ಮಂಗಳವಾರ, ಮೇ 18, 2021
31 °C

ಜಾತ್ಯತೀತ ಆದರ್ಶದ ದೊಣೆಹಳ್ಳಿ ಶಾಖಾ ಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ಭಾರತೀಯ ಸನಾತನ ಪರಂಪರೆಯಲ್ಲಿ `ಧರ್ಮ~ ಅತ್ಯಂತ ಪ್ರಮುಖವಾದುದು. ಮಾನವ ಜೀವನದ ಮೌಲ್ಯಗಳನ್ನು ನಿರ್ದೇಶಿಸುವ ಧರ್ಮ ಮತ್ತು ಸಂಸ್ಕಾರದ ವಿವಿಧ ಆಯಾಮಗಳ ಕುರಿತು ಆಯಾ ಕಾಲಘಟ್ಟದಲ್ಲಿ ಸಾಧು-ಸಂತರು, ಅವಧೂತರು, ಶರಣರು ತಮ್ಮ ಪ್ರಖರ ವಿಚಾರಧಾರೆಗಳಿಂದ ಸಮಾಜದ ಮೇಲೆ ಬೆಳಕು ಚೆಲ್ಲಿದ್ದಾರೆ.ಜಗತ್ತಿನಲ್ಲೇ ಮೊಟ್ಟಮೊದಲ ಬಾರಿ `ಕಾಯಕ ತತ್ವ~ವನ್ನು ಕೇಂದ್ರವಾಗಿರಿಸಿಕೊಂಡು ಜಾತ್ಯತೀತ ನೆಲೆಗಟ್ಟಿನಲ್ಲಿ ವೈಚಾರಿಕ ಕ್ರಾಂತಿ ನಡೆದದ್ದು 12ನೇ ಶತಮಾನದಲ್ಲಿ. ಬಸವಣ್ಣ ಅವರ ನೇತೃತ್ವದಲ್ಲಿ. ಜನವಿರೋಧಿಯಾದ ಪುರೋಹಿತಶಾಹಿ ಮನು ಪ್ರೇರಿತ ಧರ್ಮವನ್ನು ಜನಪರ ಧರ್ಮವಾಗಿ ರೂಪಿಸುವಲ್ಲಿ ಶರಣರು, ಅವಧೂತರ ಚಿಂತನೆ ಮುಖ್ಯವಾಗಿದೆ.ಕಲ್ಯಾಣದ ಪ್ರಗತಿಪರ ವಿಚಾರಧಾರೆಯ ಮೂಸೆಯಲ್ಲಿ ನಡೆದ ತಣ್ಣನೆಯ ಸಾಮಾಜಿಕ ಕ್ರಾಂತಿ ನಾಡಿನಾದ್ಯಂತ ಪಸರಿಸುವಲ್ಲಿ ಜಂಗಮ ಪ್ರಜ್ಞೆಯ ಶರಣರ ಪಾತ್ರ ನಿರ್ಣಾಯಕವಾದುದು.ಶರಣಾರ್ಯರ ಆಗಮನ:
ಚಲನಶೀಲ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣಾರ್ಯರು ಸುಮಾರು 16ನೇ ಶತಮಾನದಲ್ಲಿ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮಕ್ಕೆ ಪ್ರವೇಶಿಸುತ್ತಾರೆ. ಬೃಹತ್ ಶಿಲಾಯುಗದ ಕಾಲದಿಂದಲೂ ಮಾನವನ ಪ್ರಮುಖ ವಾಸ ಸ್ಥಾನವಾಗಿರುವ ಜಿನಿಗಿಹಳ್ಳದ ತಟದಲ್ಲಿ ದೊಣೆಹಳ್ಳಿ ಗ್ರಾಮ ಇದೆ.11ನೇ ಶತಮಾನದ ಕಲ್ಯಾಣ ಚಾಲಕ್ಯರ ಕಾಲದಲ್ಲಿ ನಿರ್ಮಿತವಾದ ಕಲ್ಲೇಶ್ವರ ದೇವಾಲಯ, ಇದೇ ಕಾಲಘಟ್ಟದ ಹಿರೇಮಲ್ಲಹೊಳೆ ಕಲ್ಲೇಶ್ವರ ದೇವಾಲಯ ಮತ್ತು 2 ಸಾವಿರ ವರ್ಷಗಳ ಹಿಂದಿನ ಅಶೋಕನ ಕಾಲದ ಸಿದ್ದಾಪುರ ಶಾಸನ, ಜಟ್ಟಿಂಗರಾಮೇಶ್ವರ ಶಾಸನಗಳು ಇದೇ ಜಿನಿಗಿಹಳ್ಳದ ಪ್ರದೇಶದಲ್ಲಿ ಲಭ್ಯವಾಗಿರುವುದು ಜಿನಿಗಿಹಳ್ಳದ ಪ್ರಾಮುಖ್ಯತೆಯನ್ನು ಬಿಂಬಿಸುತ್ತವೆ. ಇಂತಹ ಪವಿತ್ರವಾದ ಹಳ್ಳದ ದಂಡೆಯಲ್ಲಿರುವ ಗ್ರಾಮದಲ್ಲಿ ನೆಲೆಸುವ ಉದ್ದೇಶದಿಂದ ಶರಣಾರ್ಯರ ಆಗಮನವಾಗುತ್ತದೆ.ಈ ಪ್ರದೇಶದಲ್ಲಿ ದಾಸೋಹ, ಕಾಯಕ ಪರಂಪರೆಯನ್ನು ಬೆಳೆಸುವ ಮೂಲಕ ಜನರ ಜೀವನಮಟ್ಟವನ್ನು ಎತ್ತರಿಸುವ ಸಂಕಲ್ಪವನ್ನು ಶರಣಾರ್ಯರು ಹೊಂದಿದ್ದರು. ಆ ಸಂದರ್ಭದಲ್ಲಿ ಶರಣರ ಮಹತ್ವವನ್ನು ಅರಿಯದ ಇಲ್ಲಿನ ಜನತೆ ಗುರುಗಳಿಗೆ ನಿರೀಕ್ಷಿತ ಸಹಕಾರ ನೀಡುವುದಿಲ್ಲ. ಇದರಿಂದ ಅತೃಪ್ತರಾದ ಶರಣಾರ್ಯರು ಉತ್ತರ ದಿಕ್ಕಿಗೆ ಮುನ್ನಡೆದು ಕಾನಾಮಡಗು ಗ್ರಾಮದಲ್ಲಿ ಮಠ ನಿರ್ಮಿಸಿಕೊಂಡು ದಾಸೋಹ ಪರಂಪರೆಗೆ ಚಾಲನೆ ನೀಡುತ್ತಾರೆ.ಇತ್ತ ದೊಣೆಹಳ್ಳಿಯಲ್ಲಿ ಶರಣರ ನಿರ್ಗಮನ ತೀವ್ರ ಜಿಜ್ಞಾಸೆಗೆ ಕಾರಣವಾಗುತ್ತದೆ. ಶರಣರಿಗೆ ಅಸಹಕಾರ ತೋರಿದ ಪರಿಣಾಮ ಗ್ರಾಮಕ್ಕೆ ಕೇಡಾಗುತ್ತದೆ. ಶರಣರು, ಸಂತರನ್ನು ಕಡೆಗಣಿಸಿದರೆ ಬರಗಾಲ ಬಂದು ಜನರಿಗೆ ತೊಂದರೆಯಾಗುತ್ತದೆ ಎಂಬ ಹಿರಿಯರ ಸಲಹೆಯಿಂದ ಎಚ್ಚೆತ್ತ ದೊಣೆಹಳ್ಳಿ ಗ್ರಾಮದ ಜನರು ಕಾನಾಮಡಗು  ಮಠಕ್ಕೆ ತೆರಳಿ ತಮ್ಮ ಅಸಹಕಾರಕ್ಕೆ ಶರಣರ ಕ್ಷಮೆ ಕೋರಿ ಮತ್ತೆ ಗ್ರಾಮಕ್ಕೆ ಮರಳುವಂತೆ ಮನವಿ ಮಾಡುತ್ತಾರೆ. ಭಕ್ತರ ಒತ್ತಾಯಕ್ಕೆ ಮಣಿದ ಶರಣಾರ್ಯರು ದೊಣೆಹಳ್ಳಿಯಲ್ಲಿ ಶಾಖಾ ಮಠವನ್ನು ಸ್ಥಾಪಿಸುತ್ತಾರೆ.ಜನಪ್ರೀತಿಯ ಜಾತ್ಯತೀತ ಮಠ: ಇಂದಿನ ಬಳ್ಳಾರಿ ಜಿಲ್ಲೆಯಲ್ಲಿರುವ ಕಾನಾಮಡಗು ದೊಣೆಹಳ್ಳಿ ಗ್ರಾಮದಿಂದ 10 ಕಿ.ಮೀ. ಅಂತರದಲ್ಲಿದೆ. ಶತಮಾನಗಳಿಂದ ಮುಖ್ಯಮಠ ಹಾಗೂ ಶಾಖಾಮಠಗಳು ಈ ಭಾಗದ ಭಕ್ತರೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ರೈತರು ತಮ್ಮ ಹೊಲಗದ್ದೆಗಳು, ತೋಟಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳನ್ನು ಮೊದಲು ಮಠಕ್ಕಾಗಿ ಎತ್ತಿಡುತ್ತಾರೆ.ಮಠಕ್ಕೆ ಮೀಸಲು ನೀಡಿದ ನಂತರವೇ ವ್ಯಾಪಾರ, ವಹಿವಾಟಿಗೆ ಚಾಲನೆ ನಿಡಲಾಗುತ್ತದೆ. ಮಠದಲ್ಲಿ ಶತಮಾನಗಳಿಂದ ಅವಿರತವಾಗಿ ನಡೆಯುತ್ತಿರುವ ನಿತ್ಯ ಅನ್ನ ದಾಸೋಹಕ್ಕೆ ಬೇಕಾಗುವ ಉರುವಲಿನಿಂದ ಹಿಡಿದು ಅಕ್ಕಿ, ತರಕಾರಿವರೆಗೆ ಎಲ್ಲವನ್ನೂ ಆಸುಪಾಸು ಹಳ್ಳಿಗಳ ರೈತರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುವ ಪದ್ಧತಿ ಅವ್ಯಾಹತವಾಗಿ ಮುಂದುವರಿದಿದೆ.ಜನಪರ ಕಾರ್ಯಕ್ರಮಗಳು: ಮಠದ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ಜಾತಿ, ಧರ್ಮದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವರ್ಷ ಇಲ್ಲಿ ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲ ಸಮುದಾಯವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ನಾಡಿನ ಅವಧೂತರಲ್ಲಿ ಪ್ರಮುಖರಾದ ನಾಯ್ಕನಹಟ್ಟಿ ಶರಣ ತಿಪ್ಪೇಸ್ವಾಮಿ ಜಾತ್ರೆಗೆ ಹೋಗಿ ಬರುವ ಸಹಸ್ರಾರು ಭಕ್ತರಿಗೆ ಮಠದ ವತಿಯಿಂದ ಅನ್ನ ಸಂತರ್ಪಣೆ ಕೈಗೊಳ್ಳಲಾಗುತ್ತದೆ.ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ನೀಡಿದ ಮಠ

ನಾಡಿನ ಖ್ಯಾತ ವಿಚಾರವಾದಿ ಹಾಗೂ ನಿವೃತ್ತ ನ್ಯಾಯಾಧೀಶರಾದ ಕೋ. ಚನ್ನಬಸಪ್ಪ, ವೈಚಾರಿಕ ಸ್ವಾಮೀಜಿ ಎಂದೇ ಹೆಸರಾದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮಾಜಿ ಸಚಿವ  ಸದ್ಯೋಜಾತಪ್ಪ, ಸಾಹಿತಿಗಳಾದ  ವೃಷಭೇದ್ರಪ್ಪ, ಬಿ.ಎಸ್.  ವಿರಭದ್ರಪ್ಪ,  ಅಂದಾನಪ್ಪ,  ಮುಂತಾದವರು  ಕಾನಾಮಡಗು  ಮಠದಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ.ಮಠದ ಜನಪರ ಕಾರ್ಯಕ್ರಮಗಳ ರೂವಾರಿ:  ಮುಖ್ಯಮಠ ಮತ್ತು ಶಾಖಾ ಮಠಗಳನ್ನು ಇತ್ತೀಚಿನ ದಿನಗಳಲ್ಲಿ ಜನಸಮುದಾಯದ ಮಧ್ಯೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರೇರಕಶಕ್ತಿಯಾಗಿ ಪತ್ರಕರ್ತ, ಪ್ರಗತಿಪರ ಹೋರಾಟಗಾರ ದೊಣೆಹಳ್ಳಿ ಗುರುಮೂರ್ತಿ ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕೊಂಡಿಯಂತಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದೊಣೆಹಳ್ಳಿಯಲ್ಲಿ ಮಠಕ್ಕೆ ಸೇರಿದ 16 ಎಕರೆ ಜಮೀನು ಇದೆ. ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಬೇಕಿದೆ.

 

ರೂ 75 ಲಕ್ಷ ವೆಚ್ಚದ ಮಂಗಲ ಭವನ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿ ಎನ್ನುವುದು ಗುರುಮೂರ್ತಿ ಅವರ ಅಭಿಪ್ರಾಯ. ದಾಸೋಮ ಮಠದ ಧರ್ಮದರ್ಶಿ ಐಮಡಿ ಶರಣಾರ್ಯರು ಎಲ್ಲಾ ಹಿರಿಯ ಮಠಾಧೀಶರು, ಸಮಾಜದ ಮುಖಂಡರ ಸಲಹೆ, ಸಹಕಾರ ಪಡೆದು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.