ಗುರುವಾರ , ಮೇ 26, 2022
23 °C

ಜಾನಪದ ಖಜಾನೆ ಅಂಬವ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನಪದ ಖಜಾನೆ ಅಂಬವ್ವ

ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಾಗ ಗಂಡ ತಿಂದಪ್ಪನೊಂದಿಗೆ ಸುಖ ದಾಂಪತ್ಯ ಪಡೆದದ್ದು ಮೂರು ವರ್ಷ ಮಾತ್ರ. ಗಂಡ ತೀರಿಕೊಂಡಾಗ ಒಡಲಲ್ಲಿ ಇದ್ದದ್ದು ಹೆಣ್ಣು ಕೂಸು. ಮುಂದಿನ ದಿನಮಾನದಲ್ಲಿ ಆಕೆಯ ಕೈಹಿಡಿದು ಸಂತೈಸಿದ್ದು ಬಾಲ್ಯದಲ್ಲಿ ಕಲಿತ ಜಾನಪದ ಹಾಡಿನ ಖಜಾನೆ. ಜಾನಪದ ಹಾಡುಗಳೊಂದಿಗೆ ಸ್ವಯಂ ಹಾಡು ಕಟ್ಟುವುದನ್ನು ಕಲಿತರು. ಹೊಲ, ಮನೆಯ ಬದುಕು ಅನುಭವಗಳೊಂದಿಗೆ ಮದುವೆ, ಮೈನೆರೆದ ಸಂದರ್ಭ, ತೊಟ್ಟಿಲು ಕಾರ್ಯ, ಊರುಕೇರಿಯ ಜಾತ್ರೆ ಸಂದರ್ಭಗಳಲ್ಲಿ ಹಾಡಿ ಮನ ತಣಿಸಿದ್ದಾರೆ.ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಗರಿ ಕ್ಯಾದಿಗೆಹಳ್ಳಿಯೇ ಅಂಬವ್ವನ ಊರು. ಆಕೆಯ ಮನೆತನದ ಹೆಸರು ಬೊಮ್ನಳ್ಳಿ ಎಂದು. ಬೊಮ್ನಳ್ಳಿ ಅಂಬವ್ವನೆಂದರೆ ತಮ್ಮೂರಿನವರಿಗೆ ಮಾತ್ರ ಗೊತ್ತು. ಹೊರ ಜಗತ್ತಿಗೆ ಆಕೆ ಕ್ಯಾದಿಗೆಹಳ್ಳಿ ಅಂಬವ್ವಳೇ.  ಅನಕ್ಷರಸ್ಥರಾಗಿರುವುದರಿಂದ ಇವರಿಗೆ ತನ್ನ ವಯಸ್ಸು ಮತ್ತು ತಾನು ಹಾಡುವ ಹಾಡಿನ ಸಂಖ್ಯೆ ಏನೊಂದೂ ಗೊತ್ತಿಲ್ಲ. ಆಕೆಯ ಚರ್ಯೆ ನೋಡಿದವರಿಗೆ ಅರವತ್ತರ ಗಡಿ ದಾಟಿದ್ದಾಳೆ ಎನ್ನಿಸುತ್ತದೆ. ಎಂಟು ದಿನಗಟ್ಟಲೆ ಹಾಡಿದರೂ ತನ್ನ ಹಾಡುಗಳು ಮುಗಿಯುವುದಿಲ್ಲ ಎನ್ನುತ್ತಾರೆ ಅಂಬವ್ವ.ಕೂಡ್ಲಿಗಿ ತಾಲ್ಲೂಕಿನ ಬೋರ್ನಳ್ಳಿ ಗ್ರಾಮ ಅಂಬವ್ವನ  ತವರು. ಮೂಕಪ್ಪ ಹಾಗೂ ಗೋಣೆವ್ವ ತಂದೆ-ತಾಯಂದಿರು. ಅನಕ್ಷರಸ್ಥ ಹಾಲುಮತ ಕುಟುಂಬ ಇವರದು. ಗೊಂದಲಿಗರು, ಕಿನ್ನರಿಜೋಗಿ, ಹಗಲುವೇಷಗಾರರ ಮೋಡಿಗೆ ಚಿಕ್ಕಂದಿನಲ್ಲೇ ಒಲಿದಾಕೆ ಇವರು. ಒಂದು ಸಲ ಕೇಳಿದ್ದನ್ನು ಮತ್ತೆಂದೂ ಬಿಟ್ಟು ಹೋಗದಂತೆ ತನ್ನಲ್ಲೇ ಉಳಿಸಿಕೊಂಡಾಕೆ. ಎಮ್ಮೆ ಕಾಯುವಾಗ ಸಹವರ್ತಿಗಳ ಜೊತೆ ಹಾಡಿ ತೋರಿಸುವಾಗ ಜತನ ಮಾಡಿದ್ದು ಈ ಜಾನಪದ.1977ರ ಸುಮಾರಿಗೆ ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಹೊಸದಾಗಿ ಕನ್ನಡ ಅಧ್ಯಾಪಕರಾಗಿ ಆಗಮಿಸಿದ್ದ ಎಸ್.ಎಸ್. ಹಿರೇಮಠ ಅವರನ್ನು ತನ್ನ ಹಾಡಿನ ಮೂಲಕ ಗಮನ ಸೆಳೆದಿದ್ದರು. ಹದಿನೈದು ಹಾಡುಗಳನ್ನು ಅವರ ಸಮ್ಮುಖದಲ್ಲಿ ಹಾಡಿದರು ಈಕೆ. ಆಗ ಹಿರೇಮಠ ಅವರು ತಮ್ಮ ಮಿತ್ರ ಬಾಲರಾಜನ ಸಹಕಾರ ದೊಂದಿಗೆ ಹೊರತಂದ ಜಾನಪದ ಸಂಗ್ರಹವೇ ‘ಕ್ಯಾದಿಗೆಹಳ್ಳಿ ಅಂಬವ್ವನ ಪದಗಳು’ ಆ ಮೂಲಕ ಈಕೆಯಲ್ಲಿ ಅಡಗಿರುವ ಕಲಾದೇವಿಯನ್ನು ಹೊರ ಜಗತ್ತಿಗೆ ಮೊದಲ ಬಾರಿಗೆ ಪರಿಚಯಿಸಿ, ಅಂಬವ್ವನ ಅಭಿಮಾನಕ್ಕೆ ಒಳಗಾದವರು ದಿ.ಎಸ್.ಎಸ್. ಹಿರೇಮಠ ಗುರುಗಳು. ಬಾಚಿಗೊಂಡನ ಹಳ್ಳಿಯ ಖ್ಯಾತ ಜಾನಪದ ಸಂಗ್ರಾಹಕ ದಿ.ಕೆ. ವಿರೂಪಾಕ್ಷಗೌಡರು ಹಾಗೂ ಅವರ ತಂದೆ ಗಾಂಧಿವಾದಿ, ರಾಜಕಾರಣಿ ಚನ್ನಬಸವನಗೌಡರು ಇವರ ಮಾಸಾಶನಕ್ಕೆ ವ್ಯವಸ್ಥೆ ಮಾಡಿಸಿದರು. ಧಾರವಾಡ ಆಕಾಶವಾಣಿಯಲ್ಲಿ ಹಾಡುವ ಅವಕಾಶವೂ ದೊರೆಯಿತು. 1979 ರಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಜಾಥಾ ಕೈಗೊಂಡಾಗ ಸುಮಾರು 23 ಗ್ರಾಮಗಳಲ್ಲಿ  ಜಾನಪದ ಗೀತೆಗಳನ್ನು ಹಾಡಿ ಜನಮನ್ನಣೆ ಗಳಿಸಿದರು. ಇವರ ಹಾಡುಗಳಲ್ಲಿ ‘ಕೋಟಿ-ಕೋಟಿ ಕಷ್ಟಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮ ನನ ತಂಗಿ ಅನಸೂಯ’ ಮೊದಲಾದ ಸಮುದಾಯ ಹೋರಾಟದ ಗೀತೆಗಳನ್ನು ಹಾಡಿದರು. ‘ನಿನಗಾಗಿ ನಾನು ಕೂಗಿಲ್ಲ’ ಎಂಬ ಹಾಡಲ್ಲಿ ಸಮುದಾಯ ತಂಡದವರೂ ಹಾಡಲು ಕಲಿತರು. ಇವರ ಹಾಡುಗಳಲ್ಲಿ ಸವದತ್ತಿ ಎಲ್ಲಮ್ಮ, ಕಾಡಸಿದ್ಧಮ್ಮನ ಕುರಿತು ಕಥನ ವಾಕ್ಯಗಳಿವೆ. ಅವು ಇನ್ನೂ ಸಂಗ್ರಹಗೊಂಡಿಲ್ಲ. ತನ್ನ ಎಲ್ಲ ಹಾಡುಗಳನ್ನು ಸಂಗ್ರಹಿಸಿದರೆ ನಾಲ್ಕೈದು ಪುಸ್ತಕಗಳಾಗಬಹುದು ಎನ್ನುತ್ತಾರೆ ಅಂಬವ್ವ.ಹಳೇಹಗರಿಬೊಮ್ಮನಹಳ್ಳಿ, ನೆಲ್ಲುಕುದುರಿ, ಕಡಲಬಾಳು, ಹೊಸಪೇಟೆ ಮುಂತಾದ ಕಡೆಗಳಲ್ಲಿ ಇವರಿಗೆ ಸನ್ಮಾನ ಮಾಡಲಾಗಿದೆ. ಮೈಕು ಸಿಕ್ರೆ ಇಸಿದುಕೊಳ್ಳುವವರೆಗೂ ಹಾಡುತ್ತಲೇ ಇರುತ್ತಾರೆ. ತನ್ನ ಗುಬ್ಬಚ್ಚಿಯಂಥ ದೇಹದಲ್ಲಿ ಕಹಳೆಯಂಥ ಧ್ವನಿ ಮೊಳಗಿಸುತ್ತಾಳೆ. ಆದರೆ ಆಕೆಯ ಹಾಡುಗಳನ್ನು ಕೇಳಿಸಿಕೊಳ್ಳುವವರು ಬೇಕು ಅಷ್ಟೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.