ಸೋಮವಾರ, ಜೂನ್ 14, 2021
26 °C

ಜಾತಿ ಸಮಾವೇಶಗಳು ಹುಟ್ಟಿಸಬಹುದಾದ ಪ್ರಶ್ನೆಗಳು

ಅರುಣ್ ಜೋಳದಕೂಡ್ಲಿಗಿ,ಹಂಪಿ Updated:

ಅಕ್ಷರ ಗಾತ್ರ : | |


ಈಚೆಗೆ ನಡೆಯುತ್ತಿರುವ ಜಾತಿ ಸಮಾ­ವೇಶ­ಗಳೂ ಇಂತಹ ಸಮಾವೇಶಗಳಿಗೆ ಸೇರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ಕರ್ನಾಟಕದ ಬದಲಾದ ಜಾತಿ ಸಮೀಕರಣದ ನೆಲೆಯಲ್ಲಿ ಸಮಾಜ ವಿಜ್ಞಾನ ಸಂಶೋಧಕರು ಗಂಭೀರವಾಗಿ ಪರಿಗಣಿಸಬೇಕಿದೆ. ಅಂತೆಯೇ ಇದರ ಸೂಕ್ಷ್ಮಗಳನ್ನೂ, ಈ ಸಮಾವೇಶಗಳ ದೂಳಿನಲ್ಲಿ ಮರೆಯಾಗುವ ಪ್ರಶ್ನೆಗಳನ್ನು ದೂಳು ಕೊಡವಿ ಎಚ್ಚರಗೊಳಿಸಬೇಕಾಗಿದೆ.

 

 ದೊಡ್ಡ ಜಾತಿಗಳಷ್ಟೆ ಸಮಾವೇಶ ಮಾಡಿ ಬಲಪ್ರದರ್ಶನ ಮಾಡುವ ಕಾಲ ಬದಲಾಗಿ ಚಿಕ್ಕಪುಟ್ಟ ಜಾತಿ ಸಮುದಾಯಗಳೂ ಸಮಾವೇಶ­ಗೊಳ್ಳುತ್ತಿರುವುದು ಗಮನಿಸಬೇಕಾದ ಸಂಗತಿ. ಇದು ಅಲ್ಪಸಂಖ್ಯಾತ ಜಾತಿಗಳ ಒಳಗೆ ಶಿಕ್ಷಣದ ಬೆಳಕು ಮೂಡಿರುವುದರ ಪರಿಣಾಮ. ಇದ­ರಿಂದಾಗಿ ರಾಜಕೀಯ ಪಾಲ್ಗೊಳ್ಳುವಿಕೆಯೂ ಒಡ­ಮೂಡಿದೆ.ಅಂತೆಯೇ ಸಾಮಾಜಿಕವಾಗಿ ಸಿಗಬೇಕಾದ ಹಕ್ಕುಗಳನ್ನು ಕೇಳುವ ಉಮೇದು ಕೂಡ ಈ ಸಮುದಾಯಗಳಿಗೆ ಬಂದಿದೆ. ಈ ಬಗೆಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ­ದರೆ,  ಆಯಾ ಜಾತಿ ಸಮುದಾಯದ ಸಮಗ್ರ ಅಭಿವೃದ್ಧಿಯ ಕನಸು ಈ ಸಮಾವೇಶಗಳಿಗೆ ಇಲ್ಲದಿರುವುದು ಆತಂಕ ಹುಟ್ಟಿಸುತ್ತದೆ. ಬದ­ಲಾಗಿ ಆಯಾ ಜಾತಿಯ ಶಿಕ್ಷಿತರು, ಆರ್ಥಿಕವಾಗಿ ಮೇಲ್ಮಟ್ಟದಲ್ಲಿರುವವರು, ರಾಜಕೀಯ ಪ್ರವೇಶಿಸಿ ನಾಯಕರಾಗಿ ರೂಪುಗೊಳ್ಳುತ್ತಿರುವವರು ತಮ್ಮದೇ ಜಾತಿಯನ್ನು ಬಂಡವಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

 

ಈ ಸಮಾವೇಶಗಳು ಮುಖ್ಯವಾಗಿ ತ್ರಿಸೂತ್ರ­ವನ್ನು ಅನುಸರಿಸುತ್ತವೆ. ಮೊದಲನೆಯದಾಗಿ ಆಯಾ ಸಮುದಾಯದ ರಾಜಕೀಯ ವ್ಯಕ್ತಿಗ­ಳನ್ನು ಜಾತಿನಾಯಕರನ್ನಾಗಿ ಬಿಂಬಿಸುವುದು, ಆಯಾ ಜಾತಿಯ ಮಠದ ಸ್ವಾಮೀಜಿಯನ್ನು ಮುಂದಿಟ್ಟುಕೊಳ್ಳುವುದು. ಈ ರಾಜಕಾರಣಿ ಮತ್ತು ಸ್ವಾಮಿಗಳನ್ನು ಬಳಸಿಕೊಳ್ಳಲು ಆಯಾ ಜಾತಿಯ ವಾಣಿಜ್ಯೋದ್ಯಮಿಗಳು ಈ ಸಮಾ­ವೇಶಗಳಿಗೆ ಧಾರಾಳವಾಗಿ ಹಣ ಖರ್ಚು ಮಾಡುವುದು.ಅಂತೆಯೇ ಆಯಾ ಸಮುದಾ­ಯದ ಶ್ರೀಮಂತರನ್ನೂ, ಉನ್ನತ ಮಟ್ಟದ ಸರ್ಕಾರಿ ನೌಕರರನ್ನು ಕರೆಯಿಸಿ ಸನ್ಮಾನ ಮಾಡಿ ಹಾರ ತುರಾಯಿಗಳನ್ನು ಹಾಕುವುದು ಇತ್ಯಾದಿ ಮಾಡಲಾಗುತ್ತದೆ. ತಮ್ಮ ಜಾತಿಯೇ ಜಗತ್ತಿನ ಶ್ರೇಷ್ಠ ಜಾತಿಯೆಂಬ ಫರಾಕು ಹೊಮ್ಮುತ್ತದೆ.

 

ಸಮಾವೇಶವನ್ನು ಆಯೋಜಿಸಿದ ರಾಜ­ಕಾರಣಿ ತನ್ನ ಜಾತಿಯ ಎಷ್ಟು ಜನರನ್ನು ಸೇರಿಸುತ್ತಾನೆ ಎನ್ನುವುದನ್ನು ಆಧರಿಸಿ ಆತನ ಶಕ್ತಿ ನಿರ್ಧಾರವಾಗುತ್ತದೆ. ಉಚಿತವಾಗಿ ತಮ್ಮ ತಮ್ಮ ಊರುಗಳಿಗೆ ಬಸ್ಸು ಬಿಟ್ಟಿದ್ದಕ್ಕೋ, ಯಾರೋ ಕರೆದರೆಂದು ಸಮಾವೇಶ ನಡೆದ ಸ್ಥಳಗಳನ್ನು ನೋಡಲೆಂದೋ, ಆಕಸ್ಮಿಕವಾಗಿ ಬಂದ ಸಾಮಾನ್ಯ ಜನರು ತಮಗೆ ಗೊತ್ತಿಲ್ಲದಂತೆಯೇ ಸಮಾವೇಶದ ಆಯೋಜಕರಿಗೆ ಬಂಡವಾಳವಾಗಿ ಬಳಕೆಯಾಗುತ್ತಾರೆ. ಈಚೆಗೆ ಚಿತ್ರದುರ್ಗದಲ್ಲಿ ನಡೆದ ನಾಯಕ ಸಮುದಾಯದ ಸಮಾವೇಶಕ್ಕೆ ಬಂದ ಅನೇಕರು ಕೋಟೆ ನೋಡಲು, ಮುರುಘರಾಜೇಂದ್ರ ಮಠ ನೋಡಲು ಕಿಕ್ಕಿರಿದಿದ್ದರು. ಅವರಿಗೆ ಇದೊಂದು ಉಚಿತ ಪ್ರವಾಸ ಅಷ್ಟೆ.ಯಾವುದೋ ಒಂದು ಜಾತಿಯ ಸಮಾವೇಶಕ್ಕೆ ಸೇರುವ ಜನರು ಆಯಾ ಜಾತಿಗೆ ಮಾತ್ರ ಸೇರಿದ ಜನರಾಗಿರುವುದಿಲ್ಲ. ಬದಲಾಗಿ ಬೇರೆ ಬೇರೆ ಜಾತಿಗಳ ಜನರೂ ಬಂದಿರುತ್ತಾರೆ. 

 

ಯಾವುದೇ ಜಾತಿ ಸಮಾವೇಶ ಆಯಾ ಸಮುದಾಯದ ಪುರುಷರ ಸಮಾವೇಶ­ವಾಗಿ­ರುತ್ತದೆ. ಇಲ್ಲಿ ಮಹಿಳೆಯರ ಭಾಗವಹಿಸುವಿ­ಕೆಯೆ ಶೂನ್ಯ. ಹಾಗಿದ್ದಲ್ಲಿ ಒಂದು ಜಾತಿಯೆಂದರೆ ಕೇವಲ ಪುರುಷ ಸದಸ್ಯರನ್ನು ಒಳಗೊಂಡದ್ದೆ? ಆಯಾ ಜಾತಿಯ ನಾಯಕಿಯಾಗಿ ಯಾವೊಬ್ಬ ಮಹಿಳೆಯೂ ಇಲ್ಲದಿರುವುದನ್ನು ಗಮನಿಸಬೇಕು. ಸಮಾವೇಶಗಳಿಗೆ ಆಗಮಿಸಿದ ಸಹಸ್ರಾರು ಜನರಲ್ಲಿ ಬೆರಳೆಣಿಕೆಯ ಮಹಿಳೆಯರು ಅಲ್ಲಲ್ಲಿ ಕಾಣಸಿಗುತ್ತಾರೆ. ಇಂತಹವರು ಪುರುಷರ ಜನ­ಜಂಗುಳಿಯಲ್ಲಿ ಸಿಲುಕಿ ಒದ್ದಾಡುತ್ತಾ, ಯಾಕಾ­ದರೂ ಬಂದೆವು ಎಂದು ಗೊಣಗುತ್ತಿರುತ್ತಾರೆ. ಅಂತೆಯೇ ಇಂತಹ ಸಮಾವೇಶಗಳು ಮಂಡಿಸುವ ಬೇಡಿಕೆ ಪಟ್ಟಿಯಲ್ಲಿಯೂ ಆಯಾ ಸಮುದಾ­ಯದ ಮಹಿಳೆಗೆ ಪೂರಕವಾದ ಬೇಡಿಕೆಗಳೂ ಅತ್ಯಲ್ಪವೆ. ಹೀಗಿರುವಾಗ ಇವುಗಳನ್ನು ಗಂಡಸರ ಜಾತಿ ಸಮಾವೇಶಗಳು ಎನ್ನಲಡ್ಡಿಯಿಲ್ಲ.

 

 ಒಂದು ಜಾತಿಯ ಸಂಕೇತವಾಗಿ ಪುರಾಣದ, ಚರಿತ್ರೆಯ, ವರ್ತಮಾನದ ಪ್ರಭಾವಿ ವ್ಯಕ್ತಿ ಚಿತ್ರಗಳನ್ನು ಆಯ್ದುಕೊಳ್ಳುವುದಿದೆ. ಇದರಲ್ಲಿ ಪುರಾಣ, ಚರಿತ್ರೆಯ ಸಂಕೇತಗಳು ಸ್ವತಃ ಜಾತಿಯ ನೆಲೆಯನ್ನು ಮೀರಿದವುಗಳೇ ಆಗಿವೆ. ವಿಶ್ವಭ್ರಾತೃ­ತ್ವದ ಕಾವ್ಯ ಬರೆದ ವಾಲ್ಮೀಕಿಯನ್ನು ಬೇಡ ಸಮುದಾಯ ಬಂಧಿಸಿಟ್ಟಿದೆ. ಸರ್ವಜಾತಿ ಸಮಾ­ನತೆ ಬೋಧಿಸಿದ ಬಸವಣ್ಣ, ಲಿಂಗಾಯತ ಬೇಲಿ ದಾಟುವಂತಿಲ್ಲ. ವಚನಕಾರರೆಲ್ಲಾ ಜಾತಿಯ ನೆಲೆ­ಯಲ್ಲಿ ಒಂದೊಂದು ಜಾತಿಯ ‘ಐಕಾನು’ಗಳಾಗಿ ಬದಲಾಗಿದ್ದಾರೆ.ಕುಲದ ನೆಲೆಯ ಪ್ರಶ್ನಿಸಿದ ಕನಕದಾಸರು ಕುರುಬ ಸಮುದಾಯದ ಚೌಕಟ್ಟಿ­ನಲ್ಲಿ ಉಸಿರುಗಟ್ಟಿದ್ದಾರೆ. ಹೀಗೆ ಒಂದೊಂದು ಜಾತಿ ಒಬ್ಬೊಬ್ಬ ನಾಯಕರನ್ನು ಬಿಗಿಯಾಗಿ ಕಟ್ಟಿಕೊಂಡಿವೆ. ನಾಯಕ ಸಮುದಾಯದ ಸಮಾವೇಶಗಳಲ್ಲಿ ನಟ ಸುದೀಪ್ ಚಿತ್ರ, ವಾಲ್ಮೀಕಿ ಮತ್ತು ಮದಕರಿ ನಾಯಕರ ಜತೆಗಿದೆ.  

 

ಆಯಾ ಸಮುದಾಯದ ಪೌರಾಣಿಕ ಅಥವಾ ಚಾರಿತ್ರಿಕ ನಾಯಕರ ವೈಚಾರಿಕ ತಿಳಿವು ಆಯಾ ಸಮುದಾಯವನ್ನು ಪ್ರಭಾವಿಸುತ್ತಿ­ದೆಯೇ? ಎಂದು ಕೇಳಿಕೊಂಡರೆ ಬರುವ ಉತ್ತರ ನಿರಾಶಾದಾಯಕ. ಜಾತಿ ಸಂಕೇತಗಳನ್ನಾಗಿ ಕೇವಲ ಚಿತ್ರ ಮತ್ತು ಪ್ರತಿಮೆಗಳನ್ನು ಆರಾಧಿಸ­ಲಾಗುತ್ತಿದೆ. ಆಯಾ ಜಾತಿಗೆ ಪೂರಕವಾದ ಜನಪ್ರಿಯ ಸಂಗತಿಗಳನ್ನು ಬಿತ್ತಲಾಗುತ್ತದೆ.ಜಾಗತಿಕ ಚಿಂತಕರ ಸಾಲಿನಲ್ಲಿರಹುದಾದ ಅಂಬೇಡ್ಕರ್ ಅವರನ್ನು ಕೇವಲ ದಲಿತರ ಸಂಕೇತ­ವೆಂಬಂತೆ ಪ್ರತಿಮೆ, ಫೋಟೊಗಳಿಗೆ ಸೀಮಿತಗೊಳಿ­ಸಲಾಗಿದೆ. ನಿಜಕ್ಕೂ ಆಯಾ ಜಾತಿ ಸಂಕೇತ­ವೆಂದು ಕರೆದುಕೊಂಡವರ ವೈಚಾರಿಕ ಚಿಂತನೆ­ಗಳನ್ನು ಒಂದು ಜಾತಿಯೊಳಗೆ ಪರಿಣಾಮಕಾರಿ­ಯಾಗಿ ಸಂವಹನ ಮಾಡಲು ಸಾಧ್ಯವಾದರೆ, ಆಯಾ ಜಾತಿಯ ಒಳಗಿನ ತಿಳಿವೊಂದು ಬದಲಾಗಲು ಸಾಧ್ಯವಿದೆ.

 

ಸಮಾವೇಶದ ವೇದಿಕೆಯಲ್ಲಿ ಜಾತಿಯ ಪ್ರಭಾವಿಗಳು ಕಿಕ್ಕಿರಿದಿದ್ದರೆ, ಅದೇ ಜಾತಿಯ ಕಟ್ಟಕಡೆಯ ಜನರು ಗಂಟಲು ಒಣಗಿಸಿಕೊಂಡು ನೀರಿಗಾಗಿಯೋ, ಹಸಿವೆಯಿಂದ ಊಟಕ್ಕಾ­ಗಿಯೋ ಅಲೆಯುತ್ತಿರುತ್ತಾರೆ. ಇದನ್ನು ನೋಡಿ­ದರೆ ಪ್ರತಿ ಜಾತಿಯಲ್ಲಿಯೂ ಮೇಲು ಕೀಳಿನ ಸ್ತರಗಳು ರೂಪುಗೊಂಡಿವೆ. ಶೈಕ್ಷಣಿಕವಾಗಿ, ಆರ್ಥಿ­ಕವಾಗಿ, ಲಿಂಗದ ನೆಲೆಯಲ್ಲಿ ಈ ಶ್ರೇಣೀ­ಕರಣವಿದೆ. ಇದರಲ್ಲಿ ನಗರಿಗರು–ಹಳ್ಳಿಗರು, ಶಿಕ್ಷಿತರು–ಅಶಿಕ್ಷಿತರು, ಸರಕಾರಿ ನೌಕರರು–ಕೂಲಿಕಾರರು, ಜಮೀನುದಾರರು–ಕೃಷಿ ಕೂಲಿ­ಗಳು, ಮೇಲ್ದರ್ಜೆ ಮತ್ತು ಕೆಳದರ್ಜೆ ಕೆಲಸ­ಗಾರರು, ಬಡವರು– ಸ್ಥಿತಿವಂತರು, ಕಡಿಮೆ ಕಲಿತವರು–ಹೆಚ್ಚು ಕಲಿತವರು ಇಂತಹ ಶ್ರೇಣೀ­ಕರಣಗಳು ಒಂದು ಜಾತಿಯ ಒಳಗೇ ರೂಪು­ಗೊಂಡಿವೆ. ಇವುಗಳ ಮಧ್ಯೆ ತರತಮಗಳೂ ಇವೆ. 

 

ಒಂದು ಜಾತಿಯ ರಾಜಕಾರಿಣಿ ವರ್ಗ, ವ್ಯಾಪಾರಿ ವರ್ಗ, ನೌಕರಶಾಹಿ ವರ್ಗ ಆಯಾ ಜಾತಿಯ ಸೌಲಭ್ಯಗಳನ್ನು ಪಡೆಯುತ್ತಿರುತ್ತಾರೆ. ಇಂತಹವರಿಗೆ ಜಾತಿ ಬಂಡವಾಳವಾಗುತ್ತದೆ. ಜಾತಿ ಸಮಾವೇಶ ಕೂಡ ಇದರ ಉತ್ಪನ್ನವೆ. ಆಯಾ ಜಾತಿಯ ಮೇಲುವರ್ಗದ ಹಿತಾಸಕ್ತಿ­ಯನ್ನು ಕಾಯುವುದೇ ಜಾತಿಯ ಮಠ ಮತ್ತು ಸ್ವಾಮಿಯ ಮುಖ್ಯ ಧ್ಯೇಯವಾಗಿರುವಂತೆ ಕಾಣು­ತ್ತದೆ. ಆದರೆ ಅದೇ ಜಾತಿಯ ಕಟ್ಟಕಡೆಗಿನವರು ತನ್ನದೇ ಜಾತಿಯ ಮೇಲು ವರ್ಗಗಳಿಂದ ತುಳಿತಕ್ಕೆ ಒಳಗಾಗುತ್ತಿರುತ್ತಾರೆ. ತನ್ನದೇ ಜಾತಿಯ ಸೌಲ­ಭ್ಯಗಳನ್ನು ಪಡೆಯುವಲ್ಲಿ ಅಶಕ್ತರಾಗಿರುತ್ತಾರೆ. 

 

 ಇಂತಹ ಗಂಭೀರ ಪ್ರಶ್ನೆಗಳನ್ನು ಇಂದಿನ ಜಾತಿ ಸಮಾವೇಶಗಳು ಕೇಳಿಕೊಳ್ಳಬೇಕಿದೆ. ಅಥವಾ ಪ್ರಜ್ಞಾವಂತರು ಇಂತಹ ಪ್ರಶ್ನೆಗಳನ್ನು ಎತ್ತಬೇಕಾ­ಗಿದೆ. ಜಾತಿ ಸಮಾವೇಶ ಮಾಡಿಯೂ, ಜಾತ್ಯ­ತೀತವಾಗಿ ಯೋಚಿಸಲು ಸಾಧ್ಯವೆ? ಪ್ರಜಾ­ಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯತೀತ ಸಂವಿಧಾನದ ಅಡಿಯಲ್ಲಿ ಜಾತಿಗಳನ್ನು ಬಲಗೊಳಿಸುವ ಸಮಾವೇಶಗಳಿಗೆ ನೀತಿಸಂಹಿತೆ ಇರಬೇಕೆ? ಮುಂತಾದ ಪ್ರಶ್ನೆಗಳು ಕಾಡುತ್ತವೆ. ಅಂತೆಯೇ ಒಂದು ಜಾತಿಯ ಸಮಗ್ರ ಅಭಿವೃದ್ಧಿಯ ಕನಸು ಕಾಣುತ್ತಾ, ಜಾತಿಯೊಂದನ್ನು ಆಂತರಿಕವಾಗಿ ಬಲಪಡಿಸುತ್ತಲೇ ಜಾತಿಯ ಎಲ್ಲೆ ಮೀರುವ ವಿಶ್ವಾತ್ಮಕ ದೃಷ್ಟಿಕೋನಗಳನ್ನು ಜಾತಿ ಸಮಾವೇಶ­ಗಳು ಹೊಂದಬೇಕಾಗಿದೆ.ಸಮುದಾಯಗಳ ಅಭಿವೃದ್ಧಿಯ ನೆಲೆಯಲ್ಲಿ ಜಾತಿಗಣತಿಯ ಅಗತ್ಯ­ವಿದೆ. ಜಾತಿಗಣತಿಯಾದರೆ ಆಯಾ ಜಾತಿಯ ವರ್ತಮಾನದ ಬದುಕಿನ ಚಿತ್ರ ಸಿಗುತ್ತದೆ. ಒಂದು ಜಾತಿಯನ್ನು ಅಭಿವೃದ್ಧಿಪಡಿಸಲು ಕ್ಷೇತ್ರವಾರು ಮಾಹಿತಿ ಲಭ್ಯವಾಗುತ್ತದೆ. ಅಂತೆಯೇ ಆಯಾ ಜಾತಿಯ ಕಟ್ಟಕಡೆಗಿರುವ ಅಸಹಾಯಕ ಜನರ ಸಮಸ್ಯೆಗಳು ಅರಿವಿಗೆ ಬರುತ್ತವೆ. 

 

ಒಂದು ಜಾತಿಯ ಒಳಗೇ ಕೇಡುಗಳು, ಹೆಣ್ಣನ್ನು ದಮನಗೊಳಿಸುವ ನೀತಿಗಳು, ಜಾತಿ­ಯೊಳಗಿನ ಕ್ರೌರ್ಯಗಳನ್ನೂ ಪ್ರಶ್ನೆ ಮಾಡ­ಬೇಕಾಗುತ್ತದೆ. ಈ ನೆಲೆಯಲ್ಲಿ, ಜಾತಿಯ ಒಳಗೇ ಇರಬಹುದಾದ ಕೊಳೆಯನ್ನು ತೊಳೆಯಲು ಯಾವ ಜಾತಿ ಸಮಾವೇಶಗಳು ತಯಾರಿವೆ? ಆಯಾ ಜಾತಿಯ ಪ್ರಜ್ಞಾವಂತರ ಸಂಘಟನೆ­ಯೊಂದು ಇಂತಹ ಕೆಲಸಕ್ಕೆ ಕೈಹಾಕಿದ ಘಟನೆ­ಗಳೂ ವಿರಳ. ಬದಲಾಗಿ ಆಯಾ ಜಾತಿಯ ಜಾತಿಪ್ರೇಮವನ್ನೂ ಅಂಧಾಭಿಮಾನವನ್ನು ಹೆಚ್ಚಿ­ಸುವ ಕೆಲಸಗಳೆ ಹೆಚ್ಚಿವೆ. ಇದು ಹೀಗೇ ಮುಂದುವರಿದರೆ ಸಂವಿಧಾನದ ಜಾತ್ಯತೀತತೆಯ ಆಶಯಗಳು ಮುಕ್ಕಾಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತಾ ನಿತ್ರಾಣದ ಸ್ಥಿತಿಗೆ ನಿಲ್ಲುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.