವಹಿಸಬಹುದು. ಪ್ರತಿಕ್ರಿಯಿಸುವವರಿಗೆ ಅನುಕೂಲವಾಗಲೆಂದು ಪ್ರತಿವಾರ ಜಾತಿಚರ್ಚೆಗೆ ಸಂಬಂಧಿಸಿದ ಕೆಲವು ಮುಖ್ಯ ಪ್ರಶ್ನೆಗಳನ್ನು ಮುಂದಿಡುತ್ತೇವೆ. ಇದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆಗಳ ಮೂಲಕವೇ ಚರ್ಚೆಯನ್ನು ಮುಂದುವರಿಸಿಕೊಂಡುಹೋಗುವುದು ನಮ್ಮ ಉದ್ದೇಶ. ಈ ವಾರದ ಪ್ರಶ್ನೆಗಳು ಹೀಗಿವೆ:

- ಜಾತಿ ಅನಿವಾರ್ಯವೇ? ನೀವು ಯಾವ ಜಾತಿಯವರೋ, ಆ ಜಾತಿಯಲ್ಲಿಯೇ ಇರಲು ಬಯಸುತ್ತಿರಾ?

- ನಿಮ್ಮ ಜಾತಿ ಬೇರೆಯವರ ಜಾತಿಗಿಂತ ಮೇಲು ಅಥವಾ ಕೀಳು ಎಂದು ನಂಬುತ್ತಿರಾ?

ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ ಡಿಸೆಂಬರ್ 7ರ ಒಳಗೆ ಕಳುಹಿಸಬಹುದು. ವಿಳಾಸ: `ಸಂಪಾದಕರು, `ಜಾತಿ ಸಂವಾದ~ ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001~ ಇಮೇಲ್;  http://jathisamvada@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry