ಮಂಗಳವಾರ, ಜನವರಿ 21, 2020
28 °C

ಜಾನಪದ ವಾದ್ಯದ ಜುಗಲ್‌ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಭವನದ ಮುಂದೆ ಒಂದು ರೀತಿಯಲ್ಲಿ ಹಬ್ಬದ ವಾತಾವರಣ. ಅದರ ಮುಂದೆ ಹೋಗುವವರು ಐದು ನಿಮಿಷ ನಿಂತು  ನೋಡಿ, ಕೇಳಿ ಆನಂದಿಸಿ ಮುಂದೆ ಹೋಗುತ್ತಿದ್ದರು.ಅವರ ಆನಂದಕ್ಕೆ ಕಾರಣ ಏನಿರಬಹುದು ಅಂತ ಊಹಿಸುತ್ತ ಮುನ್ನಡೆದರೆ, ಅಲ್ಲಿ ಹೋಗುವ ಮೊದಲೇ ಕಿವಿಗೆ ಜೋರು-ಜೋರಾದ ನಾದಮಯವಾದ ಶಬ್ದಗಳು ಕಿವಿಗೆ ಅಪ್ಪಳಿಸಿತು. ಉತ್ಸಾಹ ತಾಳಲಾರದೆ, ಬೇಗ ಬೇಗ ಹೆಜ್ಜೆಗಳು ಅತ್ತ ಕಡೆ ಚಲಿಸಿದವು.

ಅಲ್ಲಿ ನೋಡಿದರೆ, ಜಾನಪದ ಸೊಗಡು ಮೈವೆತ್ತಂತೆ ಇತ್ತು. ನೋಡುಗರ ಮತ್ತು ಕೇಳುಗರ ಮುಖದಲ್ಲಿ ಆನಂದದ ಹೊನಲು ಎದ್ದು ಕಾಣುತ್ತಿತ್ತು.ನಾಡಿನ ಗಂಡು ಕಲೆಯೆಂದೇ ಪ್ರಸಿದ್ಧವಾದ ಡೊಳ್ಳು ಕುಣಿತವನ್ನು ಅತಿ ಉತ್ಸಾಹದಿಂದ ಕಲಾವಿದರು ಪ್ರದರ್ಶಿಸುತ್ತಿದ್ದರು. ಡೊಳ್ಳು ಬಾರಿಸುವ ರೀತಿ, ಅದರ ಗತಿ ಮತ್ತು ಲಯ ಹಾಗೂ ತಾಳಕ್ಕೆ ತಕ್ಕ ಹೆಜ್ಜೆಗಳು,  ಅಲ್ಲಿದ್ದವರ ಮನಸ್ಸನ್ನು ಒಂದು ಕ್ಷಣ ಹಿಡಿದಿಟ್ಟು ಬಿಟ್ಟಿತು. ಬಿಸಿಲನ್ನೂ ಲೆಕ್ಕಿಸದೆ ಕಲಾವಿದರು ಸುಮಾರು ಅರ್ಧ ಗಂಟೆ ಕಾಲ ಜನರ ಮನಸ್ಸಿಗೆ ಆನಂದವನ್ನು ಉಂಟುಮಾಡಿದರು.ಆ ನಂತರ ನಡೆದ ತಮಟೆ ವಾದ್ಯ ಜುಗಲ್‌ಬಂದಿ ನಿಜಕ್ಕೂ ಅದ್ಭುತವಾಗಿತ್ತು. ತಾಳ ಮೇಳದಲ್ಲಿ ಗುರುವನ್ನು ಮೀರಿಸುತ್ತೇನೆ ಎಂಬ ಭಾವದಿಂದ ಶಿಷ್ಯ ಬಾರಿಸಿದರೆ, ನನ್ನ ಯಾವತ್ತೂ ಮೀರಿಸುವುದಕ್ಕೆ ಆಗುವುದಿಲ್ಲ ಎಂಬ ಭಾವದಿಂದ ಗುರು ತಮಟೆ ವಾದ್ಯಕ್ಕೆ ಪ್ರತಿಯಾಗಿ ವಾದ್ಯ ಬಾರಿಸಿದರು.  ಕೊನೆಗೆ ಇಬ್ಬರೂ ಸಮಾನರು ಎಂಬ ಧೋರಣೆಯಿಂದ ವಾದ್ಯ ನುಡಿಸುವಲ್ಲಿ ಸಮಾನತೆ ತಂದರು.ಈ ತಮಟೆ ವಾದ್ಯಕ್ಕೆ  ಆ ಚಿಕ್ಕ ಪೋರ ತನ್ನ ಉತ್ಸಾಹವನ್ನು ತಾಳಲಾರದೆ, ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿ ನೆರೆದವರಿಗೆಲ್ಲ ಏನೋ ಮನದಲ್ಲಿ ಸಂತಸ. ತಾವು ಅದುಮಿಡಲಾಗದ ಉತ್ಸಾಹವನ್ನು ತಲೆ ಅಲ್ಲಾಡಿಸುತ್ತ, ಕಾಲು ಕುಣಿಸುತ್ತ ಆನಂದಿಸಿದರು.ತಮಟೆ ವಾದ್ಯದ ಜುಗಲ್‌ಬಂದಿಯು ಸುಮಾರು 15 ನಿಮಿಷಗಳ ಕಾಲ ನಡೆಯಿತು. ತಮಟೆ ವಾದ್ಯ ನುಡಿಸಿದ ಬೆಂಗಳೂರಿನ ಚಿಕ್ಕನರಸಪ್ಪ ಮತ್ತು ತಂಡ ಅಲ್ಲಿದ್ದವರಿಂದ ಪಡೆದ ಹುರುಪಿನಿಂದ ಇನ್ನೂ ಉತ್ಸಾಹದಿಂದ ಇನ್ನೂ ಐದು ನಿಮಿಷಗಳ ಕಾಲ ಹೆಚ್ಚು ಬಾರಿಸಿದರು.

ನಗರದ ಪುರಭವನದ ಎದುರು ಶ್ರೀರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದದವರು ಏರ್ಪಡಿಸಿದ್ದ ಜಾನಪದ ಕಲಾಮೇಳ ಹಾಗೂ ರಂಗೋತ್ಸವ ಕಾರ್ಯಕ್ರಮದ ಒಂದು ಝಲಕ್ ಇದು.ನಂತರ ಕುಮಾರಯ್ಯ ಮತ್ತು ತಂಡದವರು ಬಾರಿಸಿದ ಚಿಟ್ಟೆಮೇಳವು ತಮ್ಮ ಕಲಾ ಪ್ರದರ್ಶನವನ್ನು ಅತಿ ಉತ್ಸಾಹದಿಂದ ಪ್ರದರ್ಶಿಸಿದರು. ಪೂಜಾ ಕುಣಿತ ಅಲ್ಲಿದ್ದ ಜನರ ಮನಸೂರೆಗೊಂಡಿತು.ಕಲಾವಿದರನ್ನು ಮಾತನಾಡಿಸಿದಾಗ, ಅವರೆಲ್ಲ  ತಮ್ಮ ಪರಂಪರೆಯಿಂದ ಬಂದಂತಹ ಕಲೆಯನ್ನು ಪೋಷಿಸಿಕೊಂಡು ಹೋಗುತ್ತಿದ್ದಾರೆ. ಸುಮಾರು 35 ವರ್ಷದಿಂದ ಈ ಕಲೆಯನ್ನು ತಮ್ಮ ಜೀವನವನ್ನಾಗಿಸಿಕೊಂಡಿದ್ದಾರೆ.ಚಿಟ್ಟೆಮೇಳದ ಕುಮಾರಯ್ಯ ಅವರು ಸುಮಾರು 35 ವರ್ಷದಿಂದ ಈ ಕಲೆಯನ್ನು ಆರಾಧಿಸಿಕೊಂಡು ಬಂದಿದ್ದೇನೆ. ಕಲೆಗೆ ಬೆಲೆ ಕಟ್ಟಲಾಗುವುದಿಲ್ಲ. ಜನರು ಇಷ್ಟಪಡುತ್ತಾರೆ. ಆದರೆ, ಆರಾಧಿಸುವುದಿಲ್ಲ ಎಂದರು.ಬಿಸಿಲಿನಲ್ಲೂ ಎಡೆಬಿಡದ ಉತ್ಸಾಹದಿಂದ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಜನರು ಐದು ನಿಮಿಷಗಳ ಕಾಲ ಮಾತ್ರ ತಮ್ಮ ವೇಳೆಯನ್ನು ವಿನಿಯೋಗಿಸಿ ತಮ್ಮ ತಮ್ಮ ಕೆಲಸಗಳಿಗೆ ಮರಳಿದರು.

ಪ್ರತಿಕ್ರಿಯಿಸಿ (+)