ಬುಧವಾರ, ನವೆಂಬರ್ 13, 2019
23 °C

ಜಾತ್ರೆ ಸಿರಿಗೆ `ದವನ' ಮೆರುಗು

Published:
Updated:

ಕನಕಗಿರಿ: ಮಳೆಗಾಲಕ್ಕೆ ಮಲ್ಲಿಗೆ ಚಳಿಗಾಲಕ ಚಂಡ ಹೂ

       ಬೆಟ್ಟನ ಬೇಸಿಗೆಗೆ ದವನವ/ ಕನಗೇರಿ

       ಬಟ್ಟ ಬೈಲಾಗ ಮಾರ‌್ಯಾವ//ಕನಕರಾಯನಿಗೆ `ದವನ' ಎಂಬ ಹೂ ಸಸ್ಯ ಪ್ರೀಯವಾಗಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಜಾತ್ರೆಗೆ ಬರುವ ಭಕ್ತರು ವಿಶೇಷವಾಗಿ `ಗೊಲ್ಲ' ಜನಾಂಗದವರು ಹೆಚ್ಚಾಗಿ ದವನವನ್ನು ಕಡ್ಡಾಯವಾಗಿ  ಖರೀದಿಸುತ್ತಾರೆ.ದೇವಸ್ಥಾನದ ಬಲಭಾಗದಲ್ಲಿರುವ ಸಂಜೀವ ಮೂರ್ತಿ ದೇವಸ್ಥಾನದ ಜಾಗೆಯಲ್ಲಿ ರಥೋತ್ಸವದ ದಿನ ಮಾತ್ರ ದವನ ಮಾರಾಟ ಜೋರಾಗಿರುತ್ತದೆ,

ತೇರು ತನ್ನ ಜಾಗ ಬಿಟ್ಟು ತನ್ನ ಮೂಲ ಸ್ಥಾನಕ್ಕೆ ಬರುವ ವರೆಗೆ ಮಾತ್ರ ಈ ದವನ ಮಾರಾಟ ನಡೆಯುತ್ತದೆ, ಎರಡ್ಮೂರು ತಾಸಿನಲ್ಲಿಯೆ ಭರ್ಜರಿ ವ್ಯಾಪಾರವಾಗುತ್ತದೆ, ಮೂಲ ಸ್ಥಾನ ತಲುಪಿದ ನಂತರ ಯಾರು ಈ ಔಷಧಿ ಸಸ್ಯವನ್ನು ಖರೀದಿಸುವದಿಲ್ಲ ಎಂಬುದು ವಿಶೇಷ.`ತೇರು ಎಳೆದು ದವನ ಮಾರಿತು' (ಸಂಕಷ್ಟದಿಂದ ಪಾರಾದೆವು) ಎಂಬ ಗಾದೆ ಮಾತು ಇಲ್ಲಿ ನಿಜವಾಗಿದೆ ಎಂದು ಕನಕಾಚಲಪತಿ ದೇವಸ್ಥಾನದ ಮಾಜಿ ಕಾರ್ಯದರ್ಶಿ ಯಂಕಣ್ಣ ಜನಾದ್ರಿ, ಜಯತೀರ್ಥ ಆಚಾರ್ಯ ಕಳ್ಳಿ ಹೇಳುತ್ತಾರೆ.ಲಕ್ಕುಂಡಿ, ದಾವಣಗೆರೆ, ಕಂಪ್ಲಿ ಇತರೆ ಸ್ಥಳದಲ್ಲಿ ಬೇಸಿಗೆ ಕಾಲದಲ್ಲಿ ಬೆಳೆಯುವ ಈ ದವನಕ್ಕೆ ಈ ಜಾತ್ರೆಯಲ್ಲಿ ಎಲ್ಲಿಲ್ಲದ ಬೇಡಿಕೆ, ಗೊಲ್ಲರು, ರೈತಾಪಿಗಳು ಈ ದವನವನ್ನು ಹೆಚ್ಚಾಗಿ ಖರೀದಿಸುತ್ತಾರೆ.ರೋಗ, ರುಜಿನಗಳಿಗೆ ತುತ್ತಾದ ದನಕರುಗಳಿಗೆ ಒಣಗಿಸಿದ ದವನ ಪುಡಿ ಮಾಡಿ ನೀರಿನಲ್ಲಿ ಕುಡಿಸಿದರೆ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ ಎಂಬ ಬಲವಾದ ನಂಬಿಕೆ ಈ ಭಾಗದಲ್ಲಿದೆ ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ದವನ ಮಾರಾಟವಾಗುತ್ತದೆ ಎಂದು ಅನಂತಕೃಷ್ಣ ಅರ್ಚಕ ಹೇಳುತ್ತಾರೆ.

ಬಾಳೇಹಣ್ಣಿಗೆ ದವನ ಸುತ್ತಿ ರಥೋತ್ಸವಕ್ಕೆ ಎಸೆಯಲಾಗುತ್ತದೆ, ಕನಕಾಚಲಪತಿ ಮೂರ್ತಿ ಪೂಜೆಗೆ  ದವನ ಬಳಸಲಾಗುತ್ತಿದೆ ಎಂದು ಜನಾರ್ದನ ಅರ್ಚಕ ತಿಳಿಸುತ್ತಾರೆ. ದೇವರಿಗೆ ಬೇಡಿಕೊಂಡ ಹಾಗೂ ಮಡಿವಂತಿಕೆ, ಶ್ರದ್ಧೆಯಿಂದ ಕನಕಾರಾಯನ ಸೇವೆ ಸಲ್ಲಿಸುವ ಗೊಲ್ಲರ ಸಮುದಾಯದವರು ತಮ್ಮ ಧೀಮಂತಿಕೆ ಮೆರೆಯುವುದು ಪ್ರತಿ ವರ್ಷ ಇಲ್ಲಿ ಕಾಣಿಸುತ್ತದೆ.ಅರಿಶಿಣ ಧೋತರ, ರುಮಾಲು, ಬನೀನ್ ಧರಿಸಿ ತೇರು, ಉಚ್ಛಾಯಗಳ ಮುಂದೆ ಕುಣಿಯುತ್ತಾ ಸಾಗುವ ದೃಶ್ಯ ಕಣ್ಮನ ಸೆಳೆಯುತ್ತದೆ.

ಸ್ಥಳೀಯರು ಹಾಗೂ ಗೊಲ್ಲರ ಮಧ್ಯೆ ಉಚ್ಛಾಯ, ತೇರು ಎಳೆಯುವ ದೃಶ್ಯ ನೋಡುವುದು ರೋಮಂಚನಕಾರಿ.ಐತಿಹಾಸಿಕ ಪ್ರಸಿದ್ಧಿ ಕನಕಾಚಲಪತಿ ಜಾತ್ರೆ ಹೋಳಿ ಹುಣ್ಣಿಮೆ ಹಿಂದಿನ ದಿನ ಕಂಕಣ ಕಟ್ಟುವುದು, ಧ್ವಜರೋಹಣದಿಂದ ಆರಂಭವಾಗುತ್ತಿದ್ದು ಪ್ರತಿ ದಿನವೂ ರಾಜಬೀದಿಯಲ್ಲಿ ಉಚ್ಛಾಯಗಳು ನಡೆದು ಕೊನೆಯ ದಿನ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.ಈ ಸಮಯದಲ್ಲಿ ಭಕ್ತರು ತಮ್ಮ ಮನೆಯಲ್ಲಿ ಉಪಾಸನೆ, ಭಜನೆ, ದಾಸೋಹ ಕಾರ್ಯಕ್ರಮ ಮಾಡಿ ಸಂಭ್ರಮಿಸುತ್ತಾರೆ.

ಪ್ರತಿಕ್ರಿಯಿಸಿ (+)