ಜಾತ್ರೆಯ ರಂಗು

7

ಜಾತ್ರೆಯ ರಂಗು

Published:
Updated:

ಬೆಂಗಳೂರು: ನಗರದ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಅಕ್ಷರ ಜಾತ್ರೆ ನಡೆದಿದ್ದರೆ ಮೈದಾನಕ್ಕೆ ಹೊಂದಿಕೊಂಡಂತಿರುವ ಪಂಪ ಮಹಾಕವಿ ರಸ್ತೆಯಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ತರಾವರಿ ವಸ್ತುಗಳು, ತಿಂಡಿ- ತಿನಿಸುಗಳ ಮಾರಾಟವು ಸಮ್ಮೇಳನಕ್ಕೆ ಸಂಭ್ರಮದ ಕಳೆ ತಂದಿತ್ತು.ನುಡಿಜಾತ್ರೆಯ ಹಿನ್ನೆಲೆಯಲ್ಲಿ ಪಂಪ ಮಹಾಕವಿ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಸಣ್ಣ ಪುಟ್ಟ ಮಳಿಗೆದಾರರು ಪಾದಚಾರಿ ಮಾರ್ಗದಲ್ಲಿ ವಿವಿಧ ವಸ್ತುಗಳ ಮಾರಾಟ ಆರಂಭಿಸಿದ್ದರು. ಬಣ್ಣ ಬಣ್ಣದ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಶರ್ಟು, ಪ್ಯಾಂಟ್, ಜಾಕೆಟ್, ಸ್ವೆಟರ್, ಪಾದರಕ್ಷೆಗಳು, ಆಭರಣಗಳು, ಆಕರ್ಷಕ ಗೃಹೋಪಯೋಗಿ ಉಪಕರಣಗಳು, ಯುವತಿಯರ ಸೌಂದರ್ಯ ಸಾಧನಗಳು... ಹೀಗೆ ತರಾವರಿ ವಸ್ತುಗಳ ಮಳಿಗೆಗಳು ದಿಢೀರ್ ತಲೆಯೆತ್ತಿದವು.ಮೆರವಣಿಗೆಯಲ್ಲಿ ಆಗಮಿಸಿದ ಪುಣ್ಯಕೋಟಿ ಸ್ತಬ್ಧಚಿತ್ರ ಸೇರಿದಂತೆ ಹಲವು ಆಕರ್ಷಕ ಸ್ತಬ್ಧಚಿತ್ರಗಳನ್ನು ರಸ್ತೆಯಲ್ಲಿ ಸಾಲಾಗಿ ನಿಲುಗಡೆ ಮಾಡಲಾಗಿತ್ತು. ರಸ್ತೆಯ ಎರಡೂ ಬದಿಯಲ್ಲಿ ನಾಡ ಬಾವುಟಗಳು ರಾರಾಜಿಸುತ್ತಿದ್ದವು.ಕಲ್ಲಂಗಡಿ, ಅನಾನಸ್, ಪರಂಗಿ ಹಣ್ಣು, ಸೌತೆಕಾಯಿಗಳನ್ನು ಜನರು ಸವಿದರು. ಬಿಸಿಲಿನ ಝಳಕ್ಕೆ ನಲುಗಿದವರು ಎಳನೀರು ಕುಡಿದು ದಣಿವಾರಿಸಿಕೊಂಡರು.ತಿನಿಸುಗಳ ಮಳಿಗೆ: ಊಟೋಪಚಾರಕ್ಕೆ ತುಸು ಅಡಚಣೆಯಾಗಿದ್ದು, ತಿನಿಸುಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರ ತಂದಿತ್ತು. ಕರವೇ ಕಾರ್ಯಕರ್ತರು ವಿತರಿಸುತ್ತಿದ್ದ ಮಜ್ಜಿಗೆ ಪಡೆಯಲು ಜನರು ಮುಗಿಬಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry