ಶುಕ್ರವಾರ, ಜೂನ್ 25, 2021
30 °C

ಜಾತ್ರೆಯಲ್ಲಿ ಯುವತಿಯರಾದ ಯುವಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಈ ಊರಲ್ಲಿ ಯುವತಿಯರೊಂದಿಗೆ ಯಾರು ಬೇಕಾದರೂ ನೃತ್ಯ ಮಾಡಬಹುದು. ಕೈ ಕೈ ಹಿಡಿದು ಕುಣಿಯಬಹುದು. ಯಾರೊಂದಿಗೆ ಕುಣಿದರೂ ಕೇಳುವವರೇ ಇಲ್ಲ! ಅಷ್ಟೇ ಅಲ್ಲ ಯುವತಿಯರೇ ಬಂದು ತಮ್ಮಂದಿಗೆ ಹೆಜ್ಜೆ ಹಾಕುವಂತೆ ಒತ್ತಾಯಿಸುತ್ತಾರೆ.ಆಶ್ಚರ್ಯವಾದರೂ ಇದು ನಿಜ. ಹಾಗಂತ ಹುಬ್ಬೇರಿಸಬೇಡಿ. ಏಕೆಂದರೆ ನೃತ್ಯ ಮಾಡುವ ಯುವತಿಯರು ಅಸಲಿಗೆ ಯುವಕರು. ಇದು ಯುವಕರು ಯುವತಿಯರಾಗುವ ವಿಶಿಷ್ಟ ಜಾತ್ರೆ.ಹೌದು. ಮೈಸೂರು ತಾಲ್ಲೂಕು ರಮ್ಮನಹಳ್ಳಿ ಗ್ರಾಮದೇವತೆ ಮಾರಮ್ಮನ ಜಾತ್ರಾ ಮಹೋತ್ಸವದಲ್ಲಿ ಇಂತಹ ವಿಶಿಷ್ಟ ಸಂಪ್ರದಾಯವನ್ನು ಕಳೆದ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನೆತ್ತಿಯ ಮೇಲಿಂದ ನೇಸರ ಮರೆಯಾಗುತ್ತಿದ್ದಂತೆ ಇಡೀ ಊರಿಗೆ ಊರೇ ಕೈಯಲ್ಲಿ ಕೋಲು ಹಿಡಿದು ಚಿತ್ರ-ವಿಚಿತ್ರ ವೇಷ ಧರಿಸಿಕೊಂಡು ಜಾತ್ರೆಗೆ ಅಣಿಯಾಗುತ್ತದೆ. 100ಕ್ಕೂ ಹೆಚ್ಚು ಯುವಕರು ಯುವತಿಯರು ನಾಚಿಸುವಂತೆ ಸ್ತ್ರೀವೇಷ ಧರಿಸಿ ಜಾತ್ರೆಯಲ್ಲಿ ಹೆಜ್ಜೆ ಹಾಕುತ್ತಾರೆ. ಸ್ತ್ರೀ ವೇಷಧಾರಿ ಯುವಕರ ಒನಪು, ಒಯ್ಯಾರು ನೋಡಿದರೆ ಮೋಸ ಹೋಗುವುದು ಖಂಡಿತ.ಮೈಸೂರಿನಿಂದ ಮಹದೇವಪುರ ರಸ್ತೆಯಲ್ಲಿ 10 ಕಿ.ಮೀ ಸಂಚರಿಸಿದರೆ ಸಿಗುವ ಪುಟ್ಟ ಗ್ರಾಮವೇ ರಮ್ಮನಹಳ್ಳಿ. ಎರಡು ವರ್ಷಗಳಿಗೊಮ್ಮೆ ಈ ಜಾತ್ರೆ ನಡೆಯುತ್ತದೆ. ಕೃಷಿ ಹಾಗೂ ಕೂಲಿ ಈ ಗ್ರಾಮದ ಮುಖ್ಯ ಕಸುಬು. ಯುಗಾದಿ ಸಮೀಪಿಸುತ್ತಿದ್ದಂತೆ ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟುತ್ತದೆ. ಚಿಕ್ಕ ಮಕ್ಕಳು, ಯುವಕರು ಹಾಗೂ ಪುರುಷರು ಹೀಗೆ ಎಲ್ಲರೂ ಕೈಯಲ್ಲಿ ಕೋಲು ಹಿಡಿದು ಕುಣಿದು ಕುಪ್ಪಳಿಸುವುದು ವಾಡಿಕೆ. ಸಾವಿರಾರು ಗ್ರಾಮಸ್ಥರು, ಚಿಕ್ಕ ಮಕ್ಕಳು ಕೈಯಲ್ಲಿ ಕೋಲು ಹಿಡಿದು ಹಲಗೆ  ಸಪ್ಪಳಕ್ಕೆ ಕೋಲು ಬಡಿಯುವುದನ್ನು ನೋಡುವುದೇ ಒಂದು ಸಂಭ್ರಮ.ಜಾತ್ರೆಯಲ್ಲಿ ಯುವಕರು ಸ್ತ್ರೀವೇಷ ಏಕೆ ಧರಿಸುತ್ತಾರೆ? ಎಂಬುದಕ್ಕೆ ಗ್ರಾಮಸ್ಥರು ನೀಡುವ ಉತ್ತರ ಸ್ವಾರಸ್ಯಕರವಾಗಿದೆ. `ಮಹಿಳೆಯರಿಗೆ ಋತುಸ್ರಾವ ಆದಾಗ ಸಾಮನ್ಯವಾಗಿ ಗ್ರಾಮದೇವತೆ ಪೂಜೆಯನ್ನು ನಿಷೇಧಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಮಾರಮ್ಮನನ್ನು ಒಲಿಸಿಕೊಳ್ಳಲು ಯುವಕರೇ ಸ್ತ್ರೀ ವೇಷ ಧರಿಸಿ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ಸುತ್ತ ಕೋಲುಗಳೊಂದಿಗೆ ಕುಣಿದು ದೇವಿಯನ್ನು ಆರಾಧಿಸುತ್ತಾರೆ~ ಎನ್ನುತ್ತಾರೆ ಗ್ರಾಮದ ಮುಖಂಡ ಟಿ.ನಾಗರಾಜು.17 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಿತ್ಯವೂ ಯುವಕರು ಸ್ತ್ರೀವೇಷ ಧರಿಸಿ ಹೆಜ್ಜೆ ಹಾಕುತ್ತಾರೆ. ಜಾತ್ರೆಯ ಕೊನೆಯ ದಿನವಾದ ಶನಿವಾರ (ಮಾ.11ರಂದು) ಉತ್ಸವದ ಸಂಭ್ರಮ ಇಮ್ಮಡಿಯಾಗುತ್ತದೆ. ಸೀರೆ, ಚೂಡಿದಾರ, ನೈಟಿ, ಜೀನ್ಸ್-ಟೀ ಷರ್ಟ್ ಹೀಗೆ ಬಗೆ ಬಗೆಯ ವೇಷ ಧರಿಸುವ ಯುವಕರು ದೇವಿಯನ್ನು ಒಲಿಸಿಕೊಳ್ಳಲು ಯತ್ನಿಸುವ ಪರಿ ರೋಚಕವಾಗಿರುತ್ತದೆ. ಮಾರಮ್ಮನ ಜಾತ್ರೆಯಲ್ಲಿ ಪ್ರಾಣಿಬಲಿ ಕಡ್ಡಾಯವಾಗಿ ನಿಷಿದ್ಧ. ಜಾತ್ರೆ ಮುಗಿಯುವವರೆಗೂ ಯಾರ ಮನೆಯಲ್ಲೂ ಮಾಂಸದ ಅಡುಗೆ ಮಾಡುವಂತಿಲ್ಲ. ಜೊತೆಗೆ ಮೆಣಸಿನಕಾಯಿ ಕುಟ್ಟುವುದು, ಒಗ್ಗರಣೆ ಹಾಕುವುದನ್ನೂ ನಿಷೇಧಿಸಲಾಗುತ್ತದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಯಾರೊಬ್ಬರೂ ಚಪ್ಪಲಿ ಧರಿಸುವಂತಿಲ್ಲ. ಅಕಸ್ಮಾತ್ ಧರಿಸಿದರೆ ದಂಡ ತೆರಲೇಬೇಕು. ಅಷ್ಟೇ ಅಲ್ಲ ಜಾತ್ರೆಯಲ್ಲಿ ಯುವತಿಯರು ಪಾಲ್ಗೊಳ್ಳುವಂತಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.