ಜಾತ್ಯತೀತ ಪರಂಪರೆ ರಕ್ಷಿಸಿ: ಸೋನಿಯಾ

7

ಜಾತ್ಯತೀತ ಪರಂಪರೆ ರಕ್ಷಿಸಿ: ಸೋನಿಯಾ

Published:
Updated:

ಕುದ್ರೋಳಿ ಕ್ಷೇತ್ರದ ಶತಮಾನೋತ್ಸವಕ್ಕೆ ಚಾಲನೆ

ಮಂಗಳೂರು: `ಸಮಾಜಿಕ ಪರಿವರ್ತನೆಯ ಪ್ರತ್ಯಕ್ಷ ಸ್ಮಾರಕ ಕುದ್ರೋಳಿ ಕ್ಷೇತ್ರ. ಈ ಕ್ಷೇತ್ರವು ಸಾರಿದ ವೈಭವಯುತ ಜಾತ್ಯತೀತ ಪರಂಪರೆಯನ್ನು ಸಂರಕ್ಷಿಸುವುದು ಹಾಗೂ ಪಸರಿಸುವುದು ಎಲ್ಲರ ಪವಿತ್ರ ಕರ್ತವ್ಯ~ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟರು.ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಅವರಿಗೆ ನಾರಾಯಣ ಗುರುಗಳ ಸಂದೇಶ ಹೊತ್ತ ಧ್ವಜವನ್ನು  ಹಸ್ತಾಂತರಿಸುವ ಮೂಲಕ ಗುರುವಾರ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜೀರ್ಣೋದ್ಧಾರಗೊಂಡ ಕುದ್ರೋಳಿ ಕ್ಷೇತ್ರವನ್ನು ರಾಜೀವ್ ಗಾಂಧಿ ನಿಧನರಾಗುವುದಕ್ಕೆ ಕೇವಲ ಮೂರು ತಿಂಗಳ ಹಿಂದೆಯಷ್ಟೇ ಉದ್ಘಾಟಿಸಿದ್ದನ್ನು ಸ್ಮರಿಸಿದ ಸೋನಿಯಾ ಮಾನವತೆಯ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು. `ನಿರ್ದಿಷ್ಟ ಸಿದ್ಧಾಂತವನ್ನು ಪ್ರತಿಪಾದಿಸುವ ಕೆಲವೊಂದು ಸಂಸ್ಥೆಗಳು ಹಾಗೂ ಸಂಘಟನೆಗಳು ನಾರಾಯಣ ಗುರುಗಳು ಸಾರಿದ ಮಾನವತೆಯ ಸಂದೇಶವನ್ನು ತಿರುಚಲು ಯತ್ನಿಸುತ್ತಿವೆ. ಇದಕ್ಕೆ ಅವಕಾಶ ಕಲ್ಪಿಸಬಾರದು~ ಎಂದು ಅವರು ಪರೋಕ್ಷವಾಗಿ ರಾಜಕೀಯ ವಿರೋಧಿಗಳನ್ನು ಚುಚ್ಚಿದರು.ಶತಮಾನೋತ್ಸವದ ಶಿಲಾಫಲಕವನ್ನು ಅನಾವರಣಗೊಳಿಸಿದ ಸೋನಿಯಾ, ಬಳಿಕ ಕುದ್ರೋಳಿ ಗೋಕರ್ಣನಾರ್ಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದಸರಾ ಪ್ರಯುಕ್ತ ಪ್ರತಿಷ್ಠಾಪನೆಗೊಂಡಿರುವ ನವದುರ್ಗೆಯರ ಮೂರ್ತಿಗಳನ್ನು ವೀಕ್ಷಿಸಿದ ಅವರು ಬಳಿಕ ದಸರಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು.ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್, ಬ್ಲಾಸಂ ಫರ್ನಾಂಡಿಸ್, ಈಡಿಗ ಸಮುದಾಯದ ಮುಖಂಡ ಜೆ.ಪಿ.ನಾರಾಯಣ ಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಅಖಿಲ ಭಾರತ ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸುವರ್ಣ, ಅಖಿಲ ಭಾರತ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ಕ್ಷೇತ್ರಾಭಿವೃದ್ಧಿ ಮಂಡಳಿ ಸಹ ಅಧ್ಯಕ್ಷೆ ಊರ್ಮಿಳಾ ರಮೇಶ್‌ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry