ಜಾನಪದ ಅಧ್ಯಯನ ಕೊರತೆ: ಮೊಯಿಲಿ

7

ಜಾನಪದ ಅಧ್ಯಯನ ಕೊರತೆ: ಮೊಯಿಲಿ

Published:
Updated:

ಮೈಸೂರು: ‘ಕರ್ನಾಟಕದಲ್ಲಿ ಜಾನಪದ ವಿಷಯದಲ್ಲಿ ವ್ಯವಸ್ಥಿತ ಅಧ್ಯಯನದ ಕೊರತೆ ಇದೆ’ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಬುಧವಾರ ಹೇಳಿದರು.ಮಹಾಜನ ಜೂನಿಯರ್ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಅಖಿಲ ಭಾರತ ದೇಜಗೌ ಸಾಂಸ್ಕೃತಿಕ ಟ್ರಸ್ಟ್  ಮತ್ತು ಬೆಳಕೆರೆ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ದೇಜಗೌ ಅವರ ‘ಜಾನಪದ ಮಹಾಸಂಪುಟ’ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ನಮ್ಮಲ್ಲಿ ಜಾನಪದ ಕುರಿತು ಪಿಎಚ್‌ಡಿ ಮಹಾಪ್ರಬಂಧಗಳು ಬಂದಿವೆ. ಆದರೆ ಬಹುತೇಕ ಮಹಾಪ್ರಬಂಧಗಳಲ್ಲಿ ಏನೇನೂ ಇರುವುದಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯಗಳು ಜಾನಪದ ಕುರಿತಾದ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.‘ಕನ್ನಡದಲ್ಲಿ ಶೇ. 99 ರಷ್ಟು ಕಾಲ್ಪನಿಕ ಕಾದಂಬರಿಗಳಿವೆಯೇ ಹೊರತು ಚಾರಿತ್ರಿಕ, ಜಾನಪದ, ಸಾಂಸ್ಕೃತಿಕ ಕಾದಂಬರಿಗಳು ತುಂಬಾ ಕಡಿಮೆ. ನಮ್ಮಲ್ಲಿ ಅಧ್ಯಯನದ ಕೊರತೆ ಎದ್ದು ಕಾಣಿಸುತ್ತದೆ. ಜಾನಪದ ಕ್ಷೇತ್ರದ ಪರಿಣತರ ಅವರಂತಹ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ನಮ್ಮ ಬೇರುಗಳು ಜಾನಪದದಲ್ಲಿವೆ. ಜಾನಪದ ಜ್ಞಾನದ ಖಣಿ, ಅದನ್ನು ಅಗೆದಷ್ಟೂ ಹೆಚ್ಚು ಸಿಗುತ್ತಲೇ ಇರುತ್ತದೆ. ಅದು ಎಂದೆಂದಿಗೂ ಮುಗಿಯದ ಅಕ್ಷಯ ಪಾತ್ರೆ. ಆದರೆ ಇಂತಹ ಜಾನಪದವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ನನಗೆ ಇದರ ಸಂಪೂರ್ಣ ಅನುಭವವಾಗಿದೆ. ಆದ್ದರಿಂದಲೇ ನನ್ನ ಮಹಾಕಾವ್ಯದಲ್ಲಿ ಜಾನಪದ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ನನ್ನ ಮಹಾಕಾವ್ಯ ವೈವಿಧ್ಯಮಯವಾಗಿದೆ. ಜಾನಪದ ಆದಿ ಅಂತ್ಯ ಎರಡೂ ಆಗಿದ್ದು ನಿರಂತರವಾಗಿದೆ’ ಎಂದರು.‘ನನ್ನ ಸಾಹಿತ್ಯದಲ್ಲಿ ದೇಜಗೌ ಅವರ ಗದ್ಯದ ಪ್ರಭಾವವಿದೆ. ಅವರ ಗದ್ಯವನ್ನು ಓದಿ ಸಾಹಿತ್ಯದತ್ತ ಆಕರ್ಷಿತನಾದೆ. ದೇಜಗೌ ಜಾನಪದಕ್ಕೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟಿದ್ದಾರೆ. ಇವರು ಗದ್ಯ ಮತ್ತು ಅನುವಾದ ಸಾಹಿತ್ಯದ ಬ್ರಹ್ಮರಾಗಿದ್ದಾರೆ. ಎಲ್ಲ ಪ್ರಕಾರಗಳಲ್ಲಿ ಕೆಲಸ ಮಾಡುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿಕೊಂಡಿದ್ದಾರೆ. ನಾನು ದ್ರೌಪದಿ ಕುರಿತು ಮಹಾಕಾವ್ಯ ಬರೆಯುತ್ತಿದ್ದೇನೆ. ಈಗಾಗಲೇ 2 ಸಾವಿರ ಪುಟಗಳಾಗಿವೆ’ ಎಂದು ಹೇಳಿದರು.ನಾಡೋಜ ದೇಜಗೌ ಉಪಸ್ಥಿತರಿದ್ದರು. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಮಾತನಾಡಿದರು. ಸಾಹಿತಿ ಡಾ.ಮಳಲಿ ವಸಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ರ ಮತ್ತು ಲಿಖಿತ ಭಾಷಣವನ್ನು ವಾಚಿಸಿದರು. ಪ್ರೊ.ಕೆ.ಭೈರವಮೂರ್ತಿ ಸ್ವಾಗತಿಸಿದರು. ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ನಿರೂಪಿಸಿದರು. ಡಾ.ಕೆ.ಎಸ್.ರತ್ನಮ್ಮ   ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry