ಸೋಮವಾರ, ಮೇ 17, 2021
31 °C

ಜಾನಪದ ಸಾಹಿತ್ಯ ಮೂಲೆಗುಂಪು: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನಪದ ಸಾಹಿತ್ಯ ಮೂಲೆಗುಂಪು: ವಿಷಾದ

ಆನೇಕಲ್: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಜಾನಪದ ಸಾಹಿತ್ಯ ಮೂಲೆಗುಂಪಾಗಿದೆ ಎಂದು ಡಿವೈಎಸ್‌ಪಿ ಡಾ.ವೇಮಗಲ್ ನಾರಾಯಣಸ್ವಾಮಿ ನುಡಿದರು.ಅವರು ಪಟ್ಟಣದ ವಿಧಾತ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಂಗ ಸಂಸ್ಥಾನ ಮತ್ತು ಜೇನುಗೂಡು ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಜಾನಪದ ಗೀತಗಾಯನ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ನೆಲಮೂಲದ ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ ಶಿಷ್ಠ ಸಾಹಿತ್ಯವು ಕೇವಲ ಅಕ್ಷರಸ್ಥರಿಗೆ ಮಾತ್ರ ಸೀಮಿತವಾಗಿದ್ದರೆ, ಜಾನಪದ ಸಾಹಿತ್ಯವು ಅನಕ್ಷರಸ್ಥರು, ರೈತರು, ಶೋಷಿತರ ದನಿಯಾಗಿದೆ. ಅವರ ನೋವು-ನಲಿವುಗಳ ಪ್ರತಿಬಿಂಬವಾಗಿದೆ. ಬಾಯಿಂದ ಬಾಯಿಗೆ ಹರಿದುಬಂದ ಜಾನಪದ ಸಾಹಿತ್ಯ, ವಚನಗಳು, ದಾಸ ಸಾಹಿತ್ಯಗಳು ನೈತಿಕ ಮೌಲ್ಯಗಳನ್ನು, ಆದರ್ಶಗಳನ್ನು ಒಳಗೊಂಡಿದೆ.ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜಾನಪದ ಕಥೆಗಳು, ಗೀತೆಗಳು ಹಿಂದಿನ ಕಾಲದಲ್ಲಿ ಅತ್ಯಂತ ಮಹತ್ವವಾಗಿದ್ದವು.ಇತ್ತೀಚಿನ ದಿನಗಳಲ್ಲಿ ಆಧುನಿಕ ಸಾಹಿತ್ಯದಲ್ಲಿ ಕೇವಲ ಪದಗಳಿವೆ. ಯಾವುದೇ ಸಂದೇಶಗಳಿಲ್ಲದಿರುವುದು ಶೋಚನೀಯ. ಬಾಯಿಗೆ ಬಂದದ್ದೆಲ್ಲಾ ಸಾಹಿತ್ಯವಾಗುತ್ತಿದೆ, ಗಟ್ಟಿ ಸಾಹಿತ್ಯ ರಚಿತವಾಗುತ್ತಿಲ್ಲ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ತಾ.ನಂ.ಕುಮಾರಸ್ವಾಮಿ ಮಾತನಾಡಿ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಹದಿಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 130 ವಿದ್ಯಾರ್ಥಿಗಳು 13 ಜಾನಪದ ಗೀತೆಗಳ ಗಾಯನವನ್ನು ಅಭ್ಯಾಸ ಮಾಡಿದರು. ಇಂದಿನ ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳ ಸಮೂಹ ಗಾಯನ ಪ್ರಸ್ತುತ ಪಡಿಸಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ.ವಿಧಾತ್, ಶಾಲಾ ಮುಖ್ಯೋಪಾಧ್ಯಾಯ ಸಿ.ವಿ.ವೆಂಕಟೇಶರೆಡ್ಡಿ, ಜಾನಪದ ಗಾಯಕ ಬಂಡ್ಲಳ್ಳಿ ವಿಜಯ್‌ಕುಮಾರ್, ಪರಿಷತ್‌ನ ಗೌರವ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಖಜಾಂಚಿ ಎಂ.ನಾಗರಾಜಪ್ಪ, ಜೇನುಗೂಡು ಸಾಹಿತ್ಯ ಸಂಸ್ಥೆಯ ಮಹೇಶ್ ಊಗಿನಹಳ್ಳಿ ಮತ್ತಿತರರು ಹಾಜರಿದ್ದರು.ಇಂದು ಮೆರವಣಿಗೆ

ವಿಜಯಪುರ:
ಇಲ್ಲಿಗೆ ಸಮೀಪದ ಚೀಮಾಚನಹಳ್ಳಿ ಗ್ರಾಮದಲ್ಲಿ ಇದೇ ಶನಿವಾರ ಸಂಜೆ 5 ಗಂಟೆಗೆ ಪಟಾಲಮ್ಮದೇವಿ ಮತ್ತು ವಿನಾಯಕಸ್ವಾಮಿ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಮೆರವಣಿಗೆ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ವಿಶೇಷಪೂಜೆ, ಹೂವಿನ ಅಲಂಕಾರ, ಅನ್ನಸಂತರ್ಪಣೆ, ಜಾನಪದ ಕಲಾತಂಡಗಳೊಂದಿಗೆ ಗ್ರಾಮದಲ್ಲಿ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಲಿದೆ. ಹೆಚ್ಚಿನ ಸಾರ್ವಜನಿಕರು ಭಾಗವಹಿಸಬೇಕೆಂದು ಮುಖಂಡರು ಕೋರಿದ್ದಾರೆ.ಕಾಮಗಾರಿ ಪರಿಶೀಲನೆ

ದೇವನಹಳ್ಳಿ:
ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಜಿಲ್ಲಾ ನಗರಾಭಿವೃದ್ಧಿ ಕೋಶಯೋಜನಾಧಿಕಾರಿ ಅಶ್ವಥನಾರಾಯಣಗೌಡ ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದರ ಅವರು ಹೊಸ ಬಸ್ ನಿಲ್ದಾಣದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ನಾಲ್ಕು ವಾಣಿಜ್ಯ ಮಳಿಗೆ ಹಾಗೂ ಸ್ತ್ರಿಯರಿಗೆ ಮತ್ತು ಪುರುಷರಿಗೆ ಶೌಚಾಲಯ ನಿರ್ಮಾಣಕ್ಕಾಗಿ 20.69ಲಕ್ಷರೂ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅವಧಿಗೆ ಮುನ್ನ ಪೂರ್ಣಗೊಳಿಸಬೇಕಾದ ಕಾಮಗಾರಿ ವಿಳಂಭವಾಗುತ್ತಿದೆ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗಿದೆ.ಪ್ರತಿನಿತ್ಯದ ಶೌಚಕ್ಕಾಗಿ ಕೆಲವರು ಬಯಲನ್ನೇ ಆಶ್ರಯಿಸಿರುವುದರಿಂದ ಬಡಾವಣೆ ನಿವಾಸಿಗಳಿಗೆ ಮತ್ತು ನಿತ್ಯ ಬಂದು ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಎಂಜಿನಿಯರ್ ಇನ್ನು ಹದಿನೈದು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.ಇಂದು ಕ್ರೀಡಾಕೂಟ ಸಮಾರೋಪ

ವಿಜಯಪುರ: ಇಲ್ಲಿನ
ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಮತ್ತು ಬಹುಮಾನವಿತರಣಾ ಕಾರ್ಯಕ್ರಮವು ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.ಕಾಮಗಾರಿ ಮುಗಿಸಲು ಸೂಚನೆ

ವಿಜಯಪುರ:
ಪಟ್ಟಣದಲ್ಲಿ ಪುರಸಭೆಯ ವಿವಿಧ ಅನುದಾನದಡಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮತ್ತು ಇತರೆ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಜಿಲ್ಲಾ ಪೌರಾಡಳಿತ ಇಲಾಖೆಯ ಯೋಜನಾ ನಿರ್ದೇಶಕ ಅಶ್ವತ್ಥ ನಾರಾಯಣಗೌಡ ತಿಳಿಸಿದರು.ಪುರಸಭೆಯ ವತಿಯಿಂದ ಸುಮಾರು 5 ಲಕ್ಷ. ರೂ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಲ್ಲಿನ ಬಸವನ ಕುಂಟೆ ಬಳಿಯ  ಸಮುದಾಯ ಭವನದ ಅಭಿವೃದ್ಧಿಕಾಮಗಾರಿಗಳನ್ನು ಪರಿಶೀಲಿಸಿದ ಅವರು ಮಾತನಾಡಿದರು.ಮುಖ್ಯಮಂತ್ರಿ ಅನುದಾನದ `ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆ~ ಹಾಗೂ ವಿವಿಧ ಅನುದಾನಗಳಡಿ ನಡೆಯುತ್ತಿರುವ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು. ಸಂತೆ ಮೈದಾನದಲ್ಲಿ ಸುಮಾರು 50 ಲಕ್ಷ ರೂ.ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೋಟೆಲ್ ಮತ್ತು ಅಂಗಡಿ ಮಳಿಗೆ, 9 ನೇ ವಾರ್ಡ್‌ನಲ್ಲಿನ ರಾಜಕಾಲುವೆ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.