ಗುರುವಾರ , ಜೂನ್ 24, 2021
23 °C
‘ಮಹಲಿಂಗ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸಾಣೇಹಳ್ಳಿ ಶ್ರೀ ಮಾಹಿತಿ

ಜಾನಪದ ಕಲಾವಿದರ ದಾಖಲೀಕರಣಕ್ಕೆ ಶೀಘ್ರ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಾಧಕರ ಪಂಚೇಂದ್ರಿಯಗಳು ಸುಸ್ಥಿತಿಯಲ್ಲಿ ಇರುವಾಗಲೇ ಪ್ರಶಸ್ತಿಗಳು ಸಿಗಬೇಕು ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ನಗರದಲ್ಲಿ ಮಂಗಳವಾರ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಟಿ.ತಿಪ್ಪೇಸ್ವಾಮಿ ಅವರಿಗೆ ‘ಮಹಲಿಂಗ ರಂಗ ಪ್ರಶಸ್ತಿ’ ಹಾಗೂ 12 ಮಂದಿ ಗ್ರಾಮೀಣ ಸಾಧಕರಿಗೆ ‘ಗ್ರಾಮೀಣ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಬಹುತೇಕ ಪ್ರಶಸ್ತಿಗಳು ಕಣ್ಣು, ಬಾಯಿ, ಕಿವಿ ಸುಸ್ಥಿತಿಯಲ್ಲಿ ಇಲ್ಲದ ಸಂದರ್ಭದಲ್ಲಿ ಸಿಗುತ್ತವೆ. ಈ ರೀತಿ ಆಗಬಾರದು ಎಂದ ಅವರು, ಹಿರಿಯರು ಮಕ್ಕಳಿಗೆ ಉತ್ತಮ ಮಾರ್ಗ ತೋರಿಸಬೇಕು. ಆಗ ಮಾತ್ರ ಸಮಾಜ ಉತ್ತಮ ಹಾದಿಯಲ್ಲಿ ಸಾಗಲು ಸಾಧ್ಯ. ಉಳ್ಳವರು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆಗ ತೃಪ್ತಿ ಸಿಗುತ್ತದೆ ಎಂದು ಹೇಳಿದರು.ದಾಖಲೀಕರಣ: ಜಾನಪದ ಕಲೆಗಳು ಉಳಿಯಬೇಕಾಗಿದೆ. ಕಲಾವಿದರನ್ನು ಗುರುತಿಸುವ ಕೆಲಸ ಕೂಡ ಆಗಬೇಕು. ಸಂಘಟನೆ ಮಾಡುವ ಮೂಲಕ ಅವರಿಗೆ ಸೌಲಭ್ಯ ಕಲ್ಪಿಸಬೇಕಾಗಿದೆ. ದಾವಣಗೆರೆ– ಚಿತ್ರದುರ್ಗ ಜಿಲ್ಲೆಯ ಜಾನಪದ ಕಲಾವಿದರ ದಾಖಲೀಕರಣ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಮಹಲಿಂಗ ರಂಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಿ. ಸಭಾಂಗಣಕ್ಕೆ ತೋರಣದಿಂದ ಸಿಂಗಾರ ಮಾಡಿ, ವಿದ್ಯುತ್‌ ಅಭಾವ ಆಗದಂತೆ ನೋಡಿಕೊಳ್ಳಿ ಎಂದು ಸ್ವಾಮೀಜಿ ವಿದ್ಯುತ್‌ ಕಡಿತ ಆಗಿದ್ದಕ್ಕೆ ಸಲಹೆ ನೀಡಿದರು.ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಮಹಲಿಂಗ ರಂಗ ಪ್ರಶಸ್ತಿ ಜಿಲ್ಲೆಯ ಮಟ್ಟಿಗೆ ಪಂಪ ಪ್ರಶಸ್ತಿ ಇದ್ದಂತೆ. ಮಹಲಿಂಗ ರಂಗ ಮಹಾಕವಿ ಏನೂ ಅಲ್ಲ. ಅವನೊಬ್ಬ ಕವಿ ಹೃದಯದ ತತ್ವಜ್ಞ. ಜಿಲ್ಲೆಯ ದೃಷ್ಟಿಯಿಂದ ಗಣ್ಯ ಲೇಖಕ ಎಂದು ಹೇಳಿದರು.ಪ್ರಶಸ್ತಿ ಪುರಸ್ಕೃತ ಡಾ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಅಂತರಂಗದ ಸೆಲೆ ಬತ್ತಿ ಹೋಗಿದೆ. ಮಾನವೀಯತೆ ಇಲ್ಲದಾಗಿದೆ. ಸಮಾಜದಲ್ಲಿ ಅಭೂತಪೂರ್ವ ಶಕ್ತಿಯೊಂದು ಉದಯ ಆಗಬೇಕು. ಕುವೆಂಪು, ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ನಮಗೆ ಸ್ಫೂರ್ತಿ ಎಂದು ಹೇಳಿದರು.ಮೋತಿ ಆರ್‌.ಪರಮೇಶ್ವರ ರಾವ್‌, ಡಾ.ಎಚ್‌.ವಿ.ಶಿವಶಂಕರ, ಕಸಾಪ ಅಧ್ಯಕ್ಷ ಎ.ಆರ್‌.ಉಜ್ಜನಪ್ಪ, ಗೌರವ ಕಾರ್ಯದರ್ಶಿ ಬಾಮ ಬಸವರಾಜಯ್ಯ, ಮಂಜುನಾಥ್‌ ಕುರ್ಕಿ, ನಾಗಭೂಷಣ್‌ ತೌಡೂರು, ಎಂ.ಪಿ.ಚಂದ್ರಪ್ಪ, ಹೇಮಣ್ಣ ಹಾಜರಿದ್ದರು.ಇದೇ ವೇಳೆ ಐರಣಿ ಚಂದ್ರು, ಟಿ.ಪಾಂಡು, ಎಚ್‌.ಡಿ.ರುದ್ರಗೌಡ, ರಾಜು ಸಣ್ಣಮನಿ, ಚಲುವಾದಿ ವೀರಪ್ಪ, ಬಿ.ನಾಗಮ್ಮ, ಜಿ.ಬಿ.ಕುಮಾರಸ್ವಾಮಿ, ಲಕ್ಷ್ಮಿ ದೇವಮ್ಮ, ಕರಿಬಸಪ್ಪ, ಎಂ.ಸಾವಿತ್ರಮ್ಮ, ನಿಂಗಪ್ಪ, ಗೌರಮ್ಮ ಅವರಿಗೆ ‘ಗ್ರಾಮೀಣ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.