ಸೋಮವಾರ, ಜೂನ್ 21, 2021
29 °C

ಜಾತ್ಯತೀತ ಭಾಷೆ ಕೊಂಕಣಿ: ಸಚಿವ ದೇಶಪಾಂಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ ಕೊಂಕಣಿ ಭಾಷೆಯು ಜಾತ್ಯಾತೀತ ಭಾಷೆಯಾಗಿ ಹೊರಹೊಮ್ಮಿದೆ’ ಎಂದು ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.ಇಲ್ಲಿನ ಗಾಂಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕೊಂಕಣಿ ಪರಿಷತ್‌ನ 29ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಹಿಂದೂಗಳು, ಬ್ರಾಹ್ಮಣರು, ಜೈನರು, ಮುಸಲ್ಮಾನರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ವರ್ಗದ ಜನರು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಕರಾವಳಿ ಭಾಗದಲ್ಲಿ ಕೊಂಕಣಿ ಭಾಷೆಯು ಜನರ ನಾಡಿಮಿಡಿತವಾಗಿದೆ. ಕೊಂಕಣಿ ಭಾಷೆಯು ಯಾವುದೇ ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಕೊಂಕಣಿ ಭಾಷೆಯು ಜಾತ್ಯತೀತ ಭಾಷೆಯಾಗಿ ಹೊರಹೊಮ್ಮಿದೆ’ ಎಂದರು.‘ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಮಾತ್ರ ಕೊಂಕಣಿ ಭಾಷಿಕರಿಲ್ಲ. ಬದಲಾಗಿ ಇಡೀ ವಿಶ್ವದ ತುಂಬೆಲ್ಲ ಕೊಂಕಣಿ ಭಾಷಿಕರು ಇದ್ದಾರೆ. ಕೊಂಕಣಿ ಭಾಷೆಯು ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಗಳಿಸಿದೆ. ಕೊಂಕಣಿ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಸಾಹಿತಿಗಳು, ಲೇಖಕರು, ಕವಿಗಳು ಹಾಗೂ ಕಲಾವಿದರು ನೀಡಿರುವ ಕೊಡುಗೆ ಅನನ್ಯ, ಅವಿಸ್ಮರಣೀಯ’ ಎಂದು ಬಣ್ಣಿಸಿದರು.‘ಗಡಿನಾಡು ಬೆಳಗಾವಿಯಲ್ಲಿ ಕೊಂಕಣಿ ಪರಿಷತ್‌ನ ಅಧಿವೇಶನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ, ಮಹಾರಾಷ್ಟ್ರ, ತಮಿಳನಾಡು ಹಾಗೂ ಗೋವಾ ರಾಜ್ಯಗಳ ಕೊಂಕಣಿ ಭಾಷಿಕರ ನಡುವೆ ಭಾತೃತ್ವ ಬೆಸೆಯಲು ಇದು ವೇದಿಕೆಯಾಗಲಿದೆ’ ಎಂದ ಅವರು, ‘ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಹಲವಾರು ಕ್ರಮ ಕೈಗೊಂಡಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಿದ್ದು, ರಾಜ್ಯದ ಕೆಲವೆಡೆಗಳಲ್ಲಿ 6ರಿಂದ 10ನೇ ತರಗತಿಯವರೆಗೆ ಪಠ್ಯದಲ್ಲಿ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಪರಿಚಯಿಸಿದೆ, ಕೊಂಕಣಿ ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಖಿಲ ಭಾರತೀಯ ಕೊಂಕಣಿ ಪರಿಷತ್‌ಗೆ ₨ 5 ಕೋಟಿ ಅನುದಾನ ನೀಡಿದೆ. ಮುಂಬರುವ ದಿನಗಳಲ್ಲೂ ಭಾಷೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಭರವಸೆ ನೀಡಿದರು.ಅಖಿಲ ಭಾರತೀಯ ಕೊಂಕಣಿ ಪರಿಷತ್‌ ಗೌರವಾಧ್ಯಕ್ಷ ಬಿ.ಎ. ಕುಟಿನೋ ಮಾತನಾಡಿ, ‘1939ರಲ್ಲಿ ಕಾರವಾರದಲ್ಲಿ ಅಖಿಲ ಭಾರತೀಯ ಕೊಂಕಣಿ ಪರಿಷತ್‌ ಜನ್ಮತಾಳಿದ್ದು, 75 ವರ್ಷಗಳನ್ನು ಪೂರೈಸಿ ಅಮೃತ  ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ನಾಡಿನುದ್ದಗಲಕ್ಕೂ ಪಸರಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ’ ಎಂದರು.ಅಖಿಲ ಭಾರತೀಯ ಕೊಂಕಣಿ ಪರಿಷತ್‌ ಅಧ್ಯಕ್ಷ ವಿ.ವಿ.ಶೆಣೈ, ಫೆಮೇಂಟೊ ರಿಸೋರ್‍ಸ್‌ ಗ್ರೂಪ್‌ನ ಅಧ್ಯಕ್ಷ ಅವಧೂತ ಟಿಂಬ್ಲೋ, ಅರವಿಂದ.ಪಿ, ಗೋಕುಲದಾಸ ಪ್ರಭು, ವಿನಾಯಕ ಕಾಮತ್‌, ಮುಕುಂದ ಕಾಮತ, ಸುನೀತಾ ಕಾಣೇಕರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ಶ್ರಮಿಸಿದ ಮಹನೀಯರನ್ನು ಸತ್ಕರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.