ಗುರುವಾರ , ಫೆಬ್ರವರಿ 25, 2021
31 °C

ಜಾತ್ಯತೀತ ಪದ ತೆಗೆಯಲು ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತ್ಯತೀತ ಪದ ತೆಗೆಯಲು ಹುನ್ನಾರ

ಬೆಂಗಳೂರು: ‘ಭಾರತ ಸಂವಿಧಾನದಲ್ಲಿ ಸೇರ್ಪಡೆ ಮಾಡಿರುವ ಜಾತ್ಯತೀತ ಪದವನ್ನು ತೆಗೆಯಬೇಕೆಂದು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ನೀಡಬಾರದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ ಅವರು ಹೇಳಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ 67ನೇ ವರ್ಷದ ಸಂವಿಧಾನ ದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ಬಹುಜನ ಜಾಗೃತಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ದೇಶವನ್ನು ಜಾತಿವಾದಿಗಳ ಪ್ರಜಾಪ್ರಭುತ್ವವನ್ನಾಗಿ ಮಾಡಲು ಬಿಡಬಾರದು. ಧರ್ಮ ನಿರಪೇಕ್ಷ ಸಮಾಜವನ್ನು ಕಟ್ಟಬೇಕು’ ಎಂದು ಹೇಳಿದರು.‘ಜನರ ಶೋಷಣೆ ಮಾಡಿ ಅದರಿಂದ ಲಾಭ ಮಾಡಿಕೊಳ್ಳುವ ಅಭಿವೃದ್ಧಿ ನಮಗೆ ಬೇಕಿಲ್ಲ. ಬಹುಸಂಖ್ಯಾತರ ಆರ್ಥಿಕ ಅಭಿವೃದ್ಧಿ ಆಗಬೇಕು. ಎಲ್ಲ ಸಮುದಾಯಗಳಿಗೆ ಸಂಪತ್ತು ಸಮಾನ ಹಂಚಿಕೆ ಆಗಬೇಕು’ ಎಂದರು. ‘ರಾಜ್ಯದಲ್ಲಿರುವ 4,500 ಮದ್ಯದಂಗಡಿಗಳ ಪೈಕಿ 26 ಅಂಗಡಿ  ಮಾತ್ರ ಪರಿಶಿಷ್ಟ ಜಾತಿ, ಪಂಗಡದವರಿಗೆ ಸೇರಿವೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಶೇ 2ರಷ್ಟು  ಮಾತ್ರ ಎಸ್‌ಸಿ, ಎಸ್‌ಟಿಗೆ ಸೇರಿದ ಶಿಕ್ಷಣ ಸಂಸ್ಥೆಗಳಿವೆ’ ಎಂದರು.‘ಶಾಲಾ–ಕಾಲೇಜು ನಡೆಸುವವರಿಗೆ ಸರ್ಕಾರ ವಾರ್ಷಿಕ ₹3 ಸಾವಿರ ಕೋಟಿ ಅನುದಾನ ನೀಡುತ್ತದೆ. ಅದರಲ್ಲಿ ₹750 ಕೋಟಿ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ನೀಡಬೇಕು. ಆದರೆ ವಾಸ್ತವದಲ್ಲಿ ₹200 ಕೋಟಿಯೂ ದೊರೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಸಹಿಷ್ಣುತೆ ವಿರುದ್ಧ ದೇಶದ ಬುದ್ಧಿಜೀವಿಗಳು, ಸಾಹಿತಿಗಳು, ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟರ ಮಟ್ಟಿಗೆ ನಮ್ಮ ಬಾಂಧವ್ಯ ಕೆಟ್ಟಿದೆ’ ಎಂದು ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ‘ಕಳೆದ 10 ವರ್ಷಗಳಲ್ಲಿ ಬಂಡವಾಳಶಾಹಿಗಳು ಸರ್ಕಾರದಿಂದ ₹42 ಲಕ್ಷ ಕೋಟಿ ಮೊತ್ತದ ಸಹಾಯಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ಪಡೆದಿದ್ದಾರೆ. ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲವಾಗಿದೆ ಹೊರತು ಸಾಮಾನ್ಯ ಜನರಿಗಲ್ಲ’ ಎಂದರು.‘ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ನಮ್ಮ ದೇಶದ ಶ್ರೀಮಂತರು ಕಾಣಿಸಿಕೊಳ್ಳುವಂತೆ ಮಾಡುತ್ತಿದ್ದೇವೆ. ಆದರೆ ನಮ್ಮಲ್ಲೇ ಇರುವ ಬಡತನವನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.