ಜಾನಪದ ವಿವಿಯಿಂದ ಗ್ರಾಮ ಚರಿತ್ರೆ

7

ಜಾನಪದ ವಿವಿಯಿಂದ ಗ್ರಾಮ ಚರಿತ್ರೆ

Published:
Updated:

ಬೆಳಗಾವಿ: `ರಾಜ್ಯದಲ್ಲಿರುವ 36 ಸಾವಿರ ಗ್ರಾಮಗಳ `ಗ್ರಾಮ ಚರಿತ್ರೆ~ಯನ್ನು ದಾಖಲಿಸುವ ಗುರಿಯನ್ನು ಜಾನಪದ ವಿಶ್ವವಿದ್ಯಾಲಯವು ಹೊಂದಿದೆ. ಸದ್ಯ ಹಾವೇರಿ ಜಿಲ್ಲೆಯ 706 ಗ್ರಾಮಗಳ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ~ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ತಿಳಿಸಿದರು.ಡಾ. ಬೆಟಗೇರಿ ಕೃಷ್ಣಶರ್ಮಾ ಸ್ಮಾರಕ ಟ್ರಸ್ಟ್ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಬಾಳಾನಂದರ ಸವಿನೆನಹು: ಚಿಂತನ- ಗಾಯನ ಹಾಗೂ `ಬಾರಾ ಕಾರಹುಣ್ಣಿಮೆ~ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಜಾನಪದದ ಸೊಗಡನ್ನು ಹೊಂದಿರುವ ಪ್ರತಿಯೊಂದು ಗ್ರಾಮಗಳ ಚರಿತ್ರೆಯನ್ನು ದಾಖಲಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಈಗಾಗಲೇ ನಾವು ಹಾವೇರಿ ಜಿಲ್ಲೆಯಲ್ಲಿನ ಗ್ರಾಮಗಳ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನು ಆರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನುಳಿದ 29 ಜಿಲ್ಲೆಗಳ ಗ್ರಾಮಗಳ ಚರಿತ್ರೆಯನ್ನೂ ದಾಖಲಿಸಲಾಗುವುದು~ ಎಂದು ಅವರು ತಿಳಿಸಿದರು.`ಜಾನಪದ ವಿಶ್ವವಿದ್ಯಾಲಯದಿಂದ ಕಿರು ಸಂಶೋಧನಾ ಯೋಜನೆಯನ್ನು ಆರಂಭಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಬ್ಬರಿಗೆ ತಲಾ ರೂ. 1 ಲಕ್ಷದ ಫೆಲೋಶಿಪ್ ನೀಡುವ ಮೂಲಕ ಸ್ಥಳೀಯ ಜಾನಪದದ ಕುರಿತು ಸಂಶೋಧನೆ ಕೈಗೊಳ್ಳಲಾಗುವುದು. ದೇಸಿ ಕೃಷಿ ಜ್ಞಾನವನ್ನು ದಾಖಲಿಸಿ, `ದಕ್ಷಿಣ ಭಾರತ ದೇಸಿ ಕೃಷಿ ಜ್ಞಾನ~ ಕೃತಿಯನ್ನು ಹೊರ ತರುವ ಯೋಜನೆಯನ್ನು ಕೈಗೊತ್ತಿಕೊಂಡಿದ್ದೇವೆ~ ಎಂದು ಡಾ. ಅಂಬಳಿಕೆ ಮಾಹಿತಿ ನೀಡಿದರು.`ಜಾನಪದ ಸಾಹಿತ್ಯ ಹಾಗೂ ಜಾನಪದ ವಿಜ್ಞಾನ ಎಂಬ ಎರಡು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಿದ್ದೇವೆ. ಜೊತೆಗೆ ಗ್ರಾಮೀಣ ಬುಡಕಟ್ಟು ಜೀವನದ ಕುರಿತು ಎಂಬಿಎ ಕೋರ್ಸ್ ಸಹ ಆರಂಭಿಸಲು ಸಿದ್ಧತೆಯನ್ನು ನಡೆಸಲಾಗಿದೆ~ ಎಂದು ಅವರು ವಿವರಿಸಿದರು.`ಬೆಟಗೇರಿ ಕೃಷ್ಣಶರ್ಮಾ ಅವರು ತಮ್ಮ ಕೃತಿಗಳಲ್ಲಿ `ಆಧುನಿಕತೆಯ ಸೆಳವಿನಲ್ಲಿ ಜಾನಪದ ಕೊಚ್ಚಿ ಹೋಗಬಾರದು~ ಎಂದು ಕಳಕಳಿಯನ್ನು ಕಾಣಬಹುದು. ಅವರ ಬರಹಗಳು ಜಾನಪದ ಸೊಗಡಿನಲ್ಲಿ ಮಿಂದು ಬಂದಿರುತ್ತವೆ. ಬಾಳಪ್ಪ ಹುಕ್ಕೇರಿ ಅವರು ನಾಡಿನ ಉದ್ದಗಲಕ್ಕೂ ಜಾನಪದ ಗೀತೆಗಳನ್ನು ಜನಪ್ರಿಯಗೊಳಿಸಿದರು. ಅವರು ಗಾಯನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು~ ಎಂದು ಡಾ. ಅಂಬಳಿಕೆ ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry