ಜಾನಪದ ವಿ.ವಿ. ಸ್ಥಾಪನೆಗೆ ಮಾಗಡಿ ಸೂಕ್ತ: ಯಾದವ್

7

ಜಾನಪದ ವಿ.ವಿ. ಸ್ಥಾಪನೆಗೆ ಮಾಗಡಿ ಸೂಕ್ತ: ಯಾದವ್

Published:
Updated:

ಮಾಗಡಿ:  ರಾಜ್ಯ ಸರ್ಕಾರ  ಸ್ಥಾಪಿಸಲು ಉದ್ದೇಶಿಸಿರುವ ಜಾನಪದ ವಿಶ್ವವಿದ್ಯಾಲಯವನ್ನು ಮಾಗಡಿ ತಾಲ್ಲೂಕಿನಲ್ಲಿ ಸ್ಥಾಪಿಸುವುದು ಸೂಕ್ತ ಎಂದು ಜಿ.ಪಂ ಸದಸ್ಯ ಮುದ್ದುರಾಜ ಯಾದವ್ ಇಲ್ಲಿ ಅಭಿಪ್ರಾಯಪಟ್ಟರು.ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಶ್ರೀ ಕೆಂಪೇಗೌಡ ಕನ್ನಡ ಮತ್ತು ಸಂಸ್ಕೃತಿ ಹಾಗೂ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ನಡೆದ  ರಂಗಕರ್ಮಿಗಳ ಸಮ್ಮೇಳನ ಮತ್ತು ಜಾನಪದ ಗೀತಗಾಯನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಜಾನಪದ ಸಂಸ್ಕೃತಿ ಹಾಗೂ  ಪರಂಪರೆಯನ್ನು ತಮ್ಮ ಅಂತರಂಗದಲ್ಲಿ ಅಡಗಿಸಿಟ್ಟು ಕೊಂಡಿರುವ ಸೋಲಿಗ, ಇರುಳಿಗ, ಶಿಳ್ಳೇಕ್ಯಾತ, ದೊಂಬಿದಾಸ, ಕಾಡುಗೊಲ್ಲ ಇನ್ನಿತರ ಬುಡಕಟ್ಟು ಸಮುದಾಯಗಳು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಹಾಗೂ ಇಂದಿಗೂ ಸಹ ತಮ್ಮ ಪರಂಪರೆ, ಕಲೆಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ.  ಆದ್ದರಿಂದ ಜಾನಪದ ವಿ.ವಿ ಯನ್ನು ಇಲ್ಲಿಯೇ ಸ್ಥಾಪಿಸುವುದರಿಂದ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.ಜಿ.ಪಂ ಸದಸ್ಯ ವಿಜಯಕುಮಾರ್ ಮಾತನಾಡಿ, ಕಲೆಗಳಲೆಲ್ಲಾ ರಂಗಕಲೆಯನ್ನು ಗಂಡು ಕಲೆಯೆನ್ನುತ್ತಾರೆ.  ನಮ್ಮ ಪುರಾಣ ಗ್ರಂಥಗಳನ್ನು ಆಧರಿಸಿದ ಪೌರಾಣಿಕ ನಾಟಕಗಳನ್ನು ಶತಮಾನಗಳಿಂದಲೂ ಅಭಿನಯಿಸಿಕೊಂಡು ಬಂದಿರುವ ಕಲಾವಿದರು ನಮ್ಮಲ್ಲಿದ್ದಾರೆ. ಸಮೃದ್ಧ ಬದುಕನ್ನು ಕಟ್ಟಿಕೊಡುವ ನಾಟಕಗಳನ್ನು, ರಂಗಕಲಾವಿದರನ್ನು ಉಳಿಸಿ ಪ್ರೋತ್ಸಾಹಿಸಲು ಎಲ್ಲರು ಮುಂದಾಗೋಣ ಎಂದು ತಿಳಿಸಿದರು.ರಂಗ ಕೌಸ್ತುಭ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಹೊಸಪೇಟೆ ನಾರಾಯಣಪ್ಪ ಮಾತನಾಡಿ, ಗೀತೆಯಂತೆ ಲಾವಣಿ ಕೂಡ ಪರಂಪರಾನುಗತವಾಗಿ  ಬಂದುದು.  ತಂತ್ರ ಪ್ರಜ್ಞೆ ಉಳ್ಳವರು ಲಾವಣಿಗಳನ್ನು ಕಟ್ಟಿ ಹಾಡುವ ವಿನೂತನ ಶೈಲಿ ಗ್ರಾಮೀಣ ಭಾಗದ ಜಾನಪದರಲ್ಲಿ ಇದೆ.  ರಂಗ ಕಲೆ ಮತ್ತು ಜಾನಪದ ಕಲೆಗಳನ್ನು ಉಳಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ಅನಾಥವಾಗುತ್ತದೆ ಎಂದರು. ಕತ್ತಲೆಯಲ್ಲಿರುವ ರಂಗ ಮಂದಿರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ತಾ.ಪಂ. ಸದಸ್ಯ ಕಾಂತರಾಜು ತಿಳಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಿಂಗದೇವರು, ಕಲಾವಿದರ ಸಂಘದ ಅಧ್ಯಕ್ಷ ಬಿ.ಆರ್ ಕೃಷ್ಣಪ್ಪ, ಕಾರ್ಯದರ್ಶಿ ನಾಗರಾಜು, ಜಾಣಗೆರೆ ರವೀಶ್, ಕೀರ್ತನಕಾರ ರಂಗಸ್ವಾಮಯ್ಯ ಮಾತನಾಡಿದರು.ಎಚ್.ಸಿ.ನಂಜುಂಡಪ್ಪ, ಜೆ.ವಿ. ರವೀಶ್, ಬಿ.ಆರ್. ಕೃಷ್ಣಪ್ಪನವರು, ಗಂಗರಂಗಯ್ಯ, ವೆಂಕಟೇಶ್, ಬಿ.ಎನ್. ನಾಗರಾಜ್ ರಂಗಗೀತೆಗಳನ್ನು ಹಾಡಿದರು.  ರಂಗನಾಥ್ ಹೊಸಪೇಟೆ ತಂಡದವರಿಂದ ಲಾವಣಿ ಪದಗಳನ್ನು ಹಾಡಿದರು.  ಕೃಷ್ಣಪ್ಪ ಹಾಗೂ ತಂಡದವರು ದೇವರನಾಮಗಳನ್ನು ಹಾಡಿದರು.ತಿಮ್ಮಕ್ಕ ಮತ್ತು ಸಂಗಡಿಗರು ಸೋಬಾನೆ ಪದಗಳನ್ನು ಹಾಡಿದರು.  ಮಂಜುಳಾ ಸ್ವಾಮಿರಾವ್ ಜೋಡುಗಟ್ಟೆ ಭಕ್ತಿಗೀತೆ ಗಾಯನ ಮಾಡಿದರು ಹಾಗೂ ರಂಗಸ್ವಾಮಯ್ಯ ಕೀರ್ತನೆಗಳನ್ನು ಹಾಡಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry