ಜಾನಪದಕ್ಕೆ ದನಿಗೂಡಿಸಿದ ಹಳೆಬೇರು-ಹೊಸಚಿಗುರು

7

ಜಾನಪದಕ್ಕೆ ದನಿಗೂಡಿಸಿದ ಹಳೆಬೇರು-ಹೊಸಚಿಗುರು

Published:
Updated:

ಮಂಡ್ಯ: ಹೂವ ಕುಯ್ಯೋಣ ಬನ್ನಿ..

ಮೊಗ್ಗ ಎತ್ತೋಣ ಬನ್ನಿ,

ಹೂವ ಬನದಲ್ಲಿ

ಮಾದೇವನ ನೋಡಿ  ಹೂವ ಕುಯ್ಯೋಣ ಬನ್ನಿ..



ಹೀಗೆ ಬಾಯಿಯಿಂದ ಬಾಯಿಗೆ ಹರಿದಾಡುತ್ತಾ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತಲೇ ತತ್ವ, ಸಂದೇಶಗಳನ್ನು ಅನಾವರಣ ಮಾಡುವ ಇಂಥ ಅಸಂಖ್ಯ ಗೀತೆಗಳು ಶನಿವಾರ ರೈತ ಸಭಾಂಗಣದಲ್ಲಿ ಅನುರಣಿಸಿದವು.



ಕಾಲ ಉರುಳಿದಂತೆ ಜನಪದ ಗಾಯಕರ  ಹಾವಭಾವ, ಉಡುಪು ಬದಲಾದರೂ ಜನಪದ ಗೀತೆಗಳ ದಾಟಿ, ಅದರ ಪರಿಣಾಮ ಒಂದೇ ಎಂಬುದು ಆ ಸಭಾಂಗಣದಲ್ಲಿ ಅನಾವರಣಗೊಂಡಿತು. ಅದು, ಮೂಲ ಮತ್ತು ಆಧುನಿಕ ಜನಪದಗಾಯಕರನ್ನು ಮುಖಾಮುಖಿಯಾಗಿಸಿದ `ಹಳೆ ಬೇರು - ಹೊಸ ಚಿಗುರು~  ಕಾರ್ಯಕ್ರಮ.



ಜಿಲ್ಲಾಡಳಿತದ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಕರ್ನಾಟಕ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.



ಕಾರ್ಯಕ್ರಮದ ಶೀರ್ಷಿಕೆಯಂತೆ ಅದು ಹಳೇ ಬೇರು ಮತ್ತು ಹೊಸ ಚಿಗುರಿನ ಸಮಾಗಮ. ಜಾನಪದವನ್ನೇ ಉಸಿರಾಗಿಸಿಕೊಂಡ ಹಿರಿಯ ಗಾಯಕರ ಜೊತೆಗೆ, ಹೊಸ ತಲೆಮಾರಿನ ಗಾಯಕರೂ ಸೇರಿಕೊಂಡಿದ್ದರು.



ಅನಕ್ಷರಸ್ಥರಾದ ಜಾನಪದ ಗೀತೆಗಳ ಕಣಜಗಳೇ ಆದ ಗಾಯಕರು ಒಂದೆಡೇ ಇದ್ದರೆ, ಅಕ್ಷರ ಕಲಿತ ಜನಪದ ಕಲಾವಿದರು ಇನ್ನೊಂದು ಕಡೆ ಗೀತೆಗಳಿಗೆ ದನಿಯಾದರು. ಹಿರಿಯ ಕಲಾವಿದರಿಗೆ ತಂಬೂರಿ, ತಂಜರ, ಚಿಟಿಕೆ, ನಗಾರಿ, ತಮಟೆ ಸಾಥ್ ನೀಡಿದರೆ; ಹೊಸ ತಲೆಮಾರಿನ ಗಾಯಕರಿಗೆ ಕೀಬೋರ್ಡ್, ತಬಲಾ ಜೊತೆಯಾಗಿದ್ದವು.

ಅವರ ಉಡುಗೆ ತೊಡುಗೆಗಳು ಜಾನಪದ ಕಲಾವಿದರ ರೂಪಾಂತರವನ್ನು ಬಿಂಬಿಸುತ್ತಿದ್ದವು.  ಹಿರಿಯ ಕಲಾವಿದರ ಹೆಗಲಲ್ಲಿ ಜೋಳಿಗೆ ಇ್ದ್ದದು, ರುದ್ರಾಕ್ಷಿ, ವಿಭೂತಿಧಾರಿಗಳಾಗಿದ್ದು, ಪಂಚೆಯನ್ನು ಧರಿಸಿದ್ದರು. ಇನ್ನೊಂದೆಡೆ, ಕೀಬೋಡ್, ತಬಲಾ ಜೊತೆ ಸಜ್ಜಾಗಿದ್ದ ನವಪೀಳಿಗೆಯ ಗಾಯಕರು ಪ್ಯಾಂಟ್‌ಧಾರಿಗಳಾಗಿದ್ದರು.



ಒಟ್ಟಾರೆ, ಎರಡು ತಲೆಮಾರಿನ ಗಾಯಕರು ಪ್ರಸ್ತುತಪಡಿಸಿದ ಈ ನೆಲದ ಕಲೆಯಾದ ಜನಪದದ ಗೀತೆಗಳು ಕೇಳುಗರಿಗೆ ಕರ್ಣಾನಂದ ಉಂಟು ಮಾಡಿದವರು. ಹಾಡುಗಳನ್ನು ಮನಸ್ಸನ್ನು ತಣಿಸಿದರೆ, ಅದೇ ವೇಳೆ ಹೊರಗೆ ಧೋ ಎಂದು ಸುರಿಯುತ್ತಿದ್ದ ಮಳೆ  ಸಂಗೀತಕ್ಕೆ ಕೋರಸ್ ಸೇರಿಸುತ್ತಾ ಇಳೆ ತಂಪಾಗಿಸಿತು.



ಕೋಟಿಗೊಬ್ಬ ಶರಣ,

ಪರಶಿವನ ಆಭರಣ..

 ಹಾಗೂ

ನಂಬಿದವರ ಮನೆಯ ಒಳಗೆ,

ತುಂಬಿ ತುಳುಕಾಡುತಾವ..

ಸಿದ್ದಯ್ಯಾ ಸ್ವಾಮಿ ಬಾರೋ



ಎಂಬ ಸಾಲುಗಳನ್ನು ಹೊಂದಿದ್ದ ಗೀತೆಗಳೇ ಅಲ್ಲದೇ ಕಾರ್ಯಕ್ರಮದಲ್ಲಿ ಪಟಕುಣಿತ, ಪೂಜಾ ಕುಣಿತ, ವೀರಗಾಸೆ, ತಾತ್ವಿಕ ಪದಗಳು, ದೇವರನಾಮ, ರಂಗಪದಗಳು, ಭಜನೆ ಕೂಡಾ ಇತ್ತು. ಜೊತೆಗೆ, ಜಾನಪದ ಸಂಸ್ಕೃತಿ, ಕಲೆ ಕುರಿತ ಸಂವಾದವು ಇತ್ತು. ಆದರೆ, ಹಾಜರಾತಿ ಮಾತ್ರ ಉತ್ಸಾಹದಾಯಕ ಎನ್ನುವಂತೆ ಇರಲಿಲ್ಲ.



ಹಿರಿಯರಾದ ತಂಬೂರಿ ಜವರಯ್ಯ, ಬೋರಮ್ಮ ದಂಪತಿ, ಚಿಕ್ಕತಾಮಯ್ಯ, ಗೊರವಾಲೆ ರುದ್ರಪ್ಪ, ಕೆ.ಸಿ.ರಾಮೇಗೌಡ, ಬೇವಿನಹಳ್ಳಿ ನಂಜಮ್ಮ, ಶಿವಾರದ ಮರಿಗೌಡ; ಹೊಸ ಪೀಳಿಗೆಯ ಕಲಾವಿದರಾದ ಹುರುಗಲವಾಡಿ ರಾಮಯ್ಯ, ರಮೇಶ್ ಕೀಲಾರ, ಗಾಮನಹಳ್ಳಿ ಸ್ವಾಮಿ, ಉಮೇಶ್ ಶಿವಾರ, ರಮ್ಯಾ, ವಳೆಗೆರಹಳ್ಳಿ ಲೋಕೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry