ಮಂಗಳವಾರ, ನವೆಂಬರ್ 19, 2019
26 °C

`ಜಾನಪದ ಅಕ್ಷರಜ್ಞಾನ ಇಲ್ಲದವರ ಬಳುವಳಿ'

Published:
Updated:
`ಜಾನಪದ ಅಕ್ಷರಜ್ಞಾನ ಇಲ್ಲದವರ ಬಳುವಳಿ'

ಹಾಸನ: `ಸಂಗೀತ ಮತ್ತು ನೃತ್ಯ ದೇಶದ ಕೆಳಸ್ತರದ ಜನರಿಂದ ಬಂದ ಕಲಾ ಪ್ರಕಾರಗಳು. ಅನಕ್ಷರಸ್ತರು ಕೊಟ್ಟ ಈ ಶ್ರೀಮಂತ ಬಳುವಳಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ' ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಜಾನಪದ ಕಲಾ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಜಾನಪದ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದವರನ್ನು ಸ್ಮರಿಸುವ ಕಾರ್ಯವನ್ನು ಜಾನಪದ ಅಕಾಡೆಮಿ ಮಾಡುತ್ತಿದೆ. ಈ ಸಮಾರಂಭವೂ ಇದಕ್ಕೆ ಸಾಕ್ಷಿ. ಹಿರಿಯರನ್ನು ಸ್ಮರಿಸುವುದರ ಜತೆಗೆ ಯುವ ಜನಾಂಗಕ್ಕೆ ನಮ್ಮ ಜಾನಪದ ಕಲಾ ಪ್ರಕಾರಗಳು, ಸಂಸ್ಕೃತಿಯನ್ನು ಪರಿಚಯಿಸುವುದು ಅಗತ್ಯ.ಈ ನಿಟ್ಟಿನಲ್ಲಿ ಅಕಾಡೆಮಿ ವೆಬ್‌ಸೈಟ್ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಿದೆ. ಈ ವೆಬ್‌ಸೈಟ್‌ನಲ್ಲಿ ಜಾನಪದ ಕಲಾವಿದರ ಜೀವನ- ಸಾಧನೆಗಳನ್ನು ದಾಖಲಿಸ ಲಾಗುತ್ತದೆ. ಅಲ್ಲದೆ ಆ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ತರುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.ಸಾಹಿತಿ ಕಾಳೇಗೌಡ ನಾಗವಾರ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಎಸ್.ಕೆ. ಕರೀಂ ಖಾನ್ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜೀವನ- ಸಾಧನೆ ಕುರಿತ ವಿಚಾರಗೋಷ್ಠಿಗಳು ಹಾಗೂ ಕಲಾಮೇಳ ನಡೆಯಿತು.

ಪ್ರತಿಕ್ರಿಯಿಸಿ (+)