ಜಾನುವಾರುಗಳ ವಂಶಾಭಿವೃದ್ಧಿ ಕುಂಠಿತ; ಕುತ್ತು ತಂದ ಗಣಿಗಾರಿಕೆ

7

ಜಾನುವಾರುಗಳ ವಂಶಾಭಿವೃದ್ಧಿ ಕುಂಠಿತ; ಕುತ್ತು ತಂದ ಗಣಿಗಾರಿಕೆ

Published:
Updated:

ಚಿತ್ರದುರ್ಗ: ಪರಿಸರ ಸಮತೋಲನಕ್ಕೆ ಮಾರಕವಾಗಿರುವ ಗಣಿಗಾರಿಕೆ ಜೀವಸಂಕುಲದ ಅಸ್ತಿತ್ವದ ಮೇಲೆಯೂ ಪರಿಣಾಮ ಬೀರಿರುವ ಅಂಶ ಬೆಳಕಿಗೆ ಬಂದಿದೆ.ಗಣಿಗಾರಿಕೆಯಿಂದ ಜಾನುವಾರುಗಳ ವಂಶಾಭಿವೃದ್ಧಿಗೆ ಧಕ್ಕೆಯಾಗಿದ್ದು, ಹಾಲು ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.ಸುಪ್ರೀಂಕೋರ್ಟ್ ಆದೇಶದಂತೆ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿ ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗಿರುವ ಹಾನಿ ಕುರಿತು ಅಧ್ಯಯನ ನಡೆಸಿದ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಜಿಲ್ಲಾಡಳಿತ ಈ ಬಗ್ಗೆ ವರದಿ ಸಲ್ಲಿಸಿದೆ.ಗಣಿಗಾರಿಕೆಯಿಂದ ಜಾನುವಾರುಗಳಿಗೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪರಿಣಾಮಗಳ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತ ಸಿಇಸಿ ತಂಡಕ್ಕೆ ನೀಡಿದ್ದು, ಜಾನುವಾರಗಳು ಗರ್ಭಧರಿಸದಿರುವ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಕಾಡು, ಕುರುಚಲು ಕಾಡು ಮತ್ತು ಬಯಲು ಪ್ರದೇಶದಲ್ಲಿ ಗಣಿಗಾರಿಕೆ ನಡೆದಿರುವುದರಿಂದ ಜಾನುವಾರುಗಳಿಗೆ ಮೇಯಲು ಜಾಗವೇ ಇಲ್ಲದಂತಾಗಿದೆ. ನೈಸರ್ಗಿಕವಾಗಿ ಮೇವು ದೊರೆಯದೆ ನಿಶ್ಯಕ್ತಿಯಿಂದಾಗಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಮುಖ್ಯವಾಗಿ ಶ್ವಾಸಕೋಶ ಮತ್ತು ಸಂತಾನ ಅಭಿವೃದ್ಧಿ ತೊಂದರೆಗೆ ಜಾನುವಾರುಗಳು ಸಿಲುಕಿವೆ.ನೀರು, ಮೇವು ಕಲುಷಿತವಾಗಿರುವುದರಿಂದ ಹಾರ್ಮೋನ್‌ಗಳ ಅಸಮತೋಲನದಿಂದ ಸಂತಾನ ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ. ಜಾನುವಾರುಗಳಿಗೆ ಬೇಕಾದ ಪರಿಸರ ದೊರೆಯುತ್ತಿಲ್ಲ. ಮಣ್ಣಿನ ಫಲವತ್ತತೆ ಕಳೆದುಕೊಂಡಿರುವುದರಿಂದ ಕೆಲವು ಅಗತ್ಯವಿರುವ ರಾಸಾಯನಿಕ ಕೊರತೆಯಿಂದ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುವ ಪ್ರಮುಖ ಮೂರು ತಾಲ್ಲೂಕುಗಳಾದ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆಯಲ್ಲಿ ಹಾಲು ಉತ್ಪಾದನೆ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.ಮಣ್ಣಿನಲ್ಲಿನ ಮ್ಯಾಂಗನೀಸ್ ಮುಂತಾದ ಖನಿಜಗಳ ಕೊರತೆಯಿಂದ ಅನೀಮಿಯಾ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಜಾನುವಾರುಗಳು ತುತ್ತಾಗಿವೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.ಹಾಲು ಉತ್ಪಾದನೆ ಕುಂಠಿತವಾಗಿರುವುದರಿಂದ ಗಣಿ ಪ್ರದೇಶದಲ್ಲಿ ಏಳು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಮುಚ್ಚಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಕಡ್ಲೆಗುದ್ದು, ಕೊಡಗವಳ್ಳಿ, ಸಿಂಗಾಪುರ ಹಾಗೂ ಹೊಳಲ್ಕೆರೆ ತಾಲ್ಲೂಕಿನ ದಂಡಿಗೇನಹಳ್ಳಿ, ಗಂಜಿಗಟ್ಟೆ, ಗ್ಯಾರೆಹಳ್ಳಿ ಮತ್ತು ಹೊಸದುರ್ಗ ತಾಲ್ಲೂಕಿನ ಗರಗ ಸಹಕಾರ ಸಂಘಗಳು ಬಾಗಿಲು ಮುಚ್ಚಿವೆ. ಹಾಲು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ರೈತ ಕುಟುಂಬಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿವೆ.ಅದಿರು ದೂಳಿನಿಂದ ಬೆಳೆಗಳು ಮುರುಟಿ ಹೋಗುವುದರಿಂದ ಇಳುವರಿಯಲ್ಲಿ ಗಣನೀಯವಾಗಿ ಕುಸಿತವಾಗಿದೆ. ಬೆಳೆ ಇಲ್ಲದೇ ಜಾನುವಾರುಗಳಿಗೆ ಗುಣಮಟ್ಟದ ಮೇವು ದೊರೆಯದೇ ಕಾಯಿಲೆಗಳಿಗೆ ತುತ್ತಾಗಿದ್ದು, ಸಂತಾನ ಅಭಿವೃದ್ಧಿ ಕುಂಠಿತವಾಗಿದೆ. ಇಂತಹ ಗೊಡ್ಡು ಜಾನುವಾರುಗಳನ್ನು ರೈತರು ಕಡಿಮೆ ದರಕ್ಕೆ ಮಾರಾಟ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.ಅರಣ್ಯ ನಾಶದಿಂದ ಕಾಡುಪ್ರಾಣಿಗಳ ವಸತಿ ಪ್ರದೇಶಕ್ಕೂ ಧಕ್ಕೆಯಾಗಿದೆ. ಇದರಿಂದ ಮನುಷ್ಯರು ವಾಸಿಸುವ ಪ್ರದೇಶಗಳಿಗೆ ವನ್ಯಜೀವಿಗಳು ಪ್ರವೇಶಿಸುತ್ತಿವೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಚಿರತೆ, ಕರಡಿಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿದ್ದನ್ನು ಉದಾಹರಣೆಗಳ ಸಮೇತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry