ಜಾನಪದ ಲೋಕದಲ್ಲಿ ಮಾವಿನ ಪರಿಷೆ

ಗುರುವಾರ , ಜೂಲೈ 18, 2019
28 °C

ಜಾನಪದ ಲೋಕದಲ್ಲಿ ಮಾವಿನ ಪರಿಷೆ

Published:
Updated:

ರಾಮನಗರದ ಜಾನಪದ ಲೋಕದಲ್ಲಿ ಕಳೆದ ವಾರ ಜಿಲ್ಲೆಯ ಮೊದಲ `ಮಾವು ಪರಿಷೆ~ ನಡೆಯಿತು. ರೈತರು ಬೆಳೆದ ತಾಜಾ ಮಾವಿನ ಹಣ್ಣುಗಳನ್ನು ಪರಿಷೆಯಲ್ಲಿಟ್ಟು ಪ್ರದರ್ಶಿಸಿದರಲ್ಲದೆ ಅವುಗಳನ್ನು  ಬಳಕೆದಾರರಿಗೆ ನೇರವಾಗಿ ಮಾರಾಟ ಮಾಡಿದರು. `ರಾಮ ಗೋಲ್ಡ್~ ಹೆಸರಿನ ಮಾವಿನ ಹಣ್ಣುಗಳು ಗ್ರಾಹಕರ ಮನ ಸೆಳೆದವು.ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಶ್ವ ವಿದ್ಯಾಲಯಗಳು ಜಂಟಿಯಾಗಿ `ಮಾವು ಪರಿಷೆ -2011~ ಸಂಘಟಿಸಿದ್ದವು. ಬೆಳೆಗಾರರಿಗೆ ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುವ ತಾಂತ್ರಿಕತೆ, ಕಡಿಮೆ ಖರ್ಚಿನಲ್ಲಿ ಕೀಟ ನಿಯಂತ್ರಣ, ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಬಗ್ಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆಯೂ ನಡೆಸಲಾಯಿತು.ತೋಟಗಾರಿಕೆ ಇಲಾಖೆ ಪ್ರತಿ ದಿನ ಬೆಂಗಳೂರಿನ ಹಾಪ್ ಕಾಮ್ಸನಲ್ಲಿರುವ ದರಕ್ಕಿಂತ ಶೇ.20 ರಷ್ಟು ಕಡಿಮೆ ಬೆಲೆಗೆ ಮಾವಿನ ಹಣ್ಣು ಮಾರಾಟ ಮಾಡಲು ದರ ನಿಗದಿಪಡಿಸಿತ್ತು.ಪ್ರತಿ ಕೆ.ಜಿ. ಬಾದಾಮಿ ಹಣ್ಣಿಗೆ -55ರೂ, ರಸಪುರಿಗೆ -30ರೂ , ಮಲ್ಲಿಕಾ-55 ರೂ, ಸಿಂದೂರ-23 ರೂ, ಮಲಗೋವ-50 ರೂ  ಹೀಗೆ ವಿವಿಧ ಜಾತಿ ಹಣ್ಣುಗಳಿಗೆ ಪ್ರತ್ಯೇಕ ಬೆಲೆ ನಿರ್ಧರಿಸಿತ್ತು. ಪೇಟೆಯಲ್ಲಿ ದುಬಾರಿ ಬೆಲೆ ಕೊಟ್ಟು ಮಧ್ಯವರ್ತಿಗಳಿಂದ ಮಾವನ್ನು ಖರೀದಿಸಲು ಹಿಂಜರಿಯುತ್ತಿದ್ದ ಗ್ರಾಹಕರು ಪರಿಷೆಯಲ್ಲಿ ನಿಖರ ಬೆಲೆಯಿಂದಾಗಿ ಉತ್ಸಾಹದಿಂದ ಮಾವು ಖರೀದಿಸಿದರು.`ರಾಮ್‌ಗೋಲ್ಡ್~ ಬ್ರಾಂಡ್

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪರಿಷೆ ನಡೆದ ಪ್ರಯುಕ್ತ ರಾಮನಗರದ ಮಾವಿನ ಹಣ್ಣಿಗೆ `ರಾಮ್‌ಗೋಲ್ಡ್~ ಎನ್ನುವ ಬ್ರಾಂಡ್ ಹೆಸರು ಇಡಲಾಗಿತ್ತು. ರಾಜ್ಯದಲ್ಲಿ ಜಿಲ್ಲೆಯೊಂದರ ಮಾವಿಗೆ ಬ್ರಾಂಡ್‌ನೇಮ್ ಇಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು.ರಾಮನಗರದ `ರಾಮ್‌ಗೋಲ್ಡ್~ ಹೆಸರಿನ ಮಾವನ್ನು ಇತರೆ ರಾಜ್ಯಗಳಿಗೆ ಹಾಗೂ ಹೊರ ದೇಶಗಳಿಗೆ ರಫ್ತು ಮಾಡಿ, ಉತ್ತಮ ಬೆಲೆ ಪಡೆಯಲು ರೈತರಿಗೆ ಸಹಕಾರಿಯಾಗಿದೆ.ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರು ಮಾವು ಮಾರಾಟ ಮಾಡಲು `ರಾಮ್‌ಗೋಲ್ಡ್~ ಬ್ರಾಂಡ್‌ನ ಬಾಕ್ಸ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

 

ಎರಡೂವರೆ ಕೆ.ಜಿ ಹಣ್ಣು ಹಿಡಿಯುವ ಒಂದು ಬಾಕ್ಸ್‌ಗೆ 14 ರೂಪಾಯಿ ವೆಚ್ಚ ತಗುಲಿದೆ. ಪರಿಷೆಯಲ್ಲಿ ಮಾವು ಮಾರುವ ರೈತರಿಗೆ ಹಾಗೂ ಖರೀದಿಸಿ ಕೊಂಡೊಯ್ಯುವ ಗ್ರಾಹಕರಿಗೆ ಇದರಿಂದ ನೆರವಾಯಿತು.ಬಹುತೇಕ ರೈತರು ತಮ್ಮ ಮಾವಿನ ತೋಟವನ್ನು ನಾಲ್ಕು- ಐದು ವರ್ಷಗಳ ಅವಧಿಗೆ ದಳ್ಳಾಳಿಗಳಿಗೆ ಗುತ್ತಿಗೆ ನೀಡುತ್ತಾರೆ. ಗುತ್ತಿಗೆದಾರರು ತೀರಾ ಕಡಿಮೆ ಬೆಲೆಗೆ ತೋಟ ಖರೀದಿಸುತ್ತಾರೆ. ಕೊಟ್ಟ ಹಣ ಕೆಲವೇ ದಿನಗಳಲ್ಲಿ ಮಾವು ಖಾಲಿಯಾಗುತ್ತದೆ.ಮಾವಿನ ಬೆಲೆ ಏರಿದರೆ ಗುತ್ತಿಗೆದಾರರಿಗೆ ಲಾಭ. ರೈತರಿಗೆ ಯಾವಾಗಲೂ ನಷ್ಟ. ಮಾವು ಬೆಳೆದ ರೈತರು ನೇರ ಬೆಂಗಳೂರಿಗೆ ಸಾಗಿಸಲು ದುಬಾರಿ ಸಾರಿಗೆ ವೆಚ್ಚ ಭರಿಸಬೇಕಿತ್ತು. ಮಾರುಕಟ್ಟೆಯಲ್ಲಿ ಶೇ 60ರಷ್ಟು ಆದಾಯ ಮಾತ್ರ ದೊರೆಯುತ್ತಿತ್ತು.ಸಗಟು ದರ ಕಡಿಮೆಮಾಡಿ ಉಳಿದ ಶೇ 40ರಷ್ಟನ್ನು ಮಧ್ಯವರ್ತಿಗಳು ಕಬಳಿಸುತ್ತಾರೆ. 30.ಕೆ.ಜಿ. ತೂಕದ ಒಂದು ಕ್ರೇಟ್ ಮಾವಿನ ಹಣ್ಣಿಗೆ ನಾಲ್ಕು ಕೆ.ಜಿ. ವೇಸ್ಟೇಜ್ ಕಳೆಯುತ್ತಾರೆ. 100 ರೂಗೆ ಶೇ.10 ಕಮಿಷನ್ ಪಡೆದು ವಂಚಿಸುತ್ತಾರೆ. ಈ ಸಮಸ್ಯೆಗಳಿಗೆ ಪರಿಷೆ ಪರಿಹಾರ ನೀಡಿತು.ಮಾರುಕಟ್ಟೆ ಬೆಲೆಗಿಂತ ಪರಿಷೆಯಲ್ಲಿ  ಹೆಚ್ಚು ಬೆಲೆ ಸಿಕ್ಕಿತು. ಇಲಾಖೆಯು ಬಾಕ್ಸ್‌ಗಳನ್ನು ಉಚಿತವಾಗಿ ಕೊಟ್ಟ್ದ್ದಿದರಿಂದ  ಖರ್ಚು ಉಳಿಯಿತು. 10 ದಿನದಲ್ಲಿ ಭಾರೀ ಪ್ರಮಾಣದ ಮಾವು ಬಿಕರಿಯಾಯಿತು.ಇಲ್ಲಿ ಪಡೆದ ಅನುಭವ ಜೂನ್ ತಿಂಗಳಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಮಾವು ಮೇಳದಲ್ಲಿ ಭಾಗವಹಿಸಲು ಧೈರ್ಯ ಬಂದಿದೆ ಎನ್ನುತ್ತಾರೆ ಶ್ಯಾನುಭೋಗನಹಳ್ಳಿಯ ಯುವ ಮಾವು ಬೆಳೆಗಾರ  ರಾಜೇಂದ್ರ ಪಟೇಲ್.  ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವವರು ಹಾಗೂ ಜಾನಪದ ಲೋಕಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಕಾಮತ್ ಯಾತ್ರಿ ನಿವಾಸಕ್ಕೆ ಉಪಹಾರ ಸ್ವೀಕರಿಸಲು ಬಂದವರನ್ನು ಮಾವು ಪರಿಷೆ ಆಕರ್ಷಿಸಿತ್ತು.ಪರಿಷೆಯಲ್ಲಿ ಒಟ್ಟು 12 ಮಳಿಗೆಗಳಿದ್ದವು. 20 ಬಗೆಯ  ಹಣ್ಣುಗಳನ್ನು ವ್ಯಾಪಾರಕ್ಕೆ ಇಡಲಾಗಿತ್ತು. ಪ್ರಾರಂಭದ ದಿನ ಒಟ್ಟು 10 ಟನ್ ಮಾವು ಮಾರಾಟವಾಗಿತ್ತು. ಮಾವು ಬೆಳೆಗಾರರು ಬೆಂಗಳೂರಿನಲ್ಲಿ ಸಗಟಾಗಿ ಮಾರಿದ್ದರೆ  ಒಂದು ಟನ್ ಮಾವಿಗೆ 15 ರಿಂದ 20 ಸಾವಿರ ರೂ. ಆದಾಯ ಪಡೆಯುತ್ತಿದ್ದರು. ಪರಿಷೆಯಲ್ಲಿ ಮಾರಿದವರು ಟನ್ ಮಾವಿಗೆ 50 ಸಾವಿರ ರೂ. ಆದಾಯ ಪಡೆದಿದ್ದಾರೆ.ಹತ್ತು ದಿನ ನಡೆದ ಪರಿಷೆಯಲ್ಲಿ ಒಟ್ಟು 85 ಟನ್ ಮಾವಿನಹಣ್ಣನ್ನು ಹಾಗೂ ಹಾಪ್ ಕಾಮ್ಸ, ಸಫಲ್, ರಿಲೆಯನ್ಸ್ ಕಂಪನಿಗಳಿಗೆ ಒಟ್ಟು 875 ಟನ್ ಮಾವಿನಕಾಯಿಯನ್ನು ರೈತರು ಮಾರಾಟಮಾಡಿದ್ದಾರೆ  ಎಂದು ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ. ಬಿ.ಕೃಷ್ಣ ತಿಳಿಸಿದರು.ಮಳಿಗೆ ತೆರೆದು ತಮ್ಮ ತೋಟ ಮಾವು ಮಾರಾಟ ಮಾಡುತ್ತಾ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಪರಿಷೆಯಲ್ಲಿ ನಾವು ಬೆಳೆದ ಮಾವನ್ನು  ಗ್ರಾಹಕರಿಗೆ ನೇರ ಮಾರುವುದರಿಂದ ಲಾಭವೇ ಹೊರತು ನಷ್ಟವಿಲ್ಲ.

 

ತಾತ್ಕಾಲಿಕವಾಗಿ ಆಯೋಜಿಸಿರುವ ಈ ಮಾವು ಪರಿಷೆಯನ್ನು ಶಾಶ್ವತಗೊಳಿಸಬೇಕು. ಹೆದ್ದಾರಿ ಪಕ್ಕದಲ್ಲಿ ಸುಸಜ್ಜಿತ ಮಾರುಕಟ್ಟೆ ಸ್ಥಾಪಿಸಿ ಬೆಳೆಗಾರರಿಗೆ ಮಾತ್ರ ಮಾರಾಟ ಮಾಡುವ ಪರವಾನಗಿ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry