ಗುರುವಾರ , ಅಕ್ಟೋಬರ್ 17, 2019
21 °C

ಜಾನಪದ ಶಕ್ತಿಗೆ ಶಿರ ಬಾಗಿತು ಕರಾವಳಿ

Published:
Updated:
ಜಾನಪದ ಶಕ್ತಿಗೆ ಶಿರ ಬಾಗಿತು ಕರಾವಳಿ

ಮಂಗಳೂರು: ಅವಳು ದುರ್ಗೆ, ಅವಳು `ಶಕ್ತಿ~ ದೇವತೆ. ಮಹಿಷಾಸುರನನ್ನು ಮರ್ದಿಸಲು ಸಿಂಹವೇರಿ ಬರುತ್ತಾಳೆ. ರಾಕ್ಷಸರ ಶಕ್ತಿಯೇನು ಕಡಿಮೆಯೇ? ಗಿರಗಿರನೆ ಸುತ್ತು ಹೊಡೆಯುತ್ತಲೇ ದೇವಿಗೆ ಸವಾಲು ಒಡ್ಡುವ ಅವರ ಹುಮ್ಮಸ್ಸಿನ ಮುಂದೆ ದೇವಿ ಮಂಕಾಗಿರಲಾರಳು ನಿಜ. ಆದರೆ ಅದನ್ನು ನೋಡುತ್ತಿದ್ದಂತಹ ಪ್ರೇಕ್ಷಕರಂತೂ ದಂಗಾಗಿಬಿಟ್ಟಿದ್ದರು.

17ನೇ ರಾಷ್ಟ್ರೀಯ ಯುವಜನೋತ್ಸವ ಪ್ರಯುಕ್ತ ಶುಕ್ರವಾರ ಆರಂಭವಾದ ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಎರಡನೇ ಸ್ಪರ್ಧಿಯಾಗಿದ್ದ ಪಶ್ಚಿಮ ಬಂಗಾಳದ ಪುರುಲಿಯಾ ಚಾವ್ ತಂಡ ಗಿರಗಿರನೆ ಆಗಸದಲ್ಲಿ ಗಿರಕಿ ಹೊಡೆಯುತ್ತ, ತಲೆಯನ್ನು ಗಿರಗರನೆ ತಿರುಗಿಸುತ್ತ ನೀಡಿದ ವೀರಾವೇಶದ ಕುಣಿತವನ್ನು ಪದಗಳಲ್ಲಿ ಬಣ್ಣಿಸಿದರೆ ಅದು ಸಪ್ಪೆ ಎನಿಸೀತು.

ಚಾವ್ ನೃತ್ಯದ ವೇಷಭೂಷಣ ನಮ್ಮ ನಾಡಿನ ಭೂತಕೋಲದ ವೇಷಭೂಷಣ ಹೋಲುತ್ತದೆ. ಯಕ್ಷಗಾನ ವೇಷವನ್ನೂ ಇದು ಸ್ವಲ್ಪಮಟ್ಟಿಗೆ ಹೋಲುತ್ತದೆ. ಬಡಿಯುವ ಡೋಲು ಸಹ ಬಹುತೇಕ ಭೂತಕೋಲದಲ್ಲಿ ಬಳಸುವಂತದ್ದೇ. ಆದರೆ ಪಾಡ್ದನಕ್ಕಿಂತ ತುಸು ವೀರಾವೇಶದ ಹಾಡುಗಳನ್ನು ಕೇಳುವಾಗಲೇ ಮೈ ನವಿರೇಳುತ್ತದೆ. ಹಾಡು, ಅದಕ್ಕೆ ತಕ್ಕಂತೆ ಬಾರಿಸುವ ಲಯಬದ್ಧ ತಾಳಕ್ಕೆ ವೇಷಧಾರಿಗಳು ಕುಣಿಯುವ ಬಗೆಯಂತೂ ಅದ್ಭುತ. ಅಲ್ಲಿ ಚಂಡ ಮುಂಡರು ಇರುತ್ತಾರೆ. ಇತರ ರಾಕ್ಷಸರು ಇರುತ್ತಾರೆ. ಮಹಿಶಾಸುರ ಆಗಾಗ ಬಂದು ಹೋಗುತ್ತಾನೆ. ಎರಡು ಸಿಂಹಗಳು ಬಂದು ನೃತ್ಯ ಮಾಡುತ್ತವೆ. ಕೊನೆಗೆ ಸಿಂಹಾರೂಢ ದೇವಿ ಮಹಿಷನನ್ನು ಕೊಲ್ಲುತ್ತಾಳೆ. ಪಾದರಸದಂತೆ ಚಲಿಸುತ್ತಿದ್ದ ಕಲಾವಿದರು ಆಗ ಬಂಡೆಗಲ್ಲಿನಂತೆ ನಿಂತುಬಿಡುವ ಭಂಗಿಯಲ್ಲೇ ಇಡೀ ಕತೆ ಅಡಗಿಬಿಡುತ್ತದೆ. ಪ್ರೇಕ್ಷಕರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುತ್ತಾರೆ!

ಆಂಧ್ರಪ್ರದೇಶದ ಯುವ ಕಲಾವಿದರು `ದೊಂಬರಾಟ~ ಜಾನಪದ ನೃತ್ಯ ಪ್ರದರ್ಶಿಸಿದರು. ಹಗ್ಗವನ್ನು ಏರಿ ತಲೆಕೆಳಗಾಗಿ ಜಾರಿದ ಯುವತಿ ನೋಡುಗರನ್ನು ನಿಬ್ಬೆರಗಾಗಿಸಿದಳು. ಇಬ್ಬರ ಹೆಗಲಲ್ಲಿ ಇಟ್ಟುಕೊಂಡಿದ್ದ ಕೋಲಿನಲ್ಲಿ ನಡೆದ ಮತ್ತೊಬ್ಬಳು ಯುವತಿ ಉಸಿರು ಬಿಗಿ ಹಿಡಿಯುವಂತೆ ಮಾಡಿದಳು. ಚುರುಕಿನ ಹಾಡಿಗೆ ಕಲಾವಿದರು ಬಳಿಕ ಹೆಜ್ಜೆ ಹಾಕಿದ ಹಾಗೂ ಲಯಬದ್ಧವಾಗಿಯೇ ಕಸರತ್ತು ಮಾಡಿದ್ದು ಗಮನ ಸೆಳೆಯಿತು. ಸೀಮೆಎಣ್ಣೆಯನ್ನು ಬಾಯಿಗೆ ಸುರಿದುಕೊಂಡ ಮುಖ್ಯ ಕಲಾವಿದ ಬೆಂಕಿಯನ್ನು ಬಾಯಿಯಿಂದ ಉಗುಳಿದಾಗ ಚೀತ್ಕಾರ ಮುಗಿಲು ಮುಟ್ಟಿತು.

ರಣಭೂಮಿ ನೃತ್ಯ: ಉತ್ತರಾಖಂಡದ ರಣಭೂಮಿ ನೃತ್ಯ ವಿಶಿಷ್ಟ ಅನುಭವ ನೀಡುವಂತಿತ್ತು. ರುಮಾಲುಗಳನ್ನು ಧರಿಸಿ, ಕತ್ತಿ ಹಿಡಿದಿದ್ದ ಕಲಾವಿದರು ವೀರಾವೇಶದ ಹಾಡಿಗೆ ಕುಣಿಯುತ್ತಲೇ ಐತಿಹಾಸಿಕ ಸನ್ನಿವೇಶಗಳನ್ನು ಪ್ರೇಕ್ಷಕರ ಮುಂದಿಟ್ಟರು. ಪಲ್ಲಕ್ಕಿಯಲ್ಲಿ ಇಟ್ಟ ದೇವರನ್ನು ವೇದಿಕೆಗೆ ತಂದಿಟ್ಟ ಬಗೆ ಉತ್ತಮವಾಗಿತ್ತು. ಯುವತಿಯರು ಕೃಷಿಯಲ್ಲಿ ತೊಡುವ ಬಗೆಯನ್ನು ಮನೋಜ್ಞವಾಗಿ ಅಭಿನಯಿಸಿ ತೋರಿಸಲಾಯಿತು.

ಮಿಜೋರಾಂನ ಸೋಲಾಕಿಯಾ ನೃತ್ಯ ಅಂತಹ ಗಮನ ಸೆಳೆಯಲಿಲ್ಲ. ಆದರೆ ಕಲಾವಿದರ ವಿಶಿಷ್ಟ ವೇಷಭೂಷಣ ಗಮನ ಸೆಳೆಯಿತು. ಇದು ಬುಡಕಟ್ಟು ಜನರಿಗೆ ಸಂಬಂಧಿಸಿದ ನೃತ್ಯ. ಮಧ್ಯಭಾಗದಲ್ಲಿ ನಿಂತ ನಾಯಕ ಕಹಳೆ ಊದುತ್ತ ನೃತ್ಯವನ್ನು ನಿರ್ದೇಶಿಸುತ್ತ ಅದರಲ್ಲೇ ಕತೆ ಹೇಳುವ ನೃತ್ಯ ಇದಾಗಿತ್ತು. ಬಿಹಾರದ ಖಜರಿ ನೃತ್ಯ ಯುವಜರಲ್ಲಿ ರೋಮಾಂಚನ ಮೂಡಿಸಿತು. ಚೆಂದದ ನೀಲಿ ಬಣ್ಣದ ಸೀರೆ ಉಟ್ಟಿದ್ದ ನೀರೆಯರು ಹಾಡಿಗೆ ತಕ್ಕಂತೆ ಕಲಶ ಹಿಡಿದು, ತೆನೆ ಹೊತ್ತು ಮಾಡಿದ ನೃತ್ಯ ಮನಮೋಹಕವಾಗಿತ್ತು.

ಜಮ್ಮು ಮತ್ತು ಕಾಶ್ಮೀರದವರು ನಡೆಸಿಕೊಟ್ಟ ಜಾನಪದ ನೃತ್ಯಕ್ಕೆ ಹೆಸರು ಇರಲಿಲ್ಲ. ಆದರೆ ಕಾಶ್ಮೀರದ ಸುಂದರ ಯುವತಿಯರ ನೃತ್ಯ ಪ್ರೇಕ್ಷಕರನ್ನು ಸೂಲಿಗಲ್ಲಿನಂತೆ ಹಿಡಿದಿಟ್ಟುಕೊಂಡಿತ್ತು. ಅವರೆಲ್ಲ ಬಣ್ಣಬಣ್ಣದ ಬಟ್ಟೆ ತೊಟ್ಟಿದ್ದರೂ ಶ್ರೀಗಂಧದಂತಹ ಅವರ ಚೆಲುವಿನ ಮುಂದೆ ತೊಟ್ಟಿದ್ದ ತೊಡುಗೆಗಳು ಕಳೆಗುಂದಿದಂತೆ ಕಂಡುಬಂದವು.

ಹಿಮಾಚಲ ಪ್ರದೇಶದವರ ಧಡಿ ನೃತ್ಯ ಅಂತಹ ಗಂಭೀರ ಚಲನೆಯಿಲ್ಲದ ನೃತ್ಯವಾಗಿತ್ತು. ಆದರೆ ಅವರ ವೇಷಭೂಷಣ ಉತ್ತಮವಾಗಿತ್ತು.

ಪಂಜಾಬ್‌ನವರು ನಡೆಸಿಕೊಟ್ಟ ಬಾಂಗ್ಡಾ ಮೂಲತಃ ಕೃಷಿಗೆ ಸಂಬಂಧಿಸಿದ ನೃತ್ಯ ಪ್ರಕಾರ.  ಅದಕ್ಕೆ ಇಂದು ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಮಹಾರಾಷ್ಟ್ರದ ಆದಿವಾಸಿ ನೃತ್ಯ, ಹರಿಯಾಣದ ಸುಗ್ಗಿ ಕುಣಿತ, ಮೇಘಾಲಯದ ಸಮರ ಕಲೆ ಆಧಾರಿತ ನೃತ್ಯ ಹಾಗೂ ಸಿಕ್ಕಿಂನ ದೀಪಾವಳಿ ನೃತ್ಯಗಳೂ ಗಮನ ಸೆಳೆದವು. ನಾಲ್ಕು ರಾಜ್ಯಗಳು ಬೆಳಿಗ್ಗೆ ಜಾನಪದ ನೃತ್ಯ ಪ್ರದರ್ಶಿಸಿದರೆ, ಮಧ್ಯಾಹ್ನ 8 ರಾಜ್ಯಗಳ ಯುವ ಕಲಾವಿದರ ಪ್ರತಿಭಾ ಪ್ರದರ್ಶನ ನಡೆಯಿತು. ಪ್ರತಿ ತಂಡಕ್ಕೆ 15 ನಿಮಿಷ ಮತ್ತು ಹೆಚ್ಚುವರಿ 5 ನಿಮಿಷಗಳ ಕಾಲಾವಕಾಶ ಇತ್ತು. ಬಹುತೇಕ ಸ್ಪರ್ಧೆಗಳು ನಿಗದಿತ ಅವಧಿಗಿಂತ ಮೊದಲೇ ಮುಗಿದವು.

Post Comments (+)